UK Suddi
The news is by your side.

ಧಾರವಾಡ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ: 14 ಲಕ್ಷ 48,748 ಮತದಾರರು

ಧಾರವಾಡ: ಬರುವ ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 14 ಲಕ್ಷ 48,748 ಮತದಾರರು ಮತ ಚಲಾವಣೆ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣೆಯ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ  ಒಟ್ಟು 14,48,748 ಲಕ್ಷ ಮತದಾರರು ನೋಂದಣಿಯಾಗಿದ್ದಾರೆ. ಚುನಾವಣೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕಕ್ಕಿಂತ ಹತ್ತು ದಿನಗಳ ಮುಂಚೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದವರು ಸಹ ಮತದಾನಕ್ಕೆ ಅರ್ಹತೆ ಪಡೆಯಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪ್ರಸಕ್ತ 2018ರಲ್ಲಿ ಜಿಲ್ಲೆಯಲ್ಲಿ ಒಟ್ಟು 20,51,748 ಜನಸಂಖ್ಯೆಯನ್ನು ಅಂದಾಜಿಸಲಾಗಿದೆ. ಈ ಪೈಕಿ 10,31,932 ಪುರುಷರು ಹಾಗೂ 10,20,178 ಮಹಿಳೆಯರು ಇದ್ದಾರೆ ಎಂದು ವಿಭಜಿಸಲಾಗಿದೆ. ಈ ಜನಸಂಖ್ಯೆಗೆ ಅನುಗುಣವಾಗಿ ಕಳೆದ ಜನವರಿ 22 ರವರೆಗೆ ಅರ್ಜಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪರಿಷ್ಕರಿಸಿ ಒಟ್ಟು 14,48,748 ಮತದಾರರನ್ನು ಹೊಂದಿರುವ ಅಂತಿಮ ಮತದಾರರ ಯಾದಿಯನ್ನು ಪ್ರಕಟಿಸಲಾಗಿದೆ. ಈ ಪೈಕಿ 7,35,065 ಪುರುಷರು ಹಾಗೂ 7,13,683 ಮಹಿಳಾ ಮತದಾರರಿದ್ದಾರೆ. ಪರಿಷ್ಕರಣೆ ಅವಧಿಯಲ್ಲಿ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿದ್ದಾರೆ. ಪಟ್ಟಿಯಲ್ಲಿ ಹೇಳಲಾಗಿದ್ದ ಸ್ಥಳಗಳಲ್ಲಿ ವಾಸವಿಲ್ಲದವರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದರು.

 

184730 ಮತದಾರರನ್ನು ಹೊಂದಿರುವ 70- ಕುಂದಗೋಳ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಅತಿ ಕಡಿಮೆ ಮತದಾರರನ್ನು ಹೊಂದಿದ ಕ್ಷೇತ್ರವಾಗಿದೆ. 249406 ಮತದಾರರು ಇರುವ 74-ಹುಬ್ಬಳ್ಳಿ ಧಾರವಾಡ (ಪಶ್ಚಿಮ) ಕ್ಷೇತ್ರ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿದೆ. 2017ರ ನ.30ರಂದು ಪ್ರಕಟಿಸಲಾಗಿದ್ದ ಮತದಾರರ ಕರಡು ಪಟ್ಟಿಯಲ್ಲಿ 1435434 ಮತದಾರರಿದ್ದರು. ಕಳೆದ ಜನವರಿ 22ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯಲ್ಲಿ 49894 ಅರ್ಜಿಗಳು ಹೆಸರು ಸೇರ್ಪಡೆ ಕೋರಿ ನಮೂನೆ 6ರಲ್ಲಿ ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 1723 ಅರ್ಜಿಗಳು ತಿರಸ್ಕøತವಾಗಿವೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಕೋರಿ ನಮೂನೆ 7ರಲ್ಲಿ 36305 ಅರ್ಜಿಗಳು ಬಂದಿದ್ದವು. ಇದರಲ್ಲಿ 285 ಅರ್ಜಿಗಳು ತಿರಸ್ಕೃತವಾಗಿವೆ. ತಿದ್ದುಪಡಿ ಕೋರಿ ನಮೂನೆ 8ರಲ್ಲಿ 9269 ಅರ್ಜಿಗಳು ಸ್ವೀಕೃತಿಯಾಗಿದ್ದವು, ಇವುಗಳಲ್ಲಿ 97 ಅರ್ಜಿಗಳು ತಿರಸ್ಕಾರಗೊಂಡಿವೆ. ಸ್ಥಳ ವರ್ಗಾವಣೆ ಕೋರಿ 8205 ಅರ್ಜಿಗಳು ನಮೂನೆ 8(ಎ)ದಲ್ಲಿ ಸಲ್ಲಿಕೆಯಾಗಿದ್ದವು, ಇದರಲ್ಲಿ 32 ಅರ್ಜಿಗಳು ತಿರಸ್ಕೃತತಗೊಂಡಿವೆ ಎಂದು ಡಿಸಿ ತಿಳಿಸಿದರು.

ಜಿಲ್ಲೆಯಲ್ಲಿ 1000 ಪುರುಷರಿಗೆ 967 ಮಹಿಳಾ ಮತದಾರರ ಲಿಂಗಾನುಪಾತವಿದೆ. 937 ಲಿಂಗಾನುಪಾತ ಹೊಂದಿರುವ ಕುಂದಗೋಳ ವಿಧಾನಸಭಾ ಕ್ಷೇತ್ರ ಅತಿ ಕಡಿಮೆ ಮಹಿಳಾ ಮತದಾರರನ್ನು ಹೊಂದಿದೆ. ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿಗೆ ಇದ್ದು, 1006 ಲಿಂಗಾನುಪಾತವಿದೆ.

126 ಹೊಸಮತಗಟ್ಟೆಗಳು :

ಜಿಲ್ಲೆಯಾದ್ಯಂತ 126 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು,  ಮತಗಟ್ಟೆಗಳ ಸಂಖ್ಯೆ 1472 ರಿಂದ 1598 ಗೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ವಿವರಿಸಿದರು.

ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಸ್ನೇಹಲ್ ಆರ್ ಮಾತನಾಡಿ, ಮತದಾರರ ಜಾಗೃತಿಗಾಗಿ ಜಿಲ್ಲೆಯಾದ್ಯಂತ ಅನೇಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. 18 ವರ್ಷ ತುಂಬಿದ ಹೊಸ ಯುವ ಮತದಾರರು ಪಟ್ಟಿಗೆ ಸೇರ್ಪಡೆಯಾಗುವ ಪ್ರಮಾಣ ಇನ್ನೂ ಹೆಚ್ಚಳವಾಗಬೇಕಾಗಿದೆ. ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಕ್ಕಿಂತ ಹತ್ತು ದಿನಗಳ ಮುಂಚೆ ಅರ್ಜಿ ಸಲ್ಲಿಸುವವರು ಕೂಡ ಮತದಾನಕ್ಕೆ ಅರ್ಹತೆ ಪಡೆಯುತ್ತಾರೆ. ಜಿಲ್ಲೆಯ ಜನತೆ ಈ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Comments