UK Suddi
The news is by your side.

ಈರೇಶ ಅಂಚಟಗೇರಿ ಈ ಭಾರಿಯ ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ..!

ಧಾರವಾಡ: ಬರುವ ವಿಧಾನಸಭೆ ಚುನಾವಣೆ ಎಂಬ ಮಹಾಯುದ್ಧಕ್ಕೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಕತ್ತಿ ಮಸಿದು ಯುದ್ಧಕ್ಕೆ ಸಜ್ಜಾಗುವಂತೆ ಈಗಾಗಲೇ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಈ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಬೇಕು ಎಂಬ ಪಣ ತೊಟ್ಟಿದ್ದರೆ, ಕಾಂಗ್ರೆಸ್ ಕರ್ನಾಟಕದಲ್ಲಿ ಮೋದಿ ಹಾಗೂ ಅಮಿತ್ ಶಾ ಹವಾ ನಡೆಯುವುದಿಲ್ಲ ಎಂದು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಸಿದ್ಧವಾಗುತ್ತಿದೆ. ಜೆಡಿಎಸ್ ಪಕ್ಷ ಈಗಾಗಲೇ ಕೆಲವೊಂದಿಷ್ಟು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್ ಕೂಡ ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿದೆ. ಬಿಜೆಪಿ ಇನ್ನೂ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿಲ್ಲ. ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಸಾಕಷ್ಟಿದ್ದಾರೆ. ಹೀಗಾಗಿ ಎಲ್ಲರನ್ನು ಹಿತಕ್ಕೆ ತೆಗೆದುಕೊಂಡು ಬಿಜೆಪಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.

ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರ ಈಗಾಗಲೇ ಬಿಜೆಪಿ ಭದ್ರ ಕೋಟೆ ಎನಿಸಿಕೊಂಡಿದೆ. ಚಂದ್ರಕಾಂತ ಬೆಲ್ಲದ ಅವರ ತರುವಾಯ ಅವರ ಪುತ್ರ ಅರವಿಂದ ಬೆಲ್ಲದ ಅವರು ಕಣಕ್ಕಿಳಿದು ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಈ ಕ್ಷೇತ್ರದಲ್ಲೂ ಇದೀಗ ಅನೇಕ ಬಿಜೆಪಿ ಮುಖಂಡರು ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದು, ತಮ್ಮ ನಾಯಕರ ಎದುರು ತಾವೂ ಸ್ಪರ್ಧೆ ಮಾಡಬೇಕೆನ್ನುವ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ. ಆದರೆ, ಇಲ್ಲಿ ಬೆಲ್ಲದ ಅವರನ್ನು ಬಿಟ್ಟು ಬೇರೆ ಯಾರನ್ನೂ ಕಣಕ್ಕಿಳಿಸುವ ವಿಚಾರಕ್ಕೆ ಹೋಗಿಲ್ಲ ಎಂಬಂತೆ ಕಾಣುತ್ತಿದೆ.

ಟಿಕೆಟ್ ಆಕಾಂಕ್ಷಿ ಈರೇಶ ಅಂಚಟಗೇರಿ..

ಈರೇಶ ಅಂಚಟಗೇರಿ ಎಂಬ ಹೆಸರು ಹುಬ್ಬಳ್ಳಿ, ಧಾರವಾಡದಲ್ಲಿ ಚಿರಪರಿಚಿತ. ಸತತ 25 ವರ್ಷಗಳಿಂದ ಬಿಜೆಪಿ ಕಟ್ಟಾ ಕಾರ್ಯಕರ್ತರಾಗಿ ಕೆಲಸ ಮಾಡಿದವರು. ಈಗಾಗಲೇ ಬಿಜೆಪಿ ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಇವರೂ ಕೂಡ ಒಂದು ಬಾರಿಗೆ ಪಾಲಿಕೆ ಸದಸ್ಯರು ಕೂಡ ಆಗಿದ್ದರು. ಹುಬ್ಬಳ್ಳಿ, ಧಾರವಾಡದಲ್ಲಿ ನಡೆದ ಕವಿವಿ ಹೋರಾಟ, ಸಹರಾ ಹೋರಾಟ ಸೇರಿದಂತೆ ದೊಡ್ಡಮಟ್ಟದ ಹೋರಾಟಗಳಲ್ಲಿ ಭಾಗಿಯಾಗುವ ಮೂಲಕ ತಮ್ಮನ್ನು ಗುರುತಿಸಿಕೊಂಡವರು. ಅಷ್ಟೇ ಅಲ್ಲ ಈ ಭಾಗದ ಸಂಸದ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿಗಳೂ ಆದ ಜಗದೀಶ ಶೆಟ್ಟರ್ ಅವರಿಗೆ ಅತೀ ಹತ್ತಿರದ ನಾಯಕ. 25 ವರ್ಷಗಳಿಂದ ಯಾವುದೇ ಪಕ್ಷವನ್ನು ಸೇರದೇ ಬಿಜೆಪಿಯಲ್ಲಿದ್ದುಕೊಂಡೇ ತಮ್ಮನ್ನು ಗುರುತಿಸಿಕೊಂಡವರು ಅಂಚಟಗೇರಿ. ಬಿಜೆಪಿ ಪಕ್ಷ ಯಾರಿಗಾದರೂ ಟಿಕೆಟ್ ನೀಡಿದರೆ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಿದವರು. ಇವರೂ ಕೂಡ ಈ ಭಾರಿ, ಶಾಸಕ ಅರವಿಂದ ಬೆಲ್ಲದ ಅವರು ಪ್ರತಿನಿಧಿಸುವ ಹುಬ್ಬಳ್ಳಿ, ಧಾರವಾಡ ಪಶ್ಚಿಮ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಅರವಿಂದ ಬೆಲ್ಲದ ಅವರ ತಂದೆ ಚಂದ್ರಕಾಂತ ಬೆಲ್ಲದ ಅವರು ಬಿಜೆಪಿಯಿಂದ ಎರಡು ಭಾರಿ ಸ್ಪರ್ಧಿಸಿದಾಗಲೂ ಅಂಚಟಗೇರಿ ಅವರು ತಮಗೆ ಟಿಕೆಟ್ ನೀಡುವಂತೆ ಪಕ್ಷದ ಮುಖಂಡರಿಗೆ ಮನವಿ ಮಾಡಿದ್ದರು. ತಮಗೆ ಟಿಕೆಟ್ ಸಿಗದೇ ಇದ್ದರೂ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಿದ್ದರು.

ಟಿಕೆಟ್ ಕೇಳುವುದು ನನ್ನ ಧರ್ಮ ಈಗಾಗಲೇ ಟಿಕೆಟ್ ನೀಡುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಪಕ್ಷದ ಜಿಲ್ಲಾ ಅಧ್ಯಕ್ಷರು, ಪಕ್ಷದ ಹು-ಧಾ ಚುನಾವಣಾ ಪ್ರಮುಖರಿಗೂ ಮನವಿ ಸಲ್ಲಿಸಿದ್ದೇನೆ. ಇಲ್ಲಿ ನನಗೆ ಟಿಕೆಟ್ ನೀಡಿದರೆ ಅರವಿಂದ ಬೆಲ್ಲದ ಅವರು ನನ್ನ ಪರವಾಗಿ ಪ್ರಚಾರ ಮಾಡುತ್ತಾರೆ. ಬೆಲ್ಲದ ಅವರಿಗೇ ಟಿಕೆಟ್ ಫೈನಲ್ ಆದರೆ ನಾನೂ ಕೂಡ ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಸ್ವತಃ ಈರೇಶ ಅಂಚಟಗೇರಿ ಹೇಳಿದರು.

ಆಯಾ ಕ್ಷೇತ್ರದಲ್ಲಿ ಅವರದ್ದೇ ಆದ ಫಾಲೋವರ್ ಗಳಿದ್ದಾರೆ. ಪಶ್ಚಿಮ ಕ್ಷೇತ್ರದಲ್ಲಿ ಬಿಜೆಪಿ ಫಾಲೋವರ್ ಗಳೇ ಹೆಚ್ಚಾಗಿದ್ದಾರೆ. ಹೀಗಾಗಿ ಇಲ್ಲಿ ಬಿಜೆಪಿಯಿಂದ ಯಾರೇ ನಿಂತರೂ ಅವರು ಗೆದ್ದು ಬರುವುದು ಖಚಿತ. ಟಿಕೆಟ್ ಯಾರಿಗೇ ನೀಡಿದರೂ ಪಕ್ಷದ ಅಭ್ಯರ್ಥಿಯ ಗೆಲವು ಆಗಬೇಕು ಎಂದು ಅಂಚಟಗೇರಿ ತಿಳಿಸಿದರು.

 

Comments