UK Suddi
The news is by your side.

ಸಂಸದ ಜೋಶಿ ಗೋಮುಖ ವ್ಯಾಘ್ರ ಎಂದ ಚಿಂಚೋರೆಗೆ ಅಂಚಟಗೇರಿಯಿಂದ ಖಡಕ್ ಕೌಂಟರ್

ಧಾರವಾಡ: ಸಂಸದ ಪ್ರಹ್ಲಾದ ಜೋಶಿ ಒಬ್ಬ ಗೋಮುಖ ವ್ಯಾಘ್ರ. ಅವರು ದೊಡ್ಡ ಮಠದ ಸ್ವಾಮಿ ಇದ್ದಂತೆ, ಇನ್ನು ಶಾಸಕ ಅರವಿಂದ ಬೆಲ್ಲದ ಸಂಸದ ಜೋಶಿ ಅವರ ಮರಿ ಸ್ವಾಮಿ ಇದ್ದಂತೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಡಿದ ವ್ಯಂಗ್ಯಕ್ಕೆ ಬಿಜೆಪಿ ಸ್ಲಂ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಈರೇಶ ಅಂಚಟಗೇರಿ ಕೂಡ ಕೌಂಟರ್ ಕೊಟ್ಟಿದ್ದಾರೆ.

ಸರಳ ಸಜ್ಜನ, ಸಾತ್ವಿಕತೆ ಮೂಲಕ ಪಾರದರ್ಶಕ ರಾಜಕಾರಣದ ಮೂಲಕ ಎಲ್ಲ ಜನಾಂಗಗಳ ಅಭಿವೃದ್ಧಿಗೆ ಪಾತ್ರರಾಗಿರುವ ಸಂಸದ ಪ್ರಹ್ಲಾದ ಜೋಶಿ ಅವರನ್ನು ಟೀಕಿಸುವ ಕಾಂಗ್ರೆಸ್ ನ ಸ್ವಯಂ ಘೋಷಿತ ನಾಯಕ ದೀಪಕ ಚಿಂಚೋರೆ ತಮ್ಮ ಹಿನ್ನೆಲೆ ಕುರಿತು ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದಿದ್ದಾರೆ.

ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹಾಗೂ ದೀಪಕ ಚಿಂಚೋರೆ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸಂಸದ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯ ಇಬ್ಬರು ನಾಯಕರು ನಾಲಿಗೆ ಬಿಗಿ ಹಿಡಿದು ಮಾತನಾಡಲಿ, ಜೋಶಿ ಅವರ ನಿರ್ದೇಶನಕ್ಕೆ ತಕ್ಕಂತೆ ಅರವಿಂದ ಬೆಲ್ಲದ ಮನಬಂದಂತೆ ಮಾತನಾಡುತ್ತಿದ್ದಾರೆ. ಸಚಿವ ವಿನಯ ಕುಲಕರ್ಣಿ ವಿರುದ್ದ ಮನಬಂದಂತೆ ಮಾತನಾಡುವುದು ಸರಿಯಲ್ಲ ಹಾಗೂ ರಾಹುಲ್ ಗಾಂಧಿಯವರು ಆರ್.ಎಸ್.ಎಸ್ ಪ್ರಚಾರಕರೂ ಅಲ್ಲ ಸ್ವಯಂ ಸೇವಕರು ಅಲ್ಲ ಎಂಬುದು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದರು.

ಪ್ರಹ್ಲಾದ ಜೋಶಿ ಅವರು ತಮ್ಮ ಸಹೋದರನಾದ ಗೋಪಾಲ ಜೋಶಿ ಅವರಿಗೆ ಕ್ಲೀನ್ ಚೀಟ್ ಕೊಡಿಸಿದ್ದಾರೆ. ಸಿಬಿಐ ಮೇಲೆ ಅವರು ಪ್ರಭಾವ ಬೀರಿ, ತಮ್ಮ ರಾಜಕಾರಣದ ಬುದ್ದಿ ಪ್ರದರ್ಶಿಸಿದ್ದಾರೆ. ಅಲ್ಲಿನ ಕೇಂದ್ರ ಸರ್ಕಾರದ ಮೇಲೆ ರಾಜಕೀಯ ಒತ್ತಡ ಹಾಕಿ ಕ್ಲೀನ್ ಚೀಟ್ ಕೊಡಿಸಿದ್ದಾರೆ. ಇದನ್ನು ಪ್ರಶ್ನಿಸಿ ಮತ್ತೇ ಬ್ಯಾಂಕ್ ನವರು ಮೇಲ್ಮನವಿ ಸಲ್ಲಿಸಿದ್ದಾರೆ. ಬ್ಯಾಂಕ್ ನ ಬಡ್ಡಿಯ ಹಣವನ್ನು ತಿಂದಿದ್ದಕ್ಕೆ. ಗೋಪಾಲ್ ಜೋಶಿಯವರಿಗೆ ಡಿಮೋಶನ್ ಆಗಿದೆ ಎಂದರು.

ಮಹದಾಯಿ ಬಗ್ಗೆ ರಾಹುಲ್ ಗಾಂಧಿಯವರು ಮಾತನಾಡಬೇಕು ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಿದ್ದರೆ ಪ್ರಧಾನಿ ಮೋದಿ ಈ ಬಗ್ಗೆ ಏಕೆ ಮಾತನಾಡುವುದಿಲ್ಲ. ಕಾಂಗ್ರೆಸ್ ಸಚಿವರ ವಿರುದ್ಧ ಆರೋಪ ಮಾಡುವ ಶಾಸಕ ಅರವಿಂದ ಬೆಲ್ಲದರವರೇ ಸಚಿವ ವಿನಯ ಕುಲಕರ್ಣಿ ಜೊತೆಗೆ ಈ ಹಿಂದೆ ಸಾಕಷ್ಟು ವೇದಿಕೆ ಹಂಚಿಕೊಂಡಿದ್ದಾರೆ. ಅಲ್ಲದೇ ಸಿದ್ದೇಶ್ವರ ಸ್ವಾಮೀಜಿ ಪ್ರವಚನ ಸಂದರ್ಭದಲ್ಲಿ ಸಚಿವರ ಜೊತೆಗೆ ಬ್ಯಾನರ್ ನಲ್ಲಿ ಭಾವಚಿತ್ರ ಏಕೆ ಹಾಕಿಕೊಂಡಿದ್ದರು ಎಂದು ಚಿಂಚೋರೆ ಪ್ರಶ್ನಿಸಿದರು.

ಇದಕ್ಕೆ ಕೌಂಟರ್ ಕೊಟ್ಟಿರುವ ಈರೇಶ ಅಂಚಟಗೇರಿ, ಚಿಂಚೋರೆ ಹಾಗೂ ತಮಟಗಾರ ಇಬ್ಬರೂ ತಮ್ಮ ಇತಿಹಾಸವನ್ನು ಹಾಗೂ ತಮ್ಮ ಮನೆತನದ ಇತಿಹಾಸವನ್ನು ಮೊದಲು ಅಧ್ಯಯನ ಮಾಡಿಕೊಳ್ಳಲಿ, ಚಿಂಚೋರೆ ಅವರೇ ತಮ್ಮ ಪೂರ್ವಜರು, ಹಿರಿಯರು ತಮ್ಮ ತಂದೆಯವರು, ಸಹೋದರರಾದಿಯಾಗಿ ಕುಟುಂಬದ ಹಲವರು ದೇಶಭಕ್ತ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿ ಹಲವು ದಶಕಗಳ ಕಾಲ ಕಾರ್ಯ ಮಾಡಿದ್ದನ್ನು ನೀವು ಸ್ಮರಿಸಿಕೊಳ್ಳಬೇಕು. ನಿಮ್ಮೊಬ್ಬರನ್ನು ಬಿಟ್ಟು ನಿಮ್ಮ ಕುಟುಂಬದ ಎಲ್ಲ ಸದಸ್ಯರು ಈ ಹಿಂದಿನ ಅನೇಕ ಚುನಾವಣೆಗಳಲ್ಲಿ ಬಿಜೆಪಿ ಪರವಾಗಿ ಕಾರ್ಯಮಾಡಿ ಮತ ಕೂಡ ಚಲಾಯಿಸಿದ್ದಾರೆಂಬುದು ತಾವು ಅರಿತಿರಬಹುದು. 2008ರ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಸಚಿವ ವಿನಯ ಕುಲಕರ್ಣಿ ವಿರುದ್ಧ ತಾವು ಕೆಲಸ ಮಾಡಿದ್ದು ನಿಮ್ಮ ಪಕ್ಷದ ಕಾರ್ಯಕರ್ತರು ನಿಮ್ಮ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದು ಜಗಜ್ಜಾಹೀರಾಗಿದೆ. ಇದನ್ನು ತಾವು ಮರೆಯಬಾರದು.

ಇಲ್ಲ ಸಲ್ಲದ ಕ್ಷುಲ್ಲಕ ಆರೋಪ ಮಾಡುವವರ ಮೂಲಕ ತಾವು ರಾಜಕೀಯದಲ್ಲಿ ಹೆಸರು ಮಾಡಬಹುದು ಎಂಬ ಭ್ರಮೆಯಿಂದ ಹೊರಬಂದು ನೈಜ ರಾಜಕೀಯ ಮಾಡಿ ಜನರ ಸೇವೆ ಮಾಡಬೇಕು.  ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಟೀಕೆಗಳು ಸ್ವಾಗತಾರ್ಹ ಆದರೆ ತಾವು ಬಳಸುವ ಶಬ್ದಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶೋಭೆ ತರುವಂಥದ್ದಲ್ಲ. ಕಳೆದ ಮೂರು ಚುನಾವಣೆಗಳಲ್ಲಿ ಅತ್ಯಧಿಕ ಮತಗಳಿಸಿ ಭಾರಿ ಜನಬೆಂಬಲ ಹೊಂದಿರುವ ಸಜ್ಜನ ರಾಜಕಾರಣಿ ಸಂಸದ ಪ್ರಹ್ಲಾದ ಜೋಶಿಯವರ ಕುರಿತು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿರುವದು ಖಂಡನೀಯ. ಇಂದಿನ ರಾಜಕಾರಣದಲ್ಲಿ ಯಾರ ಕುರಿತಾಗಿಯೂ ಹಗುರವಾಗಿ ಮಾತನಾಡುವದಾಗಲಿ ಅಥವಾ ಅನಪೇಕ್ಷಿತ ವೈಯಕ್ತಿಕ ಟೀಕೆ ಮಾಡುವದನ್ನು ಬಿಟ್ಟು ಶುದ್ಧ ಹಸ್ತದಿಂದ ರಾಜಕಾರಣ ಮಾಡಿ. ಆಗ ಜನತೆಯ ಆಶೀರ್ವಾದ ಯಾರ ಮೇಲಿದೆ ಎಂಬ ಸತ್ಯ ನಿಮ್ಮಿಬ್ಬರಿಗೂ ಅರಿವಾಗುತ್ತದೆ ಎಂದಿದ್ದಾರೆ.

Comments