UK Suddi
The news is by your side.

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ಸ್ ಧೂಳಿಪಟವಾಗಲಿದೆ:ಮುರುಗೇಶ್ ನಿರಾಣಿ.

ಬಾಗಲಕೋಟ: ಈಶಾನ್ಯ ರಾಜ್ಯಗಳಾದ ತ್ರಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಶೂನ್ಯ ಸಂಪಾದನೆ ಮಾಡಿದ್ದು ಮುಂಬರುವ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಧೂಳಿಪಟವಾಗುತ್ತದೆ ಎಂದು ಮಾಜಿ ಸಚಿವ ಮುರುಗೇಶ್‌ ನಿರಾಣಿ ಭವಿಷ್ಯ ನುಡಿದರು.
ಜಿಲ್ಲೆಯ ಬೀಳಗಿ ತಾಲೂಕಿನ ಬಸವ ವೃತ್ತದಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಮುಖಾಂತರ ಬಸ್ಸ್‌ ನಿಲ್ದಾಣದ ಮುಂದೆ ತ್ರಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಬೇರಿಯ ವಿಜಯೋತ್ಸವ ಆಚರಣೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಈ ಬಿಜೆಪಿ ಗೆಲುವು ಮುಂಬರುವ ಕರ್ನಾಟಕದ ಚುನಾವಣೆ ಗೆಲುವಿಗೆ ಮುನ್ಸೂಚನೆಯಾಗಲಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಬಿಜೆಪಿ ಸರ್ಕಾರದ ಜನಪರ ಸಾಧನೆಯನ್ನು ಮೆಚ್ಚಿ ದೇಶಾದ್ಯಂತ ಜನತೆ ಕಾಂಗ್ರೆಸ್‌ ಮುಕ್ತ ರಾಷ್ಟ್ರವಾಗಲು ಸಹಕಾರ ನೀಡುತ್ತಿದ್ದಾರೆ. ದೇಶದಲ್ಲಿ ಅನೇಕ ಬಣ್ಣಗಳನ್ನು ಬಳಿಸಿ ಹೋಳಿ ಆಚರಿಸಿದರೆ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಕೇಸರಿ ಹೋಳಿ ಆಡಿ ದೇಶದ ಗಮನ ಸೆಳೆದಿದ್ದಾವೆ. ರಾಷ್ಟ್ರ ಮತ್ತು ರಾಜ್ಯದ ಕಾಂಗ್ರೇಸ್‌ ನಾಯಕರ ಎದೆಯಲ್ಲಿ ಈಗ ಢವಢವ ಶುರುವಾಗಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಕಾನೂನು ಸುವ್ಯವಸ್ಥೆ ಹದಿಗೆಡಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಗೂಂಡಾಗಿರಿ ಆಡಳಿತ ತೊರುತ್ತಿದೆ. ಇದಕ್ಕೆ ರಾಜ್ಯದ ಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆಂದು ಕಿಡಿಕಾರಿದರು. ಸ್ಥಳಿಯ ಶಾಸಕರ ಸಾಧನೆ ಹೋದ ಬಾರಿ ಕೃಷ್ಣಾ ನದಿಯಲ್ಲಿನ ನೀರು ಖಾಲಿ ಮಾಡಿಸಿ ರೈತರಿಗೆ ಅನ್ಯಾಯ ಮಾಡಿ ಕಣ್ಣಿರು ಹಾಕಿಸಿ ಸಚಿವ ಎಂ.ಬಿ.ಪಾಟೀಲ್‌ರಿಗೆ ಅನುಕೂಲ ಕಲ್ಪಸಿರುವದು ಇವರ ಸಾಧನೆ ಎಂದು ವ್ಯಂಗ್ಯವಾಡಿದರು. ಇವರ ಐದು ವರ್ಷಗಳ ಅವಧಿ ಕಳೆದರು ಬೀಳಗಿ ಪಟ್ಟಣದ ಕೆರೆ ತುಂಬಿಸಲಾಗದ ಇವರು ಪಟ್ಟಣದ ಜನತೆಗೆ ಅನ್ಯಾಯ ಮಾಡಿದ್ದಾರೆ. ಮತಕ್ಷೇತ್ರದಾಧ್ಯಂತ ನನ್ನ ಅವಧಿಯಲ್ಲಿ ಬಡ ಕುಟುಂಬಗಳಿಗಾಗಿ 10 ಸಾವಿರ ಆಶ್ರಯ ಮನೆಗಳನ್ನು ಮಂಜುರಾತಿ ತಂದಿದ್ದು ಇದುವರೆಗೆ ಆಶ್ರಯ ಮನೆಗಳ ಹಂಚಿಕೆ ಕಾರ್ಯವಾಗಿಲ್ಲ. ಆಶ್ರಯ ಮನೆಗಳಲ್ಲಿ ಉಳವರಿಗೆ ಮನೆ ನೀಡಿ ಬಡ ಕುಟುಂಬಗಳಿಗೆ ಮೋಸ ಮಾಡಿ ಅವರಿಗೆ ಹಕ್ಕು ಪತ್ರಗಳನ್ನೇ ನೀಡದೆ ಚುನಾವಣೆಯ ಗಿಮ್ಮಿಕಿನಲ್ಲಿ ಬ್ಲಾಕ್‌ ಮೇಲ್‌ ತಂತ್ರ ಉಪಯೋಗಿಸುತ್ತಿದ್ದಾರೆ ಎಂದು ದೂರಿದರು. ಇವರ ಅವಧಿಯಲ್ಲಿ ಕಣ್ಣಿಗೆ ಕಾಣಬರುವ ಯಾವುದಾದರು ಒಂದಾದರೂ ಮತಕ್ಷೇತ್ರದಲ್ಲಿ ದೊಡ್ಡ ಯೋಜನೆಗಳನ್ನು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಯಾವುದಾದರು ಶಾಲಾ ಕಾಲೇಜ್‌ಗಳನ್ನು ತಂದಿರುವದನ್ನು ಮತ್ತು ರೈತಪರ ಯಾವುದಾದರೂ ಯೋಜನೆಗಳ ತಂದಿರುವ ಪಟ್ಟಿ ನೀಡಬೇಕು ಎಂದು ಸವಾಲ್‌ ಹಾಕಿದರು.
ವಿಜಯೋತ್ಸವದಲ್ಲಿ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

Comments