UK Suddi
The news is by your side.

36 ಸಾವಿರ ಜನಸಂಖ್ಯೆಯೊಂದಿಗೆ ಅಳ್ನಾವರ ತಾಲೂಕಾಗಿ ರಚನೆಯಾಗಿದ್ದು, ದೇಶದಲ್ಲೇ ಮೊದಲು: ಕಾರ್ಮಿಕ ಸಚಿವ ಲಾಡ್

 

ಧಾರವಾಡ: ಕರ್ನಾಟಕ ರಾಜ್ಯದಲ್ಲಿ ಹೊಸ 47 ತಾಲ್ಲೂಕುಗಳನ್ನು ಸರ್ಕಾರ ಘೋಷಿಸಿ, ಹೊಸ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಿದೆ. ಕೇವಲ 36 ಸಾವಿರ ಜನಸಂಖ್ಯೆಗೆ ಅಳ್ನಾವರ ಒಂದು ತಾಲೂಕಾಗಿ ರಚನೆಯಾಗಿರುವುದು ದೇಶದಲ್ಲೇ ಮೊದಲು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ತಾಲೂಕಿನ ಅಳ್ನಾವರ ಪಟ್ಟಣ ಪಂಚಾಯ್ತಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಅಳ್ನಾವರ ತಾಲ್ಲೂಕು ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಪ್ರತಿಶತ 50 ರ ಅನುಪಾತದಲ್ಲಿ ರೇಲ್ವೆ ಸೇತುವೆ ಕಾಮಗಾರಿಗಳು ನಡೆಯುತ್ತವೆ. ಈ ಭಾಗದಲ್ಲಿ ಕುಂಠಿತಗೊಂಡಿರುವ ಯೋಜನೆಗಳನ್ನು ಚುರುಕುಗೊಳಿಸಲು, ಆಡಳಿತಾತ್ಮಕ ಪರಿಹಾರ ಒದಗಿಸಲು ಸಭೆ ನಡೆಸಿ ಪ್ರಯತ್ನಿಸಲಾಗುವುದು. 90 ಕೋಟಿ ರೂಪಾಯಿ ವೆಚ್ಚದಲ್ಲಿ ಅಳ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಅರಣ್ಯ ಪ್ರದೇಶದಲ್ಲಿ ಕೊಳವೆ ಮಾರ್ಗ ನಿರ್ಮಿಸಬೇಕಾಗಿರುವುದರಿಂದ ಕೆಲವು ತಾಂತ್ರಿಕ ಅಡಚಣೆಗಳಿವೆ ಅವುಗಳನ್ನು ಪರಿಹರಿಸಲಾಗುವುದು. ಕಲಘಟಗಿ ಭಾಗಕ್ಕೆ ಬೇಡ್ತಿ ನದಿ ನೀರು ತರಲು 125 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದರು.

ಸಂಸದ ಪ್ರಹ್ಲಾದ ಜೋಶಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಳ್ನಾವರ ತಾಲೂಕು ಘೋಷಣೆಯ ಬಳಿಕವೂ ಸಹ ಕೆಲವು ಗ್ರಾಮಗಳ ಜನ ಈ ಹೊಸ ತಾಲೂಕಿನ ವ್ಯಾಪ್ತಿಗೆ ಸೇರಲು ಒಪ್ಪದೇ ಇದ್ದುದರಿಂದ ಕಗ್ಗಂಟು ಎದುರಾಗಿತ್ತು. ಅದನ್ನು ಪರಿಹರಿಸಲು ಸ್ಥಳೀಯ ಶಾಸಕರೂ ಆಗಿರುವ ಸಂತೋಷ ಲಾಡ್ ಅವರು ಪ್ರಯತ್ನ ಮಾಡಿ 13 ಹಳ್ಳಿಗಳನ್ನು ಸೇರಿಸಿ ಅಳ್ನಾವರ ತಾಲ್ಲೂಕು ಘೋಷಣೆ ಮಾಡಿಸಿ, ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಿರುವದು ಸಂತಸ. ಅಳ್ನಾವರಕ್ಕೆ ಇನ್ನೂ ಕೆಲವು ರೈಲುಗಳ ನಿಲುಗಡೆಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ಈ ಭಾಗದ ಕೆಲವು ರೈಲ್ವೆ ಮೇಲ್ಸೇತುವೆಗಳ ಕಾಮಗಾರಿ ವಿಳಂಬವಾಗಿದೆ. ಆಡಳಿತಾತ್ಮಕವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳೊಣ. ಕಾಳಿ ನದಿಯಿಂದ ಈ ಭಾಗಕ್ಕೆ ನೀರು ತರುವ ಯೋಜನೆಗೆ ಒಪ್ಪಿಗೆ ದೊರೆತಿದೆ, ಶೀಘ್ರ ಕಾಮಗಾರಿ ಆರಂಭಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಳೀಯ ಜನರ ನಿರಂತರ ಹೋರಾಟ, ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಚುನಾಯಿತ ಪ್ರತಿನಿಧಿಗಳ ಒತ್ತಡ ಪರಿಗಣಿಸಿ, ಮುಖ್ಯಮಂತ್ರಿಗಳು ರಾಜ್ಯದಲ್ಲಿಯೇ ಅತೀ ಚಿಕ್ಕದಾಗಿರುವ ಅಳ್ನಾವರ ತಾಲೂಕು ಘೋಷಣೆ ಮಾಡಿದ್ದಾರೆ. ಶೀಘ್ರದಲ್ಲಿಯೇ ಎಲ್ಲ ತಾಲ್ಲೂಕು ಕಚೇರಿಗಳಿಗಾಗಿ ಸಂಕೀರ್ಣ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗುವದು ಎಂದರು.

ಜಿ.ಪಂ.ಅಧ್ಯಕ್ಷೆ ಚೈತ್ರಾ ಶಿರೂರ, ಜಿ.ಪಂ.ಸದಸ್ಯ ನಿಂಗಪ್ಪ, ಜಿ.ಪಂ.ಸದಸ್ಯೆ ಭಾವನಾ ಬೇಲೂರ, ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಮುಜಾಹಿದ್ ಕಂಟ್ರಾಕ್ಟರ್, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ರಾಜೇಶ ಬೈಕೇರಿಕರ್, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಕೋನರಡ್ಡಿ, ತಹಶೀಲ್ದಾರ ಪ್ರಕಾಶ ಕುದರಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡರ ವೇದಿಕೆಯಲ್ಲಿದ್ದರು.

ಸಮಾರಂಭಕ್ಕೂ ಮುನ್ನ ನಗರೋತ್ಥಾನ ಮೂರನೇ ಹಂತದ 1 ಕೋಟಿ 70 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಸಚಿವ ಸಂತೋಷ ಲಾಡ್ ಚಾಲನೆ ನೀಡಿದರು.

Comments