UK Suddi
The news is by your side.

ನೂರು ವರ್ಷ ಪೂರೈಸಿದ ಕೆಸಿಸಿ ಬ್ಯಾಂಕ್ ಶತಮಾನೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ

ಧಾರವಾಡ: ಮಾರ್ಚ್ 3 ರಂದು ಇಲ್ಲಿನ ಹುರಕಡ್ಲಿ ಅಜ್ಜ ಕಾಲೇಜು ಮೈದಾನದಲ್ಲಿ ಕೆಸಿಸಿ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮ ಜರುಗಲಿದ್ದು, ಅದಕ್ಕಾಗಿ ಕೆಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಹಾಗೂ ಜಿಲ್ಲಾಡಳಿತ ಶುಕ್ರವಾರ ಸಿದ್ಧತೆಯನ್ನು ಪರಿಶೀಲಿಸಿದರು.

ಸಮಾರಂಭದ ವೇದಿಕೆ, ಸಾರ್ವಜನಿಕರ ಆಸನಗಳು, ಕುಡಿಯುವ ನೀರು, ಊಟದ ವ್ಯವಸ್ಥೆ ಸೇರಿದಂತೆ ಇತರ ಸಿದ್ಧತೆಗಳು ಭರದಿಂದ ಸಾಗಿದ್ದು, ಅವುಗಳನ್ನು ಪರಿಶೀಲಿಸಲಾಯಿತು,. ಅಂತಿಮ ಹಂತದ ತಯಾರಿ ನಡೆದಿದ್ದು, ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ‌. ಬ್ಯಾಂಕಿನ ಅಧ್ಯಕ್ಷ ಐ.ಎಸ್. ಪಾಟೀಲ ಮಾತನಾಡಿ, ಈ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸ್ಪೀಕರ್ ಕೆ.ಬಿ.ಕೋಳಿವಾಡ, ಸಚಿವರಾದ ರಮೇಶ ಜಾರಕಿಹೊಳಿ, ವಿನಯ ಕುಲಕರ್ಣಿ, ರುದ್ರಪ್ಪ ಲಮಾಣಿ, ಸಂತೋಷ ಲಾಡ್, ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಸೇರಿದಂತೆ ಅನೇಕ ಶಾಸಕರು, ಚುನಾಯಿತ ಪ್ರತಿನಿಧಿಗಳು, ರಾಜ್ಯದ ವಿವಿಧ ಜಿಲ್ಲೆಗಳ ಸಹಕಾರಿಗಳು, ರೈತರು, ಬ್ಯಾಂಕಿನ ಸದಸ್ಯರು ಹಾಗೂ ಅಪಾರ ಪ್ರಮಾಣದ ಅಭಿಮಾನಿಗಳು ಆಗಮಿಸಲಿದ್ದಾರೆ ಎಂದರು. ಈ ಹಿನ್ನೆಲೆಯಲ್ಲಿ ಸಮಾರಂಭ ಅಚ್ಚುಕಟ್ಟಾಗಿ ನಡೆಯಬೇಕಿದೆ. ಯಾವುದೇ ಅಡಚಣೆ ಆಗದಂತೆ ತಯಾರಿ ಮಾಡಲಾಗುತ್ತಿದೆ. ವಿಶೇಷವಾಗಿ ನೂರು ವರ್ಷ ಪೂರೈಸಿರುವ ಕೆಸಿಸಿ ಬ್ಯಾಂಕಿನ ಶತಮಾನೋತ್ಸವ ಸಮಾರಂಭ ನಮಗೆಲ್ಲ ಖುಷಿ ತಂದಿದೆ ಎಂದರು.

ದಿವಾನ್ ಬಹದ್ಧೂರ್, ಎಸ್.ವಿ.ಮೆಣಸಿನಕಾಯಿ, ರಾವ್ ಬಹದ್ದೂರ್, ರುದ್ರಗೌಡ ಅರಟಾಳ ಮತ್ತು ದಿ.ವಿ.ಎಸ್.ಬಸವನಾಳ, ಜಿ.ಆರ್.ನಲವಡಿ ಅವರಂತಹ ಮಹನೀಯರು ಬ್ಯಾಂಕಿನ ಆಡಳಿತದ ಚುಕ್ಕಾಣಿ ಹಿಡಿದು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇಂತಹ ಬ್ಯಾಂಕಿನ ಶತಮಾನೋತ್ಸವ ಸಂಭ್ರಮದಲ್ಲಿ ನಾವು ಆಡಳಿತ ಮಂಡಳಿಯ ಸದಸ್ಯರಾಗಿರುವುದು ನಮ್ಮ ಸಂತಸ ಇನ್ನಷ್ಟು ಹೆಚ್ಚಿಸಿದೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಎಸ್.ವೈ.ಪಾಟೀಲ, ನಿರ್ದೇಶಕರಾದ ಬಾಪುಗೌಡ ಪಾಟೀಲ, ಜಿ.ಸಿ.ಸಾತಣ್ಣವರ, ಎಂ.ಎಫ್.ಕಲಗುಡಿ ಸೇರಿದಂತೆ ಅನೇಕರು ಇದ್ದರು. ಇದೇ ವೇಳೆ ಕೆಸಿಸಿ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮದ ಸಿದ್ಧತೆಯನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಡಿಸಿಪಿ ರೇಣುಕಾ ಸುಕುಮಾರ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಪರಿಶೀಲಿಸಿದರು.

Comments