UK Suddi
The news is by your side.

ಹೆಣ್ಣಿಗೆ ಹೆಣ್ಣೇ ರಕ್ಷಣೆ ಒದಗಿಸಬೇಕಾದ ಅವಶ್ಯಕತೆ: ಸಾಹಿತಿ ಶರಣೆ ಡಾ.ಹೇಮಾ ಪಟ್ಟಣಶೆಟ್ಟಿ

ಉಪ್ಪಿನ ಬೆಟಗೇರಿ: ಸಮಾಜ ಹಾಗೂ ಕುಟುಂಬದಲ್ಲಿ ಮಹಿಳೆಯರ ಮೇಲೆ ನಡೆಯುವ ಹಲವಾರು ದೌರ್ಜನ್ಯಗಳಲ್ಲಿ ಪುರುಷರೊಟ್ಟಿಗೆ ಮಹಿಳೆಯರ ಪಾತ್ರವೂ ಇದ್ದು, ಮಹಿಳೆಯರ ಮೇಲೆ ನಿರಂತರ ನಡೆಯುವ ದೌರ್ಜನ್ಯ ತಡೆಗಟ್ಟಬೇಕಾದರೆ ಮೊದಲು ಹೆಣ್ಣಿಗೆ ಹೆಣ್ಣೇ ರಕ್ಷಣೆ ಒದಗಿಸಬೇಕಾದ ಅವಶ್ಯಕತೆ ಇದೆ ಎಂದು ಹಿರಿಯ ಸಾಹಿತಿ ಶರಣೆ ಡಾ.ಹೇಮಾ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.

ಗ್ರಾಮದ ಶ್ರೀ ಮೂರುಸಾವಿರ ವಿರಕ್ತಮಠದಲ್ಲಿ ಗುರುವಾರದಂದು ನಡೆದ ಶ್ರೀ ಗುರು ವಿರೂಪಾಕ್ಷೇಶ್ವರ ಅಕ್ಕನ ಬಳಗದ 8 ನೇ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ‘ಮಹಿಳಾ ಸಬಲೀಕರಣ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆ ಮತ್ತು ಮಕ್ಕಳ ಮಾರಾಟ, ಭ್ರೂಣ ಹತ್ಯೆ, ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹ ಸೇರಿದಂತೆ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುವ ಅನೇಕ ದೌರ್ಜನ್ಯವನ್ನು ಪ್ರತಿಭಟಿಸುವ ಮೂಲಕ ಮಹಿಳೆಯರು ಇವುಗಳನ್ನು ತಡೆಗಟ್ಟಿ, ಹೆಣ್ಣು ಅಶಕ್ತಳಲ್ಲ ಸಶಕ್ತಳು ಎಂಬುದನ್ನು ತೋರಿದಾಗ ಮಾತ್ರ ನಿಜವಾದ ಮಹಿಳಾ ಸಬಲೀಕರಣವಾಗುವದು ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕøತ ನಿವೃತ್ತ ಶಿಕ್ಷಕ ಶರಣ ನಿರ್ಮಲಕುಮಾರ ಉಪಾಧ್ಯೆ ಮಾತನಾಡಿ, ಬಾಲ್ಯ ವಿವಾಹ, ಶಿಶು ಮಾರಾಟ, ಅತ್ಯಾಚಾರ, ಮಹಿಳೆ ಗೃಹಬಂಧನ, ಲೈಂಗಿಕ ಕಿರುಕಳ, ಕನ್ಯತ್ವ ಪರೀಕ್ಷೆ ಇಂತಹ ಹಲವಾರು ಕ್ರೂರ ವರ್ತನೆಗಳು ನಮ್ಮ ಸಮಾಜದಲ್ಲಿ ಈಗಲೂ ನಡೆಯುತ್ತಿರುವದು ನಾವೆಲ್ಲರೂ ತಲೆ ತಗ್ಗಿಸುವಂತಹ ವಿಚಾರವಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಇಂತಹ ಅನಾಗರಿಕ ಘಟನೆಗಳನ್ನು ತಡೆಗಟ್ಟಲು ಹಲವಾರು ಯೋಜನೆಗಳನ್ನು ಮತ್ತು ಅನೇಕ ಕಾನೂನುಗಳನ್ನು ಜಾರಿಗೆ ತಂದರೂ ಸಹ, ಆ ಕಾನೂನುಗಳು ಕಾರ್ಯರೂಪಕ್ಕೆ ಬರದೇ ಕೇವಲ ಕಾಗದದಲ್ಲಿ ಮಾತ್ರ ಜಾರಿಯಾಗಿವೆ. ಹೀಗಾಗಿ ‘ಮಹಿಳಾ ಸಬಲೀಕರಣ’ ಎಂಬ ಕಲ್ಪನೆ ನಮ್ಮಲ್ಲಿ ಇನ್ನೂ ಇದೆ ಎಂದು ಅಭಿಪ್ರಾಯ ಪಟ್ಟ ಅವರು, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹೀಗೆ ಎಲ್ಲ ರಂಗಗಳಲ್ಲೂ ಮಹಿಳೆ ಮುಂದುವರೆದರೂ ಸಹ ಅವರಿಗೆ ಈ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರತಿಶತ 33 ಮೀಸಲಾತಿಯ ಅವಶ್ಯಕತೆ ತುಂಬಾ ಇದೆ. ಸರಕಾರಕ್ಕೆ ಇಟ್ಟ ಅವರ ಹಲವಾರು ವರ್ಷಗಳ ಮಹಿಳಾ ಮೀಸಲಾತಿಯ ಈ ಬೇಡಿಕೆ ಅವರ ಭಿಕ್ಷೆ ಅಲ್ಲಾ, ಇದು ಅವರ ಹಕ್ಕು. ಜೀವನದ ಬಂಡಿ ನಡೆಯಬೇಕಾದರೆ ಹೆಣ್ಣು ಗಂಡೆಂಬ ಎರಡು ಗಾಲಿ ಬೇಕೆ ಬೇಕು. ಮಹಿಳಾ ಸಬಲೀಕರಣವೆಂಬ ಬಂಡಿ ಇನ್ನೂ ಸದೃಢವಾಗಬೇಕಾಗಿದೆ ಎಂದು ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಸ್ಥಳೀಯ ಮೂರು ಸಾವಿರ ವಿರಕ್ತಮಠದ ಪೂಜ್ಯ ಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ ಸಾನಿಧ್ಯ ವಹಿಸಿ, ಮಾಜಿ ಶಾಸಕಿ ಶರಣೆ ಸೀಮಾ ಮಸೂತಿ ಅಧ್ಯಕ್ಷತೆ ವಹಿಸಿ, ಗ್ರಾಮದ ಹಿರಿಯ ಶರಣ ಸುರೇಶಬಾಬು ತಳವಾರ ಅತಿಥಿಯಾಗಿ ಹಾಗೂ ಶರಣ ಚನಬಸಪ್ಪ ಲಗಮಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿ.ಶರಣ ಚಂಬಣ್ಣ ಫಕ್ಕೀರಪ್ಪ ತೊಗ್ಗಿ ಅವರ ಸ್ಮರಣಾರ್ಥ ಅವರ ಧರ್ಮಪತ್ನಿ ನಿರ್ಮಲಾ ತೊಗ್ಗಿ ಇವರಿಂದ ಪ್ರಸಾದ ಹಾಗೂ ಸತ್ಕಾರ ಸೇವೆ ಜರುಗಿತು. ಲವಣಗಿರಿ ಮಹಿಳಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಹಾಗೂ ಶಿವಶರಣೆ ಅಕ್ಕಮಹಾದೇವಿ ಸಹಕಾರಿ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಅಕ್ಕನ ಬಳಗದ ಶರಣೆಯರಾದ ಶಿಕ್ಷಕಿ ಕಲಾ ಸಿ.ಮಸೂತಿ(ಸಿದ್ದಾಪೂರ) ನಿರೂಪಿಸಿದರು, ಗ್ರಾ.ಪಂ.ಸದಸ್ಯೆ ಕಸ್ತೂರಿ ಯಲಿಗಾರ ಸ್ವಾಗತಿಸಿದರು, ಮಾಜಿ ಗ್ರಾ.ಪಂ.ಸದಸ್ಯೆ ಸುನಂದಾ ಮಡಿವಾಳರ ವಂದಿಸಿದರು.

Comments