UK Suddi
The news is by your side.

ರನ್ನನ ನೆಲದಲ್ಲಿ ವೈಭವದ ಝೇಂಕಾರ.

ರತ್ನತ್ರಯರಲ್ಲಿ ಒಬ್ಬರಾದ ರನ್ನನ ನೆಲ ಬಾಗಲಕೋಟೆ ಜಿಲ್ಲೆಯ ಮುಧೋಳ ಪರಿಸರದಲ್ಲಿ ಈಗ ಹಬ್ಬದ ಸಂಭ್ರಮ ಮನೆಮಾಡಿದೆ. ರನ್ನ ಕವಿ ಸ್ಮರಣಿಕೆಯ ಭೂಮಿಕೆಯಾಗಿ ವೈಭವಯುತವಾಗಿ ಫೆ.23ರಿಂದ ಮೂರು ದಿನ ರನ್ನ ವೈಭವ ನಡೆಯಲಿದ್ದು, ಮೊದಲ ದಿನ ಮುಧೋಳ ತಾಲೂಕಿನ ರನ್ನಬೆಳಗಲಿಯಲ್ಲಿ ವಿಧ್ಯುಕ್ತ ಚಾಲನೆ ದೊರೆಯಲಿದೆ.

ಬಳೆಗಾರ ಕುಟುಂಬದ ಹಿನ್ನೆಲೆ ಬಂದು ತನ್ನ ಕುಲಕಸುಬು ತಿರಸ್ಕರಿಸಿ ಸಾಹಿತ್ಯದ ಕಡೆಗೆ ಒಲವು ತೋರಿಸಿ ಕನ್ನಡದ ಖ್ಯಾತ ರಾಜಮನೆತನಗಳಾದ ಬಾದಾಮಿಯ ಚಾಲುಕ್ಯ, ಮಾನ್ಯಖೇಟದ ಗಂಗರು ಮತ್ತು ಕಲ್ಯಾಣ ಚಾಲುಕ್ಯರ ಆಡಳಿತ ಸಮಯದಲ್ಲಿ ಮಹಾನ್ ಕೃತಿಗಳನ್ನು ರಚಿಸಿದ ರನ್ನ, ಮುಧೋಳ ಹಾಗೂ ರನ್ನಬೆಳಗಲಿ ಪರಿಸರದಲ್ಲಿ ಆಡಿ ಬೆಳೆದಿರುವುದು ಸಾಹಿತ್ಯಾಸಕ್ತರಲ್ಲಿ ರೋಮಾಂಚನ ಮೂಡುತ್ತದೆ. ನಮ್ಮ ನೆಲದ ಕವಿ ಎಂಬ ಅಭಿಮಾನ ಪಸರಿಸುತ್ತದೆ. ಹೀಗಾಗಿ ಮೂರು ದಿನ ಉತ್ಸವದ ನೆಪದಲ್ಲಾದರೂ ರನ್ನನ ಸ್ಮರಣೆ ಸಾಧ್ಯವಾಗಲಿದೆ.
ರನ್ನಮಯ: 

ಎರಡು ದಶಕದ ಅವಧಿಯಲ್ಲಿ ರನ್ನನ ನೆಲ ರನ್ನಮಯವಾಗಿ ಪರಿವರ್ತನೆಯಾಗಿದೆ. ಮುಧೋಳದಲ್ಲಿ 1995ರಲ್ಲಿ ಎಚ್.ಎಲ್. ನಾಗೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ‘ರನ್ನಮಯ’ವಾಗಲು ಕಾರಣವಾಯಿತು. ಅಂದು ನಾಗೇಗೌಡರು, ರನ್ನವೃತ್ತಕ್ಕೆ ಅಡಿಗಲ್ಲು ನೆರವೇರಿಸುವ ಮೂಲಕ ರನ್ನ ಸ್ಮರಣೆಗೆ ನಾಂದಿ ಹಾಡಿದರು. 
ಮುಧೋಳ ತಾಲೂಕಿನ ಸಮೀರವಾಡಿಯಲ್ಲಿ 1997ರಲ್ಲಿ ನಡೆದ ವಿಜಾಪುರ ಜಿಲ್ಲಾ 7ನೇ ಸಾಹಿತ್ಯ ಸಮ್ಮೇಳನದಲ್ಲಿ ರನ್ನನ ಸಹಸ್ರಮಾನೋತ್ಸವ ಆಚರಿಸುವ ಮೂಲಕ ಈ ಭಾಗದಲ್ಲಿ ರನ್ನನ ಕುರಿತು ಚಿಂತನೆಗಳು ಆರಂಭವಾದವು. ಸಾಹಿತ್ಯ ವಲಯದಲ್ಲಿ ರನ್ನ ಕೃತಿಗಳ ಅವಲೋಕನ ನಡೆಯಿತು. ಅಲ್ಲದೆ ಕರ್ನಾಟಕ ವಿಶ್ವವಿದ್ಯಾಲಯವು ಜಮಖಂಡಿಯಲ್ಲಿ ರನ್ನನ ಸಹಸ್ರಮಾನೋತ್ಸವ ಆಚರಿಸಿ ಜನರ ಮನದಲ್ಲಿ ರನ್ನ, ಅಚ್ಚಳಿಯದ ಬಿಚ್ಚು ಮಲ್ಲಿಗೆಯಾಗಿ ವ್ಯಾಪಿಸಿತು.
ರನ್ನನ ಹೆಸರಲ್ಲಿ ಹತ್ತು ಹಲವು ಕಾರ್ಯ ಚಟುವಟಿಕೆಗಳು ಮುಧೋಳ ತಾಲೂಕಿನ ಪರಿಸರದಲ್ಲಿ ನಡೆಯುತ್ತಿರುವುದು ರನ್ನನ ಬಗ್ಗೆ ಇರುವ ಜನರ ಅಭಿಮಾನ ವ್ಯಕ್ತವಾಗುತ್ತದೆ. ರನ್ನಸ್ಮಾರಕ ಭವನ, ರನ್ನ ಕ್ರೀಡಾಂಗಣ, ರನ್ನ ಗ್ರಂಥಾಲಯ, ರನ್ನ ಪ್ರತಿಷ್ಠಾನ, ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ, ರನ್ನ ಮಾದರಿ ಶಾಲೆ, ರನ್ನ ಸ್ಮಾರಕ ಸ್ತಂಭ, ರನ್ನಬೆಳಗಲಿಯಲ್ಲಿ ರನ್ನ ಸಾಂಸ್ಕೃತಿಕ ಭವನ… ನಿರ್ಮಾಣಗೊಂಡಿವೆ. ಅದು ಗ್ರಾಮಗಳನ್ನು ಬಿಟ್ಟಿಲ್ಲ. ಬೆಳಗಲಿ ಪಟ್ಟಣದ ಜನರು ‘ರನ್ನಬೆಳಗಲಿ’ ಎಂದು, ಮುಧೋಳ ಸಮೀಪದ ‘ತಿಮ್ಮಾಪುರ’ ಗ್ರಾಮದ ಜನರು ಸಹ ‘ರನ್ನ ತಿಮ್ಮಾಪುರ’ ಎಂದೇ ರೂಢಿಯಲ್ಲಿಟ್ಟಿದ್ದಾರೆ. ರನ್ನನಗರಿಯಲ್ಲಿ ರನ್ನನ ಹೆಸರು ಸ್ಮರಿಸಲು ಶಾಸಕ ಗೋವಿಂದ ಕಾರಜೋಳ, ಸಚಿವ ಆರ್.ಬಿ. ತಿಮ್ಮಾಪುರ ಅವರ ಪಾಲೂ ಇದೆ.
ರನ್ನ ವಿಚಾರ ವೇದಿಕೆ:

ಕವಿರತ್ನನ ಸ್ಮರಣೆಯಲ್ಲಿ ಮಹಾಲಿಂಗಪುರದಲ್ಲಿ ‘ರನ್ನ ವಿಚಾರ ವೇದಿಕೆ’ ಅಸ್ತಿತ್ವದಲ್ಲಿದೆ.  ಹಲವಾರು ಹಿರಿಯ ಸಾಹಿತಿಗಳ, ಸಮಾನ ಮನಸ್ಕ ಗೆಳೆಯರು ಸೇರಿಕೊಂಡು 1989, ಆಗಸ್ಟ್ 15ರಂದು ಹುಟ್ಟುಹಾಕಿದ್ದ ‘ರನ್ನ ವಿಚಾರ ವೇದಿಕೆ’ ಹಲವಾರು ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಈ ಭಾಗದಲ್ಲಿ ರನ್ನನ ಹೆಸರನ್ನು ಜೀವಂತಗೊಳಿಸಿದೆ. ರನ್ನನ ಅಜೀತನಾಥ ಪುರಾಣಂ ಕೃತಿಗೆ ಒಂದು ಸಾವಿರ ವರ್ಷಗಳು ಗತಿಸಿದ ವೇಳೆ 1993ರಲ್ಲಿ ರನ್ನ ವಿಚಾರ ವೇದಿಕೆಯಡಿ ಆಯೋಜಿಸಿದ ರನ್ನ ಸಹಸ್ರಾಬ್ಧಿ ಸಮಾರಂಭ ನಂತರ 64 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಧೋಳದಲ್ಲಿ ನಡೆಯಲು ಪ್ರೇರಣೆಯಾಯಿತು ಎಂದೇ ವಿಶ್ಲೇಷಿಸಲಾಗುತ್ತಿದೆ. ಹಾಸನದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ ವತಿಯಿಂದ ‘ರನ್ನ ಜ್ಯೋತಿ’ ಒಯ್ದಿದ್ದು ವಿಶೇಷ. ವೇದಿಕೆ ವತಿಯಿಂದ ಕೃತಿ ಪ್ರಕಟನೆಯ ಉದ್ದೇಶವಿಟ್ಟು 1989ರಲ್ಲಿ ‘ಕವಿ ಚಕ್ರವರ್ತಿ ರನ್ನ ಪ್ರಕಾಶನ’ ಎಂಬ ಪ್ರಕಾಶನ ಸಂಸ್ಥೆ ಕೂಡ ಸ್ಥಾಪಿಸಲಾಗಿದೆ.
ಇಂದು ಚಾಲನೆ: 

ಫೆ.23ರಂದು ಸಂಜೆ 6 ಗಂಟೆಗೆ ರನ್ನಬೆಳಗಲಿಯ ಕವಿಚಕ್ರವರ್ತಿ ರನ್ನ ವೇದಿಕೆಯಲ್ಲಿ ರನ್ನ ವೈಭವಕ್ಕೆ ಅದ್ದೂರಿ ಚಾಲನೆ ದೊರೆಯಲಿದೆ. ಸಚಿವ ಆರ್.ಬಿ. ತಿಮ್ಮಾಪುರ ಉತ್ಸವದ ಉದ್ಘಾಟನೆ ನೆರವೇರಿಸುವರು. ಶಾಸಕ ಗೋವಿಂದ ಕಾರಜೋಳ ಅಧ್ಯಕ್ಷತೆ ವಹಿಸುವರು. ‘ರನ್ನ ಕಳಶ’ ಸ್ಮರಣ ಸಂಚಿಕೆಯನ್ನು ಸಚಿವೆ ಉಮಾಶ್ರೀ ಬಿಡುಗಡೆ ಮಾಡುವರು. ಸಂಸದ ಪಿ.ಸಿ. ಗದ್ದಿಗೌಡರ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಇದಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ರನ್ನಬೆಳಗಲಿಯ ಬಂದಲಕ್ಷ್ಮಿ ದೇವಸ್ಥಾನದಿಂದ ಕವಿಚಕ್ರವರ್ತಿ ರನ್ನ ವೇದಿಕೆಯವರೆಗೆ ಜನಪದ ವಾಹಿನಿ ಕಲಾತಂಡಗಳ ಮೆರವಣಿಗೆ ನಡೆಯಲಿದೆ. ಇನ್ನೊಂದೆಡೆ ಬೆಳಗ್ಗೆ 11 ಗಂಟೆಗೆ ಮುಧೋಳ ರನ್ನಭವನದ ಅಬ್ಬಲಬ್ಬೆ ವೇದಿಕೆಯಲ್ಲಿ ಡಾ.ಶ್ರೀಕಂಠ ಕೂಡಿಗೆ ಅಧ್ಯಕ್ಷತೆಯಲ್ಲಿ ‘ರನ್ನ ಕಾವ್ಯ ದರ್ಶನ’ ಕುರಿತು ಎರಡು ವಿಚಾರ ಸಂಕಿರಣಗಳು ನಡೆಯಲಿವೆ.
ಬನ್ನಿ ರನ್ನ ವೈಭವದಲ್ಲಿ ಪಾಲ್ಗೊಳ್ಳೋಣ…

-ಮಹೇಶ ಮನ್ನಯ್ಯನವರಮಠ

Comments