UK Suddi
The news is by your side.

ಅಣ್ಣಿಗೇರಿ ನೂತನ ತಾಲೂಕಾಗಿ ರಚನೆ: ಮೊದಲ ದಿನವೇ ಪಂಪ ಉತ್ಸವ

ಧಾರವಾಡ: ಆಡಳಿತಾತ್ಮಕ ಅನುಕೂಲಕ್ಕಾಗಿ ಸರ್ಕಾರ ನೂತನ ಅಣ್ಣಿಗೇರಿ ತಾಲೂಕನ್ನು ರಚಿಸಲಾಗಿದೆ. ಹೊಸ ತಾಲೂಕುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಬದ್ಧವಾಗಿದ್ದೇವೆ ಎಂದು ಗಣಿ ,ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಅಣ್ಣಿಗೇರಿಯ ವೆಂಕಟೇಶ್ವರ ಟೆಕ್ಸ್ ಟೈಲ್ ಮಿಲ್ ಆವರಣದಲ್ಲಿ ನೂತನ ಅಣ್ಣಿಗೇರಿ ತಾಲ್ಲೂಕು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಹೊಸ ತಾಲ್ಲೂಕುಗಳ ರಚನೆ ಸಂದರ್ಭದಲ್ಲಿ ಜಿಲ್ಲೆಯ ಅಣ್ಣಿಗೇರಿ ಹಾಗೂ ಅಳ್ನಾವರ ತಾಲೂಕು ರಚನೆಗೆ ಅನೇಕ ಆಡಳಿತಾತ್ಮಕ ತೊಡಕುಗಳು ಎದುರಾಗಿದ್ದವು, ಸಂಘಟಿತ ಪ್ರಯತ್ನದಿಂದ ಮುಖ್ಯಮಂತ್ರಿಗಳ ಮನವೊಲಿಸಿ ಈ ತಾಲ್ಲೂಕುಗಳು ರಚನೆಯಾಗಿವೆ ಎಂದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಣ್ಣಿಗೇರಿ ಭಾಗದ ಜನರ ಶಾಂತಿಯುತ ಹೋರಾಟದ ಫಲವಾಗಿ ಇಂದು ಅಣ್ಣಿಗೇರಿ ಹೊಸ ತಾಲ್ಲೂಕು ಅಸ್ತಿತ್ವಕ್ಕೆ ಬಂದಿದೆ. ಸರ್ಕಾರ ರೂಪಿಸಿದ ನಿಯಮಾವಳಿಗಳ ಚೌಕಟ್ಟಿನಲ್ಲಿ ಹೊಸ ತಾಲ್ಲೂಕಿನ ಗಡಿಗಳನ್ನು ಗುರುತಿಸುವ ಸಂದರ್ಭದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಿದವು ಸ್ಥಳೀಯ ಶಾಸಕರು, ಸಚಿವರು ಹಾಗೂ ಮುಖ್ಯಮಂತ್ರಿಗಳ ದಿಟ್ಟ ನಿಲುವು ಮತ್ತು ಪ್ರಯತ್ನದಿಂದ ಅಣ್ಣಿಗೇರಿ ಹೊಸ ತಾಲ್ಲೂಕು ರಚನೆಯಾಗಲು ಸಾಧ್ಯವಾಯಿತು. ಧಾರವಾಡ ಜಿಲ್ಲೆಯಲ್ಲಿ ಮೂರು ಹೊಸ ತಾಲ್ಲೂಕುಗಳನ್ನು ರಚಿಸುವ   ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾಗಿ  ಕಾರ್ಯ ನಿರ್ವಹಿಸುವ ಅವಕಾಶ ನನಗೆ ದೊರಕಿದ್ದು ಸಂತಸ ತಂದಿದೆ. 21 ಹಳ್ಳಿಗಳು ಹಾಗೂ ಅಣ್ಣಿಗೇರಿ ಪಟ್ಟಣ ಸೇರಿ 74 ಸಾವಿರ ಜನಸಂಖ್ಯೆಯ ಅಣ್ಣಿಗೇರಿ ತಾಲೂಕು ರಚನೆಯಾಗಿದೆ. ಇಂದು ತಾಲೂಕು ಕಚೇರಿ ಆರಂಭವಾಗಿದೆ.ಇನ್ನುಳಿದ ತಾಲ್ಲೂಕು ಕಚೇರಿಗಳು ಶೀಘ್ರದಲ್ಲಿ ಬರಲಿವೆ. ಇಲ್ಲಿ ಶಾಶ್ವತ ಆಡಳಿತ ಭವನ ನಿರ್ಮಾಣಕ್ಕೆ ಸರ್ಕಾರಿ ಜಮೀನು ಕೂಡ ಲಭ್ಯವಿದೆ  ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎನ್‌‌.ಹೆಚ್.ಕೋನರಡ್ಡಿ ಮಾತನಾಡಿ, ತಾಲ್ಲೂಕು ಪುನರ್ವಿಂಗಡಣೆಗೆ ರಚಿಸಿದ್ದ ಯಾವುದೇ ಸಮಿತಿಗಳು ಕೂಡ ಅಣ್ಣಿಗೇರಿಯನ್ನು ಶಿಫಾರಸು ಮಾಡಿರಲಿಲ್ಲ. ಆದರೆ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಮನವೊಲಿಸಿ ಅಣ್ಣಿಗೇರಿ ತಾಲೂಕನ್ನು ಘೋಷಿಸಲಾಗಿದೆ. ನನ್ನ ಶಾಸಕ  ಅವಧಿಯಲ್ಲಿ ಈ ಕಾರ್ಯ ಆಗಿದ್ದು ಸಂತಸದ ಸಂಗತಿ ಎಂದರು.

ಅಣ್ಣಿಗೇರಿ ತಾಲ್ಲೂಕು ರಚನೆಗೆ ಶ್ರಮಿಸಿದ ಸಚಿವರು,ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ನಾಗರಿಕ ಸನ್ಮಾನ ನೀಡಿ ಗೌರವಿಸಲಾಯಿತು.

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು , ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ಜಿ.ಪಂ‌.ಅಧ್ಯಕ್ಷೆ ಚೈತ್ರಾ ಶಿರೂರ, ಉಪಾಧ್ಯಕ್ಷ ಶಿವಾನಂದ ಕರಿಗಾರ, ವಾಕರಸಾಸಂ ಅಧ್ಯಕ್ಷ ಸದಾನಂದ ಡಂಗನವರ,ಅಣ್ಣಿಗೇರಿ ಪುರಸಭೆ ಅಧ್ಯಕ್ಷ ಭೀಮಪ್ಪ ದ್ಯಾವನೂರ, ಮುಖಂಡರಾದ ಎಚ್.ವಿ.ಮಾಡಳ್ಳಿ,ಮೋಹನ ಲಿಂಬಿಕಾಯಿ,ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ , ತಹಸೀಲ್ದಾರ ನವೀನ ಹುಲ್ಲೂರ ಸೇರಿದಂತೆ ತಾಲ್ಲೂಕು ರಚನಾ ಹೋರಾಟ ಸಮಿತಿಯ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಭೇಟಿ ನೀಡಿ ತಾಲ್ಲೂಕು ಆಡಳಿತ ಭವನ ವೀಕ್ಷಿಸಿ,ಶುಭ ಹಾರೈಸಿದರು.

ಪಂಪ ಉತ್ಸವ…

ಅಣ್ಣಿಗೇರಿಯಲ್ಲಿ ಪಂಪ ಉತ್ಸವ ಆಯೋಜನೆಗೆ ಇರುವ ಹತ್ತು ಲಕ್ಷ ರೂಪಾಯಿಗಳ ಅನುದಾನವನ್ನು ಇನ್ನಷ್ಟು ಹೆಚ್ಚಿಸಲಾಗುವದು. ಬರುವ ವರ್ಷಗಳಲ್ಲಿ ಪ್ರತಿಷ್ಟಿತ ಪಂಪ ಉತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಇಲ್ಲಿಯೇ ಆಯೋಜಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವದು. ಪಂಪ ಅಭಿವೃದ್ಧಿ ಪ್ರಾಧಿಕಾರ ರಚನೆಗೂ ಮುಂಬರುವ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವದು ಎಂದು ಗಣಿ, ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿ ಹೇಳಿದರು‌.

ಪಂಪ ಉತ್ಸವವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಅಣ್ಣಿಗೇರಿಯಲ್ಲಿ ಪಂಪ ಉತ್ಸವ ನಡೆಯುತ್ತಿರುವದು ಸಂತುಸ , ಈ ಉತ್ಸವವನ್ನು ಇನ್ನಷ್ಟು  ಅರ್ಥ ಪೂರ್ಣವಾಗಿ ಆಚರಿಸುವಂತೆ ಬರುವ ವರ್ಷಗಳಲ್ಲಿ  ಕ್ರಮ ಕೈಗೊಳ್ಳಲಾಗುವದು. ನೂತನ ಅಣ್ಣಿಗೇರಿ ತಾಲ್ಲೂಕು ಅಭಿವೃದ್ಧಿ ಗೆ ಆದ್ಯತೆ ನೀಡಲಾಗುವದು.

ಪಂಪನ ಜೀವನ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದ ಮದ್ರಾಸ್ ವಿವಿಯ ಡಾ.ತಮಿಳ್ ಸೆಲ್ವಿ ಅವರು, ಕವಿಯೂ ಕಲಿಯ ಆಗಿದ್ದ ಆದಿಕವಿ ಪಂಪನು ಜಾತಿಯಿಂದ ಮನುಷ್ಯನನ್ನು ಗುರುತಿಸಬಾರದು, ಆತನ ಸಾಧನೆ ಮತ್ತು ಪ್ರತಿಭೆಗಳಿಂದ ಮನುಷ್ಯನನ್ನು ಗುರುತಿಸಬೇಕು.ಕುಲಂ ಕುಲಮಲ್ತು ಗುಣಂ ಕು ,ಛಲಂ ಕುಲಂ ,ಅಭಿಮಾನ ಕುಲಂ ಎಂದು ಹಾಡಿದ್ದಾನೆ . ಕರ್ಣ ,ಭೀಮಸೇನ ,ಶಲ್ಯ,ಭೀಷ್ಮ,ದ್ರೋಣಾಚಾರ್ಯ, ಫಲ್ಗುಣರ ಪಾತ್ರಗಳನ್ನು ಆದಿಕವಿ ಪಂಪನು ಉದಾತ್ತವಾಗಿ ಚಿತ್ರಿಸಿದ್ದಾನೆ. ಶಾಂತಿ ಮತ್ತು ಪ್ರೀತಿಯ ಸಂದೇಶಗಳನ್ನು ಕೂಡ ಆದಿಪುರಾಣದಲ್ಲಿ ಸಾರಿದ್ದಾನೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎನ್.ಹೆಚ್.ಕೋನರಡ್ಡಿ ವಹಿಸಿದ್ದರು.

Comments