ರಕ್ತದಾನದಿಂದ ಜೀವ ಉಳಿಸಿದ ಸಾರ್ಥಕ ಭಾವ ಮೂಡುವುದು ವೈಧ್ಯಾಧಿಕಾರಿ ಡಾ.ಕೆ.ಮಹೇಶ್ವರಿ ಅಭಿಪ್ರಾಯ
ಬೆಳಗಾವಿ: ರಕ್ತದಾನದಂತಹ ಪರೋಪಕಾರದ ಕೆಲಸದಲ್ಲಿ ಪಾಲ್ಗೊಳ್ಳುವುದರಿಂದ ಬೇರೊಂದು ಜೀವವನ್ನು ಉಳಿಸಿದ ಸಾರ್ಥಕ ಭಾವ ಮೂಡುವುದಲ್ಲದೇ ಒಂದು ಕಟುಂಬದ ಸಂರಕ್ಷಣೆ ಮಾಡಿದ ಪುಣ್ಯದ ಫಲ ಲಭಿಸುವುದೆಂದು ದೊಡವಾಡ ಪ್ರಾ.ಆ.ಕೇಂದ್ರದ ವೈಧ್ಯಾಧಿಕಾರಿ ಡಾ.ಕೆ.ಮಹೇಶ್ವರಿ ಹೇಳಿದರು.
ದೊಡವಾಡದ ಶ್ರೀ ರಾಮಲಿಂಗೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿಯ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸ್ವ ಇಚ್ಛೆಯಿಂದ ರಕ್ತದಾನ ಮಾಡಿದವರಿಗೆ ಇಲಾಖೆಯಿಂದ ಪ್ರಮಾಣ ಪತ್ರ ನೀಡಲಾಗುವುದು. ದಾನಿಗಳು ತಮ್ಮ ಕಟುಂಬ ಅಥವಾ ಸಂಬಂಧಿಕರಿಗೆದುರಾಗುವ ತುರ್ತು ರಕ್ತದ ಅವಶ್ಯಕತೆಗಳ ಸಂದರ್ಭದಲ್ಲಿ ಸರಕಾರದ ಬ್ಲಡ್ ಬ್ಯಾಂಕ್ಗಳಲ್ಲಿ ಪ್ರಮಾಣ ಪತ್ರ ತೋರಿಸಿ ಉಚಿತ ರಕ್ತ ಪಡೆಯಬಹುದೆಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ದ್ಯಾಮವ್ವ ಹಾಲಣ್ಣವರ.ಉಪಾಧ್ಯಕ್ಷ ಬಸವಂತ ಜಮನೂರ, ತಾಪಂ ಅಧ್ಯಕ್ಷ ಸಂಗಯ್ಯ ದಾಭಿಮಠ, ಬೆಳಗಾವಿ ಜಿಲ್ಲಾಸ್ಪತ್ರೆಯ ಡಾ.ವೀಣಾ ಪರಗನ್ನವರ, ಪಿಡಿಓ ಎಸ್ ಆಯ್ದಾನಪ್ಪನವರ, ಭೀಮರಾವ್ ವನಹಳ್ಳಿ, ಮೂಗಪ್ಪ ಸಂಗೊಳ್ಳಿ, ಉಳವಪ್ಪ ಬಶೆಟ್ಟಿ, ಸೋಮೇಶ ಚರಂತಿಮಠ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಗ್ರಾಮದ ಅನೇಕ ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಸಾರ್ಥಕತೆ ಮೆರೆದರು. ಇಲಾಖೆಯ ಡಿ ಎಸ್ ಝಂಡೇಕರ್ ಸ್ವಾಗತಿಸಿ ನಿರೂಪಿಸಿದರು.