UK Suddi
The news is by your side.

ಉಪ್ಪಿನ ಬೆಟಗೇರಿ: ಸಂರಕ್ಷಿಸಬೇಕಾಗಿದೆ ಐತಿಹಾಸಿಕ ಕಿಲ್ಲಾ (ಭತೇರಿ)

 

ಅವಸಾನದ ಅಂಚಿನಲ್ಲಿರುವ ಉಪ್ಪಿನ ಬೆಟಗೇರಿ ಗ್ರಾಮದ ಗುಡ್ಡದ ಮೇಲಿರುವ ಪ್ರಾಚೀನ ಐತಿಹಾಸಿಕ ಹಿನ್ನೆಲೆಯುಳ್ಳ ಕಿಲ್ಲೆ (ಭತೇರಿ).

-ವರದಿ: ಸಿ.ವೈ.ಲಗಮಣ್ಣವರ

ಉಪ್ಪಿನ ಬೆಟಗೇರಿ:  ಉಪ್ಪಿನ ಬೆಟಗೇರಿ ಗ್ರಾಮದ ಐತಿಹಾಸಿಕ ಹಿನ್ನೆಲೆಯ ಕುರುಹಾದ ಆಕರ್ಷಕ ಕಿಲ್ಲಾ (ಭತೇರಿ) ಈಗ ಸಂಪೂರ್ಣ ಅವಸಾನದ ಅಂಚಿನಲ್ಲಿದ್ದು, ನಿಮ್ಮೂರಿನ ಇತಿಹಾಸವನ್ನು ನೆನಪಿಸುವ ನನ್ನನ್ನು ಉಳಿಸಿಕೊಳ್ಳಲು ಯಾರಾದರೂ ಸ್ವಾಭಿಮಾನಿಗಳು ಮುಂದೆ ಬಂದಾರಾ? ಎಂದು ತನ್ನನ್ನೇ ತಾನು ಪ್ರಶ್ನಿಸುತ್ತಾ ತನ್ನ ಉಳಿವಿಗಾಗಿ ಶಬರಿಯಂತೆ ಕಾಯುತ್ತಿದೆ ಪ್ರಾಚೀನ ಇತಿಹಾಸವುಳ್ಳ ಉಪ್ಪಿನ ಬೆಟಗೇರಿ ಗ್ರಾಮದ ಬೃಹಾದಾಕಾರದ ಕಿಲ್ಲಾ.

ಕಿಲ್ಲಾ ಸಂರಕ್ಷಿಸುವ ಪಣ ತೊಡೋಣ:
ಹೌದು ನಮ್ಮ ದೇಶದ ಪ್ರತಿಯೊಂದು ಗ್ರಾಮಗಳು ತನ್ನ ಮಡಿಲಲ್ಲಿ ತನ್ನದೇ ಐತಿಹಾಸಿಕ ಪ್ರಾಚೀನ ಇತಿಹಾಸವಿರುವ ಅನೇಕ ಕುರುಹಗಳನ್ನು ಹೊಂದಿವೆ. ತಮ್ಮ ಗ್ರಾಮಗಳ ಭೂತಕಾಲದ ಇತಿಹಾಸವು ಮುಂದಿನ ಭವಿಷ್ಯತ್ ಕಾಲದ ಜನತೆಗೆ ತಿಳಿಯಲಿ ಎಂದು ಅನೇಕ ಗ್ರಾಮಗಳ ಸ್ವಾಭಿಮಾನಿಗಳು ತಮ್ಮ ಗ್ರಾಮಗಳ ಪ್ರಾಚೀನ ಪರಂಪರೆಯನ್ನು ಸಂರಕ್ಷಿಸುತ್ತಾ ಬರುತ್ತಿದ್ದಾರೆ. ಆದರೆ ಧಾರವಾಡ ತಾಲೂಕಿನಲ್ಲಿಯೇ ಅತೀ ದೊಡ್ಡ ಗ್ರಾಮಗಳಲ್ಲೊಂದಾದ ಉಪ್ಪಿನ ಬೆಟಗೇರಿಯ ಇತಿಹಾಸವನ್ನು ತನ್ನ ಮಡಿಲಲ್ಲಿಟ್ಟುಕೊಂಡಿರುವ ಭತೇರಿಯು (ಕಿಲ್ಲಾ) ನಮ್ಮ ಕಣ್ಣಮುಂದೆಯೇ ನಶಿಸುತ್ತಿದ್ದರೂ ನೋಡಿ ನೋಡದಂತೆ ಸುಮ್ಮನೆ ಕುಳಿತಿರುವ ನಮ್ಮೂರಿನ ಸ್ವಾಭಿಮಾನಿಗಳೇ, ಏಳಿ ಎದ್ದೇಳಿ ನಮ್ಮೂರಿನ ಐತಿಹಾಸಿಕ ಕುರುಹಾದ ಬೃಹದಾಕಾರದ ಕಿಲ್ಲಾವನ್ನು ನಾವೆಲ್ಲರೂ ಸೇರಿ ಸಂರಕ್ಷಿಸುವ ಪಣ ತೊಡೋಣ.

ಐತಿಹಾಸಿಕ ಹಿನ್ನೆಲೆಯ ಕಿಲ್ಲೆ:
ಗ್ರಾಮದ ಶಿಖರದಂತಿರುವ ಈಗಲೂ ಗುಡ್ಡದ ಮೇಲೆ ರಾರಾಜಿಸುತ್ತಿರುವ ಕಲ್ಲು ಮಣ್ಣುಗಳಿಂದ ನಿರ್ಮಿಸಿರುವ ಈ ಕಿಲ್ಲೆಯು, ಆಗ ಗ್ರಾಮಕ್ಕೆ ದಶ ದಿಕ್ಕುಗಳಿಂದಲೂ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ವೈರಿಗಳು ನುಗ್ಗದಂತೆ ಸೈನಿಕರು ಪಹರೆ ನಡೆಸುವ ಅತೀ ಎತ್ತರದ ಆಕರ್ಷಣೀಯ ಸ್ಥಳವಾಗಿತ್ತು. ಈ ಗ್ರಾಮವನ್ನು ಆಳಿದ ಎಲ್ಲ ರಾಜ ಮಹಾರಾಜರು ತಮ್ಮ ಆಡಳಿತದಲ್ಲಿ ವೈರಿಗಳ ಚಲನವಲನ ವೀಕ್ಷಿಸಿ ತಮ್ಮ ಪ್ರಜೆಗಳನ್ನು ಕಾಪಾಡಲು ಈ ಕಿಲ್ಲೆಯು ಅವರಿಗೆ ಬೆನ್ನೆಲುಬಾಗಿತ್ತು. ಮೊದಲು ರಟ್ಟರ ಆಳ್ವಿಕೆಗೊಳಪಟ್ಟಿದ್ದ ಈ ಗ್ರಾಮವು ನಂತರ ಮರಾಠಾ ದೊರೆಯಾದ ಶಿಂಧೆ ಹೋಳ್ಕರನ ಹಾಗೂ ಕಿತ್ತೂರು ಸಂಸ್ಥಾನ ಮತ್ತು ಬ್ರಿಟಿಷರ ಆಡಳಿತಕ್ಕೊಳಪಟ್ಟಿತ್ತು. ಇವರೆಲ್ಲರ ಆಳ್ವಿಕೆಯಲ್ಲಿ ಹುಡೆಯಂತಲೂ ಕರೆಯುವ ಈ ಬೃಹತ್ ಕಿಲ್ಲೆಯು ವೈರಿಗಳಿಂದ ಊರನ್ನು ರಕ್ಷಿಸುವ ಪ್ರಮುಖ ತಾಣವಾಗಿತ್ತು ಎಂದು ಹೇಳಲಾಗುತ್ತದೆ.

ಸಂರಕ್ಷಿಸುವ ತುರ್ತು ಕಾರ್ಯವಾಗಬೇಕಾಗಿದೆ:
ನೂರಾರು ವರ್ಷಗಳ ಸುದೀರ್ಘ ಇತಿಹಾಸವುಳ್ಳ ಸಂಪೂರ್ಣ ಕಲ್ಲು ಮಣ್ಣುಗಳಿಂದ ಕೂಡಿರುವ ಈ ಕಿಲ್ಲೆಯು ಮಳೆ, ಗಾಳಿ, ಬಿಸಿಲು, ಚಳಿಗೆ ಬಗ್ಗದೇ ಇದ್ದರೂ, ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಈ ಕಿಲ್ಲೆಯ ಸುತ್ತಮುತ್ತಲ ಪ್ರದೇಶದಲ್ಲಿ ಕಲ್ಲು ಗಣಿಗಳ ಬೃಹದಾಕಾರದ ತಗ್ಗುಗಳಿಂದಾಗಿ ಅದು ಈಗ ಸಂಪೂರ್ಣ ಶಿಥಿಲಾವಸ್ಥೆಗೆ ಬಂದು ತಲುಪಿದೆ. ವಿಶಿಷ್ಟ ಹಿನ್ನೆಲೆಯುಳ್ಳ ಈ ಹುಡೆ(ಕಿಲ್ಲೆ)ಯನ್ನು ಸ್ವಾಭಿಮಾನಿಗಳಾದ ನಮ್ಮೆಲ್ಲ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರೆಲ್ಲರೂ ಸೇರಿ ಈ ಕಿಲ್ಲೆಯನ್ನು ಅತೀ ತುರ್ತಾಗಿ ಸಂರಕ್ಷಿಸುವ ಕಾರ್ಯ ಪ್ರಾರಂಭವಾಗಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದ ಅತ್ಯಮೂಲ್ಯವಾದ ಕುರುಹನ್ನು ನಾವೇ ನಾಶ ಮಾಡಿದ ಪಾಪ ಪ್ರಜ್ಞೆ ನಮ್ಮನ್ನು ಕಾಡದೇ ಬಿಡದು. ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲವೆಂಬುದನ್ನು ನಾವೆಲ್ಲರೂ ಅರಿಯೋಣ.

ನಾವೆಲ್ಲರೂ ಇತಿಹಾಸ ಸ್ಮರಿಸಬೇಕಾಗಿದೆ:
ಈ ಕಿಲ್ಲೆಯನ್ನು ಸಂರಕ್ಷಿಸುವದರಿಂದ ನಮ್ಮ ಗ್ರಾಮದ ಇತಿಹಾಸದ ಮುಕುಟ ಮಣಿಯನ್ನು ಸಂರಕ್ಷಿಸಿದ ಸಂತೃಪ್ತಿ ನಮಗೆ ದೊರೆಯುವದು. ಇದರಿಂದ ನಮ್ಮ ಗ್ರಾಮವು ಬೇರೆ ಬೇರೆ ಗ್ರಾಮಗಳ ಗಮನ ಸೆಳೆದು ಇತಿಹಾಸದ ಕುರುಹು ಸಂರಕ್ಷಿಸಿದ ಮಾದರಿ ಗ್ರಾಮವಾಗುವದರಲ್ಲಿ ಸಂದೇಹವಿಲ್ಲ. ರಾಷ್ಟ್ರೀಯ ಹಬ್ಬ ಹಾಗೂ ನಾಡ ಹಬ್ಬಗಳಂದು ಇಲ್ಲಿ ಧ್ವಜಾರೋಹಣ ನೆರವೇರಿಸಿ ಇತಿಹಾಸವನ್ನು ಸ್ಮರಿಸುವ ಅತ್ಯದ್ಭುತ ಕಾರ್ಯಮಾಡಲು ಗ್ರಾಮಸ್ಥರಿಗೆ ಪ್ರೇರಣೆ ದೊರಕುವದು. ಎತ್ತರದ ಈ ಕಿಲ್ಲೆಯ ಮೇಲೆ ನಿಂತು ಆಹ್ಲಾದಕರ ವಾತಾವರಣವನ್ನು ಅನುಭವಿಸುತ್ತಾ ಗ್ರಾಮದ ಸುತ್ತಮುತ್ತಲಿನ ನೈಸರ್ಗಿಕ ನೋಟ ನೋಡುವ ದೃಶ್ಯವನ್ನು ನಾವೆಲ್ಲರೂ ಆಹ್ಲಾದಿಸಬಹುದು. ಬನ್ನಿ ಗ್ರಾಮದ ಎಲ್ಲ ಬಾಂಧವರೇ ನಾವೆಲ್ಲರೂ ಸೇರಿ ಈ ಮೂಲಕ ನಮ್ಮ ಜನಪ್ರತಿನಿಧಿಗಳನ್ನು ಎಚ್ಚರಿಸುತ್ತಾ ನಮ್ಮೂರಿನ ಇತಿಹಾಸದ ಕುರುಹನ್ನು ಸಂರಕ್ಷಿಸುವ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣ.

Comments