ಲ್ಯಾಪಟಾಪ್ ವಿತರಣೆಯಲ್ಲಿ ವಿಳಂಬ: ಮತ್ತೇ ಧರಣಿ ಆರಂಭಿಸಿದ ವಿದ್ಯಾರ್ಥಿಗಳು
ಧಾರವಾಡ: ಲ್ಯಾಪ್ಟಾಪ್ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ಧೋರಣೆ ಖಂಡಿಸಿ ಕವಿವಿಯಲ್ಲಿ ಮತ್ತೆ ವಿದ್ಯಾರ್ಥಿಗಳು ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಬಹುಜನ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಮತ್ತೆ ಪ್ರತಭಟನೆಗಿಳಿದ ನೂರಾರು ವಿದ್ಯಾರ್ಥಿಗಳು ಕರ್ನಾಟಕ ವಿಶ್ವವಿದ್ಯಾಲಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕವಿವಿ ಆಡಳಿತ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಆರಂಭಿಸಲಾಗಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿದ್ಯಾರ್ಥಿಗಳು ಆಗ್ರಹಿಸಿದರು. ಈ ಹಿಂದೆ ಜೂನ್ 7 ರಿಂದ ಎರಡು ದಿನಗಳ ಕಾಲ ಕವಿವಿ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದ್ದ ವಿದ್ಯಾರ್ಥಿಗಳ ಪ್ರತಿಭಟನೆಗೆ ಸ್ಪಂದಿಸಿ ಸಚಿವ ವಿನಯ ಕುಲಕರ್ಣಿ ಹಾಗೂ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಅವರು ವಿದ್ಯಾರ್ಥಿಗಳ ಮನವೊಲಿಸಿದ್ದರು. ಅಲ್ಲದೇ ವಿದ್ಯಾರ್ಥಿಗಳ ಬೇಡಿಕೆಯನ್ನು ಲಿಖಿತ ರೂಪದಲ್ಲಿ ಪಡೆಯಲಾಗಿತ್ತು. ಜನೆವರಿ 15ರೊಳಗೆ ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಿಸುವುದಾಗಿ ಕವಿವಿ ತಿಳಿಸಿತ್ತು. ನಂತರ ತಾಂತ್ರಿಕ ತೊಂದರೆ ನೆಪ ಹೇಳಿ ಜನೆವರಿ 26ಕ್ಕೆ ಲ್ಯಾಪ್ಟಾಪ್ ವಿತರಿಸಲಾಗುತ್ತದೆ ಎಂದು ಹೇಳಿದ್ದರು. ಆ ನಂತರ ಫೆಬ್ರವರಿ 18 ರಂದು ವಿತರಿಸಲಾಗುವುದು ಎಂದು ಎಲ್ಲ ವಿಭಾಗಗಳಿಗೆ ನೋಟಿಸ್ ಕಳಿಸಿದ್ದರು. ಆದರೆ ಮತ್ತೇ ಲ್ಯಾಪ್ಟಾಪ್ ವಿತರಿಸುವಲ್ಲಿ ದೀರ್ಘಾವಧಿ ವಿಳಂಬ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆಯಲ್ಲಿ ಬಹುಜನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದರ್ಶನ ಬಾಳನಾಯ್ಕ್, ಪ್ರಧಾನ ಕಾರ್ಯದರ್ಶಿ ಸದಾಶಿವ್ ಕಾಂಬಳೆ, ಶಿವು ಚೌಹಾಣ, ಗಂಗಾಧರ ಓಲೇಕಾರ, ಪ್ರಮೋದ ಗೊಂದಳೆ, ಲಕ್ಷ್ಮಣ ಕಾಂಬಳೆ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.