UK Suddi
The news is by your side.

ಶರಣರ ದೃಷ್ಟಿಯಲ್ಲಿ ಹೆಣ್ಣು.

ಭಾರತಿಯ ಸಂಸ್ಕೃತಿಯಲ್ಲಿ ಹೆಣ್ಣನ್ನು ಹೊನ್ನು ಮಣ್ಣಿಗೆ ಸಮಿಕರಿಸಿ ಮಾತನಾಡುವ ಕಾಲವೊಂದಿತ್ತು. ಪಿತೃಪ್ರಧಾನವಾದ ನಮ್ಮ ಭಾರತ ದೇಶ ಪುರುಷ ಪ್ರಧಾನವಾದ ಬರಹಗಳಿಂದ ಹೆಣ್ಣಿಗೆ ಹಲವಾರು ಸಂಕೋಲೆಗಳನ್ನ ಕಟ್ಟಿ ಹೆಣ್ಣನ್ನು ಭೋಗದ ವಸ್ತುವನ್ನಾಗಿ ಮಾಡಿ, ಮಕ್ಕಳೆರುವ ಯಂತ್ರವನ್ನಾಗಿಸಿ ಕೇವಲ ಅಡುಗೆ ಮನೆಗೆ ಸಿಮಿತಗೊಳಿಸಿ ಆಕೆಯನ್ನ ಬಂಧಿಖಾನೆಯಲ್ಲಿಟ್ಟರು. ಆಕೆಯನ್ನ ಸಾಂಸ್ಕೃತಿಕ ವಲಯದಿಂದ ದೂರವಿಟ್ಟು ಮುಂದೆ ಬಾರದಂತೆ ನೋಡಿಕೊಂಡರು. ಆಕೆಯು ಸಹ ಅದನ್ನೆ ಮೈಗೂಡಿಸಿಕೊಂಡು ಬೇರೆ ದಾರಿ ಕಾಣದೆ ಮೂಕ ಪ್ರೇಕ್ಷಕಳಂತೆ ಜೀವನ ನಡೆಸುತ್ತ ಬಂದಳು. ಅವಳು ಶೂದ್ರಳೆಂದು ಮೋಕ್ಷಕ್ಕೆ ಅರ್ಹಳಲ್ಲವೆಂದು ಸೂತಕದ ಪಟ್ಟ ಕಟ್ಟಿ ಒಂದು ಮೂಲೆಯಲ್ಲಿ ಕೂಡಾಕಿದ್ದರು. ಹೆಣ್ಣಿನ ಅದೃಷ್ಟವೊ ಅಥವಾ ಸೌಭಾಗ್ಯವೊ ಎನ್ನುವಂತೆ ಹನ್ನೆರಡನೆ ಶತಮಾನ ಅವಳ ಭಾಗ್ಯದ ಬಾಗಿಲು ತೆಗೆದಂತಾಯಿತು. ಬಸವಣ್ಣನವರು ಹುಟ್ಟಿದ್ದೆ ತಡ ಹೆಣ್ಣನ್ನು ಎಲ್ಲ ಬಂಧನಗಳಿಂದ ಮುಕ್ತಗೊಳಿಸಿ ಸಾಂಸ್ಕೃತಿಕವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದಲ್ಲದೆ ವಚನ ರಚನೆ ಮಾಡಲು ಕಲಿಸಿ ಮೋಕ್ಷ ಸಾಧನೆಗೆ ಅನುವು ಮಾಡಿಕೊಟ್ಟರು. ಅದು ಹೆಣ್ಣಿನ ಪಾಲಿಗೆ ವಜ್ರಯುಗವೇ ಆಗಿತ್ತು. ಬಸವಣ್ಣನವರು ನಿರ್ಮಿಸಿದ ಅನುಭವ ಮಂಟಪದಲ್ಲಿ ಹೆಣ್ಣು ಗಂಡೆಂಬ ಭೇಧವಿಲ್ಲದೆ ಸಮಾನವಾದ ಅವಕಾಶ ಕಲ್ಪಿಸಿಕೊಟ್ಟ ಆ ಒಂದು ಶ್ರೇಯಸ್ಸು ಬಸವಣ್ಣನವರಿಗೆ ಮಾತ್ರ ಸಲ್ಲುತ್ತದೆ. ಪರಸ್ತ್ರೀಯನ್ನು ತಾಯಿಯಂತೆ ಕಂಡು ಅತ್ಯಂತ ಉನ್ನತ ಸ್ಥಾನವನ್ನ ತಂದು ಕೊಟ್ಟಿದ್ದಾರೆ. ಈ ಒಂದು ಹಿನ್ನಲೆಯಲ್ಲಿ ನಮ್ಮ ಮಹಿಳಾ ಲೋಕವು ಬಸವಣ್ಣನವರಿಗೆ ಕೃತಘ್ನತೆಯನ್ನ ಸಲ್ಲಿಸಲೆಬೇಕು. 

ಹೆಣ್ಣು ಯಾವತ್ತು ಮಾಯೆಯಲ್ಲ ಎಂಬುದನ್ನ ಅಲ್ಲಮಪ್ರಭುದೇವರುಗಳು ಹೇಳಿದರೆ, ಇತ್ತ ಶಿವಯೋಗಿ ಸಿದ್ಧರಾಮೇಶ್ವರರು “ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನಾ” ಎಂದು ಘೋಷಣೆ ಕೂಗಿ ಹೆಣ್ಣನ್ನು ಧೈವತ್ವ ಸ್ಥಾನ ಕೊಟ್ಟು ಪೂಜ್ಯಭಾವನೆಯಿಂದ ಕಂಡರು.

ಮತ್ತು ಜೇಡರ ದಾಸಿಮಯ್ಯನವರು “ಮೊಲೆ ಮುಡಿ ಬಂದಡೆ ಹೆಣ್ಣೆಂಬರು ಮೀಸೆ ಕಾಸೆ ಬಂದಡೆ ಗಂಡೆಂಬರು ನಡುವೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡೂ ಅಲ್ಲ ಕಾಣಾ ರಾಮನಾಥಾ”  ಎಂದು ಎಲ್ಲವನ್ನು ಮೀರಿ ಹೇಳಿದರು. ಆತ್ಮಕ್ಕೆ ಜ್ಞಾನಕ್ಕೆ ಲಿಂಗಭೇದವಿಲ್ಲವೆಂಬುದು ಶರಣರ ವಾದವಾಗಿತ್ತು. 

“ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ” ಎಂದು ಬಸವಣ್ಣನವರು ನುಡಿದರೆ, “ಪರಸ್ತ್ರೀಯರ ಕೂಡದಿಪ್ಪುದೆ ಶೀಲ” ಎಂದು ಶಿವಲೆಂಕ ಮಂಚಣ್ಣನವರು ಹೇಳುತ್ತಾರೆ. ಇತ್ತ ಸಕಲೇಶ ಮಾದರಸರು “ಅಂಗನೆಯರ ಸಂಗವ ತೊರದಡೆ ಶೀಲವಂತ” ಮತ್ತು ಚೆನ್ನಬಸವಣ್ಣನವರು “ಶಿವಲಿಂಗ ನೋಡುವ ಕಣ್ಣಿನಲ್ಲಿ ಪರಸ್ತ್ರೀಯ ನೋಡಿದರೆ ಅಲ್ಲಿ ಲಿಂಗವಿಲ್ಲ” ಅಂದರೆ ಅಲ್ಲಿ ಅವರ ಅರಿವು ನಷ್ಟವಾಯಿತು ಎಂಬ ಮಾತನ್ನ ಎಚ್ಚರಸಿ ಹೇಳಿದ್ದಾರೆ. 

“ಪರಧನ ಪರಸ್ತ್ರೀಯ ವಿಸರ್ಜಿಸಿ ಪೂಜಿಸು ಪರಶಿವನ” ಎಂದು ಸಿದ್ಧರಾಮೇಶ್ವರರು ಕೂಡ ಎಚ್ಚರಿಕೆ ನೀಡುತ್ತಾರೆ. “ಗಂಡನುಳ್ಳ ಹೆಂಡಿರ ಕಂಡು ಅಳುಪದಿರಾ ಮನವೆ. ಬಂದ ಬಸಿರ, ಉಂಡ ಮೊಲೆಯ ಕಂಡು ಮರುಗದಿರಾ ಮನವೆ” ಎಂದು ಸೊಡ್ಡಳ ಬಾಚರಸರು ತಮ್ಮ ಮನಸ್ಸಿಗೆ ತಾವೇ ಹೇಳಿಕೊಳ್ಳುತ್ತಾರೆ.  ಮತ್ತೆ ಬಸವಣ್ಣನವರು ಕೂಡ “ಮೊಲೆಯೆಂಬ ಭಾವ ತಪ್ಪಿ ಅಪ್ಪಿದರೆ ತಲೆಯ ಕೊಂಬ ನಮ್ಮ ಕೂಡಲ ಸಂಗಮದೇವ” ಎಂದು ಎಚ್ಚರಿಸಿದ್ದಾರೆ.

ಒಟ್ಟಾರೆ ಇಲ್ಲಿ ನಮ್ಮ ಶರಣರು ಹೆಣ್ಣಿನಲ್ಲಿ ಚೈತನ್ಯ ಸ್ವರೂಪವ ಕಂಡು ಆಕೆಯನ್ನು ಧೈವತ್ವ ಮಟ್ಟಕ್ಕೆ ಏರಿಸಿ ನಿಲ್ಲಿಸುತ್ತಾರೆ. ಆಕೆಯನ್ನು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದೆ ನಮ್ಮ ವಿಶ್ವಜ್ಯೋತಿ ಗುರುಬಸವಣ್ಣನವರು. ಹಾಗಾಗಿ ಅಂದಿನ ಅನುಭವ ಮಂಟಪದಲ್ಲಿ ಮೂವತ್ತೈದು ಜನ ವಚನಗಾರ್ತಿಯರು ಜಗತ್ತನ್ನೆ ತೊಳಗಿ ಬೆಳಗುವಂತಾದರು. ಅವರು ಒಂದೊಂದು ವಚನವನ್ನು ಬರೆದು ವಚನ ಇತಿಹಾಸದಲ್ಲಿ ಉಳಿಯುವಂತಾದರು. ಅವರಲ್ಲಿ ಪ್ರಮುಖರಾದವರು ಅಕ್ಕಮಹಾದೇವಿ, ಅಕ್ಕಮ್ಮ, ನೀಲಾಂಬಿಕೆ, ಗಂಗಾಂಬಿಕೆ, ನಾಗಲಾಂಬಿಕೆ ಆಯ್ದಕ್ಕಿ ಲಕ್ಕಮ್ಮ, ಅಮುಗೆ ರಾಯಮ್ಮ, ಬೊಂತಾದೇವಿ, ಸತ್ಯಕ್ಕ, ಸಂಕವ್ವೆ, ಮುಕ್ತಾಯಕ್ಕ, ಹಡಪದ ಲಿಂಗಮ್ಮ, ಮೋಳಿಗೆ ಮಹಾದೇವಿ, ಹೀಗೆ ಮುಂತಾದವರು ನಮ್ಮ ಕನ್ನಡ ವಚನ ಸಾಹಿತ್ಯದಲ್ಲಿ ಅಜರಾಮರವಾಗಿ ಉಳಿಯುವಂತಾಯಿತು. ಹೆಣ್ಣಿನ ಅಪ್ರತಿಮ ಜ್ಞಾನವನ್ನು ಜಗತ್ತಿಗೆ ತೋರಿಸಿಕೊಟ್ಟ ಆ ಶ್ರೇಯಸ್ಸು ಕೀರ್ತಿ ಬಸವಣ್ಣನವರಿಗೆ ಮತ್ತು ಬಸವಾದಿ ಶರಣರಿಗೆ ಸಲ್ಲುತ್ತದೆ.

ವಿಶ್ವದ್ಯಾಂತ ಮಾರ್ಚ್ ಎಂಟರದ್ದು ಮಾಡುವ ಮಹಿಳಾ ದಿನಾಚರಣೆಯನ್ನು ಕೇವಲ ಒಂದು ದಿನ ಆಚರಿಸಿ ನಡೆದು ಬಿಡುತ್ತಾರೆ. ಆದರೆ ನಮ್ಮ ಬಸವಾದಿ ಶರಣರು ನಿತ್ಯನಿತ್ಯ ಸತ್ಯದಿಂದ ಆಚರಿಸುತ್ತ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ನಾನು ಸ್ತ್ರೀ ಪುರುಷ ಎಂಬ ಭೇದವ ಅಳಿಸಿ ಹಾಕಿ ಎಲ್ಲದಕ್ಕಿಂತ ಜ್ಞಾನವೇ ಮಿಗಿಲು ಎಂದು ಹೇಳಬಯಸುತ್ತೇನೆ.

– ರುದ್ರಮ್ಮ ಅಮರೇಶ್ ಹಾಸಿನಾಳ ಗಂಗಾವತಿ.

Comments