ಶೃಂಗೇರಿ ಜಗದ್ಗುರುಗಳು ಫೆ.22ಕ್ಕೆ ಬಳ್ಳಾರಿಗೆ ಆಗಮನ-ಎಂ.ಗೋವಿಂದ್ ಭಟ್
ಬಳ್ಳಾರಿ-ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ, ಶೃಂಗೇರಿಯ ಉಭಯಶ್ರೀಗಳು ಫೆ.22ರಂದು ಸಂಜೆ 5 ಗಂಟೆಗೆ ಬಳ್ಳಾರಿ ನಗರಕ್ಕೆ ಆಗಮಿಸಲಿದ್ದಾರೆ.
ಈ ಕುರಿತು ಶ್ರೀ ಶಂಕರ ತತ್ವ ಪ್ರಚಾರ ಸೇವಾ ಸಮಿತಿ ಅಧ್ಯಕ್ಷ ವಿದ್ವಾನ್ ಎಂ.ಗೋವಿಂದ್ ಭಟ್ ಅವರು ಸಂಗನಕಲ್ಲು ರಸ್ತೆಯ ಶ್ರೀ ಶಾರದಾ ಶಂಕರಮಠದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿ, ಶೃಂಗೇರಿಯ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಮತ್ತು ಶ್ರೀ ವಿಧುಶೇಖರ ಭಾರತೀ ತೀರ್ಥ ಸನ್ನಿಧಾನಂಗಳವರು ಶ್ರೀ ಶಾರದಾಂಬಾದಿ ದೇವತಾ ವಿಗ್ರಹಗಳ ಪ್ರತಿಷ್ಠಾಪನೆಗಾಗಿ ಆಗಮಿಸಲಿದ್ದಾರೆ. ಹೊಸಪೇಟೆ ಮಾರ್ಗದಿಂದ ಬಳ್ಳಾರಿಯ ದುರ್ಗಮ್ಮ ಗುಡಿಗೆ ಫೆ.22 ರಂದು ಸಂಜೆ ಆಗಮಿಸಲಿದ್ದು, ಉಭಯಶ್ರೀಗಳ ಪುರಪ್ರವೇಶ, ಪೂರ್ಣಕುಂಭ ಸ್ವಾಗತದ ಜೊತೆಗೆ ಶ್ರೀಗಳ ಶೋಭಾಯಾತ್ರೆ ಜರುಗಲಿದೆ. ನಂತರ ಜೆಸ್ಕಾಂನ ವಿನಾಯಕ ದೇವಸ್ಥಾನದಿಂದ ಮೋಕ ಮಾರ್ಗವಾಗಿ ಶೋಭಾಯಾತ್ರೆ ನಡೆಯಲಿದೆ. ಧೂಲೀ ಪಾದಪೂಜೆ, ಫಲ ಸಮರ್ಪಣೆ ಜರುಗಲಿದೆ. ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ಹಾಗೂ ಶ್ರೀಗಳ ಆಶೀರ್ವಚನ ನಡೆಯಲಿದೆ. ರಾತ್ರಿ 8-30ಕ್ಕೆ ಶ್ರೀಗಳಿಂದ ಚಂದ್ರಮೌಳೀಶ್ವರ ಪೂಜೆ ಜರುಲಿದ್ದು, ಬಳಿಕ ಪ್ರಸಾದ ವಿನಿಯೋಗ ನಡೆಯಲಿದೆ.
ಫೆ.23ರಂದು ಬೆಳಿಗ್ಗೆ 8 ಗಂಟೆಗೆ ಶ್ರೀಮಠದ ಅರ್ಚಕರಿಂದ ಶ್ರೀ ಚಂದ್ರಮೌಳೀಶ್ವರ ಪೂಜೆ, 9 ಗಂಟೆಗೆ ಕುಂಬಾಭಿಷೇಕದ ಸಂಕಲ್ಪ, 10-30ಕ್ಕೆ ಶ್ರೀಗಳ ದರ್ಶನ, ಭಕ್ತರಿಂದ ಪಾದಪೂಜೆ, ಭಿಕ್ಷಾವಂದನೆ ಮೊದಲಾದ ಸೇವೆಗಳು ನಡೆಯಲಿವೆ. ಸಂಜೆ 6 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8-30ಗಂಟೆಗೆ ಶ್ರೀಗಳಿಂದ ಶ್ರೀ ಚಂದ್ರಮೌಳೀಶ್ವರ ಪೂಜೆ ಜರುಗಲಿದೆ.
ಫೆ.24ರಂದು ಬೆಳಿಗ್ಗೆ 8 ಗಂಟೆಗೆ ಶ್ರೀಮಠದ ಅರ್ಚಕರಿಂದ ಶ್ರೀ ಚಂದ್ರಮೌಳೀಶ್ವರ ಪೂಜೆ, ಬೆ.10 ಗಂಟೆಗೆ ಶ್ರೀಗಳ zರ್ಶನ, ಭಕ್ತರಿಂದ ಪಾದಪೂಜೆ, ಭಿಕ್ಷಾವಂದನೆ ಮೊದಲಾದ ಸೇವೆಗಳು ನಡೆಯಲಿವೆ. ಶ್ರೀಗಳಿಂದ ತೀರ್ಥ ಪ್ರಸಾದ ವಿತರಣೆ ಇರುತ್ತದೆ. ಸಂಜೆ 6 ಗಂಟೆಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಶ್ರೀಗಳವರಿಗೆ ಫಲ ಸಮರ್ಪಣೆ, ಅಭಿವಂದನಾ ಪತ್ರ ಸಮರ್ಪಣೆ, ಶ್ರೀಗಳವರಿಂದ ಆಶೀರ್ವಚನ, ರಾತ್ರಿ 8-30ಕ್ಕೆ ಶ್ರೀಗಳಿಂದ ಚಂದ್ರಮೌಳೀಶ್ವರ ಪೂಜೆ ಜರುಗಲಿದೆ.
ಫೆ.25ರಂದು ಬೆಳಿಗ್ಗೆ 8 ಗಂಟೆಗೆ ಶ್ರೀಮಠದ ಅರ್ಚಕರಿಂದ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ. 9 ಗಂಟೆಗೆ ಶ್ರೀಗಳ ಅಮೃತ ಹಸ್ತಗಳಿಂದ ಶ್ರೀ ಶಕ್ತಿ ಗಣಪತಿ, ಶ್ರೀ ಶಾರದಾಂಬಾ, ಶ್ರೀ ಶಂಕರಾಚಾರ್ಯ, ಶ್ರೀ ಚಂದ್ರಮೌಳೀಶ್ವರ ಹಾಗೂ ಶ್ರೀ ದತ್ತಾತ್ರೇಯ ಮೂರ್ತಿಗಳ ಕುಂಬಾಭಿಷೇಕ ಮಹೋತ್ಸವ, ಶ್ರೀಗಳ ದರ್ಶನ ಹಾಗೂ ಫಲ ಮಂತ್ರಾಕ್ಷತೆ, ಪ್ರಸಾದ ವಿತರಣೆ ಇರುತ್ತದೆ. ಸಂಜೆ 4 ಗಂಟೆಗೆ ಶ್ರೀಗಳ ಪ್ರಸ್ಥಾನವಾಗುವುದು ಎಂದರು.
ಶ್ರೀಮಠದ ಸಂಚಾಲಕರಾದ ಬಿ.ಕೆ.ಬಿ.ಎನ್.ಮೂರ್ತಿ ಅವರು ಸಹ ಮಾತನಾಡಿ, ಭಕ್ತರ ಅನುಕೂಲಕ್ಕಾಗಿ ಶ್ರೀಮಠದ ಆವರಣದಲ್ಲಿ ಗುರುಭವನ, ಕಲ್ಯಾಣ ಮಂಟಪ ಮತ್ತು ವೈದಿಕ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಶೃಂಗೇರಿಯ ಉಭಯಶ್ರೀಗಳಿಂದ ಫೆ.24ರಂದು ಭೂಮಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲ ಕಟ್ಟಡಗಳ ನಿರ್ಮಾಣ ಕಾರ್ಯ 2 ವರ್ಷದೊಳಗೆ ಪೂರೈಸಲಾಗುತ್ತದೆ. 4 ದಿನಗಳ ಕಾಲ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಜಿಲ್ಲೆಯ ಎಲ್ಲ ಭಾಗಗಳಿಂದ ಸುಮಾರು 20 ಸಾವಿರ ಜನರು ಬರುವ ನಿರೀಕ್ಷೆ ಇದೆ ಎಂದರು.
ಬಳಿಕ ಪ್ರತಿಷ್ಠಾಪನಾ ಹಾಗೂ ಕುಂಬಾಭಿಷೇಕ ಮಹೋತ್ಸವ ಯಶಸ್ವಿಗೊಳಿಸಲು ವಿವಿಧ ಸಮಿತಿಗಳನ್ನು ರಚಿಸಲಾಯಿತು. ಸಮಿತಿಗಳ ಪದಾಧಿಕಾರಿಗಳು ಮಹೋತ್ಸವದ ಯಶಸ್ಸಿಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆಯೂ ನಿರ್ಧರಿಸಲಾಯಿತು.
ಮಠದ ಹಿರಿಯರಾದ ಶ್ರೀಪಾದಭಟ್ಟರು, ಎನ್.ಪಿ.ಸಿದ್ಧಾಂತಿಗಳು, ಸೂರ್ಯನಾರಾಯಣ ಶರ್ಮ ಸೇರಿದಂತೆ ಸಮಿತಿಯ ಪದಾಧಿಕಾರಿಗಳಾದ ವಿ.ಮುರಳಿ, ವಿ.ಲೋಕನಾಥ್, ರಘುನಂದನ್ ಆರ್, ಸುರೇಶ್ ಶಾಸ್ತ್ರಿ, ರವಿ ಶಾಸ್ತ್ರಿ, ಮೋಹನ್ ಶಾಸ್ತ್ರಿ, ಗೋಪಿನಾಥ್ ಶರ್ಮಾ, ಚಂದ್ರಶೇಖರ್ ಸಿದ್ಧಾಂತಿ, ನಾಗರಾಜ್ ಇನ್ನಿತರರು ಇದ್ದರು.
ವರದಿ:ಮಂಜುನಾಥ ಅಯ್ಯಸ್ವಾಮಿ