UK Suddi
The news is by your side.

ಸಂಕಷ್ಟಗಳನ್ನು ಮೆಟ್ಟಿ ನಿಂತರೆ ಮಾತ್ರ ಮಹಿಳೆ ಎತ್ತರದ ಸಾಧನೆ ಮಾಡಬಹುದು:ಚಿತ್ರನಟಿ ಸೋನಾಲಿ ಕುಲಕರ್ಣಿ

ಬೆಳಗಾವಿ:ಮಹಿಳೆಯರಿಗೆ ಸಾಧಿಸುವ ಮುನ್ನ ಸಾಕಷ್ಟು ಸಂಕಷ್ಟಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲ ಸಂಕಷ್ಟಗಳನ್ನು ಮೆಟ್ಟಿ ನಿಂತರೆ ಮಾತ್ರ ಮಹಿಳೆ ಎತ್ತರದ ಸಾಧನೆ ಮಾಡಬಹುದು ಎಂದು ಬಹುಭಾಷಾ ಚಿತ್ರನಟಿ ಸೋನಾಲಿ ಕುಲಕರ್ಣಿ ಹೇಳಿದರು.
ನಗರದ ಬಿ.ಕೆ. ಮಾಡೆಲ್ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ನಿಯತಿ ಫೌಂಡೇಶನ್ ವತಿಯಿಂದ ಮಹಿಳೆಯರಿಗೆ ಆಯೋಜಿಸಿದ್ದ ಹೋಮ್‍ಮಿನಿಸ್ಟರ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಗುರಿಯನ್ನು ಮುಟ್ಟುವ ಬಗ್ಗೆಯೇ ವಿಚಾರ ಮಾಡುವ ಮನೋಭಾವ ಮಹಿಳೆ ಹೊಂದಬೇಕು. ಅಂದಾಗ ಮಾತ್ರ ಸಾಧನೆಯ ಹಾದಿ ಸುಲಭವಾಗುತ್ತದೆ. ವೇದಿಕೆಯ ಮೇಲೆ ಎಲ್ಲ ಮಹಿಳಾ ಸಾಧಕಿಯರು ಇದ್ದು, ಇವರ ಬಗ್ಗೆಯೇ ಚಿತ್ರ ನಿರ್ಮಾಣವಾದರೆ ಅದರಲ್ಲಿ ನಾನೂ ಅಭಿನಯಿಸುತ್ತೇನೆ ಎಂದರು.
ಪದ್ಮಶ್ರೀ ಪುರಸ್ಕøತೆ ಸೀತವ್ವ ಜೋಡಟ್ಟಿ ಮಾತನಾಡಿ, ಜಿಲ್ಲೆಯಲ್ಲಿ 4800 ದೇವದಾಸಿಯರು ಇದ್ದಾರೆ. ಕಳೆದ ಎರಡು ದಶಕಗಳಿಂದ ಇದರ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಗ್ರಾಮೀಣ ಪ್ರದೇಶದ ದಲಿತ ಮಹಿಳೆಯರು ಮಾತ್ರ ದೇವದಾಸಿ ಪದ್ಧತಿಗೆ ಬಲಿಯಾಗುತ್ತಿದ್ದಾರೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬೆಂಬಲದಿಂದ ದೇವದಾಸಿ ಪದ್ಧತಿ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇನೆ. ನನ್ನ ಕಾರ್ಯ ಮೆಚ್ಚಿ ಕೇಂದ್ರ ಸರ್ಕಾರ ನನ್ನನು ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದು, ಈ ಪ್ರಶಸ್ತಿ ನನ್ನ ಹೋರಾಟಕ್ಕೆ ಕೈ ಜೋಡಿಸಿದ ಎಲ್ಲರಿಗೂ ಅರ್ಪಿಸುತ್ತೇನೆ ಎಂದು ಹೇಳಿದರು.ಡಿಸಿಪಿ ಸೀಮಾ ಲಾಟ್ಕರ್ ಮಾತನಾಡಿ, ಮಹಿಳಾ ಸಬಲೀಕರಣ ಆಶಯಕ್ಕೆ ನಿಯತಿ ಫೌಂಡೇಶನ್ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಪೂರಕವಾಗಿದೆ. ಮಹಿಳೆಯರ ಆತ್ಮಹತ್ಯೆ ನಿಲ್ಲಬೇಕು ಎಂಬ ಈ ಕಾರ್ಯಕ್ರಮದ ಆಶಯಕ್ಕೆ ನಾನೂ ಕೈ ಜೋಡಿಸುತ್ತೇನೆ. ಸಾಧನೆಗೈದ ಮಹಿಳೆಯರನ್ನು ಗುರುತಿಸಿ, ಪ್ರೊತ್ಸಾಹಿಸುತ್ತಿರುವ ನಿಯತಿ ಫೌಂಡೇಶನ್ ಕಾರ್ಯ ವೈಖರಿ ಮೆಚ್ಚುವಂತದ್ದು. ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಬಹು ಮುಖ್ಯವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ನಿಯತಿ ಫೌಂಡೇಶನ್ ಅಧ್ಯಕ್ಷೆ ಡಾ. ಸೋನಾಲಿ ಸರ್ನೋಬಾತ್, ಮೇಯರ್ ಸಂಜೋತಾ ಬಾಂದೇಕರ್, ಬೆಳಗಾವಿ ದಂಡುಮಂಡಳಿ ಸಿಇಒ ದಿವ್ಯಾಶಿವರಾಂ, ನೀತಾ ದೇಶಪಾಂಡೆ, ಮಯೂರಾ ಶಿವಾಲ್ಕರ್ ಮತ್ತಿತರರು ಉಪಸ್ಥಿತರಿದ್ದರು.

Comments