UK Suddi
The news is by your side.

ದಟ್ಟ ಅರಣ್ಯಗಳ ನಡುವೆ 1200ಕಿಮೀ ಕಾಲ್ನಡಿಗೆ ನಡೆದು ಸಾಧನೆ ಮಾಡಿದ ಯುವಕ.

ಕಾರವಾರ:ಬದುಕಿನಲ್ಲಿ ಏನಾದರು ವಿಭಿನ್ನವಾದ ಸಾಧನೆ ಮಾಡಬೇಕು ಎಂಬ ಛಲವೀದ್ದ ಕಾರವಾರ ಮೂಲದ ಯುವಕನೊಬ್ಬ ಪಶ್ಚಿಮ ಘಟ್ಟದ ದಟ್ಟ ಅರಣ್ಯಗಳು, ಗಿರಿ ಕಂದರಗಳ ನಡುವೆ 1200 ಕಿ. ಮೀ. ದೂರವನ್ನು ಕಾಲ್ನಡಿಗೆಯ ಮೂಲಕ ಕ್ರಮಿಸಿ ಸಾಹಸ ಮೆರೆದಿದ್ದಾರೆ.
ಕಾರವಾರ ತಾಲೂಕು ಸಿದ್ದರ ಮೂಲದ ಹಾಲಿ ಮುಂಬೈನಲ್ಲಿ ವಾಸಿಸುತ್ತಿರುವ ಸುಶಾಂತ ಅಣ್ವೇಕರ್‌ ಎಂಬ 28ರ ಯುವಕ ಇಂಥದ್ದೊಂದು ಸಾಹಸ ಕೈಗೊಂಡವರು. ಜನೇವರಿ 7ರಂದು ಮಹಾರಾಷ್ಟ್ರ ಗುಜಾರತ್‌ ಗಡಿಯಲ್ಲಿ ಪಶ್ಚಿಮ ಘಟ್ಟವನ್ನು ಏರಿದ ಇವರು ಅಲ್ಲಿಂದ ಸತತ 40 ದಿನಗಳ ಕಾಲ ಪಶ್ಚಿಮ ಘಟ್ಟದ ಗಿರಿಕಂದರಗಳಲ್ಲಿ ನಡೆದಿದ್ದಾರೆ. ಶುಕ್ರವಾರ ಕಾರವಾರದ ಸಿದ್ದರದಲ್ಲಿ ಯಾತ್ರೆ ಸಂಪೂರ್ಣಗೊಳಿಸಿದ್ದಾರೆ.
ಗುಜರಾತ್‌ ಗಡಿಯ ಸಾಹ್ಲೆರ್‌ಗಡದಿಂದ ಸುಶಾಂತ ನಡಿಗೆ ಪ್ರಾರಂಭಿಸಿದರು. ಅಲ್ಲಿಂದ ಮೋಹನದಾರಿ, ರತನಗಡ, ಭಿಮಾಶಂಕರ, ಪಾಂಡವಗಡ, ಅಜಿಂಕ್ಯತಾರಾ, ಸಜ್ಜನಗಡ, ಗುಣವಂತಗಡ, ದಾಂಡೇಲಿ, ಅಣಶಿ ಮೂಲಕ ಶುಕ್ರವಾರ ಸಿದ್ದರಕ್ಕೆ ಬಂದಿದ್ದಾರೆ. 

ಈ ಯಾತೆಯಲ್ಲಿ ಪಶ್ಚಿಮ ಘಟ್ಟದ ದಟ್ಟ ಅರಣ್ಯ, ಹಳ್ಳಿಗಳ ನಡುವೆ ಒಟ್ಟು 26 ಪಾಳು ಬಿದ್ದ ಕೋಟೆಗಳನ್ನು ನೋಡಿದ್ದೇನೆ. ಬಹುತೇಕ ಕೋಟೆಗಳು ಮಹಾರಾಷ್ಟ್ರ ವ್ಯಾಪ್ತಿಯಲ್ಲಿವೆ ಎಂದು ಸುಶಾಂತ ತಿಳಿಸಿದರು.
ಯಾತ್ರೆ ಆರಂಭವಾದಾಗಿನಿಂದ ಸಾಧ್ಯವಿದ್ದಷ್ಟೂ ಜನವಸತಿ ಪ್ರದೇಶವನ್ನು ತಪ್ಪಿಸಿ ಅರಣ್ಯದ ನಡುವೆಯೇ ನಡೆಯಲು ಆದ್ಯತೆ ನೀಡುತ್ತಿದ್ದೆ. ರಾತ್ರಿಗಳನ್ನು ಹೆಚ್ಚಿನದಾಗಿ ಹಳ್ಳಿಗಳ ಹೊರವಲಯದಲ್ಲಿ ಟೆಂಟ್‌ ಹಾಕಿಕೊಂಡು ಕಳೆಯುತ್ತಿದ್ದೆ, ಪ್ರತಿ ದಿನ ಬೆಳಗ್ಗೆ 7 ಗಂಟೆಗೆ ನಡಿಗೆ ಆರಂಭಿಸುತ್ತಿದ್ದೆ. ಸಂಜೆ 7 ರವರೆಗೂ ನಡೆಯುತ್ತಿದ್ದೆ. ಹುಲಿ, ಚಿರತೆಗಳಂತಹ ಅಪಾಯಕಾರಿ ಮೃಗಗಳು ಎಲ್ಲಿಯೂ ಎದುರಾಗಲಿಲ್ಲ. ಜಿಂಕೆ, ಕಡವೆ ಮೊದಲಾದವು ಸಾಕಷ್ಟು ಕಂಡು ಬಂದವು. ಯಾತ್ರೆಯುದ್ದಕ್ಕೂ ಗ್ರಾಮೀಣ ಜನ ತೋರಿಸಿದ ಪ್ರೀತಿ ಅವಿಸ್ಮರಣೀಯ. ನಾನು ಆಹಾರ ತಯಾರಿಗೆ ಸಾಕಷ್ಟು ಸಿದ್ಧತೆ ಇಟ್ಟುಕೊಂಡಿದ್ದೆ. ಆದರೆ ಹಳ್ಳಿಗರ ಸಹಕಾರದಿಂದ ದಿನ ಅಡುಗೆ ಮಾಡಿಕೊಳ್ಳುವ ಸಂದಭರ್ವೇ ಬರಲಿಲ್ಲ ಎಂದು ಸುಶಾಂತ ತಮ್ಮ ಕಾಲ್ನಡಿಗೆ ಪಶ್ಚಿಮ ಘಟ್ಟದ ಯಾತ್ರೆಯನ್ನು ಸ್ಮರಿಸಿದರು.

Comments