ಹುತಾತ್ಮ PSI ಮಲ್ಲಿಕಾರ್ಜುನ ಬಂಡೆ ಮಕ್ಕಳನ್ನು ದತ್ತು ತೆಗೆದುಕೊಂಡ ಅಮಿತ್ ಶಾ
ಕಲಬುರಗಿ: ಹುತಾತ್ಮ ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ ಅವರ ಇಬ್ಬರು ಮಕ್ಕಳಾದ ಶಿವಾನಿ ಮತ್ತು ಸಾಯಿರನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದತ್ತು ಪಡೆದಿದ್ದಾರೆ. ಇಬ್ಬರು ಮಕ್ಕಳ ಪೂರ್ಣ ಪ್ರಮಾಣದ ಶಿಕ್ಷಣದ ವೆಚ್ಚವನ್ನ ಬಿಜೆಪಿಯೇ ನೋಡಿಕೊಳ್ಳಲ್ಲಿದೆ ಅಂತಾ ಭರವಸೆ ನೀಡಿದ್ದಾರೆ.
ಸೋಮವಾರದಂದು ಸೇಡಂ ರಸ್ತೆಯ ಇಎಸ್ಐ ಆಸ್ಪತ್ರೆಯ ಆಡಿಟೋರಿಯಂನಲ್ಲಿ ನಡೆದಿದ್ದ ಬಿಜೆಪಿ ವಿಭಾಗೀಯ ಮಟ್ಟದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಬಂಡೆ ಮಕ್ಕಳ ಪರಿಸ್ಥಿತಿಯ ಬಗ್ಗೆ ಹಾಗೂ ಸರ್ಕಾರ ತಿಂಗಳಿಗೆ ಕೇವಲ ಒಂದು ಸಾವಿರ ರೂಪಾಯಿ ಹಣ ಮಾತ್ರ ನೀಡುತ್ತಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಅಂತಾ ಶಾ ಗಮನಕ್ಕೆ ತಂದಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಶಾ, ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚ ಪಕ್ಷವೇ ಭರಿಸುವುದರ ಜೊತೆಗೆ ಇಬ್ಬರು ಮಕ್ಕಳನ್ನ ದತ್ತು ಪಡೆಯುವುದಾಗಿ ಘೋಷಣೆ ಮಾಡಿದರು.
ಕಲಬುರಗಿಯಲ್ಲಿ 2014ರಲ್ಲಿ ಶಾರ್ಪ್ ಶೂಟರ್ ಮುನ್ನಾನೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಗುಂಡು ತಗುಲಿ ಮಲ್ಲಿಕಾರ್ಜುನ ಬಂಡೆ ಮೃತಪಟ್ಟಿದ್ದರು.
ಮೆದುಳು ಕ್ಯಾನ್ಸರ್ನಿಂದ ಬಳಲುತ್ತಿದ್ದ ಹುತಾತ್ಮ ಪಿಎಸ್ ಐ ಮಲ್ಲಿಕಾರ್ಜುನ ಬಂಡೆ ಅವರ ಪತ್ನಿ ಮಲ್ಲಮ್ಮ ಕೂಡ 9 ಜುಲೈ 2016 ರಂದು ಮೃತಪಟ್ಟಿದ್ದರು.