ಕಾಳಿ ನದಿ ನೀರನ್ನು ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಿಗೆ ಹರಿಸಲು ವತ್ತಾಯ
ಧಾರವಾಡ: ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ನೀರನ್ನು ಧಾರವಾಡ ಹಾಗೂ ಹಾವೇರಿ ಜಿಲ್ಲೆಯ ವಿವಿಧ ತಾಲೂಕಿಗೆ ಕಾಲುವೆ ಮೂಲಕ ಹರಿಸುವಂತೆ ಒತ್ತಾಯಿಸಿ ಮಂಗಳವಾರ ಧಾರವಾಡ ಜಿಲ್ಲಾ ಕಾಳಿ ನದಿ ಹೋರಾಟ ಸಮಿತಿ ಮುಖಂಡರು ಪ್ರತಿಭಟನೆ ನಡೆಸಿದರು. ಕಳೆದ ಹಲವು ದಶಕಗಳಿಂದ ಕಾಳಿ ನದಿ ನೀರನ್ನು ತರುವಂತೆ ಒತ್ತಾಯಿಸಿ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕು ಹಾಗೂ ಧಾರವಾಡ ತಾಲೂಕಿನ ನೂರಾರು ರೈತರು ಹೋರಾಟ ನಡೆಸುತ್ತಿದ್ದರೂ ಈವರೆಗೆ ಅವರ ಕೂಗಿಗೆ ಯಾರೊಬ್ಬರು ಸ್ಪಂದಿಸಿರಲಿಲ್ಲ. ಹೀಗಾಗಿ ಹೋರಾಟ ಇದೀಗ ಮತ್ತೇ ಚುರುಕು ಗೊಂಡಿದೆ. ಕಾಳಿ ನದಿ ನೀರನ್ನು ತಂದರೆ ಜಿಲ್ಲೆಯ ನೂರಾರು ಕೆರೆ ಕಟ್ಟೆಗಳು ಸಲೀಸಲಾಗಿ ತುಂಬಲಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಾಳಿ ನದಿ ನೀರನ್ನು ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಿಗೆ ಹರಿಸಲು ಸೂಕ್ತ ಕ್ರಮ ಕೈಗೊಂಡು ಈ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು. ಸರ್ಕಾರ ಇದರತ್ತ ಗಮನಹರಿಸದೇ ಇದ್ದರೆ, ಮಹಾದಾಯಿ ಹೋರಾಟದ ರೂಪದಲ್ಲಿ ಈ ಹೋರಾಟವೂ ನಡೆಯಲಿದೆ ಎಂದು ರೈತ ಮುಖಂಡರು ಎಚ್ಚರಿಸಿದರು.
ಶ್ರೀಶೈಲಗೌಡ ಕಮತರ, ನಿಂಗಪ್ಪ ದಿವಟಗಿ, ಸಿದ್ದಪ್ಪ ಕುರುಬರ, ಶೋಭಾ ಚಲವಾದಿ, ಸಿದ್ದರಾಮಯ್ಯ ಮರಿಸಂಗಯ್ಯನವರ, ಶೋಭಾ ಯಡಳ್ಳಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.