ಚಪ್ಪಲಿಯಿಂದ ಹಿಡಿದು ಎಲ್ಲ ವಸ್ತುಗಳು ಈ ದೇಶಕ್ಕೆ ಚೀನಾದಿಂದಲೇ ಬರುತ್ತಿವೆ: ರಾಹುಲ್ ಗಾಂಧಿ
ಧಾರವಾಡ: ಕೇಂದ್ರ ಸರ್ಕಾರ ಎಲ್ಲಾ ಸಾಮಾನುಗಳನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಮೇಡ್ ಇನ್ ಇಂಡಿಯಾ ಎಲ್ಲಿದೆ? ಪ್ರಧಾನಿ ನರೇಂದ್ರ ಮೋದಿ ಅವರು ಬರೀ ವಿದೇಶವನ್ನು ಸುತ್ತುವ ಮೂಲಕ ಜನರ ಹಣವನ್ನು ಹಾಳು ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಧಾರವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಟೋಲನಾಕಾದಲ್ಲಿ ಹಮ್ಮಿಕೊಂಡಿದ್ದ ಸಣ್ಣ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಿಜೆಪಿ ದೇಶವನ್ನು ಜಾತಿ ಹೆಸರಿನಲ್ಲಿ ಒಡೆದು ಹಾಳು ಮಾಡುತ್ತಿದೆ. ದೇಶದ ಜನರನ್ನು ಹರಿದು ಹಂಚುವ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಇಷ್ಟು ವರ್ಷದಿಂದ ಏನೂ ಕೆಲಸ ಮಾಡಿಲ್ಲ. ಚಪ್ಪಲಿಯಿಂದ ಹಿಡಿದು ಎಲ್ಲ ವಸ್ತುಗಳನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದರು.
ಬಿಜೆಪಿಯಲ್ಲಿ ನಾಲ್ಕು ಜನ ಜೈಲಿಗೆ ಹೋಗಿ ಬಂದವರಿದ್ದಾರೆ. ಅಂಥವರನ್ನು ಪಕ್ಷದಲ್ಲಿಟ್ಟುಕೊಂಡು ತಿರುಗುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ರೈತರ ಸಾಲ ಮನ್ನಾ, ಅನ್ನಭಾಗ್ಯ ಸೇರಿದಂತೆ ಬಡವರಿಗಾಗಿ ಅನೇಕ ಭಾಗ್ಯಗಳನ್ನು ಒದಗಿಸುವ ಮೂಲಕ ಜನಾಶೀರ್ವಾದ ಪಡೆದಿದ್ದಾರೆ ಎಂದು ಸಿದ್ದರಾಮಯ್ಯ ಅವರನ್ನು ರಾಹುಲ್ ಹೊಗಳಿದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ, ಸಚಿವರಾದ ಡಿ.ಕೆ. ಶಿವಕುಮಾರ, ವಿನಯ ಕುಲಕರ್ಣಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.
ಈ ಸಮಾವೇಶಕ್ಕೂ ಮುನ್ನ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ನಡೆದ ಸಮಾರಂಭವೊಂದರಲ್ಲಿಯೂ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು.