UK Suddi
The news is by your side.

ಜಿಲ್ಲೆಯ ಜನ ಗುಳೆ ಹೋಗದಂತೆ ಉದ್ಯೋಗ ಒದಗಿಸಿ: ಜಿ.ಪಂ.ಅಧ್ಯಕ್ಷೆ ಚೈತ್ರಾ

ಧಾರವಾಡ: ಸದ್ಯ ಬೇಸಿಗೆ ಕಾಲ ಆರಂಭವಾಗಿದ್ದು, ಜಿಲ್ಲೆಯ ಜನ ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಡೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಧಿಕ ಮಾನವ ದಿನಗಳನ್ನು ಸೃಜಿಸಿ, ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಕಾರ್ಯ ಚುರುಕುಗೊಳಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ( ಕೆ.ಡಿ.ಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಹಲವು ತಾಲೂಕುಗಳಲ್ಲಿ ಎಂ.ಜಿ.ನರೇಗಾ ಯೋಜನೆ ಚಟುವಟಿಕೆಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಜನರಿಗೆ ತಮ್ಮ ಊರುಗಳಲ್ಲಿಯೇ ಉದ್ಯೋಗ ಸಿಗುವ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಉಪಕಾರ್ಯದರ್ಶಿ ಎಸ್.ಜಿ.ಕೊರವರ ಅವರು, ಎಂ.ಜಿ.ನರೇಗಾ ಯೋಜನೆಯಡಿ ಕೃಷಿಹೊಂಡ, ಬದು ನಿರ್ಮಾಣ, ಕೆರೆ ನಿರ್ಮಾಣದಂತಹ ಸಮುದಾಯ ಆಧಾರಿತ ಕಾಮಗಾರಿಗಳನ್ನು ಆದ್ಯತೆ ಮೇಲೆ ಬರುವ ನಾಲ್ಕು ತಿಂಗಳ ಅವಧಿಯಲ್ಲಿ ಕೈಗೆತ್ತಿಕೊಳ್ಳಲು ಈಗಾಗಲೇ ಎಲ್ಲ ಪಿ.ಡಿ.ಓ.ಗಳಿಗೆ ಸೂಚಿಸಲಾಗಿದೆ. 21 ಅಂಶಗಳ ಕಾರ್ಯಕ್ರಮಗಳಡಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಚೆಕ್ ಡ್ಯಾಂ ನಿರ್ಮಾಣ ಕಾರ್ಯ ಕಡ್ಡಾಯವಾಗಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್, ಕರ್ನಾಟಕ ಮಹರ್ಷಿ ವಾಲ್ಮೀಕಿ, ಡಿ.ದೇವರಾಜ ಅರಸು, ವಿಶ್ವಕರ್ಮ ಮತ್ತಿತರ ಅಭಿವೃದ್ಧಿ ನಿಗಮಗಳು ತಮ್ಮ ಯೋಜನೆಗಳ ಅನುಷ್ಠಾನ ಕಾರ್ಯಗಳನ್ನು ಚುರುಕುಗೊಳಿಸಿ ಗುರಿ ಸಾಧಿಸಬೇಕು ಎಂದು ಸಭೆ ಸೂಚಿಸಿತು.

ಸಹಕಾರ ಸಂಘಗಳ ಮೂಲಕ ಪ್ರಸಕ್ತ ಸಾಲಿನಲ್ಲಿ ಜನೇವರಿ 2018ರ ಅಂತ್ಯದವರೆಗೆ ಜಿಲ್ಲೆಯಲ್ಲಿ 5824.31 ಲಕ್ಷ ರೂ. ಅಲ್ಪಾವಧಿ ಸಾಲ ವಿತರಿಸಿ ಶೇ.73 ರಷ್ಟು ಪ್ರಗತಿ ಸಾಧನೆ, 78 ಲಕ್ಷ ರೂ.ಗಳ ಮಧ್ಯಮಾವಧಿ ಸಾಲ ವಿತರಿಸಿ ಶೇ.33.92 ಸಾಧನೆ ಮಾಡಲಾಗಿದೆ. 223.87 ಲಕ್ಷ ರೂ. ದೀರ್ಘಾವಧಿ ಸಾಲ ವಿತರಿಸಲಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕಿ ಸಾವಿತ್ರಿ ಕಡಿ ಹೇಳಿದರು.

ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ 35173 ಕ್ವಿಂಟಲ್ ಬೀಜ ವಿತರಿಸಲಾಗಿದೆ. 64140 ಟನ್ ರಸಗೊಬ್ಬರ ವಿತರಿಸಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ತೋಟಗಾರಿಕೆ ಇಲಾಖೆಯು 380 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣು ಬೆಳೆಗಳ ಪ್ರದೇಶ ವಿಸ್ತರಣೆ ಮಾಡಿದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಅಡಿಯಲ್ಲಿ 153 ಹೆಕ್ಟೇರ್ ಪ್ರದೇಶ ವಿಸ್ತರಣೆ ಮಾಡಿ, ಶೇ.100 ರಷ್ಟು ಸಾಧನೆ ಮಾಡಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ರಾಮಚಂದ್ರ ಮಡಿವಾಳರ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯು ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ನೇರ ಫೋನ್ ಇನ್, ಪೂರ್ವ ಸಿದ್ಧತಾ ಪರೀಕ್ಷೆ, ತರಬೇತಿ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮನೆಯಲ್ಲಿ ಓದುವ ಸೌಕರ್ಯಗಳ ಕೊರತೆ ಇರುವವರಿಗಾಗಿ ಶಾಲೆಗಳಲ್ಲಿಯೇ ರಾತ್ರಿ ವಿದ್ಯುತ್ ಸೌಕರ್ಯ ಕಲ್ಪಿಸಿ ಓದಿನ ಮನೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಉಪನಿರ್ದೇಶಕ ಎನ್.ಎಚ್.ನಾಗೂರ ವಿವರಿಸಿದರು.

ಮಕ್ಕಳಿಗೆ ಒದಗಿಸಿರುವ ಬೈಸಿಕಲ್‍ಗಳನ್ನು ಅವರೇ ಬಳಸುವಂತೆ ಶಿಕ್ಷಕರು ಸೂಚನೆ ನೀಡಿ ಉಸ್ತುವಾರಿ ಮಾಡಲು ಕ್ರಮಕೈಗೊಳ್ಳಬೇಕು. ನವಲಗುಂದ ತಾಲೂಕಿನ ಕೆಲವು ಹಾಸ್ಟೇಲ್‍ಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ನಂಬಲರ್ಹ ಮೂಲಗಳಿಂದ ದೂರು ಬಂದಿವೆ. ಈ ಬಗ್ಗೆ ನಿಗಾ ವಹಿಸಬೇಕು. ಕೆಲವೆಡೆ ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಲ್ಲಿ ಯಾವುದೇ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು ಎಂದು ಜಿ.ಪಂ. ಅಧ್ಯಕ್ಷೆ ಚೈತ್ರಾ ಶಿರೂರ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ. ಮುಖ್ಯ ಯೋಜನಾಧಿಕಾರಿ ಬಸವರಾಜ ಸಜ್ಜನ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Comments