UK Suddi
The news is by your side.

ಇಷ್ಟಾರ್ಥ ಸಿದ್ಧಿಸುವ ನವಲಗುಂದ ರಾಮಲಿಂಗ ಕಾಮಣ್ಣ

ಧಾರವಾಡ: ಮಾರ್ಚ್ 2 ರಂದು ದೇಶದೆಲ್ಲೆಡೆ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಅದಕ್ಕಾಗಿ ಈಗಿನಿಂದಲೇ ಎಲ್ಲೆಡೆ ತಯಾರಿಗಳು ಕೂಡ ನಡೆದಿವೆ. ರಣಹಲಿಗೆಗಳು ಮೊಳಗುತ್ತಿವೆ. ಇನ್ನೇನು ಕಾಮದಹನ ಮಾಡಿ ನಂತರ ಬಣ್ಣ ಆಡುವುದೊಂದೇ ಬಾಕಿ ಇದೆ.

ಅದರಂತೆ ಧಾರವಾಡ ಜಿಲ್ಲೆಯ ಅನೇಕ ಕಡೆಗಳಲ್ಲಿ ದೊಡ್ಡ ಕಾಮಣ್ಣನ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ನಂತರ ದಹನ ಮಾಡಲಾಗುತ್ತದೆ. ಒಂದೊಂದು ಕಡೆ ಕಾಮಣ್ಣ ವಿಶಿಷ್ಟತೆಯನ್ನು ಪಡೆದುಕೊಂಡಿದ್ದಾನೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಪ್ರಸಿದ್ಧ ಪವಾಡ ರಾಮಲಿಂಗ ಕಾಮಣ್ಣನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುತ್ತದೆ. ಈ ಕಾಮಧೇನುವಿಗೆ ಭಕ್ತಿಯಿಂದ ಹರಕೆ ಹೊತ್ತರೆ ಬೇಡಿದ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬ ಪ್ರತೀತಿಯಿದೆ. ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಅಂಗವಾಗಿ ನವಲಗುಂದದಲ್ಲಿ ರಾಮಲಿಂಗ ಕಾಮಣ್ಣನ ಮೂರ್ತಿಯ ಪ್ರತಿಷ್ಟಾಪನೆ ಮಾಡಲಾಗುತ್ತದೆ. ನಾಡಿನ ನಾನಾ ಭಾಗಗಳಿಂದ ಜನ ಇಲ್ಲಿಗೆ ಬಂದು ಹರಕೆ ಹೊತ್ತು ಹಾಗೂ ಇಷ್ಟಾರ್ಥ ಸಿದ್ಧಿ ಯಾದವರು ಬಂದು ತಮ್ಮ ಕಾಣಿಕೆ ಸಲ್ಲಿಸುವುದು ವಾಡಿಕೆ. ಮದುವೆಯಾಗದೇ ಇರುವವರು, ಮಕ್ಕಳಾಗದೇ ಇರುವವರು, ಸರ್ಕಾರಿ ನೌಕರಿ, ಸ್ವಂತ ಮನೆ ಕಟ್ಟುವವರು ಹರಕೆ ಹೊರುತ್ತಾರೆ. ಮುಂದಿನ ಹೋಳಿ ಹುಣ್ಣಿಮೆಯ ಒಳಗಾಗಿ ಇಷ್ಟಾರ್ಥ ಸಿದ್ದಿಸುತ್ತವೆ ಎಂಬುದು ಭಕ್ತಾದಿಗಳ ನಂಬಿಕೆ. ರಾಮಲಿಂಗ ಕಾಮಣ್ಣನ ದರ್ಶನ ಪಡೆಯಲು ರಾಜ್ಯವಷ್ಟೇ ಅಲ್ಲ ಪಕ್ಕದ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರಪ್ರದೇಶದಿಂದ ಕೂಡ ಜನರು ಬಂದು ಹರಕೆ ಹೊರುತ್ತಾರೆ. ಮಂಗಳವಾರ ಕಾಮಣ್ಣನನ್ನು ಪ್ರತಿಷ್ಟಾಪನೆ ಮಾಡಲಾಗಿದ್ದು, ಮಾರ್ಚ್ 2 ರವರೆಗೆ ಕಾಮಧೇನುವಿನ ದರ್ಶನ ಭಾಗ್ಯ ಇರಲಿದೆ.

Comments