UK Suddi
The news is by your side.

ರೈತ ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ಕೃಷಿ ವಿವಿ ಸರ್ಕಾರೇತರ ಸಂಸ್ಥೆಯೊಂದಿಗೆ ಒಡಂಬಡಿಕೆ: ಜನಗೌಡರ

ಧಾರವಾಡ: ಮಹಿಳಾ ಉದ್ದಿಮೆಗಳಿಗೆ ಉದ್ಯಮ ಆರಂಭಿಸಲು ತಿಳುವಳಿಕೆ, ತರಬೇತಿ, ತಂತ್ರಜ್ಞಾನ ಅಳವಡಿಕೆ ಹಾಗೂ ಮಾರುಕಟ್ಟೆ ಬಲವರ್ಧನೆ ಕುರಿತು ರೈತ ಮಹಿಳೆಯರನ್ನು ಕೇಂದ್ರವಾಗಿ ಇಟ್ಟುಕೊಂಡು ಕಾರ್ಯಕ್ರಮ ಆಯೋಜಿಸಲು ಸರ್ಕಾರೇತರ ಸಂಸ್ಥೆ ಮಹಿಳಾ ಉದ್ದಿಮೆದಾರರ ಶ್ರೇಯೋಭಿವೃದ್ಧಿ ಸಂಘದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಜನಗೌಡರ ಹೇಳಿದರು.

ಕುಲಪತಿಗಳ ಕಚೇರಿ ಸಭಾಂಗಣದಲ್ಲಿ ಒಡಂಬಡಿಕೆ ಕುರಿತು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯವು ಅನೇಕ ವರ್ಷಗಳಿಂದ ಮಹಿಳಾ ಸಬಲೀಕರಣ ಹಾಗೂ ರೈತ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ವಿವಿಧ ವಿಭಾಗಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಮಹಿಳಾ ಉದ್ಯಮಶೀಲತೆಗಾಗಿ ಶ್ರಮಿಸುತ್ತಿರುವ ವೇದಾ ಸಂಘದೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವದರೊಂದಿಗೆ ಮಹಿಳಾ ಉದ್ದಿಮೆಗಳಿಗೆ ತಿಳುವಳಿಕೆ ಕಾರ್ಯಕ್ರಮಗಳನ್ನು ಆಯೋಜಿಸುವುದು, ಧಾರವಾಡ ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿ ಮಾರಾಟ ಮಾಡಲ್ಪಡುವ ತಂತ್ರಜ್ಞಾನಗಳನ್ನು ಪ್ರಚುರಗೊಳಿಸುವುದು, ಉದ್ಯಮಶೀಲತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಮಹಿಳಾ ಉದ್ದಿಮಿಗಳಿಗೆ ತಾಂತ್ರಿಕ ತರಬೇತಿ ನೀಡುವುದು, ವಿಶ್ವೇಶ್ವರಯ್ಯ ಟ್ರೇಡ್ ಸೆಂಟರ್ ಹಾಗೂ ಕರ್ನಾಟಕ ಉದ್ಯೋಗ ಮಿತ್ರ ಇವರೊಂದಿಗೆ ಸೇರಿ ಇ-ಮಾರಾಟ ತರಬೇತಿ ಆಯೋಜಿಸುವುದು ಮತ್ತು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರದರ್ಶನ, ಕಾರ್ಯಕ್ರಮಗಳಲ್ಲಿ ಮಹಿಳಾ ಉದ್ದಿಮಿದಾರರು ಭಾಗವಹಿಸಲು ಅನುವು ಮಾಡಿಕೊಡುವುದು ಈ ಒಡಂಬಡಿಕೆಯ ಉದ್ದೇಶವಾಗಿದೆ ಎಂದು ಕುಲಪತಿ ಪ್ರೊ.ಜನಗೌಡರ ಹೇಳಿದರು.

ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸುಮಾರು ಐದು ಸಾವಿರ ಮಹಿಳಾ ಉದ್ದಿಮೆದಾರರನ್ನು ಕರಕುಶಲತೆ, ವಸ್ತ್ರ ಮತ್ತು ಉಡುಪು ವಿನ್ಯಾಸ, ನಾರಿನ ಕರಕುಶಲ ವಸ್ತುಗಳ ಉತ್ಪಾದನೆ, ಆಹಾರ ಪದಾರ್ಥಗಳ ಮೌಲ್ಯವರ್ಧನೆ, ಕೈಚೀಲಗಳ ತಯಾರಿಕೆ, ಆಭರಣಗಳ ವಿನ್ಯಾಸ ಹಾಗೂ ಉತ್ಪಾದನೆ, ಕಲಾ ಹಾಗೂ ಚಿತ್ರಕಲೆ ಮತ್ತು ಇವೆಂಟ್ ಮ್ಯಾನೇಜ್‍ಮೆಂಟ್ ಮುಂತಾದ ಕಾರ್ಯಚಟುವಟಿಕೆಗಳನ್ನು ಅಳವಡಿಸುವ ಮೂಲಕ ರೈತ ಮಹಿಳೆಯರನ್ನು ಸಬಲೀಕರಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಸಮೀಕ್ಷೆಯ ಮೂಲಕ ಆಯ್ಕೆ ಮಾಡಿದ  ಗ್ರಾಮೀಣ ಮಹಿಳಾ ಉದ್ದಿಮೆದಾರರಿಗೆ ನಮ್ಮ ಸಮುದಾಯ ವಿಜ್ಞಾನ ಮಹಾವಿದ್ಯಾಲಯವು ಅಭಿವೃದ್ಧಿಪಡಿಸಿದ ಉದ್ದಿಮೆಶೀಲತಾ ಅಭಿವೃದ್ಧಿ ಕೌಶಲ್ಯ, ನೈಪುಣ್ಯತೆಯ ತಂತ್ರಜ್ಞಾನಗಳನ್ನು ತರಬೇತಿ ಮೂಲಕ  ಕಾಲಕಾಲಕ್ಕೆ ನೀಡಲಾಗುತ್ತದೆ ಎಂದು ಕುಲಪತಿಗಳು ಹೇಳಿದರು.

ಈ ಸಂದರ್ಭದಲ್ಲಿ ವೇದಾ ಸಂಘದ ಅಧ್ಯಕ್ಷೆ ರತಿ ಶ್ರೀನಿವಾಸನ್ ಹಾಗೂ ಕಾರ್ಯದರ್ಶಿ ಜಯಶ್ರೀ ಹಿರೇಮಠ ಅವರು ಸಂಘದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.

Comments