UK Suddi
The news is by your side.

ಲಿಂಗಾಯತ ಮಹಾಸಭೆಯಲ್ಲಿ ಬಸವಣ್ಣನೂ ಇಲ್ಲ, ಧರ್ಮವೂ ಇಲ್ಲ

-The smart way to keep people passive and obedient is to strictly limit the spectrum of acceptable opinion but allow very lively debate within that spectrum. – Noam Chomsky

ಜನರನ್ನ ನಿಷ್ಕ್ರಿಯ ಮತ್ತು ವಿಧೇಯ ಗುಲಾಮರನ್ನಾಗಿಸುವ ಸರಳ ತಂತ್ರ ಏನೆಂದರೆ ಸ್ವೀಕಾರ್ಹ ಅಭಿಮತದ ಹರವನ್ನು ಮಿತಿಗೊಳಿಸಿ ಆ ಪರಿಮಿತ ಚೌಕಟ್ಟಿನಲ್ಲಿ ಅತ್ಯಂತ `ಜೀವಂತ’ ಸಂವಾದವನ್ನು ಏರ್ಪಡಿಸುವುದು ಅಂತ ನಮ್ಮ ಕಾಲದ ಪ್ರಖರ ಚಿಂತಕ ನಾವೊಂ ಚಾಮ್ಸಕೀ ಹೇಳುತ್ತಾನೆ. `ನಮ್ಮ ಚಂಪಾಸ್ಕೀ’ ಅಂತ ಕರೆಸಿಕೊಳ್ಳುವಷ್ಟು ಒರಿಜಿನಲ್ ಚಿಂತಕ ಚಂಪಾ. ಆದರೆ ಚಂಪಾ ಕೆಲ ದಿನಗಳ ಹಿಂದೆ ಘೋಷಣೆಯಾದ ಲಿಂಗಾಯತ ಮಹಾಸಭೆ ಒಂದು ಐತಿಹಾಸಿಕ ಬೆಳವಣಿಗೆ ಅಂತ ಮೆಚ್ಚುಗೆ ವ್ಯಕ್ತ ಪಡಿಸಿದರು. ಆ ಕ್ಷಣ ನನಗೆ ಯಡಿಯೂರಪ್ಪನ ಪಕ್ಕ ನಿಂತು ಹಿಂದುತ್ವ ಅಜೆಂಡಾ ಹೊಡೆಯಲು ಅದೇ ಸೂಕ್ತ ಅಂತ ಕೆಜೆಪಿಗೆ ಸೇರಿದ, ನಂತರ ಪೆಚ್ಚಾದ ಚಂಪಾ ನೆನಪಾದರು. ಈಗ ಅದೇ ಹಿಂದುತ್ವವನ್ನು ಮತ್ತೆ ಸೋಲಿಸಲು ಅವರ ಶಿಷ್ಯ ಜಾಮದಾರ್ ಮತ್ತು ಕಾಂಗ್ರೆಸ್ ಮಂತ್ರಿ ಎಂ ಬಿ ಪಾಟೀಲ್ ಅವರ ಮಹಾಸಭೆಗೆ ಜೈ ಅಂದಿದ್ದಾರೆ.

 

ಚಂಪಾ ಸರ್ ಅವರಿಗೂ ಗೊತ್ತಿರುವಂತೆ ನಾನು ಹಿಂದುತ್ವವಾದದ ಪರಮ ವಿರೋಧಿ ಅಷ್ಟೇ ಅಲ್ಲ ಲಿಂಗಾಯತ ಧರ್ಮ ಆಗಲೇಬೇಕು ಅಂತ ಜಾಮದಾರ್ ಎಂ ಬಿ ಪಾಟೀಲ್ ಗಿಂತ ಮುಂಚಿನಿಂತಲೂ ದನಿ ಎತ್ತಿದವನು. ಇಂದಿಗೂ ನನ್ನ ಆ ನಿಲುವುಗಳಲ್ಲಿ ಯಾವ ಬದಲಾವಣೆಯೂ ಇಲ್ಲ. ಆದರೆ ನನ್ನ ಪ್ರಬಲ ತಕರಾರು ಮತ್ತು ವಿರೋಧ ಇರುವುದು ಎಂ ಬಿ ಪಾಟೀಲ್ ಮತ್ತು ಚಾಲೀಸು ಪೋರರ ಲಿಂಗಾಯತ ಮಹಾಸಭೆಯಲ್ಲಿ ಬಸವಣ್ಣನೇ ಇಲ್ಲ ಅಷ್ಟೇ ಅಲ್ಲ ಇದು ಬಸವ ತತ್ವಗಳ ವಿರುದ್ಧವಾಗಿದೆ ಅನ್ನುವುದು. ಈ ಸೂಕ್ಷ್ಮದ ಚರ್ಚೆ ಬಂದಾಗಲೆಲ್ಲ ಜಾಮದಾರ್ ಚರ್ಚೆ ಬಿಟ್ಟು ಹೋಗುತ್ತಾರೆ. ಸತತವಾಗಿ ಟೀಕೆ ಮಾಡಿದ ನನ್ನ ಮೇಲೆ ಕೇಸು ಹಾಕುವ ಧಮಕಿ ಹಾಕುತ್ತಾರೆ.

 

ಮಂತ್ರಿಯೊಬ್ಬನ ಸಾಮಿಪ್ಯದ ಲಾಭದ ಅಸೆ ಮತ್ತು ಚಿಲ್ಲರೆ ಪ್ರಚಾರದ ಗೀಳು ಮಾತ್ರ ಹೊಂದಿರುವ ಶಿಕ್ಷಿತ, ಅರೆ ಶಿಕ್ಷಿತ, ಅಶಿಕ್ಷಿತ ಅವಿವೇಕಿಗಳು ಭೋ ಪರಾಕ್ ಅಂದೊಡನೆ ಎಂ ಬಿ ಪಾಟೀಲ್, ಜಾಮದಾರ್ ಗಳಿಗೆ ಹೆಗಲಮೇಲೆ ತಲೆ ಮತ್ತು ನೆಲದ ಮೇಲೆ ಕಾಲು ಎರಡೂ ನಿಲ್ಲುವಂತೆ ಕಾಣುವುದಿಲ್ಲ. ಈ ಭಟ್ಟಂಗಿ ಸಮೂಹ ತಮ್ಮ ಭಾವಪರವಶ ಭಜನೆಗೆ ಭಂಗ ತರುವವರೆಲ್ಲ ಧರ್ಮ ದ್ರೋಹಿಗಳು, ಕ್ರಿಮಿಗಳು ಅನ್ನುವ ರೀತಿಯಲ್ಲಿ ಕೀಳು ಮಟ್ಟದ ಭಾಷೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಾಂತಿ ಮಾಡುತ್ತಿದೆ. ಮೋದಿಯ ಟೀಕೆ ಮಾಡುವವರು ದೇಶದ್ರೋಹಿ ಅನ್ನುವಂತೆ ಎಂ ಬಿ ಪಾಟೀಲ್ ಮತ್ತು ಜಾಮದಾರ್ ಟೀಕೆ ಮಾಡಿದರೆ ನೀವು ಲಿಂಗಾಯತರೇ ಅಲ್ಲ ಅನ್ನುವ ಧೋರಣೆ ಕೂಡ ಅನಾರೋಗ್ಯಕರ.

 

ಮಹಾಸಭೆಯ ಅಧ್ಯಕ್ಷ ಬಸವರಾಜ್ ಹೊರಟ್ಟಿ, ಈ ಹಿಂದೆ ಎಂದಾದರೂ ಬಸವಣ್ಣನ ಧರ್ಮದ ಬಗ್ಗೆ ಎಲ್ಲಾದರೂ ಮಾತಾಡಿದ ಪುರಾವೆಗಳಿವೆಯೇ? ಎಂದಾದರೂ ಸ್ಥಾವರ ವಿರೋಧಿಸಿದ ಒಂದೇ ಒಂದು ಧಾಖಲೆ ಇದೆಯೇ? ಎಲ್ಲಾದರೂ ಒಂದೇ ಒಂದು ಅಂತರ್ಜಾತೀಯ ವಿವಾಹ ಮಾಡಿಸಿದ ಉದಾಹರಣೆ ಇದೆಯೇ? ಇವರು ಶಿಕ್ಷಣ ಮಂತ್ರಿಯಾಗಿದ್ದಾಗ ಶಿಕ್ಷಕರಿಗೆ ಮತ್ತು ವಿಧ್ಯಾರ್ಥಿಗಳಿಗೆ ಬಸವ ಧರ್ಮವನ್ನು ದಾಟಿಸುವುದಕ್ಕೆ ಏನಾದರೂ ಯೋಜನೆ ಹಾಕಿಕೊಂಡಿದ್ದರೇ? ಲಿಂಗರಾಜ ದೇಸಾಯರ ವಂಶದ ಕುಡಿ ಅಂತ ಹೇಳಿಕೊಳ್ಳುವ ಮತ್ತು ಮಹಾಸಭೆಯ ಕಾರ್ಯಾಧ್ಯಕ್ಷ ಎಂ ಬಿ ಪಾಟೀಲ್ ಲಿಂಗಾಯತರ ದಾನದ ಹಣದಲ್ಲಿ ಕಟ್ಟಿದ ತಮ್ಮ ಬಿಎಲ್ ಡಿ ಇ ಸಂಸ್ಥೆಗಳಲ್ಲಿ ಒಬ್ಬನಾದರೂ ಪ್ರತಿಭಾವಂತ ಬಡ ಲಿಂಗಾಯತ ವಿಧ್ಯಾರ್ಥಿಗೆ ಉಚಿತ ಮೆಡಿಕಲ್ ಸೀಟು ಕೊಟ್ಟು ತಮ್ಮ ಧರ್ಮ ನಿಷ್ಠೆ ಮತ್ತು ಲಿಂಗಾಯತ ಕಾಳಜಿ ಮೆರೆದಿದ್ದಾರೆಯೇ? ಇಷ್ಟ ಲಿಂಗ ಪೂಜೆ ಮಾತ್ರ ಮಾಡಿ ಇತರೆ ಗುಡಿ ಗುಂಡಾರಗಳಿಗೆ ಹೋಗಬೇಡಿ ಅನ್ನುವ ಬಸವಣ್ಣನ ಧರ್ಮವನ್ನು ಸಮುದಾಯದಲ್ಲಿ ಪ್ರಚಾರ ಮಾಡಿದ್ದರೇ? ಜಾಮದಾರ್, ಕೆ ಎ ಎಸ್ –ಐ ಎ ಎಸ್ ಸೇವೆಗಳಿಂದ ನಿವೃತ್ತಿ ಹೊಂದಿದ ಮೇಲೆಯೇ ಲಿಂಗಾಯತರಾದರೇನು? ಒಬ್ಬ ದಕ್ಷ ಸರಕಾರೀ ಗುಮಾಸ್ತನಂತೆ ಲಿಂಗಾಯತ ಧರ್ಮ ಬೇಡಿಕೆ ಎಲ್ಲಿ ಯಾವಾಗ ಯಾರು ಮಾಡಿಕೊಂಡಿದ್ದರು ಮತ್ತು ನಂತರದ ಬೆಳವಣಿಗೆಗಳು ಏನು ಇತ್ಯಾದಿ ಎಲ್ಲ ದಾಖಲೆಗಳನ್ನು ಪುಂಖಾನುಪುಂಖವಾಗಿ ಒಪ್ಪಿಸುವ ಜಾಮದಾರ್ ಗೆ ಬಸವ ಧರ್ಮದ ವೈದಿಕ ವಿರೋಧಿ ಅಂಶಗಳನ್ನು ಮಾತಾಡುವ ಹಿಮ್ಮತ್ತು ಯಾಕಿಲ್ಲ?

 

ಸ್ವಾಮಿಜಿಯೊಬ್ಬ ನನಗೆ ಕೆಲ ದಿನಗಳ ಹಿಂದೆ ಫೋನು ಮಾಡಿ ಯಾಕ್ರೀ ಅವರು ಲಿಂಗಾಯತ ಜಾತಿಯಲ್ಲಿ ಹುಟ್ಟಿದ್ದಾರೆ ಅಂದ ಮೇಲೆ ಅವರು ತಮ್ಮ ಕುಲಕ್ಕಾಗಿ ಹೋರಾಟ ಮಾಡುವುದರಲ್ಲಿ ತಪ್ಪೇನು ಅಂತ ದಬಾಯಿಸಿದರು. ಸರಿ, ಇವರೆಲ್ಲ ಜುಲೈ 2017ರಲ್ಲೆ ಹುಟ್ಟಿದರಾ? ಅಷ್ಟಕ್ಕೂ ಹುಟ್ಟಿನಿಂದ ಬರುವ ಜಾತಿ ಶ್ರೇಷ್ಟತೆಯನ್ನು ಧಿಕ್ಕರಿಸುವುದು ಬಸವ ಧರ್ಮವೋ? ಅಥವಾ ನನ್ನ ಜಾತಿಯೇ ಶ್ರೇಷ್ಠ ಅನ್ನುವುದು ಬಸವ ಧರ್ಮವೋ? ಇನ್ನೊಬ್ಬ ಹಿರಿಯ ಪ್ರೊಫೆಸರ್ ನನಗೆ ಮೇಲ್ ಮಾಡುತ್ತಾರೆ; ನೀನು ಭಕ್ತ ಆದ್ದರಿಂದ ನೀನು ಟೀಕೆ ಮಾಡುತ್ತೀಯ ಅಂತ. ಮೋದಿಯ ಎಡವಟ್ಟುಗಳನ್ನು, ಹಿಂದುತ್ವವಾದದ ಕ್ರೌರ್ಯವನ್ನು ಸದಾಕಾಲ ಟೀಕಿಸಿದ ಮತ್ತು ಈಗ ಜಾಮದಾರ್ ಅಂಡ್ ಕಂಪನಿಯ ಹಂಗಾಮಿ ಲಿಂಗಾಯತ ಪ್ರೇಮವನ್ನು ಲೇವಡಿ ಮಾಡುವ ನಾನು ಭಕ್ತನೋ, ಜಾಮದಾರ್ ಹೇಳಿದ್ದೆಲ್ಲ ಸರಿ ಎಂ ಬಿ ಪಾಟೀಲ್ ಮಾಡಿದ್ದೆಲ್ಲ ಪವಾಡ ಅಂತ ಕೊಂಡಾಡುವ ಇವರು ಭಕ್ತರೋ?

 

ಇನ್ನೊಬ್ಬ ಸ್ವಾಮಿ ಫೋನ್ ನನಗೆ ಮಾಡುತ್ತಾರೆ. ನಿಮ್ಮ ಬರವಣಿಗೆಯಿಂದ ಪಂಚ ಪೀಠಗಳಿಗೆ ಖುಷಿಯಾಗುತ್ತಿದೆ. ನೀವು ಯಾರು ಮೊದಲು ಹೇಳಿ. ನೀವು ವೀರಶೈವರೋ ಅಥವಾ ಲಿಂಗಾಯತರೋ? ಬಸವಣ್ಣ ಹೇಳಿದಂತೆ ಮಾದರ ಚೆನ್ನಯ್ಯನ ಮನೆಯ ಮಗ ನಾನಯ್ಯ ಅಂತ ಈ ಸ್ವಾಮಿಗೆ ಹೇಳಿದೆ. ಹಾಗೆಯೇ ಇವನಾರವ ಇವನಾರವ ಅನ್ನುವ ನಿಮ್ಮ ಧೋರಣೆಯ ಗುರು ಯಾರು ಅಂತ ಕೇಳಿದೆ. ಈ ಸ್ವಾಮಿಗೆ ಆಗಲೀ ಇಲ್ಲಿನ ಚಮಚಾ ಬಳಗಕ್ಕಾಗಲೀ ಎಲ್ಲಾ ಸ್ಥಾವರ ಪೂಜೆಯನ್ನು ವಿರೋಧಿಸುವ ನನ್ನಂತವರು ಪಂಚ ಪೀಠ ಗಳನ್ನು ಒಪ್ಪಲಾರರು ಅನ್ನುವ ಕಾಮನ್ ಸೆನ್ಸ್ ಇಲ್ಲ.

 

IAS ಅಂದರೆ ಇಂಡಿಯನ್ ಅಡ್ಮಿನಿಸ್ಟ್ರೆಟಿವ್ ಸರ್ವೀಸಿನಿಂದ ನಿವೃತ್ತರಾಗಿ ಇಂಡಿಯನ್ ಅಹಂಕಾರ ಸರ್ವೀಸ್ ಸೇರಿದಂತೆ ವರ್ತಿಸುವ ಜಾಮದಾರ್ ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುವ ಬದಲು ಸ್ವಾಮಿಗಳ ಮೂಲಕ ನನಗೆ ಫೋನು ಮಾಡಿಸುತ್ತಾರೆ, ಅವರ ಚಮಚಾಗಳ ಮೂಲಕ ನನ್ನನ್ನು ಹೀಯಾಳಿಸುತ್ತಾರೆ, ಜೀವನಪೂರ್ತಿ ಅವಕಾಶವಾದಿ ರಾಜಕಾರಣ ಮಾಡಿದ ಬೆಳಗಾವಿ ಮೂಲದ ನಿವೃತ್ತ ಪತ್ರಕರ್ತನೊಬ್ಬನಿಗೆ ಫೋನು ಮಾಡಿ ನನ್ನ ಬಗ್ಗೆ ಅಲವತ್ತುಕೊಳ್ಳುತ್ತಾರೆ, ಹಿಂದೆ ಈ ಚಳುವಳಿಯನ್ನು ಕಟು ಟೀಕೆ ಮಾಡಿದ ಈಗ ಇವರಿಗೆ ಹತ್ತಿರವಾಗಿರುವ ಶಶಿಕಾಂತ್ ಪಟ್ಟಣಗೆ ಫೋನು ಮಾಡಿ ನನ್ನ ದನಿಯನ್ನು ಹೇಗೆ ಗೌಣವಾಗಿಸುವುದು ಎಂಬ ಬಗ್ಗೆ ವ್ಯರ್ಥ ಸಮಾಲೋಚನೆ ಮಾಡುತ್ತಾರೆ. ಇದೆಲ್ಲ ನಡೆಯದಾಗ ನನ್ನ ಮೇಲೆ ಕೇಸು ಹಾಕುತ್ತೇನೆ ಅಂತ ಹೊಗೆ ಬಿಡುತ್ತಾರೆ. ಆದರೆ ನನ್ನ ಪ್ರಶ್ನೆಗಳಿಗೆ ಮಾತ್ರ ಉತ್ತರಿಸುವುದಿಲ್ಲ.

 

ಈಗ ಮತ್ತೆ ಚಾಮ್ಸಕೀ ಹೇಳಿದ ಮೇಲಿನ ಮಾತನ್ನು ಓದಿ, ಆತ ಯಾಕೆ ಹಾಗೆ ಹೇಳಿದ ಅನ್ನುವದು ಅರ್ಥ ಆಗತೊಡಗುತ್ತದೆ.

 

ಸಂವಿಧಾನದ ಮೂರನೇ ಪರಿಚ್ಛೇಧಕ್ಕೆ ಅನುಗುಣವಾಗಿ ಸರ್ವಧರ್ಮ ನಿರಪೇಕ್ಷತೆಯನ್ನು ಎತ್ತಿ ಹಿಡಿಯುವ ಪ್ರಮಾಣ ವಚನ ತಗೆದುಕೊಂಡ ಮಂತ್ರಿಗಳಾದ ಎಂ ಬಿ ಪಾಟೀಲ್, ವಿನಯ್ ಕುಲಕರ್ಣಿ, ಬಸವರಾಜ್ ರಾಯರೆಡ್ಡಿ ಒಂದು ಧರ್ಮ ಪ್ರತ್ಯೇಕತೆಯ ಚಳುವಳಿಯ ನಾಯಕತ್ವ ವಹಿಸುವುದು ಅಸಂವಿಧಾನಿಕ, ಅನೈತಿಕ ಮತ್ತು ಅಧರ್ಮ. ಇವರು ತಮ್ಮ ತಮ್ಮ ವಯಕ್ತಿಕ ಬದುಕಿನಲ್ಲಿ ಯಾವ ಧರ್ಮವನ್ನಾದರೂ ಪಾಲಿಸಲಿ. ಆದರೆ ಪ್ರತ್ಯೇಕತೆಗಾಗಿ ಸಾರ್ವಜನಿಕ ಸಭೆಗಳನ್ನು ಇವರೇ ನಡೆಸುವುದು ಅಸಂವಿಧಾನಿಕ ಅಲ್ಲವೇ? ಪರಮ ಜ್ಞಾನಿ ದಕ್ಷ ಪ್ರಾಮಾಣಿಕ ಎಂದು ತಮ್ಮ ಚಮಚಾಗಳಿಂದ ಕರೆಸಿಕೊಳ್ಳುವ ಜಾಮದಾರ್ ಗೆ ಇದು ಅರ್ಥ ಆಗುವುದಿಲ್ಲವೇ?

 

ಎಲ್ಲಾ ಕೋಮುಗಳನ್ನು ಮತ್ತು ವರ್ಗಗಗಳನ್ನು ಒಟ್ಟುಗೂಡಿಸುವ ಪ್ರಯತ್ನ ಬಸವ ಚಳುವಳಿ. ನೀನು ವೀರಶೈವ ನಾನು ಲಿಂಗಾಯತ ಅನ್ನುವ ಭೇಧದ ವಿಷಕಾರಿ ಕೋಮುವಾದ ಎಂ ಬಿ ಪಾಟೀಲರ ಚಳುವಳಿ. ಭಾರತೀಯ ದಂಡ ಸಂಹಿತೆ 153a ಪ್ರಕಾರ ಸಮಾಜದ ಕೋಮು ಸೌಹಾರ್ದವನ್ನು ಕದಡುವುದು, ಜಾತಿ-ಧರ್ಮ ವೈಷಮ್ಯವನ್ನು ಹೆಚ್ಚಿಸುವುದು ಶಿಕ್ಷಾರ್ಹ ಅಪರಾಧ ಅನ್ನುವುದೂ ನಿವೃತ್ತ ಗೃಹ ಕಾರ್ಯದರ್ಶಿ ಜಾಮದಾರ್ ಮರೆತರೇ? ಅಥವಾ ಅಧಿಕಾರದಲ್ಲಿರುವ ಮಂತ್ರಿ ಏನು ಮಾಡಿದರೂ ಸರಿ ಅನ್ನುವ ವಿಧೇಯತೆ ಇದೋ?

 

ಈ ತೆರನ ವಿಭಜನಕಾರೀ ಅನಾಹುತಗಳು ಈ ದೇಶದ ಇತಿಹಾಸದುದ್ದಕ್ಕೂ ಕಾಣಸಿಗುತ್ತವೆ. ಗಾಂಧೀ ತಾತನಿಗೆ ಭಾರತದ ಸ್ವಾತಂತ್ರ್ಯ ಬೇಕಿತ್ತು ಆದರೆ ದೇಶ ವಿಭಜನೆ ಬೇಕಿರಲಿಲ್ಲ. ಭಾರತ ಪಾಕಿಸ್ತಾನ ವಿಭಜನೆಗೆ ಸಮ್ಮತಿಸದ ಬಾಪುವಿನ ಮೇಲೆ ಅದನ್ನು ನಿರಾಕರಿಸುವ ಅವಕಾಶವೂ ತಪ್ಪಿ ಹೋದಾಗ ಬಾಪು ಮೌನ ಸಂಕಟ ಮಾತ್ರ ಅನುಭವಿಸುತ್ತಾರೆ. ಹಿಂದೂ ರಾಷ್ಟ್ರವೇ ಬೇಕೆಂದು ಹಠ ಹಿಡಿದ ಜನರ ಭಯದಿಂದ ಮುಸ್ಲಿಂ ರಾಷ್ಟ್ರದ ಬೇಡಿಕೆ ಹುಟ್ಟಿತು. ಹಿಂದೂ ನಾಯಕರು ಮತ್ತು ಮುಸ್ಲಿಂ ನಾಯಕರು ಇಬ್ಬರೂ ಬಾಪುವಿನ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಸ್ವಾತಂತ್ರಾನಂತರದ ಮುಸ್ಲಿಂ ಓಲೈಕೆ ರಾಜಕಾಣದಿಂದಲೇ ಇಂದು ಹಿಂದುತ್ವ ರಾಜಕಾರಣ ಇಷ್ಟು ಬೃಹದಾಕಾರ ತಾಳಿದೆ. ಈಗ ಆ ಹಿಂದುತ್ವ ರಾಜಕಾರಣವನ್ನು ಹೊಡೆಯುವ ಅನಿವಾರ್ಯ ಆದರೆ ವಿಫಲ ಪ್ರಯತ್ನ ಈ ವೀರಶೈವ ಲಿಂಗಾಯತ ಒಡಕು. ಅನಿವಾರ್ಯ ಯಾಕೆ ಎಂಬುದು ಕರ್ನಾಟಕ ಕಾಂಗ್ರೆಸಿನ ಇಂದಿನ ಒಳ ರಾಜಕಾರಣ ಬಲ್ಲವರಿಗೆ ಅರ್ಥ ಆಗುತ್ತದೆ. ಆದರೆ ವಿಫಲ ಯಾಕೆಂದು ತಿಳಿಯಲು ಭಾರತದ ಇತಿಹಾಸ ನೋಡಿದರೆ ಸಾಕು. ಹಿಂದೂ ರಾಷ್ಟ್ರದ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಹುಟ್ಟಿತು. ಮುಸ್ಲಿಂ ಓಲೈಕೆ ರಾಜಕಾರಣದ ಪ್ರತಿಕ್ರಿಯೆಯಾಗಿ ಹಿಂದುತ್ವ ರಾಜಕಾರಣ ಹುಟ್ಟಿತು. ಹಾಗೆಯೇ ಈ ಲಿಂಗಾಯತ ಮೈನಾರಿಟಿ ಅನ್ನುವ ರಾಜಕಾರಣದ ಪ್ರತಿಕ್ರಿಯೆಯಾಗಿ ಮೆಜಾರಿಟಿ ರಾಜಕಾರಣ ಪ್ರಬಲವಾಗುವುದು. ಕ್ರಿಯೆಗೆ ಸಮನಾದ ಮತ್ತು ತದ್ವಿರುದ್ಧ ಪ್ರತಿಕ್ರಿಯೆ ಇರುವುದು ಸಹಜ ನಿಯಮ.

 

ಕಾಂಗ್ರೆಸ್ಸಿಗೆ ಮುಸ್ಲಿಂ ಓಲೈಕೆ ಒಂದು ವೋಟಿನ ATM ಅಷ್ಟೇ ಆಗಿತ್ತು. ಕಾಂಗ್ರೆಸ್ಸಿನ ಇಷ್ಟು ವರ್ಷಗಳ ಓಲೈಕೆಯ ನಂತರವೂ ಮುಸ್ಲಿಮರ ಸ್ಥಿತಿ ಅಷ್ಟಕಷ್ಟೇ. ಹಿಂದುತ್ವ ರಾಜಕಾರಣವನ್ನೂ ಕೂಡ ಬಿಜೆಪಿ ವೋಟಿನ ATM ತರವೇ ಉಪಯೋಗಿಸಿದೆ. ರಾಮನ ಮಂದಿರವೂ ಇಲ್ಲ, ದಕ್ಷ ಆಡಳಿತವೂ ಇಲ್ಲ. ಸಾವಿರಾರು ಹೆಣ ಮಾತ್ರ ಬಿದ್ದವು. ವೀರಶೈವ ಮಹಾಸಭಾ ಮಾಡಿ ಖಂಡ್ರೆ ಮತ್ತು ಶಾಮನೂರು ತಮ್ಮ ತಮ್ಮ ರಾಜಕೀಯ ಸಾಮ್ರಾಜ್ಯ ಕಟ್ಟಿಕೊಂಡರು ಹಾಗೆಯೇ ಈಗ ಎಂ ಬಿ ಪಾಟೀಲ್ ಮತ್ತವರ ಗ್ಯಾಂಗ್ ಲಿಂಗಾಯತ ಮಹಾಸಭಾ ಮಾಡಿ ತಮ್ಮ ತುರ್ತಿನ ರಾಜಕೀಯ ಲೋಭದ ಹವಣಿಕೆಯಲ್ಲಿದ್ದಾರೆ.

 

ಕೊನೆಯದಾಗಿ ಪತ್ರಿಕಾ ಸಂವಾದದ ಬಗ್ಗೆ. ಕೋಟ್ಯಂತರ ರುಪಾಯಿ ಖರ್ಚು ಮಾಡಿ ಏರ್ಪಡಿಸಿದ ಸಾರ್ವಜನಿಕ ಸಭೆಗಳಲ್ಲಿ ಇವರು ಬಸವಣ್ಣನ ಆದರ್ಶ ಪಾಲಿಸಿ, ಯಾವ ದೇವಸ್ಥಾನಗಳಿಗೂ ಹೋಗಬೇಡಿ ಜ್ಯೋತಿಷ್ಯ ವಾಸ್ತು ಇತ್ಯಾದಿ ಕೇಳಬೇಡಿ ಅಂತ ಎಂ ಬಿ ಪಾಟೀಲ್ ಎಂದಿಗೂ ಹೇಳುವುದಿಲ್ಲ. ಯಾಕೆಂದರೆ ಅಲ್ಲಿ ಹೇಳಿದರೆ ಈಗ ಸಂಪೂರ್ಣ ವೈದಿಕರಗಿರುವ ಲಿಂಗಾಯತ ಸಮೂಹ ಇವರ ವಿರುದ್ಧವೇ ಬಂಡೆಳುತ್ತದೆ. ಶಿಕ್ಷಣ ಇರಲಿ ಬಿಡಲಿ ಇಂದಿನ ಪ್ರತಿ ಲಿಂಗಾಯತ ರೈತ ವೈದಿಕ ಆಚರಣೆಗಳಿಗೆ ತಲೆತಲಾಂತರಗಳಿಂದ ಬದ್ಧನಾಗಿದ್ದಾನೆ. ಆ ಬಡ ರೈತ ಇವರ ಸಾರ್ವಜನಿಕ ಸಭೆಗೆ ಬರುವದು ಲಿಂಗಾಯತರೆಲ್ಲ ಒಂದಾಗಲಿ ಅನ್ನುವ ಭಾವುಕತೆಯಿಂದ. ಸಮುದಾಯ ಒಡೆಯಲಿ ಅಂತ ಆತ ಬರುವುದಿಲ್ಲ. ಆದರೆ ಜಾಮದಾರ್ ಅಂಡ್ ಕಂಪನಿ ದಿನ ಪತ್ರಿಕೆಗಳಲ್ಲಿ ಮಾತ್ರ ತೌಡು ಕುಟ್ಟುವ ಕಾರ್ಯಕ್ರಮ ಶುರು ಹಚ್ಚಿಕೊಂಡು ಅದಕ್ಕೆ ಪ್ರತಿಕ್ರಿಯೆಯನ್ನು ಮೇಲ್ ಮುಖಾಂತರ ಇಂತಿಂತ ತಂತ್ರಾಂಶದ ಮೂಲಕ ಕಳಿಸಿ ಅಂತಾರೆ. ಲಕ್ಷಾಂತರ ಜನ ಸೇರಿಸಿ ಕೇವಲ ಇತರೆ ಸಮುದಾಯಗಳನ್ನು ಹೀಯಾಳಿಸುತ್ತಾರೆ ಆದರೆ ಧರ್ಮದ ಸಾರವನ್ನು ಪತ್ರಿಕೆಗಳಲ್ಲಿ ಮಾತ್ರ ಮಾಡುತ್ತಾರೆ. ಸಾರ್ವಜನಿಕ ಸಭೆಗಳಲ್ಲಿ ಯಾಕೆ ಇವರು ಬಸವ ಧರ್ಮದ ಪ್ರಚಾರ ಮಾಡಿಲ್ಲ? ಅಂದರೆ ಇವರ ಉದ್ದೇಶ ಅಶಿಕ್ಷಿತ ಸಮುದಾಯಕ್ಕೆ ಕೇವಲ ದ್ವೇಷ ಮಾತ್ರ ತಲುಪಬೇಕು ಧರ್ಮದ ನಿಜ ಅರ್ಥ ಮಾತ್ರ ತಲುಪಬಾರದು. ಬೀದರಿನ ಕೊನೆಯ ಗ್ರಾಮದ ಲಿಂಗಾಯತ ಅಜ್ಜಿ ಗೌರಮ್ಮ ಶಾಲೆಗೆ ಹೋಗಿ ಇಮೇಲ್ ಕಲಿತು ನುಡಿ ಟೈಪಿಂಗ್ ಸೇರಿ ಆಮೇಲೆ ಇವರಿಗೆ ಪ್ರತಿಕ್ರಿಯೆ ಕೊಡ ಬೇಕೇ? ಅಥವಾ ತಾವೇ ಸಮಸ್ತ ಲಿಂಗಾಯತರ ಅನಭಿಷಿಕ್ತ ದೊರೆ ಅಂದುಕೊಂಡಿದ್ದಾರೆಯೇ ಎಂ ಬಿ ಪಾಟೀಲ್?

-ಡಾ ಬಸವರಾಜ್ ಇಟ್ನಾಳ 

(ಲೇಖಕರು ಇಂಗ್ಲಿಶ್ ಮತ್ತು ಕನ್ನಡ ಮುದ್ರಣ ಮತ್ತು ಟಿವಿ ಕ್ಷೇತ್ರದ ಹಿರಿಯ ಪತ್ರಕರ್ತ, ಅಂಕಣಕಾರ ಮತ್ತು ಬರಹಗಾರ ಹಾಗೂ ಇಂಜಿನೀಯರಿಂಗ್ ಪ್ರೊಫೆಸರ)

Comments