UK Suddi
The news is by your side.

ಧಾರವಾಡದಲ್ಲಿ ಇನ್ನು ಮುಂದೆ ಹೆಲ್ಮೆಟ್ ಹಾಕದವರಿಗೆ ಪೆಟ್ರೋಲ್ ಸಿಗಲ್ಲ

ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರದ ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎನ್ನುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ. ಈಗಾಗಲೇ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುವ ಸವಾರರಿಗೆ ದಂಡ ವಿಧಿಸುವ ಪ್ರಕ್ರಿಯೆ ಹಾಗೂ ಫೋಟೋಗಳನ್ನು ಹೊಡೆಯುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅವಳಿನಗರದ ಪೊಲೀಸರು ಹೆಲ್ಮೆಟ್ ಕಡ್ಡಾಯ ಎನ್ನುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದೇ ತರುತ್ತೇವೆ ಎಂದು ಅವಳಿನಗರದ ಬೈಕ್ ಸವಾರರಿಗೆ ಹೊಸ ನೀತಿಯೊಂದನ್ನು ಜಾರಿಗೆ ತಂದಿದ್ದಾರೆ. ಅದೇ ನೋ ಹೆಲ್ಮೆಟ್ ನೋ ಪೆಟ್ರೋಲ್.

ಏನಿದು ನೀತಿ?

ಬೈಕ್ ಸವಾರರು ಕಡ್ಡಾಯವಾಗಿ ಪೂರ್ಣ ಪ್ರಮಾಣದ ಹೆಲ್ಮೆಟ್ ನ್ನು ಧರಿಸಬೇಕು ಎನ್ನುವ ನಿಯಮ ಈಗಾಗಲೇ ಜಾರಿ ಮಾಡಲಾಗಿದೆ. ಅವಳಿನಗರದ ಅಲ್ಲಲ್ಲಿ ಬೈಕ್ ಸವಾರರು ಇನ್ನೂ ಈ ನೀತಿಯನ್ನು ಕಡ್ಡಾಯವಾಗಿ ಅನುಸರಿಸುತ್ತಿಲ್ಲ. ಕೆಲವೊಂದಿಷ್ಟು ಜನ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುತ್ತಿದ್ದಾರೆ. ಇದನ್ನು ಕಡ್ಡಾಯವಾಗಿ ಜಾರಿಗೆ ಮಾಡಬೇಕು ಎಂದರೆ, ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಪೆಟ್ರೋಲ್ ನ್ನೇ ಕೊಡದಿರಲು ಪೊಲೀಸರು ಪೆಟ್ರೋಲ್ ಬಂಕ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಹೀಗಾದಲ್ಲಿ ಮಾತ್ರ ಹೆಲ್ಮೆಟ್ ಕಡ್ಡಾಯ ಎನ್ನುವ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ಬರುತ್ತದೆ ಎನ್ನುವುದು ಪೊಲೀಸರ ಅಭಿಪ್ರಾಯ.

ಯಾರು ಹೆಲ್ಮೆಟ್ ಧರಿಸದೇ ಪೆಟ್ರೋಲ್ ಹಾಕಿಸಿಕೊಳ್ಳಲು ಬಂಕ್ ಗೆ ಬರುತ್ತಾರೋ ಅಂಥವರಿಗೆ ಪೆಟ್ರೋಲ್ ಹಾಕಲಾಗುವುದಿಲ್ಲ. ಡಬ್ಬಾ ಹಾಗೂ ಕ್ಯಾನ್ ಗಳಲ್ಲೂ ಪೆಟ್ರೋಲ್ ನ್ನು ತುಂಬಿಸಿಕೊಡುವುದಿಲ್ಲ ಎಂದು ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್ ಅವರು ಈ ಮೊದಲೇ ತಿಳಿಸಿದ್ದರು. ಗುರುವಾರದಿಂದ ಈ ಕಾನೂನನ್ನು ಧಾರವಾಡದಲ್ಲಿ ಜಾರಿಗೆ ತರಲಾಗಿದೆ.

ಹೆಲ್ಮೆಟ್ ಹಾಕಿಕೊಂಡು ಬಂದ ಬೈಕ್ ಸವಾರರಿಗೆ ಮಾತ್ರ ಪೆಟ್ರೋಲ್ ಹಾಕುವಂತೆ ಸ್ವತಃ ಧಾರವಾಡ ಸಂಚಾರ ಠಾಣೆ ಇನಸ್ಪೆಕ್ಟರ್ ಮುರಗೇಶ ಚೆನ್ನಣ್ಣವರ ಪೆಟ್ರೋಲ್ ಬಂಕ್ ಗಳ ಮುಂದೆ ನಿಂತು ಬಂಕ್ ನ ಮಾಲೀಕರಿಗೆ ಮನವಿ ಮಾಡುತ್ತಿದ್ದರು. ಅದೂ ಅಲ್ಲದೇ ಅರ್ಧ ಹೆಲ್ಮೆಟ್ ಹಾಕಿಕೊಂಡು ಬಂದ ಬೈಕ್ ಸವಾರರಿಗೂ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸುವಂತೆ ಮನವಿ ಮಾಡುತ್ತಿದ್ದರು.

ಈಗಾಗಲೇ ಅವಳಿ ನಗರದ ಪೆಟ್ರೋಲ್ ಬಂಕ್ ಮಾಲೀಕರಿಗೆ ಅಪಘಾತ ಪ್ರಮಾಣ ತಡೆಗಟ್ಟಲು ಸಹಕಾರ ನೀಡುವಂತೆ ಪೊಲೀಸ್ ಆಯುಕ್ತರು ಮನವರಿಕೆ ಮಾಡಿಕೊಟ್ಟಿದ್ದರು. ಅದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರಿಂದ ಎಲ್ಲಡೆ ನಾಮಫಲಕಗಳನ್ನು ಕೂಡ ಅಳವಡಿಸಲಾಗಿದೆ. ಜನರಿಂದ ಕೂಡ ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಶೇ. 90ರಷ್ಟು ಜನರಿಂದ ಒಳ್ಳೆಯ ಬೆಂಬಲ ದೊರೆಯುತ್ತಿದೆ ಎಂದು ಇನಸ್ಪೆಕ್ಟರ್ ಮುರುಗೇಶ ಚೆನ್ನಣ್ಣವರ ತಿಳಿಸಿದರು.

ಈ ನೀತಿ ಜಾರಿ ಮಾಡಿದ್ದರಿಂದ ನಗರದ ಎಲ್ಲ ಬಂಕ್ ಗಳ ಮುಂದೆ ಒಬ್ಬೊಬ್ಬ ಸಂಚಾರ ಠಾಣೆ ಪೊಲೀಸ್ ಪೇದೆಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅದೂ ಅಲ್ಲದೇ ಪೆಟ್ರೋಲ್ ಬಂಕ್ ಗಳ ಮುಂದೆ ಬೋರ್ಡ್ ಗಳನ್ನು ಕೂಡ ಹಾಕಲಾಗಿದೆ.

Comments