UK Suddi
The news is by your side.

ಪ್ರತಿ ರೈತನಿಂದ 30 ಕ್ವಿಂಟಲ್ ಕಡಲೆ ಖರೀದಿಸದಿದ್ದರೆ ಖರೀದಿ ಕೇಂದ್ರಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ

ಧಾರವಾಡ:ಹುಬ್ಬಳ್ಳಿಯ ಎ.ಪಿ.ಎಂ.ಸಿ.ಯಲ್ಲಿ ತೆರೆಯಲಾಗಿರುವ ಬೆಂಬಲ ಬೆಲೆಯಡಿ ಕಡಲೆ ಕಾಳು ಖರೀದಿ ಕೇಂದ್ರದಲ್ಲಿ ಇನ್ನೂ ಖರೀದಿ ಆರಂಭವಾಗದೇ ಕಡಲೆ ಬೆಳೆದ ರೈತರು ಕಂಗಾಲಾಗಿದ್ದಾರೆ. ರೈತರು ದಿನಂಪ್ರತಿ  ಖರೀದಿ ಕೇಂದ್ರಕ್ಕೆ ಅಲೆದಾಡಿ ಅಲೆದಾಡಿ ಯಾವಾಗ ಖರೀದಿ ಮಾಡುತ್ತೀರಿ ಎಂದು ಕೇಳುತ್ತ ಜಾತಕ ಪಕ್ಷಿಯಂತೆ ಕಾಯುತ್ತಿದ್ದರೂ ಸರ್ಕಾರ ಮತ್ತು ಉಸ್ತುವಾರಿ ಸಚಿವರಿಗೆ ಮಾತ್ರ ರೈತರು ಗೋಳು ಕಾಣುತ್ತಿಲ್ಲ ಎಂದು ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಅರವಿಂದ ಏಗನಗೌಡರ ಅವರು ಸರ್ಕಾರ ಹಾಗೂ ಜಿಲ್ಲಾ ಮಂತ್ರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರೆಬ್ರುವರಿ 1 ರಿಂದ ಅಮರಗೋಳ ಎಪಿಎಂಸಿ ಆವರಣದಲ್ಲಿ ಕಡಲೆ ಖರೀದಿ ಕೇಂದ್ರ ಆರಂಭಗೊಂಡಿದ್ದರೂ ಈವರೆಗೆ ಒಂದೇ ಒಂದು ಕಾಳು ಕಡಲೆ ಖರೀದಿ ಮಾಡಿಲ್ಲ, ಖರೀದಿ ಕೇಂದ್ರ ಕೇವಲ ನೊಂದಣಿಗೆ ಮಾತ್ರ ಸೀಮಿತವಾಗಿದೆ.  ಅದರಲ್ಲೂ ನೂರೆಂಟು ಷರತ್ತುಗಳನ್ನು ಹಾಕಿ, ರೈತರಿಗೆ ಅನ್ಯಾಯ ಮಾಡುತ್ತಿದೆ. ನೋಂದಣಿ ಸಮಯದಲ್ಲಿ ಹೊಸ ಉತಾರಗಳನ್ನು ತರಬೇಕು ಎಂದು ಹೇಳಿದರೆ, ಅದರಲ್ಲೂ ಕಡಲೆ ಬೆಳೆ ಎಂದು ನಮೂದಾಗಿರಬೇಕು. ಆದರೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರೂ ಈವರೆಗೂ ಪಹಣಿ ಪತ್ರಿಕೆಯಲ್ಲಿ ಬದಲಾವಣೆಯಾಗಿಲ್ಲ. ಬಿತ್ತನೆಯ ಸಮಯದಲ್ಲಿ ಬೆಳೆಗಳ ಹೆಸರುಗಳನ್ನು ಪಹಣಿ ಪತ್ರಿಕೆಯಲ್ಲಿ ನಮೂದಿಸಿದ್ದರೂ, ಆಯಾ ಸಮಯಕ್ಕೆ ತಕ್ಕಂತೆ ಹಾಗೂ ಹವಾಮಾನ ನೋಡಿಕೊಂಡು ಬೇರೆ ಬೇರೆ ಬೆಳೆಗಳನ್ನು ಬಿತ್ತಿರುವ ಸಂಭವವಿರುತ್ತದೆ. ಆದ್ದರಿಂದ ಪಹಣಿ ಪತ್ರಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಕಡಲೆ ಕಾಳನ್ನು ಖರೀದಿಸಬೇಕು ಎಂದು ಅರವಿಂದ ಆಗ್ರಹಿಸಿದ್ದಾರೆ.

ಸತತವಾಗಿ ಬರಗಾಲದಿಂದ ಕಂಗೆಟ್ಟಿರುವ ರೈತರು, ಹಿಂಗಾರು ಬೆಳೆ ಮಾತ್ರ ಬೆಳೆದಿದ್ದು ಅದರಲ್ಲಿ ಮುಖ್ಯ ಬೆಳೆ ಕಡಲೆಯಾಗಿದ್ದು ಒಬ್ಬ ರೈತರಿಂದ (ಒಂದು ಉತಾರಕ್ಕೆ) ಕೇವಲ 10 ಕ್ವಿಂಟಲ್ ಖರೀದಿಸುವ ಷರತ್ತು ವಿಧಿಸಿದ್ದು ಹೆಚ್ಚಿಗೆ ಬೆಳೆದ ರೈತರ ಗತಿ ಏನಾಗಬೇಕು? ಆದ್ದರಿಂದ ಈ ಕೂಡಲೇ ಪ್ರತಿಯೊಬ್ಬ ರೈತರಿಂದ, 30 ಕ್ವಿಂಟಲ್ ಖರೀದಿಸುವ ಆದೇಶ ಮಾಡಬೇಕು. ಅಂದಾಗ ಮಾತ್ರ ಎಲ್ಲ ವರ್ಗದ ರೈತರಿಗೆ ಅನುಕೂಲವಾಗುತ್ತದೆ. ಹಾಗೂ ಕಷ್ಟದಲ್ಲಿರುವ ರೈತರು ಕಡಿಮೆ ದರದಲ್ಲಿ ಕಡಲೆ ಮಾರುತ್ತಿರುವುದನ್ನು  ತಪ್ಪಿಸಬೇಕು. ಹಾಗೂ ಈ ಕೂಡಲೇ ಕಡಲೆ ಬೆಳೆ ಖರೀದಿ ಆರಂಭಿಸಬೇಕು. ಇಲ್ಲದೆ ಹೋದಲ್ಲಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ,  ಎಪಿಎಂಸಿ ಆವರಣದಲ್ಲಿರುವ ಖರೀದಿ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Comments