UK Suddi
The news is by your side.

ಕೃಷಿ ವಿವಿಯಲ್ಲಿ ಹಂಗಾಮಿ ನೌಕರರಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭ

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಹಂಗಾಮಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರದಿಂದ ಕೃಷಿ ವಿಶ್ವವಿದ್ಯಾಲಯದಲ್ಲಿ ಹಂಗಾಮಿ ನೌಕರರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಕೃಷಿ ಸಂಶೋಧನಾ ಕೇಂದ್ರಗಳು ಹಾಗೂ ಮುಂತಾದಡೆ ಜನವರಿ 2017ರಿಂದ ಅನ್ವಯವಾಗುವಂತೆ ಗುತ್ತಿಗೆ ಆಧಾರದಲ್ಲಿ ಕೃಷಿ ಕಾರ್ಮಿಕರನ್ನು ತೊಡಗಿಸಿಕೊಳ್ಳಲಾಗಿದೆ. ಕೃಷಿ ಕಾರ್ಮಿಕರ ಸಮಸ್ಯೆಗಳ ಕುರಿತು ಹಲವು ಭಾರಿ ಜಂಟಿ ಸಭೆಗಳನ್ನು ನಡೆಸಿ ಚರ್ಚಿಸಲಾಗಿದೆ. ಸಂಘದಿಂದ ಹಲವು ಮನವಿಗಳನ್ನು ನೀಡಲಾಗಿದೆ ಆದರೆ ಈವರೆಗೂ ಅವರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಸಮಸ್ಯೆಗಳು ಪರಿಹಾರವಾಗದೇ ಸಮಸ್ಯೆಗಳು ಉಲ್ಬಣಗೊಂಡಿದ್ದೇ ಹೆಚ್ಚು. ಗುತ್ತಿಗೆದಾರರು ಕಾನೂನು ರೀತಿಯಲ್ಲಿ ನೀಡಬೇಕಾದ ಸೌಲಭ್ಯಗಳನ್ನು ನೀಡುವಲ್ಲಿ ಹಾಗೂ ಗುತ್ತಿಗೆಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಗುತ್ತಿಗೆ ನಿರ್ವಹಣೆಗೆ ನೇಮಿಸಲಾದ ಅಧಿಕಾರಿಯವರು ತಪ್ಪು ಮಾಹಿತಿ ನೀಡುತ್ತಿರುವುದು ಮತ್ತು ಅವರ ಸರ್ವಾಧಿಕಾರಿ ಧೋರಣೆ ಗುತ್ತಿಗೆದಾರರನ್ನು ರಕ್ಷಿಸುವ ಹುನ್ನಾರದಂತೆ ಕಾಣುತ್ತಿರುವುದು ಹಲವು ಗೊಂದಲಕ್ಕೆ ಕಾರಣವಾಗಿದೆ. 1000ದಷ್ಟಿರುವ ಕಾರ್ಮಿಕರಿಗೆ ಗುತ್ತಿಗೆದಾರರಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ. ಮಾಹಿತಿ ನೀಡಲು ಯಾವುದೇ ವ್ಯವಸ್ಥೆಯೂ ಇಲ್ಲವಾಗಿದೆ. ಕೃಷಿ ಕಾರ್ಮಿಕರ ಬೇಡಿಕೆಗಳ ಕುರಿತು ಸಂಘದಿಂದ ಅಂತಿಮವಾಗಿ ನೀಡಲಾದ ಮನವಿಗೂ ಕೃಷಿ ವಿಶ್ವವಿದ್ಯಾಯ ಆಡಳಿತದಿಂದ ಯಾವುದೇ ಸ್ಪಂದನೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈಗಿರುವ ಗುತ್ತಿಗೆದಾರರು 3-4 ತಿಂಗಳ ವೇತನ ಪಾವತಿ ಬಾಕಿ ಉಳಿಸಿಕೊಂಡಿದ್ದಾರೆ. ಕೆಲ ತಿಂಗಳಗಳ ಭವಿಷ್ಯ ನಿಧಿ, ಇಎಸ್‍ಐ ಕಂತುಗಳನ್ನು ತುಂಬಿಲ್ಲ. ಕೆಲಸ ನಿರ್ವಹಿಸುವ ಕಾರ್ಮಿಕರೆಲ್ಲರಿಗೂ ಗುರುತಿನ ಚೀಟಿ ನೀಡಿಲ್ಲ. ಇಎಸ್‍ಐ ಕಾರ್ಡಗಳನ್ನು ನೀಡಿಲ್ಲ. ಇದರಿಂದಾಗಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಕಾರಣ ತಕ್ಷಣ ಎಲ್ಲಾ ಬಾಕಿಗಳನ್ನು ಪಾವತಿಸಲು ಕ್ರಮಕೈಗೊಳ್ಳಬೇಕು. ಈಗಿರುವ ಗುತ್ತಿಗೆದಾರ ಅವಧಿ ಮುಗಿದಿದ್ದು ಅವರನ್ನೇ ಮುಂದುವರೆಸಲಾಗಿದೆಯೋ ಅಥವಾ ಹೊಸ ಗುತ್ತಿಗೆಗೆ ಟೆಂಡರ್ ಕರೆಯಲಾಗಿದೆಯಾ ಎನ್ನುವುದು ತಿಳಿದು ಬಂದಿಲ್ಲಾ. ಮುಂದಿನ ಗುತ್ತಿಗೆಯಲ್ಲಿ ಈ ಹಿಂದೆ ಆದಂತ ತಪ್ಪುಗಳು ಮತ್ತು ಸಮಸ್ಯೆಗಳು ಆಗದಂತೆ ಕ್ರಮವಹಿಸಬೇಕು. ಗುತ್ತಿಗೆ ಪ್ರಾರಂಭದಿಂದ ನಿರ್ಧಿಷ್ಟ ಕಾರ್ಮಿಕರ ನೇಮಕ, ಭವಿಷ್ಯ ನಿಧಿ, ಇಎಸ್‍ಐ, ಕನಿಷ್ಟ ವೇತನ, ಪ್ರತಿ ತಿಂಗಳು 5ನೇ ದಿನಾಂಕದೊಳಗಾಗಿ ವೇತನ ಪಾವತಿ ಮುಂದಾವುಗಳನ್ನು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನಿರ್ದಿಷ್ಟ ಕ್ರಮಗಳನ್ನು ವಹಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದರು.

ಇವರ ಪ್ರತಿಭಟನೆಗೆ ಬಿಜೆಪಿ ಮುಖಂಡ ಅಮೃತ ದೇಸಾಯಿ ಕೂಡ ಬೆಂಬಲ ಸೂಚಿಸಿದರು. ಕೃಷಿ ವಿಶ್ವವಿದ್ಯಾಲಯದ ಹಂಗಾಮಿ ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ಎಸ್.ಸೊಪ್ಪಿನ, ಮಹೇಶ ಪತ್ತಾರ, ಕೆ.ಎಚ್.ಪಾಟೀಲ ಸೇರಿದಂತೆ ಅನೇಕರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Comments