ಬಣ್ಣದಾಟಕ್ಕೆ ಸಿದ್ಧವಾದ ವಿದ್ಯಾಕಾಶಿ: ಪಿಚಕಾರಿ, ಮುಖವಾಡ, ಬಣ್ಣ ಖರೀದಿ ಜೋರು
ಧಾರವಾಡ: ದೇಶದಾದ್ಯಂತ ಮಾ.2 ರಂದು ಹೋಳಿ ಹಣ್ಣಿಮೆ ಆಚರಿಸಲಾಗುತ್ತಿದೆ. ಮಾ.1 ರಂದು ಹುಣ್ಣಿಮೆ ಆದರೆ, ಮಾ.2 ರಂದು ಓಕುಳಿ ಆಟ ನಡೆಯಲಿದೆ. ಇದಕ್ಕಾಗಿ ಎಲ್ಲೆಡೆ ಸಿದ್ಧತೆ ನಡೆದಿದೆ. ತಹರೇವಾರಿ ಬಣ್ಣ, ಪಿಚಕಾರಿ, ಮುಖವಾಡಗಳು, ಹಲಿಗೆಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ.
ಧಾರವಾಡದ ಸುಭಾಷ ರಸ್ತೆ ಬುಧವಾರ ಅಕ್ಷರಶಃ ಜನಜಂಗುಳಿಯಿಂದ ಕೂಡಿತ್ತು. ಮಾರುಕಟ್ಟೆಗೆ ಪೀಪಿ, ಟೋಪಿ, ತಹರೇವಾರಿ ಮುಖವಾಡಗಳು ಸೇರಿದಂತೆ ಬಣ್ಣದ ಪ್ಯಾಕೇಟ್ ಗಳು ಲಗ್ಗೆ ಇಟ್ಟಿದ್ದವು. ಅವುಗಳನ್ನು ಖರೀದಿಸಲು ಸಾರ್ವಜನಿಕರು ನಾ ಮುಂದು ತಾ ಮುಂದು ಎಂದು ಬರುತ್ತಿದುದು ಸಾಮಾನ್ಯವಾಗಿತ್ತು.
ಸಕ್ಕರೆ ಸರ ಕೂಡ ಮಾರಾಟಕ್ಕಿಡಲಾಗಿತ್ತು. ಹೋಳಿ ಹಬ್ಬದ ಅಂಗವಾಗಿ ನಗರದ ವಿವಿಧ ಕಡೆಗಳಲ್ಲಿ ರತಿ ಕಾಮಣ್ಣರ ಮೂರ್ತಿಗಳನ್ನೂ ಪ್ರತಿಷ್ಟಾಪನೆ ಮಾಡಲಾಗಿದ್ದು, ಕರಿ ದಿವಸ ಆ ಮೂರ್ತಿಗಳನ್ನು ದಹನ ಮಾಡಿ ಓಕುಳಿ ಆಡಲಾಗುತ್ತಿದೆ. ಓಕುಳಿ ಹಬ್ಬಕ್ಕೆ ಈಗಾಗಲೇ ಎಲ್ಲೆಡೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.