UK Suddi
The news is by your side.

ವೀರವನಿತೆ ಬೆಳವಡಿ ಮಲ್ಲಮ್ಮ ಉತ್ಸವಕ್ಕೆ ಅದ್ದೂರಿ ಚಾಲನೆ.

ಬೈಲಹೊಂಗಲ:ಎಲ್ಲಿ ನೋಡಿದಲ್ಲಿ ಕಲಾತಂಡಗಳ ಅರ್ಭಟ, ಜಾಂಜ್, ಡೊಳ್ಳು, ಹಲಗೆ, ಕರಡಿ ಮಜಲು, ಶಹನಾಯಿ ಸದ್ದುಗಳ ಮಧ್ಯೆ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ 2018ರ ಬೆಳವಡಿ ಮಲ್ಲಮ್ಮನ ಉತ್ಸವಕ್ಕೆ ಬುಧವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ವೀರರಾಣಿ ಬೆಳವಡಿ ಮಲ್ಲಮ್ಮ ವಿಜಯ ಜ್ಯೋತಿ ಸ್ವಾಗತ:

ಮಲ್ಲಮ್ಮಳ ತವರೂರು ಶಿರಸಿ ತಾಲೂಕಿನ ಸೊಂದಾ ಗ್ರಾಮದಿಂದ ಆಗಮಿಸಿದ ವೀರರಾಣಿ ಬೆಳವಡಿ ಮಲ್ಲಮ್ಮ ವಿಜಯ ಜ್ಯೋತಿಯನ್ನು  ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲ,ಶಾಸಕ ಡಾ.ವಿಶ್ವನಾಥ ಪಾಟೀಲ,ತಹಶೀಲ್ದಾರ ಪ್ರಕಾಶ ಗಾಯಕವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ, ಜಿಪಂ ಸದಸ್ಯ ಈರಣ್ಣಾ ಕರೀಕಟ್ಟಿ, ತಾಪಂ ಅಧ್ಯಕ್ಷೆ ಶೈಲಾ ಸಿದ್ರಾಮನಿ,ಊರಿನ ಗಣ್ಯರು ಪೂಜೆ ಸಲ್ಲಿಸಿ ಬರಮಾಡಿಕೊಂಡರು.
ಶಾಸಕ ಡಾ.ವಿಶ್ವನಾಥ ಪಾಟೀಲ, ಅಪರ ಜಿಲ್ಲಾದಿಕಾರಿ ಎಸ್ ಜಿಯಾವುಲ್ಲ, ಮಲ್ಲಮ್ಮನ ವೃತ್ತದಲ್ಲಿನ ಮಲ್ಲಮ್ಮನ ಅಶ್ವಾರೂಢ ಮೂರ್ತಿಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಬೆಳವಡಿ ಸಂಸ್ಥಾನದ ದ್ವಜಾರೋಹಣವನ್ನು ಶಾಸಕ ಡಾ.ವಿಶ್ವನಾಥ ಪಾಟೀಲ ನೆರವೇರಿಸಿದರು.
ಜಾನಪದ ಕಲಾ ವಾಹಿನಿಗೆ ಚಾಲನೆ:
ಜಾನಪದ ಕಲಾ ಮೇಳವನ್ನು ಶಾಸಕ ಡಾ.ವಿಶ್ವನಾಥ ಪಾಟೀಲ, ಅಪರ ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲ, ಜಿಪಂ. ಸದಸ್ಯ ಈರಣ್ಣ ಕರೀಕಟ್ಟಿ, ಅವರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.

ರಸದೌತಣ ನೀಡಿದ ಕಲಾ ತಂಡಗಳು:
ರಂಗೀನ ಉಡುಪು ತೊಟ್ಟ ಕಲಾವಿದರುಗಳು ಸಾರ್ವಜನಿಕರಿಂದ ಅಭಿಮಾನದ ಚಪ್ಪಾಳೆ ಗಿಟ್ಟಿಸಿಕೊಂಡರು. ಗ್ರಾಮದ ತುಂಬೆಲ್ಲ ಲವಲವಿಕೆಯಿಂದ ಓಡಾಡಿ ತಮ್ಮ ಕಲಾ ನೈಪುಣ್ಯತೆ ತೋರಿಸಿದರು. ಸುಮಾರು 20ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಗುಂಡೆನಟ್ಟಿಯ ಜಗ್ಗಲಗಿ ಮೇಳ, ಹಂದಿಗುಂದ ಜಾಂಜ್ ಪಥಕ, ರಾಮದುರ್ಗದ ಡೊಳ್ಳು ಕುಣಿತ, ಶಹಾಪುರ ಕರಬಲ್ಲ ಕುಣಿತ, ಚಮಕೇರಿ ಕರಡಿ ಮಜಲು, ಕಲ್ಲೊಳ್ಳಿ ವೀರಭದ್ರ ಕುಣಿತ, ಸಂಭಾಳವಾದನ, ಅಳಗವಾಡಿ ಕುದರೆ ಕುಣಿತ, ಚಿಂಚಲಿ ಡೋಲು ಪಥಕ, ಹಳಿಯಾಳ ತಾಸೇವಾದನ, ಮೊರಬ ಕರಬಲ್ಲ ಕುಣಿತ, ಹಗಲೂ ವೇಷ ಕಲಾ ತಂಡದ ರಾಮ, ರಾಕ್ಷಸ ಪಾತ್ರಧಾರಿ ನೋಡುಗರ ಕಣ್ಣಿಗೆ ಮುದ ನೀಡಿದರು.

ಮಲ್ಲಮ್ಮನ ವೇಷಭೂಷಣದಲ್ಲಿ ಮಿಂಚಿದ ಶಾಲಾ ವಿದ್ಯಾರ್ಥಿಗಳು: 
ಈಶಫ್ರಬು ಶಿಕ್ಷಣ ಸಂಸ್ಥೆಯ ಪ್ರೌಡ ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಂದ ರಾಣಿ ಮಲ್ಲಮ್ಮ ಹಾಗೂ ರಾಜಾ ಈಶಪ್ರಭು ವೇಷಭೂಷಣಗಳ ರೂಪಕದ ಮಹಿಳಾ ಸೈನ್ಯದೊಂದಿಗೆ ಕುದುರೆ ಸವಾರಿ ನೆರೆದಿದ್ದ ಸಾವಿರಾರು ಜನರ ಮನಸೂರೆಗೊಂಡರು.ಕಾರ್ಯಕ್ರಮ ನೋಡಲು ಬಂದಿದ್ದ ಜನರು ಬಿಸಿಲಿನ್ನೂ ಲೆಕ್ಕಿಸದೆ ಉತ್ಸಾಹದಿಂದ ಪಾಲ್ಗೊಂಡಿದ್ದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ತಳಿರು ತೋರಣ ಹಾಗೂ ಬಣ್ಣಬಣ್ಣದ ರಂಗೋಲಿಗಳಿಂದ ಗ್ರಾಮವನ್ನು ಶೃಂಗರಿಸಲಾಗಿತ್ತು.


ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ:

ವಸ್ತು ಪ್ರದರ್ಶನ, ಮಾರಾಟ ಮಳಿಗೆಯನ್ನು ಶಾಸಕ ಡಾ.ವಿಶ್ವನಾಥ ಪಾಟೀಲ ಉದ್ಘಾಟಿಸಿ, ಮಾರಾಟ ಮಳಿಗೆಯಲ್ಲಿನ ವಸ್ತುಗಳನ್ನು ಗಣ್ಯರು ಹಾಗೂ ಅಧಿಕಾರಿಗಳೊಂದಿಗೆ ವಿಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ದೇಶದಲ್ಲಿಯೇ ಪ್ರಪ್ರಥಮ ಮಹಿಳಾ ಸೈನ್ಯ ಕಟ್ಟಿದ ವೀರ ವನಿತೆ ಬೆಳವಡಿ ಮಲ್ಲಮ್ಮಳ ಸಾಹಸಮಯ ಇತಿಹಾಸದ ಜೀವನ ಇಂದಿನ ಮಹಿಳೆಯರಿಗೆ ಆತ್ಮಸ್ಥೈರ್ಯ ಹೊಂದಲು ಸಹಕಾರಿಯಾಗಿದೆ. ಮಲ್ಲಮ್ಮಳ ಉತ್ಸವವನ್ನು ಸರಕಾರಿ ಉತ್ಸವವಾಗದೇ, ಜನೋತ್ಸವವಾಗಿ ಹೊರಹೊಮ್ಮಲು ನಾಡಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವಕ್ಕೆ ಮೆರಗು ತರಬೇಕು ಎಂದರು.
ಉಪವಿಭಾಗಾಧಿಕಾರಿ ಡಾ.ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ, ತಹಶೀಲ್ದಾರ ಪ್ರಕಾಶ ಗಾಯಕವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ, ಜಿಪಂ ಸದಸ್ಯ ಈರಣ್ಣಾ ಕರೀಕಟ್ಟಿ, ತಾಪಂ ಅಧ್ಯಕ್ಷೆ ಶೈಲಾ ಸಿದ್ರಾಮನಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಅಮೃತಾ ಕಕ್ಕಯ್ಯನವರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಈರವ್ವಾ ತಳವಾರ, ಉಪಾಧ್ಯಕ್ಷೆ ಕಸ್ತೂರೆವ್ವಾ ರೇಶ್ಮಿ, ಸದಸ್ಯರಾದ ಮಡ್ಡೆಪ್ಪ ಹುಂಬಿ, ಬಾಳಪ್ಪ ಚವರದ, ಲಕ್ಷ್ಮಣ ಸಾಲಹಳ್ಳಿ, ಗಂಗಪ್ಪ ತುರಾಯಿ, ರಫೀಕ ಹುಜರತಿ, ಸಿದ್ದಪ್ಪ ಸಿದ್ದನ್ನವರ, ಶಂಕರ ಬಳಿಗರ, ಡಾ.ಡಿ.ವೈ.ಗರಗದ, ತಾಲ್ಲೂಕು ಪಂಚಾಯ್ತಿ ಅಧಿಕಾರಿ ಎಸ್.ಎಸ್.ಕಾದ್ರೊಳ್ಳಿ, ಪಿಡಿಒ ಮೇಘನಾ ಶೆಟ್ಟಿ, ದಲಿತ ಮುಖಂಡ ಪ್ರಭಾಕರ ಭಜಂತ್ರಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ವಿ.ಆರ್.ಮುನವಳ್ಳಿ, ಸಿಡಿಪಿಒ ಎಸ್.ಎಸ್.ಮರೀಕಟ್ಟಿ, ವೈದ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ, ಕಿತ್ತೂರು ಸಿಪಿಐ ರಾಘವೇಂದ್ರ ಹವಾಲ್ದಾರ, ಪಿಎಸ್‍ಐ ಸುಮಾ ನಾಯ್ಕ, ಊರಿನ ಹಿರಿಯರು, ಯುವಕ ಸಂಘಟನೆಗಳ ಪದಾಧಿಕಾರಿಗಳು, ಕರವೇ ಕಾರ್ಯಕರ್ತರು, ಮಹಿಳಾ ಸ್ತ್ರೀಶಕ್ತಿ ಸಂಘಟನೆ ಸದಸ್ಯರುಗಳು, ಶಾಲೆ, ಕಾಲೇಜು ವಿದ್ಯಾರ್ಥಿಗಳು,ಊರಿನ ಹಿರಿಯರು ಉಪಸ್ಥಿತರಿದ್ದರು.

ಗಣ್ಯರ ಗೈರು: ಧ್ವಜಾರೋಹಣ ನೆರವೇರಿಸಬೇಕಿದ್ದ ಜಿಲ್ಲಾ ಉಸ್ತುವಾರಿ ರಮೇಶ ಜಾರಕಿಹೊಳಿ, ಜ್ಯೋತಿ ಬರಮಾಡಿಕೊಳ್ಳಬೇಕಿದ್ದ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ, ಕಲಾಮೇಳ ಉದ್ಘಾಟಿಸಬೇಕಿದ್ದ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ನೇತೃತ್ವಹಿಸಬೇಕಿದ್ದ ಶಾಸಕ ಡಿ.ಬಿ.ಇನಾಮದಾರ, ವಸ್ತು ಪ್ರದರ್ಶನ ಉದ್ಘಾಟಿಸಬೇಕಿದ್ದ ಸಂಸದ ಸುರೇಶ ಅಂಗಡಿ ಗೈರು ಎದ್ದು ಕಂಡಿತು.

Comments