UK Suddi
The news is by your side.

ಧಾರವಾಡದಲ್ಲಿ 6ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ: ಭಾಗಿಯಾಗದ ರಾಜಕಾರಣಿಗಳು

ಧಾರವಾಡ:ಇಂಗ್ಲೀಷ್ ಮಾಧ್ಯಮ ಸೇರಿದಂತೆ ಬಾಹ್ಯ ಒತ್ತಡಗಳಿಂದ ಕನ್ನಡ ಸಾಯುತ್ತಿದೆ, ಅಳಿವಿನಂಚಿನಲ್ಲಿದೆ ಎಂದೆಲ್ಲಾ ಹೇಳುತ್ತಿದ್ದರೂ ಕನ್ನಡಕ್ಕೆ ಸಾವೇ ಇಲ್ಲ. ಸಾವಿರಾರು ವರ್ಷಗಳ ಇತಿಹಾಸದ ಕನ್ನಡಕ್ಕೆ ಇನ್ನೂ ಸಾಕಷ್ಟು ಜೀವಸತ್ವ, ಶಕ್ತಿ ಇದ್ದು ನಿರಂತರವಾಗಿ ಅದು ಬೆಳೆಯುತ್ತಿದೆ ಎಂದು ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ ಹೇಳಿದರು.

ಇಲ್ಲಿನ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಬುಧವಾರ ನಡೆದ ಧಾರವಾಡ ತಾಲೂಕು 6ನೇ ಸಾಹಿತ್ಯ ಸಮ್ಮೇಳನವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಹಾಗೂ ಸಾಹಿತ್ಯ ಮತ್ತಷ್ಟು ಬೆಳೆಯಲು ಐದು ಹಂತಗಳ ಸಲಹೆಗಳನ್ನು ಡಾ. ರಾಜೂರ ಹೇಳಿದರು.

ಮನೆಯೇ ಮೊದಲ ಪಾಠ ಶಾಲೆ ಎನ್ನುವಂತೆ ಕನ್ನಡ ಭಾಷೆ ಮನೆ-ಮನೆಯಿಂದಲೇ ಉಳಿದು ಬೆಳೆಯಬೇಕು. ತಂದೆ-ತಾಯಿ ಹಾಗೂ ಪಾಲಕರು ಇಂಗ್ಲೀಷ್ ವ್ಯಾಮೋಹ ಬದಿಗಿಟ್ಟು ಮಕ್ಕಳಿಗೆ ಸರಿಯಾಗಿ ಕನ್ನಡ ಕಲಿಸುವ ಪ್ರಯತ್ನಗಳು ನಡೆಯಬೇಕು. ಶಾಲಾ ಹಂತದಲ್ಲೂ ಕನ್ನಡ ಭಾಷೆಯ ವಿಸ್ತರಣೆ ಅಗತ್ಯ. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಯ ಅಧ್ಯಯನ ಕಡ್ಡಾಯವಾಗಬೇಕು. ಪಠ್ಯಕ್ರಮಗಳು ಕನ್ನಡದಲ್ಲಿಯೇ ಇರಬೇಕು. ಪ್ರಾಥಮಿಕ ಹಂತದಲ್ಲಿ ಚಿತ್ರ ಮಾಲಿಕೆ, ಪ್ರೌಢಶಾಲೆಯಲ್ಲಿ ಕಥಾಚಿತ್ರ, ಕಾಲೇಜು ಹಂತದಲ್ಲಿ ಸರಳ ಪಠ್ಯ ಹಾಗೂ ಸ್ನಾತಕೋತ್ತರ ಹಂತದಲ್ಲಿ ಛಂಧಸ್ಸು ಮಾದರಿಯಲ್ಲಿ ಕನ್ನಡ ಕಲಿಸಬೇಕು. ಜೊತೆಗೆ ಮಕ್ಕಳಿಗೆ ಕನ್ನಡದ ಬಗ್ಗೆ ಪ್ರೀತಿ ವಿಶ್ವಾಸ ಹಾಗೂ ಗೌರವ ಮೂಡುವ ರೀತಿಯಲ್ಲಿ ಶಿಕ್ಷಕರು, ಉಪನ್ಯಾಸಕರು ಪಾಠ ಮಾಡಬೇಕು ಎಂದರು.

ಇನ್ನು, ಭಾಷೆ ಬೆಳೆಸಲು ಮಾಧ್ಯಮಗಳ ಪಾತ್ರವೂ ಸಾಕಷ್ಟಿದೆ. ಓದುಗರಿಗೆ, ನೋಡುಗರಿಗೆ ಭಾಷೆಯ ಮೇಲಿನ ಪ್ರೀತಿ ಹೆಚ್ಚಿಸುವಂತಿರಬೇಕು ಎಂದ ಡಾ.ರಾಜೂರ, ಸರ್ಕಾರಿ ಕಚೇರಿಯಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸವಂತಾಗಬೇಕು. ಈ ಇಚ್ಛಾಶಕ್ತಿಯನ್ನು ಆಡಳಿತ ವ್ಯವಸ್ಥೆ ಹೊಂದಬೇಕು. ಕೊನೆಯದಾಗಿ ವಿದ್ಯಾವರ್ಧಕ ಸಂಘ, ಕಸಾಪ, ಅಕಾಡೆಮಿ ಅಂತಹ ಸಂಘ-ಸಂಸ್ಥೆಗಳು ಕನ್ನಡ ಭಾಷೆ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದಾಗ ಮಾತ್ರ ಕನ್ನಡ ತಾನಾಗಿಯೇ ಬೇರೆ ಭಾಷೆಗಳಿಂತ ಅದ್ಭುತವಾಗಿ ಬೆಳೆಯಲಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಕಸಾಪ ತಾಲೂಕು ಘಟಕಗಳನ್ನು ರಚಿಸಿದ್ದು ಗ್ರಾಮೀಣ ಪ್ರದೇಶದಲ್ಲಿಯೇ ತಾಲೂಕು ಸಮ್ಮೇಳನಗಳನ್ನು ಮಾಡುವ ಉದ್ದೇಶದಿಂದ. ಹೀಗಾಗಿ ಧಾರವಾಡ ಅಂತಹ ನಗರಗಳನ್ನು ಬಿಟ್ಟು ಇನ್ಮುಂದೆ ಕಡ್ಡಾಯವಾಗಿ ಆಯಾ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಇಂತಹ ಸಮ್ಮೇಳನಗಳು ನಡೆಯಲಿ. ಇದರಿಂದ ಆಯಾ ಗ್ರಾಮಸ್ಥರು ಸಮ್ಮೇಳನಗಳನ್ನು ಹಬ್ಬಗಳ ರೀತಿಯಲ್ಲಿ ಸ್ವಾಗತಿಸುತ್ತಾರೆ. ಜೊತೆಗೆ ಗ್ರಾಮೀಣದಲ್ಲಿ ಕನ್ನಡದ ಜಾಗೃತಿ ಮೂಡಲಿದೆ ಎಂಬ ಸಲಹೆಯನ್ನು ಡಾ. ರಾಜೂರ ನೀಡಿದರು.

 

ಎಂಟೂ ತಾಲೂಕುಗಳಲ್ಲಿ ಸಮ್ಮೇಳನ

ಇದಕ್ಕೂ ಮುಂಚೆ ಆಶಯ ನುಡಿಗಳನ್ನು ಹೇಳಿದ ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಸುಮಾರು ಆರು ದಶಕಗಳ ನಂತರ ಧಾರವಾಡದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಹಿರಿಯ ಸಾಹಿತಿಗಳನ್ನು ಒಳಗೊಂಡ ಸಲಹೆ ಸಮಿತಿ ರಚಿಸಿಕೊಂಡು ಯಶಸ್ವಿಯಾಗಿ ಈ ಸಮ್ಮೇಳನ ನಡೆಸಲು ಈಗಿನಿಂದಲೇ ಸಿದ್ಧತೆ ನಡೆದಿದೆ ಎಂದರು. ಜಿಲ್ಲೆಯಲ್ಲಿ ಇದೀಗ ಎಂಟು ತಾಲೂಕುಗಳಾಗಿದ್ದು ಈ ಬಾರಿ ಎಂಟೂ ತಾಲೂಕುಗಳಲ್ಲಿ ತಾಲೂಕು ಸಮ್ಮೇಳನ ಮಾಡಲು ಚಿಂತಿಸಲಾಗಿದೆ ಎಂದರು.

ನಿಕಟಪೂರ್ವ ಅಧ್ಯಕ್ಷರಾದ ಮಕ್ಕಳ ಸಾಹಿತಿ ಈಶ್ವರ ಕಮ್ಮಾರ, ತಾಲೂಕು ಕಸಾಪ ಅಧ್ಯಕ್ಷ ಎ-.ಬಿ. ಕಣವಿ, ಹಿರಿಯ ಲೇಖಕಿ ಮಾಲತಿ ಪಟ್ಟಣಶೆಟ್ಟಿ, ನೌಕರರ ಸಂಘದ ಎಸ್.ಎಸ್. ರಾಮದುರ್ಗ, ಜಿ.ಎಂ. ನದಾ-, ಲತಾ ಮುಳ್ಳೂರ ಹಾಗೂ ಬಾಳಣ್ಣ ಶೀಗಿಹಳ್ಳಿ, ಡಾ.ಗಿರಡ್ಡಿ ಗೋವಿಂದರಾಜ ಮತ್ತಿತರರು ಇದ್ದರು. ವಿಶೇಷ ಎಂದರೆ ಈ ಸಮ್ಮೇಳನಕ್ಕೆ ಒಬ್ಬ ರಾಜಕಾರಣಿಯೂ ಆಗಮಿಸರಲಿಲ್ಲ. ಸಮಾರಂಭಕ್ಕೂ ಮುಂಚೆ ಕನ್ನಡಾಂಭೆಯ ಪೂಜೆ, ಮೆರವಣಿಗೆ, ಕನ್ನಡಕ್ಕಾಗಿ ನಡೆಗೆ ನಡೆಯಿತು. ಮನಗುಂಡಿ ಕರಿಯಮ್ಮದೇವಿ ಜಗ್ಗಲಗಿ ತಂಡ, ಯರಿಕೊಪ್ಪದ ಗದಿಗೇಶ್ವರ ಮಹಿಳಾ ಡೊಳ್ಳು ಕುಣಿತ ಅದ್ಭುತವಾಗಿತ್ತು. ಕುರುಬಗಟ್ಟಿ ಶಾಲಾ ಮಕ್ಕಳಿಂದ ನಾಡಗೀತೆ ನಡೆಯಿತು.

Comments