UK Suddi
The news is by your side.

ಡಿ.2ರಂದು ಜಯಶ್ರೀ ಭಂಡಾರಿಯವರ “ಯಾವ ಜನ್ಮದ ಮೈತ್ರಿ” ಮತ್ತು “ಅಂತರಾಳ” ಕವನ ಸಂಕಲನ ಲೋಪಾರ್ಪಣೆ.

ಬಾದಾಮಿ:ಇದೇ ಡಿಸೆಂಬರ್ 2 ರಂದು ಬದಾಮಿಯ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಶ್ರೀಮತಿ ಜಯಶ್ರೀ ಭಂಡಾರಿಯವರ “ಯಾವ ಜನ್ಮದ ಮೈತ್ರಿ” ಮತ್ತು “ಅಂತರಾಳ” ಕವನ ಸಂಕಲನ ಲೋಪಾರ್ಪಣೆಯನ್ನು ಅಖಿಲ ಭಾರತ ವಚನ ಸಾಹಿತ್ಯ ಹಾಗೂ ಸಾಂಸ್ಕøತಿಕ ಪರಿಷತ್ತು ಬೆಂಗಳೂರು ತಾಲೂಕ ಘಟಕ ಬದಾಮಿಯವರ ಸಹಯೋಗದೊಂದಿಗೆ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಕೋಟ ಜಿಲ್ಲೆಯ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕøತಿಕ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಯಾಳವಾರ ವಹಿಸಲಿದ್ದು.ಪತ್ರಕರ್ತರು ಹಾಗೂ ಮಕ್ಕಳ ಸಾಹಿತಿಗಳಾದ ರಾಜೇಂದ್ರ ಪಾಟೀಲರು “ಯಾವ ಜನ್ಮದ ಮೈತ್ರಿ” ಕವನ ಸಂಕಲನವನ್ನು ಪತ್ರಕರ್ತರು ಸಾಹಿತಿಗಳಾದ ಎಲ್.ಎಸ್.ಶಾಸ್ತ್ರೀಯವರು “ಅಂತರಾಳ” ಕವನ ಸಂಕಲನವನ್ನು ಬಿಡುಗಡೆ ಮಾಡಲಿರುವರು.ಬನಹಟ್ಟಿಯ ಸಾಹಿತಿಗಳಾದ ಪ್ರೊ.ಸಿದ್ದರಾಜ ಪೂಜಾರಿಯವರು ಈ ಸಂದರ್ಭದಲ್ಲಿ “ಯಾವ ಜನ್ಮದ ಮೈತ್ರಿ”ಕುರಿತು ಬದಾಮಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಜಿ.ಜಿ.ಹಿರೇಮಠರವರು “ಅಂತರಾಳ” ಕವನ ಸಂಕಲನ ಕುರಿತು ಮಾತನಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಮ್ಮಲ್ಲಿಂದು ಅನೇಕ ಶಿಕ್ಷಕರು ಬರವಣಿಗೆಯಲ್ಲಿ ಭಾಷಣಕಾರರಾಗಿ ಕಲಾವಿದರಾಗಿ ವೃತ್ತಿಯೊಡನೆ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದನ್ನು ಕಾಣುತ್ತೇವೆ. ಯಾರ ಧ್ವನಿಯಲ್ಲಿ ಸ್ಪಷ್ಟತೆಯಿದೆಯೋ ಅವರು ಹಾಡುಗಾರರಾಗಬಲ್ಲರು,ಉತ್ತಮ ಭಾಷಣಕಾರರಾಗಬಲ್ಲರು.ಮಕ್ಕಳಿಗೆ ಉತ್ತಮ ಬೋಧಕರಾಗಬಲ್ಲರು.ಅಂತಹ ಎಲ್ಲ ಗುಣಗಳನ್ನು ಅಳವಡಿಸಿಕೊಂಡು ವೃತ್ತಿಯಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತ ಬಿಡುವಿನ ವೇಳೆ ಕವನ,ಕತೆ,ಚಿಂತನಶೀಲ ಬರಹಗಳನ್ನು ಬರೆಯುತ್ತ ವೃತ್ತಿ ಬದುಕನ್ನು ಸಾಗಿಸುತ್ತಿರುವ ಶಿಕ್ಷಕಿಯೊಬ್ಬರು ಬದಾಮಿಯಲ್ಲಿದ್ದಾರೆ ಅವರೇ ಜಯಶ್ರೀ ಭಂಡಾರಿ.
ಇವರ ಪತಿ ಕೂಡ ಇವರೊಟ್ಟಿಗೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಅಂದರೆ ನೂತನ ಪ್ರೌಢಶಾಲೆ ಜಾಲಿಹಾಳದಲ್ಲಿ ಪತಿ ಮುಖ್ಯೋಪಾಧ್ಯಾಯರಾದರೆ ಪತ್ನಿ ಸಹಶಿಕ್ಷಕಿ.ಒಂದೇ ಶಾಲೆಯಲ್ಲಿ ದಂಪತಿಗಳಿಬ್ಬರೂ ಇದ್ದಾಗ ಪತಿಯ ಸ್ಪೂರ್ತಿ ಪತ್ನಿಗೆ ಸಿಕ್ಕರೆ ಅದಕ್ಕಿಂತ ಸೌಭಾಗ್ಯವೇನಿದೆ.? ಅಂತಹ ಸೌಭಾಗ್ಯವನ್ನು ಪಡೆದು ಪತಿಯ ಸಹಕಾರ ನೆನೆಯುತ್ತ ಬದುಕುತ್ತಿರುವ ಜಯಶ್ರೀ ಭಂಡಾರಿ ಉತ್ತಮ ಭಾಷಣಕಾರರು ಕೂಡ. ಇವರ ಉಪನ್ಯಾಸಗಳು ಕೂಡ ವಿದ್ಯಾರ್ಥಿಗಳನ್ನು ಉದ್ದೇಶಿಸಿ. ಸಮಾಜದ ವಿವಿಧ ಕಾರ್ಯಕ್ರಮಗಳಲ್ಲಿ ಅತಿಥಿ ಉಪನ್ಯಾಸಕಿಯಾಗಿ ಹೋಗುವ ಮೂಲಕ ನಾಡಿನೆಲ್ಲೆಡೆ ತಮ್ಮ ಉಪನ್ಯಾಸಗಳ ಮೂಲಕ ಚಿರಪರಿಚಿತೆ.

ಅಂದ ಹಾಗೆ ಇವರ ಮೂಲ ಸ್ಥಳ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಇವರ ಅಜ್ಜನ ಊರು ಸವದತ್ತಿ ತಾಲೂಕಿನ ಹೊಸೂರ ಗ್ರಾಮ ಇಲ್ಲಿನ ನೀಲಕಂಠಜಿ ಗಣಾಚಾರಿ ಎಂದರೆ ಇಡೀ ಊರಿಗೆ ಪರಿಚಿತ ಕುಟುಂಬ.ಗಾಂಧಿತತ್ವ ಅನುಷ್ಟಾನದಲ್ಲಿ ತಮ್ಮ ಜೀವಿತದ ಉದ್ದಕ್ಕೂ ದುಡಿದು ಗಾಂಧಿ ಕನಸಿನ ಆದರ್ಶ ಗ್ರಾಮಗಳ ಸ್ಥಾಪನೆಯಲ್ಲಿ ಈ ಭಾಗದಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ ನೀಲಕಂಠಜೀ ಗಣಾಚಾರಿ ಮೊಮ್ಮಗಳು ಜಯಶ್ರೀ ಭಂಡಾರಿ.ಇವರ ತಂದೆ ಫಲಹಾರೇಶ್ವರ ಪ್ರೌಢಶಾಕೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿಕ್ಷಕ ಗಂಗಯ್ಯ ಗಣಾಚಾರಿ ತಾಯಿ ಗಂಗಮ್ಮ. ಇವರ ಏಳು ಜನ ಮಕ್ಕಳಲ್ಲಿ ಹಿರಿಯ ಮಗಳು ಜಯಶ್ರೀ.ಎಲ್ಲ ಮಕ್ಕಳು ಕೂಡ ಶಿಕ್ಷಕ ವೃತ್ತಿಯಲ್ಲಿರುವವರು.ಇವರ ಸಹೋದರಿ ಗಿರಿಜಾಳಿಗೆ ಶಿಕ್ಷಕ ವೃತ್ತಿ ಅರಸಿ ಬಂದಿದ್ದರೂ ಕೌಟುಂಬಿಕ ಜವಾಬ್ದಾರಿಯಿಂದ ಅವರು ಅದನ್ನು ಮಾಡಲಿಲ್ಲ ಎನ್ನುವುದನ್ನು ಬಿಟ್ಟರೆ ಕುಟುಂಬವೇ ಶಿಕ್ಷಕ ವೃತ್ತಿಯಲ್ಲಿರುವುದು ವಿಶೇಷ.ಇಬ್ಬರು ಸಹೋದರರು ನಾಲ್ವರು ಸಹೋದರಿಯರಲ್ಲಿ ಹಿರಿಯಳಾದ ಜಯಶ್ರೀ ಎಂ.ಎ. ಬಿ.ಈಡಿ ವ್ಯಾಸಾಂಗ ಮುಗಿಸಿ ಹಿಂದಿ ಶಿಕ್ಷಕಿಯಾಗಿ ಸೇವೆಯನ್ನು 1987-88 ರಲ್ಲಿ ಸೇರಿದರು.ಕಾಲೇಜು ದಿನಗಳಿಂದಲೇ ಬರವಣಿಗೆಯ ತುಡಿತವಿದ್ದ ಇವರು ನೋಟ್ ಬುಕ್‍ದಲ್ಲಿ ಕವನಗಳನ್ನು ಗೀಚಿದ್ದೇ ಗೀಚಿದ್ದು. ಬದಾಮಿಗೆ ಬಂದು ನೆಲೆಸಿದ ನಂತರ ಜೊತೆಗಿರುವ ಸಾಹಿತ್ಯ ಬಳಗ ಇವರಲ್ಲಿನ ಪ್ರತಿಭೆಯನ್ನು ಹೊರತರುವ ಮೂಲಕ ಕವಯತ್ರಿಯಾಗಿ ಇವರು ಹೊರಹೊಮ್ಮಿದರು.
2013 ರಲ್ಲಿ ಇವರ ಕವನ ಸಂಕಲನ “ ನನ್ನೊಲವಿನ ಹಾಡು” ಪ್ರಕಟಗೊಂಡಿದೆ.ವೃತ್ತಿಯ ಜೊತೆಗೆ ಸಾಹಿತ್ಯಕವಾಗಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯೆಯಾಗಿ ಮಕ್ಕಳ ಸಮಾಗಮ ಸಂಘಟನೆಯ,ಚುಟುಕು ಸಾಹಿತ್ಯ ಪರಿಷತ್,ಅಖಿಲ ಭಾರತ ವೀರಶೈವ ಮಹಾಸಭೆಯ ಸದಸ್ಯೆಯಾಗಿ ಅಕ್ಕನ ಬಳಗ ಮಹಿಳಾ ಘಟಕ ಬದಾಮಿಯ ಸದಸ್ಯಳಾಗಿ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ.ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ ಸದಸ್ಯೆ ಹೀಗೆ ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇವರು ಕೇವಲ ಉಪನ್ಯಾಸಕ್ಕಷ್ಟೇ ಸೀಮಿತರಲ್ಲ. ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೂಡ ಉತ್ತಮ ನಿರೂಪಣೆ ಮಾಡಬಲ್ಲೆ ಎಂಬುದನ್ನು ಕೂಡ ಸಾಬೀತು ಪಡಿಸಿರುವವರು.ಇವರ ನಿರೂಪಣೆಗೆ ನಿದರ್ಶನಗಳೆಂದರೆ ಬದಾಮಿಯಲ್ಲಿ ಜರುಗಿದ 3ನೇ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮ ನಿರೂಪಿಸಿದ್ದು.ಅಷ್ಟೇ ಅಲ್ಲ ಸಂಯೋಜಕಿಯಾಗಿ ಕೂಡ 2014 ರ ನವ್ಹೆಂಬರನಲ್ಲಿ ತಾಲೂಕಾ ಮಕ್ಕಳ ಸಾಹಿತ್ಯ ಸಮಾಗಮ ಹಾಗೂ ಬಾಲವಿಕಾಸ ಅಕಾಡೆಮಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಾಗಲಕೋಟ ಇವರ ಆಶ್ರಯದಲ್ಲಿ 2 ದಿನಗಳ ಕಾವ್ಯಕಮ್ಮಟ ನಡೆಸಿರುವರು.ಬಾದಾಮಿ ತಾಲೂಕಾ ಅನುದಾನಿತ ಪ್ರೌಢಶಾಲೆಗಳ ನೌಕರರ ಸಹಕಾರಿ ಪತ್ತಿನ ನಿರ್ದೇಶಕಿಯಾಗಿ 1999 ರಿಂದ 2009 ರವರೆಗೆ ಕಾರ್ಯ ನಿರ್ವಹಿಸಿರುವರು.ಬಡ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಇವರು ಅವರ ಮುಂದಿನ ಭವಿಷ್ಯಕ್ಕೆ ಮಾರ್ಗದರ್ಶಕರಾಗಿ ಕೂಡ ಕಾರ್ಯತತ್ಪರರಾಗುವ ಮೂಲಕ ಅನುಕಂಪದ ಅಲೆಯನ್ನು ಹೊಂದಿರುವರು.ತಮ್ಮ ವಿಷಯದ ಜೊತೆಗೆ ಮಕ್ಕಳಲ್ಲಿ ಉತ್ತಮ ಸಂಸ್ಕøತಿ ಮೂಡಲೆಂದು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಉತ್ತಮ ಶಿಕ್ಷಕಿಯಾಗಿ ಕೂಡ ಬದುಕುತ್ತಿರುವರು.ಶಿಕ್ಷಕ ವೃತ್ತಿಗೆ ನನ್ನ ಮೊದಲ ಆದ್ಯತೆ ನಂತರ ಸಾಹಿತ್ಯ,ಉಪನ್ಯಾಸ.ಇತ್ಯಾದಿ ಎನ್ನುವ ಇವರ ವ್ಯಕ್ತಿತ್ವಕ್ಕೆ ಅನೇಕ ಸಂಘಟನೆಗಳು ಜವಾಬ್ದಾರಿ ನೀಡುವ ಮೂಲಕ ಇವರಲ್ಲಿನ ಪ್ರತಿಭೆಗೆ ಸಂಘಟನೆಗೆ ಪ್ರೋತ್ಸಾಹ ನೀಡುತ್ತಿರುವುದು ಕೂಡ ಗಮನಾರ್ಹ.

ಬದಾಮಿ ತಾಲೂಕಾ ಮಕ್ಕಳ ಸಮಾಗಮದ ಅಧ್ಯಕ್ಷತೆ.ಅಷ್ಟೇ ಅಲ್ಲ ಬದಾಮಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರು.ವಚನ ಸಾಹಿತ್ಯ ಪರಿಷತ್ ಅಧ್ಯಕ್ಷರು,ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ.ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಮಹಿಳಾ ಪ್ರತಿನಿಧಿ ಹೀಗೆ ಹತ್ತು ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿರುವ ಇವರು 2012 ರಲ್ಲಿ ‘ಮಕ್ಕಳ ಸಾಹಿತ್ಯ ಸಮಾಗಮದ’ 10 ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಜಾಲಿಹಾಳದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಸಿದ್ದು ಇದಕ್ಕೆ ಸಾಕ್ಷಿ. ಗ್ರಾಮೀಣ ಭಾಗದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವುದು ಕೂಡ ನನ್ನ ಸೌಭಾಗ್ಯ ಎನ್ನುವ ಶಿಕ್ಷಕಿ ಇವರು.

ಅಖಿಲ ಭಾರತ 81 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಕವನ ವಾಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಕವಿಗೋಷ್ಠಿಗಳಲ್ಲಿ ಕವನ ವಾಚಿಸುವ ಮೂಲಕ ಕವಯತ್ರಿಯಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.ಇವರ ಶೈಕ್ಷಣಿಕ ಸೇವೆಗೆ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ 2014 ರಲ್ಲಿ ಸಂದಿದೆ. ಬಸವ ಜನ್ಮಭೂಮಿ ಪ್ರತಿಷ್ಠಾನ, ಬಸವ ಜನ್ಮಸ್ಥಳ,ಬಸವನಬಾಗೇವಾಡಿ ವಿಜಯಪೂರ ಜಿಲ್ಲೆ “ಬಸವ ಭೂಷಣ” ರಾಜ್ಯ ಪ್ರಶಸ್ತಿ-2016 ಕೂಡ ಇವರಿಗೆ ಸಂದಿದೆ.ವಿಜಯಪುರದ ಆಕಾಶವಾಣಿಯಲ್ಲಿ ಇವರ ಚಿಂತನ ಕಾರ್ಯಕ್ರಮ ಪ್ರಸಾರವಾಗಿವೆ.ವಿದ್ಯಾರ್ಥಿಗಳಲ್ಲಿ ನೈತಿಕತೆಯನ್ನು ಕುರಿತ ಇವರ ಬರಹಗಳು ಹೆಚ್ಚು ಪ್ರಚಲಿತವಾಗಿವೆ. ಪರೀಕ್ಷೆಯೆಂದರೆ ಭಯಪಡಬೇಡಿ,.ಫಲಿತಾಂಶದ ಅನುತ್ತೀರ್ಣತೆಗೂ ಕೂಡ ವಿಚಲಿತರಾಗದಿರಿ ಎಂಬ ಸಂದೇಶ ಹೊತ್ತ ಇವರ ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಯುವ ತುಡಿತದ ಭಾವನೆಯನ್ನು ಕುರಿತ ಬರಹಗಳು ಕೂಡ ಇವರ ಬರವಣಿಗೆಯಲ್ಲಿ ಹೊರಹೊಮ್ಮಿದ್ದು ನೈತಿಕ ನೆಲೆಗಟ್ಟಿನ ಕತೆಗಳನ್ನು ಬರೆದಿರುವರು. ಸುರೇಬಾನದಲ್ಲಿ ಗಾಂಧಿಯಾತ್ರೆಯ ಸಮಾರಂಭದಲ್ಲಿ ಪಾಟೀಲ ಪುಟ್ಟಪ್ಪನವರ ಸಮ್ಮುಖದಲ್ಲಿ ಭಾಷಣ ಮಾಡಿದ ಸಂದರ್ಭ ಇವರಿಗೆ ಉತ್ತಮ ವಾಗ್ಮಿ ಬಿರುದು ಸಂದಿದ್ದು ಹಿರಿಯರ ಆಶೀರ್ವಾದ ದೊರಕಿದ್ದು ಮರೆಯಲಾಗದ ಘಟನೆ ಎನ್ನುವ ಇವರು ಬದಾಮಿಯಲ್ಲಿ ನಡೆದಾಡುವ ದೇವರು ಸಿದ್ದೆಶ್ವರ ಶ್ರೀಗಳ ಸಮ್ಮುಖದಲ್ಲಿ ಚಿಂತನ ಮಂಡಿಸಿದ್ದು ಅದನ್ನು ಶ್ರೀಗಳು “ಅಸಖಲಿತ ವಾಣಿ”ಎನ್ನುವ ಮೂಲಕ ಇವರನ್ನು ಆಶೀರ್ವದಿಸಿದ್ದು ಜೀವನದಲ್ಲಿ ಮರೆಯಲಾರದ ಕ್ಷಣ ಇಂತಹ ಮಹಾತ್ಮರ ಸನ್ನಿಧಿಯಲ್ಲಿ ನನ್ನ ನುಡಿಗಳನ್ನು ಆಡುವ ಅವಕಾಶ ಸಿಕ್ಕಿತಲ್ಲ ಎಂಬ ಖುಷಿ ಎಂದೂ ಮರೆಯಲಾಗದು ಎಂದು ವಾಗ್ಮಿಯಾದ ನಂತರದ ದಿನಗಳನ್ನು ನೆನೆಯುವಾಗ ಮೇಲಿನ ಎರಡು ಘಟನೆಗಳನ್ನು ನೆನಪಿಸಿಕೊಳ್ಳುವರು.ಇದು ಇವರಲ್ಲಿ ಮಾತನಾಡಲು ಮತ್ತಷ್ಟು ಸ್ಪೂರ್ತಿ ದೊರಕಿಸಿದೆ ಎಂದೂ ಹೇಳುವರು.

ಇವರನ್ನು ಎಲ್ಲಿಯೇ ಉಪನ್ಯಾಸಕ್ಕೆ ಕರೆಯಲಿ ಅವರು ನೀಡಿದ ವಿಷಯದ ಕುರಿತು ಸಾಕಷ್ಟು ಓದಿಕೊಂಡು ಅರ್ಥವತ್ತಾಗಿ ಮಾತನಾಡುವ ಕಲೆ ಇವರಿಗೆ ಬಂದಿದೆ.ಹೀಗಾಗಿ ನಾಡಿನೆಲ್ಲೆಡೆ ಇವರ ಉಪನ್ಯಾಸಗಳು ಇತ್ತೀಚಿಗೆ ಹೆಚ್ಚು ಹೆಚ್ಚು ಜರುಗುತ್ತಿವೆ.ಆರತಿಗೊಬ್ಬ ಮಗಳು ನಿವೇದಿತಾ, ಕೀರುತಿಗೊಬ್ಬ ಮಗ.ನವನೀತ ಹೀಗೆ ಇಬ್ಬರು ಮಕ್ಕಳೂ ಕೂಡ ಸಾಪ್ಟವೇರ್ ಇಂಜನೀಯರ ಆಗಿ ಉದ್ಯೋಗದಲ್ಲಿದ್ದು ಪತಿಯ ಸಹಕಾರ ನನಗೆ ಸ್ಪೂರ್ತಿ ಎಂದು ಹೆಮ್ಮೆಯಿಂದ ಹೇಳುವ ಜಯಶ್ರೀ ಈಗ ತಮ್ಮ ಎರಡು ಕವನ ಸಂಕಲನಗಳನ್ನು ಹೊರತರುವ ಪ್ರಯತ್ನದಲ್ಲಿದ್ದಾರೆ.ನಾಡಿನೆಲ್ಲೆಡೆ ಇವರ ವ್ಯಕ್ತಿತ್ವಕ್ಕೆ ಹತ್ತು ಹಲವು ಪ್ರಶಸ್ತಿ ಮಾನ ಸಮ್ಮಾನಗಳು ಸಂದಿದ್ದು ದೇವರು ಇವರಲ್ಲಿನ ಸಾಹಿತ್ಯವನ್ನು ಹೆಚ್ಚು ಪ್ರಚುರಪಡಿಸುವಂತಾಗಲೆಂದು ಆಶಿಸುವೆ.

-ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
9449518400

Comments