UK Suddi
The news is by your side.

ರೈತ ದಿನಾಚರಣೆ ನಿಮಗೆಷ್ಟು ಗೊತ್ತು?.

ಲೇಖನ:ಸಹದೇವ ಯರಗೊಪ್ಪ, ಉಪ ಕೃಷಿ ನಿರ್ದೇಶಕರು,ಗದಗ.

ಗದ್ದೆ ಕೆಸರನು ಕುಡಿದು ಕಾಡು ಮುಳ್ಳನು ಕಡಿದು,
ಮುಂಜಾನೆಯಿಂದ ಸಂಜೆಯವರೆಗೆ ದುಡಿದುಡಿದು
ಚಳಿಯೋ ಮಳೆಯೋ ಬಿಸಿಲೋ ಬೇಗೆಯಲ್ಲವ ಸಹಿಸಿ,
ಬೆವರು ಕಂಬನಿ ರಕುತವ ಸುರಿಸಿ, ನೆಲವನು ತಣಿಸಿ,
ಕೆಸರಿನಿಂದ ಅಮೃತಕಲಶವನೆತ್ತಿ ಕೊಡುತ್ತಿರುವವ ರೈತ……..

ಹಸಿದು ಉನ್ನುವುದು ಪ್ರಕೃತಿ, ಹಸಿಯದೇ ಉನ್ನುವುದು ವಿಕೃತಿ ತಾನು ಹಸಿದರೂ ಇತರರಿಗೆ ಉಣಬಡಿಸುವವನು ರೈತ. ಇಂತಹ ಶ್ರಮಜೀವಿ ಈ ನಾಡಿನ ಸ್ವಾಭಿಮಾನಿ. ಇಂತಹ ರೈತನ ದಿನಾಚರಣೆ ಎಷ್ಟೋ ಜನರಿಗೆ ಇನ್ನೂ ಗೊತ್ತೇ ಇಲ್ಲ. ಇದು ತುಂಬಾ ವಿಪರ್ಯಾಸ. ಅಂದರೆ, ಅನ್ನ ಕೊಡುವ ರೈತನನ್ನೇ ಮರೆತು ಜೀವನ ಸಾಗಿಸಿದರೆ ಇನ್ನೇಲ್ಲಿದೆ ರೈತನಿಗೆ ಗೌರವ. ರೈತ ದಿನಾಚರಣೆ ಇತಿಹಾಸ ಮತ್ತು ಹಿನ್ನೇಲೆ ತಿಳಿದು ಆತನ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ವಂದಿಸಬೇಕಿದೆ. “ನೀನು ಇವತ್ತು ಊಟ ಮಾಡಿದ್ದರೆ ರೈತನನ್ನು ನೆನೆ” ಎಂಬ ನಾಣ್ಣುಡಿಯಂತೆ ಇಂದು ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿತೆಯಿಂದ ನಿದ್ದೆ ಮಾಡುತ್ತಿದ್ದರೆ, ಇದರ ಹಿಂದೆ ರೈತನ ಶ್ರಮ ಮತ್ತು ಬೆವರೇ ಮುಖ್ಯ ಕಾರಣ. ಇಂತಹ ರೈತನಿಗೆ ನಾವೆಲ್ಲರು ಕೃತಜ್ಞರಾಗಿರಬೇಕೆಂಬುದು ಮೇಲಿನ ಸಾಲಿನ ಅರ್ಥ. ನಮಗೆಲ್ಲರಿಗೂ ಡಾಕ್ಟರ್‍ಗಳು, ಲಾಯರ್‍ಗಳು, ಇಂಜನಿಯರ್‍ಗಳೂ ಮಾತ್ರ ಬೇಕಾಗುತ್ತಾರೆ. ಆದರೆ, ದಿನ ಒಂದಕ್ಕೆ ಮೂರು ಹೊತ್ತು ತುತ್ತು ಅನ್ನವನ್ನು ನೀಡಿದ ರೈತನ ನೆನಪು ಮಾತ್ರ ಬರುವುದಿಲ್ಲ. ಇಂತಹ ರೈತನನ್ನೇ ನಾವಿಂದು ಕಡೆಗಣಿಸಿದ್ದೇವೆ. ಭಾರತದ ಮೊದಲ ಪ್ರಧಾನ ಮಂತ್ರಿ ಆಗಿದ್ದ ಜವಾಹರಲಾಲ ನೆಹರುರವರು ಹೇಳಿದಂತೆ “ಪ್ರಕೃತಿಯು ಕೃಷಿಯೊಂದಿಗೆ ಜೂಜಾಟ ಆಡುತ್ತಿದೆ”. ಹಲವಾರು ಪ್ರದೇಶಗಳಲ್ಲಿ ಅತಿವೃಷ್ಠಿ ಅಥವಾ ಅನಾವೃಷ್ಠಿ, ಇಲ್ಲವೇ ರೋಗ-ಕೀಟಗಳ ಬಾಧೆ, ಹೀಗೆ ಅನೇಕ ಕಾರಣಗಳಿಂದ ರೈತರು ನಿರಂತರವಾಗಿ ನಷ್ಟಗಳನ್ನು ಅನುಭವಿಸುತ್ತಾ ಸಾಲಗಾರರಾಗಿದ್ದಾರೆ. ಇಷ್ಟೆಲ್ಲ ಸವಾಲುಗಳ ನಡುವೆಯೂ ಒಂದೊಮ್ಮೆ ಒಳ್ಳೆಯ ಫಸಲು ಬಂದಾಗಲೂ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ನಷ್ಟವಾಗಿ ಬೆಳೆಗಳನ್ನು ಬೆಳೆಯಲು ಸುರಿದ ಬಂಡವಾಳವು ಮರಳಿ ಬಾರÀದಂತಾಗಿದೆ. ಕೆಲವರಂತೂ ಸಾಲದ ಬಾಧೆ ತಾಳದೆ ನೇಣಿಗೆ ಕೊರಳೊಡ್ಡುತ್ತಿದ್ದಾರೆ. ಇದು ಅತ್ಯಂತ ಚಿಂತಾದಾಯಕ ಸ್ಥಿತಿ. ಹಲವಾರು ಸಂಕಷ್ಟಗಳ ನಡುವೆಯೂ ನಮ್ಮ ದೇಶದಲ್ಲಿ ಹಸಿವೆಯಿಂದ ಬಳಲುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಈ ನೆಲದ ಮಣ್ಣಿನ ಮಗ. ರೈತನ ಶ್ರಮ, ಆತನ ಬೆವರ ಹನಿ, ಮಳೆ ಇರಲಿ-ಬಿಡಲಿ-ಹೆಚ್ಚಾಗಲಿ-ಕಡಿಮೆಯಾಗಲಿ ಒಂದು ಒಳ್ಳೆಯ ಬೆಳೆಯನ್ನು ಪಡೆಯುವ ಆಸೆಯ ನಿರೀಕ್ಷೆಯಿಂದ ಹೊಲವ ಬಿತ್ತುತ್ತಾನೆ. ಸಾಕಷ್ಟು ಪ್ರಯತ್ನ ಪಟ್ಟು ಮಳೆ ಚಳಿ ಬಿಸಿಲುಗಳೆನ್ನದೆ, ಹಗಲು-ರಾತ್ರಿ ಪರಿವೇ ಇಲ್ಲದೇ, ಶ್ರಮ ವಹಿಸಿ ವ್ಯವಸಾಯ ಮಾಡುತ್ತಾನೆ. ಈ ವ್ಯವಸಾಯವೇ ನಮ್ಮ ಅನ್ನದ ಬಟ್ಟಲನ್ನು ತುಂಬಿಸುತ್ತದೆ. ಇಂತಹ ರೈತರ ಶ್ರಮಕ್ಕೆ ನಾವಿಂದು ಬೆಲೆ ಕೊಡಬೇಕಾಗಿದೆ, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ಸರ್ಕಾರದ ಮಟ್ಟದಲ್ಲಿ ಕೃಷಿಗೆ ಹೆಚ್ಚು ಒತ್ತು ಸಿಗಬೇಕಾದ ವ್ಯವಸ್ಥಿತವಾದ ಕೃಷಿ ಮಾಹಿತಿ ವಿನಿಮಯ ವ್ಯವಸ್ಥೆ, ವ್ಯವಸ್ಥಿತ ಮಾರುಕಟ್ಟೆಗಳ ಲಭ್ಯತೆ ಮತ್ತು ಸ್ಥಿರವಾದ ಬೆಲೆಯನ್ನು ದೊರಕಿಸಿಕೊಡುವ ಪ್ರಮಾಣಿಕ ಪ್ರಯತ್ನ ಸರ್ಕಾರ ಮತ್ತು ಉನ್ನತ ಮಟ್ಟದ ಆಡಳಿತ ವರ್ಗದಿಂದ ಆಗಬೇಕಾಗಿದೆ.

ಒಕ್ಕಲನು ನಲುಗಿಸದೇ ಲೆಕ್ಕವನು ಸಿಕ್ಕಿಸದೇ,
ಕಕ್ಕುಲತೆಯಿಂದ ನಡೆಸುವ ಅರಸು ತಾ
ಚೆಕ್ಕಂದವಿರುವ – ಸರ್ವಜ್

ರೈತ ಸಂಕಷ್ಟದಲ್ಲಿದ್ದಾಗ ಆತನಿಗೆ ಸಹಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾದಾಗ ಮಾತ್ರ ರೈತ ಸಧೃಡವಾಗಿ ಬದುಕಲು ಸಾಧ್ಯ. ಇಲ್ಲದೇ ಹೊದಲ್ಲಿ ಆ ನಾಡಿನ ಆರ್ಥಿಕ ಬೆಳವಣಿಗೆ ಆರೋಗ್ಯಕರವಾಗಿರುವುದಿಲ್ಲ. ರೈತ ಸಮಸ್ಯೆಗಳ ಸುಳಿಗೆ ಸಿಕ್ಕು ಹಳ್ಳಿಗಳಿಗೆ ಬೆನ್ನು ಮಾಡಿ ಪಟ್ಟಣಗಳತ್ತ ಮುಖ ಮಾಡಿದರೆ, ಪ್ರತಿಯೊಬ್ಬರು ಅನ್ನದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ದೇಶ ಹಳ್ಳಿಗಳ ದೇಶ. ರೈತ ಉದ್ಧಾರವಾದರೆ, ಹಳ್ಳಿಗಳು ಉದ್ಧಾರವಾದಂತೆ. ಹಳ್ಳಿಗಳು ಉದ್ಧಾರವಾದರೆ, ಇಡೀ ದೇಶವೇ ಉದ್ಧಾರವಾದಂತೆ ಎಂಬುದನ್ನು ಎಲ್ಲರೂ ಮನಗಾಣಬೇಕಾಗಿದೆ.
ನಮ್ಮ ಶ್ರಮಜೀವಿ ರೈತರ ಪಾತ್ರದ ಗೌರವಾರ್ಥ ಭಾರತದ ಮಾಜಿ ಪ್ರಧಾನಿ ಅಪಾರ ರೈತಪರ ಕಳಕಳಿಯನ್ನು ಹೊಂದಿದ ಗೌರವಾನ್ವಿತ ಶ್ರೀ ಚೌದರಿ ಚರಣ್ ಸಿಂಗ್‍ರ ಜನ್ಮದಿನವಾದ ಡಿಸೆಂಬರ, 23 ನೇ ತಾರೀಖಿನಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಶ್ರೀ ಚೌದರಿ ಚರಣ್ ಸಿಂಗ್‍ರವರು ರೈತ ಕುಟುಂಬದಿಂದ ಬಂದವರಾಗಿದ್ದು, ಅತ್ಯಂತ ಸರಳ ಜೀವಿಗಳು, ಸೂಕ್ಷ್ಮ ಸಂವೇದಿಗಳು. ರೈತರ ಮತ್ತು ಕೂಲಿ ಕಾರ್ಮಿಕರ ಮೇಲೆ ತೀವ್ರತರ ಕಳಕಳಿಯನ್ನು ಹೊಂದಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿ, ಭಾರತದ ಪ್ರಧಾನಿ ಹಾಗೂ ಉಪ ಪ್ರಧಾನಿಯಾದಾಗ ಬಜೆಟ್‍ಗಳನ್ನು ಕೃಷಿಕರ ಪರವಾಗಿರುವಂತೆ ನೋಡಿಕೊಂಡರು. ರೈತರ ಪರವಾಗಿ ಹಲವಾರು ನೀತಿಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು.

ಇವರು ಜುಲೈ 28, 1979 ರಿಂದ ಜನೇವರಿ 14, 1980 ರವರೆಗೆ ಅಲ್ಪಾವಧಿಗೆ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. 1979 ನೇ ಸಾಲಿನ ಬಜೇಟ್‍ನ್ನು ಮಂಡಿಸಿದ ಇವರು ರೈತರ ಅಗತ್ಯತೆಗಳನ್ನು ಪೂರೈಸಲು ಬೇಕಾದ ಎಲ್ಲ ಅಂಶಗಳನ್ನು ಬಜೆಟ್‍ನಲ್ಲಿ ಸೇರಿಸಿದ್ದರು. ಇದರಲ್ಲಿ ರೈತ ಪರವಾದ ಹಲವಾರು ನೀತಿಗಳನ್ನು ಪ್ರಕಟಿಸಿದ್ದರು. ಇವರ ಪ್ರಯತ್ನಗಳಿಂದಾಗಿ ಎಲ್ಲ ಸಣ್ಣ ಮತ್ತು ಬಡ ರೈತರುಗಳನ್ನು ದೊಡ್ಡ ಭೂ ಮಾಲಿಕರು ಮತ್ತು ಹಣದಾಳದಾರರ ವಿರುದ್ಧ ಒಗ್ಗೂಡಿಸಲು ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದರು. ಇವರು ಲೋಕಸಭೆಯಲ್ಲಿ ಪರಿಚಯಿಸಿದ್ದ ಕೃಷಿ ಉತ್ಪಾದನೆ ಮಸೂದೆಯು ಅತ್ಯಂತ ಪ್ರಸಿದ್ಧ ಮಾರುಕಟ್ಟೆ ಮಸೂದೆಯಾಗಿತ್ತು. ಈ ಮಸೂದೆಯನ್ನು ಹಣವುಳ್ಳ ವಿತರಕರು ಮತ್ತು ಭೂ ಮಾಲಿಕರು ರೈತರನ್ನು ಶೋಷಣೆ ಮಾಡುವುದರಿಂದ ತಡೆಯುವ ಉದ್ದೇಶದಿಂದ ಹೊರತರಲಾಗಿತ್ತು. ಇವರು ಜಮೀನ್ದಾರಿ ನಿರ್ಮೂಲನಾ ನೀತಿ ಹೊರತರುವಲ್ಲಿ ಶ್ರಮಿಸಿ ಯಶಸ್ವಿಯಾಗಿದ್ದರು. ಇದರಿಂದ ರೈತರ ಮೇಲಿನ ತಮ್ಮ ಕಳಕಳಿ ಅತ್ಯಂತ ಕಾಳಜಿಯುತವಾದದ್ದೆಂದು ತೋರಿಸಿಕೊಟ್ಟಿದ್ದರು.
ಇವರು ಉತ್ತಮ ವಾಗ್ಮಿಗಳಲ್ಲದೆ, ಒಳ್ಳೆಯ ಬರಹಗಾರರೂ ಆಗಿದ್ದರು. ಬರಹಗಾರರಾಗಿ ರೈತರ, ಬಡವರ ಸಮಸ್ಯೆಗಳ ಕುರಿತ ಆಲೋಚನೆಗಳನ್ನು ಚಿತ್ರಿಸುವ ಲೇಖನಗಳನ್ನು ಮತ್ತು ಪುಸ್ತಕಗಳನ್ನು ರಚಿಸಿದ್ದಲ್ಲದೆ, ಎಲ್ಲ ಸಮಸ್ಯೆಗಳಿಗೆ ಸಾಧ್ಯವಿರುವಂತಹ ವಿವಿಧ ಪರಿಹಾರಗಳನ್ನು ಸಹ ಕೊಡುತ್ತಿದ್ದರು.

ಇವರು ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿಯವರ ಘೋಷಣೆಯಾದ “ಜೈ ಜವಾನ್ ಜೈ ಕಿಸಾನ್” ರೈತರ ಕ್ಷೇಮಕ್ಕಾಗಿ ಸದಾ ಶ್ರಮಿಸುತ್ತಿದ್ದರು. ಹಳ್ಳಿಯ ರೈತಾಪಿ ಕುಟುಂಬದಲ್ಲಿ ಜನಿಸಿದ್ದರಿಂದ ಅಲ್ಲಿನ ಜನರ ಪರಿಸ್ಥಿತಿ ಮತ್ತು ಸಮಸ್ಯೆಗಳ ಆಳವಾದ ಅರಿವನ್ನು ಹೊಂದಿದ್ದರಿಂದ ಹಳ್ಳಿಗರು, ಹಿಂದುಳಿದವರ ಮತ್ತು ರೈತರ ಅಭಿವೃದ್ಧಿಗಾಗಿ ಸದಾ ಕಾರ್ಯಪ್ರವೃತ್ತರಾಗಿರುತ್ತಿದ್ದರು. ಶೇ. 70 ಕ್ಕಿಂತ ಹೆಚ್ಚು ಜನ ಹಳ್ಳಿಯವರಿದ್ದು, ಅವರ ಕಸುಬು ವ್ಯವಸಾಯವಾಗಿರುತ್ತದೆ. ರೈತರು ನಮ್ಮ ದೇಶದ ಬೆನ್ನೆಲುಬು ಹಾಗೂ ಹಳ್ಳಿಗಳ ಅಭಿವೃದ್ಧಿಯಿಂದಲೇ ದೇಶದ ಏಳಿಗೆ ಸಾಧ್ಯವೆಂದು ದೃಢವಾಗಿ ನಂಬಿದ್ದರು. ಹೀಗಾಗಿ ಇವರನ್ನು ರೈತ ಸಮುದಾಯಕ್ಕೆ ಸೇರಿದ ಮಣ್ಣಿನ ಮಗನನ್ನಾಗಿ ಗುರುತಿಸಲ್ಪಡಲಾಗುತ್ತಿದೆ. ಮೇ 29, 1987 ನೇ ದಿವಸದಂದು ಕೊನೆಯುಸಿರೆಳೆದರು. ಇವರ ಸಮಾಧಿ ಸ್ಥಳವನ್ನು “ಕಿಸಾನ್ ಘಾಟ್” ಎಂದು ನಾಮಕರಣ ಮಾಡಿ ರೈತ ಪರ ಕಾಳಜಿ ಹೊಂದಿದ ಇವರಿಗೆ ಗೌರವ ಸಲ್ಲಿಸಲಾಗಿದೆ.

ಶ್ರಮಜೀವಿ ರೈತರ ಗೌರವಾರ್ಥ ಮತ್ತು ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ರೈತರ ಪಾತ್ರದ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ 23 ರಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಉತ್ತರಪ್ರದೇಶದಲ್ಲಿ ಈ ದಿನದಂದು ಸಾರ್ವಜನಿಕ ರಜೆ ಇರುತ್ತದೆ. ಈ ದಿನದಂದು ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿಯೂ ಕೃಷಿ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಸಂಶೋಧನಾ ಕೇಂದ್ರಗಳಲ್ಲೆಡೆಯೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇಂದು ರೈತಪರ ಹೋರಾಟಗಳಲ್ಲಿ ಮುಂದಾಳತ್ವ ವಹಿಸಿದ ರೈತರ ಯಶೋಭಿವೃದ್ಧಿಗೆ ಶ್ರಮಿಸಿದ ನಾಯಕರಿಗೆ ಗೌರವ ಸಲ್ಲಿಸಲಾಗುತ್ತದೆ. ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು ಚರ್ಚಾಕೂಟ, ವಸ್ತುಪ್ರದರ್ಶನಗಳನ್ನು, ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಾರೆ. ರೈತರ ಮತ್ತು ಕೃಷಿಯಲ್ಲಿ ಸ್ವಾತಂತ್ರ್ಯದ ನಂತರದಿಂದ ಇಲ್ಲಿಯವರಿಗೆ ನಡೆದು ಬಂದ ಹಾದಿ, ಮುಂದೆ ಸಾಗಬೇಕಾದ ದಾರಿಯ ರೂಪರೇಷೆಗಳು, ರೈತರ ಸಮಸ್ಯೆಗಳ ಪರಿಹಾರೋಪಾಯಗಳು ಮುಂತಾದ ವಿಚಾರಗಳ ಚರ್ಚೆಯನ್ನು ವಿಜ್ಞಾನಿಗಳು, ವಿಸ್ತರಣಾಧಿಕಾರಿಗಳು ಮತ್ತು ರೈತ ನಾಯಕರುಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ.
ಕೃಷಿ ಮತ್ತು ರೈತ ಎರಡೂ ಅತ್ಯಂತ ಪ್ರಮುಖವಾಗಿದ್ದರೂ ಅಭಿವೃದ್ಧಿ ಪಥದಲ್ಲಿ ಇವೆರಡೂ ಹೆಚ್ಚು ನಿರ್ಲಕ್ಷಕ್ಕೆ ಒಳಗಾಗಿವೆ ಎಂದು ಹೇಳಬಹುದು. ಕೃಷಿಯ ಬೆಳೆವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ನೀತಿಗಳನ್ನು ರೂಪಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಇವು ಇತರೆ ಕ್ಷೇತ್ರಗಳಿಗೆ ಹೋಲಿಸಿದಲ್ಲಿ ತೀವ್ರ ಕಡಿಮೆ ಎನ್ನಬಹುದು ಅಥವಾ ನಮ್ಮ ವ್ಯವಸ್ಥೆಯಲ್ಲಿನ ದೋಷಗಳಿಂದ ಅವು ರೈತರಿಗೆ ತಲುಪದೆ ಅಭಿವೃದ್ಧಿ ಪಥದಲ್ಲಿ ಕೃಷಿ ಇನ್ನೂ ಎಗುತ್ತಲೇ ಸಾಗಿದೆ ಎನ್ನಬಹುದು. ಇದಕ್ಕೆ ಇನ್ನೂ ಹಲವಾರು ಕಾರಣಗಳನ್ನು ಹೆಸರಿಸಬಹುದು.
“ಹಸಿರು ಕ್ರಾಂತಿ” ಯಿಂದಾಗಿ ದೇಶದ ಆಹಾರೋತ್ಪಾದನೆ ಹೆಚ್ಚಾಗಿದ್ದಂತು ನಿಜ. ಆದರೆ, ಹಸಿರು ಕ್ರಾಂತಿಯ ಜೊತೆ ಜೊತೆಗೆ ಬಂದ ರಾಸಾಯನಿಕ ಗೊಬ್ಬರಗಳು ಮತ್ತು ಪೀಡೆನಾಶಕಗಳು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಗಳಿಗೆ ಕಾರಣಗಳಾಗುತ್ತವೆ ಎಂಬುದನ್ನು ಸರಕಾರಗಳು ಮತ್ತು ಇಲಾಖೆಗಳು ಮುಂದಾಲೋಚಿಸಿರಲಿಲ್ಲ. ಹಸಿರು ಕ್ರಾಂತಿಯ ಪರಿಣಾಮದಿಂದ ಭೂಮಿಯ ಒಡಲು ವಿಷದಿಂದ ತುಂಬಿದೆ. ಭೂಮಿಯಲ್ಲಿ ಸಾವಯವದ ಅಂಶ ತೀವ್ರ ಕಡಿಮೆಯಾಗಿ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದೆ. ವಾಸ್ತವವಾಗಿ ಭೂಮಿಯು ನಿರ್ಜೀವವಾಗುತ್ತಿದೆ. ಮಣ್ಣಿನ ತೇವಾಂಶವನ್ನು ಹಿಡಿದಿಡುವ ಶಕ್ತಿ ಕಡಿಮೆಯಾಗಿ ಬೆಳೆಗಳಿಗೆ ನೀರಿನ ಅಭಾವವುಂಟಾಗಿ ನಿರೀಕ್ಷಿತ ಇಳುವರಿಯನ್ನು ಪಡೆಯಲಾಗುತ್ತಿಲ್ಲ. ಎಷ್ಟೋ ಬಾರಿ ಖುರ್ಚು ಮಾಡಿದ ಬಂಡವಾಳವೂ ಸಹಿತ ಮರಳದಂತಾಗಿದೆ. ಇದರಿಂದಾಗಿ ನಮ್ಮ ರೈತರು ತೀವ್ರ ಸಂಕಷ್ಟಗಳಿಗೆ ಈಡಾಗುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಗಳು, ಕೈಗಾರಿಕೆಗಳು, ಶಹರಗಳು, ವಿಮಾನ ನಿಲ್ದಾಣಗಳು ಮುಂತಾದವುಗಳ ನಿರ್ಮಾಣಕ್ಕಾಗಿ ಕೃಷಿ ಭೂಮಿಯನ್ನು ಉಪಯೋಗಿಸಿಕೊಳ್ಳುವುದರಿಂದ ದಿನೇ ದಿನೇ ಕೃಷಿ ಭೂಮಿ ಕ್ಷೀಣಿಸುತ್ತಿದೆ. ಅಭಿವೃದ್ಧಿಯ ಈ ನಾಗಾಲೋಟದ ಕಾರಣ, ಕಾಡುಗಳು ಸಹ ನಾಶವಾಗುತ್ತಿದ್ದು, ಪರಿಸರದಲ್ಲಿ ಅತಿ ಹೆಚ್ಚಿನ ಅಸಮತೋಲನ ಕಂಡು ಬರುತ್ತಿದೆ. ಇದರಿಂದ ಬರ, ಅಕಾಲಿಕ ಮಳೆ ಕೆಲವೆÀಡೆ ಪ್ರವಾಹದಂತಹ ಪರಿಸ್ಥಿತಿಗಳು ಎದುರಾಗುತ್ತ್ತಿವೆ. ಇನ್ನು ತಾಪಮಾನವು ಸಹ ಹೆಚ್ಚುತ್ತಿದ್ದು, ತೇವಾಂಶದ ಕೊರತೆಯ ಜೊತೆಗೆ ಹೆಚ್ಚಿದ ಉಷ್ಣಾಂಶದಿಂದ ಕೆಲವೊಂದು ಬೆಳೆಗಳನ್ನು ಬೆಳೆಯಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದು ಜಾಗತಿಕ ತಾಪಮಾನದ ಪರಿಣಾಮ ಎನ್ನಬಹುದು.
ಒಟ್ಟಾರೆ ಕೃಷಿ ಮತ್ತು ರೈತ ಎಲ್ಲ ಕಡೆಯಿಂದಲೂ ಪರೀಕ್ಷೆಗೆ ಒಳಪಡಲಾಗುತ್ತಿದ್ದು, ಒಂದು ಬೆಳೆಯನ್ನು ಬೆಳೆಯಲು ಹಲವಾರು ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಇದೆ. ಒಟ್ಟಾರೆ ಭಾರತದ ಕೃಷಿ ಸ್ಥಿತಿಯು ಗೊಂದಲಮಯ ಸ್ಥಿತಿಯಲ್ಲಿದೆ. ಇಲ್ಲಿಂದ ಮುಂದಕ್ಕೆ ಇಡಬೇಕಾದ ಹೆಜ್ಜೆಯನ್ನು ನಾವಿನ್ನು ಮುಂದಾಲೋಚನೆಯಿಂದ, ವಿವೇಕತನದಿಂದ ಮತ್ತು ಅತ್ಯಂತ ಜಾಗರೂಕತೆಯಿಂದ ಇಡಬೇಕಾಗಿದೆ.

ನಮ್ಮ ದೇಶದ ಮಟ್ಟಿಗೆ ಕೃಷಿಯು ಕೇವಲ ಆಹಾರೋತ್ಪಾದನೆಯ ಕಾರ್ಖಾನೆಯಾಗಿರದೆ, ಅದೊಂದು ಬದುಕಿನ ಭಾಗ ಮತ್ತು ಜೀವ ವಿಧಾನವಾಗಬೇಕಿದೆ. ಸ್ವಾವಲಂಬಿ ಬದುಕಿನ ಮಾರ್ಗವಾಗಬೇಕಾಗಿದೆ. ಆದರೆ, ಆಧುನಿಕ ದಿನಗಳಲ್ಲಿ ಕೃಷಿಯು ಅಸ್ಥಿರವಾಗಿದೆ ಮತ್ತು ಎಲ್ಲದಕ್ಕೂ ಇತರರನ್ನು ಅವಲಂಬಿಸಿರುವ ಕೃಷಿಯಾಗಿದೆ. ನಾವಿನ್ನು ಬದಲಾಗಬೇಕಿದೆ. ರೈತರು ವೈಜ್ಞಾನಿಕ ತಿಳುವಳಿಕೆಯಿಂದ ಹೊಸ ತಂತ್ರಜ್ಞಾನಗಳ ಜೊತೆಗೆ ಸುಸ್ಥಿರ ಮತ್ತು ಸ್ವಾವಲಂಬಿ ಕೃಷಿ ವಿಧಾನಗಳಾದ ಸಾವಯವ ಕೃಷಿಯನ್ನು ಸಾಧ್ಯವಾದಷ್ಟು ಒಳಸುರಿಗಳನ್ನು [ರಸಾಯನಿಕ ಗೊಬ್ಬರ ಮತ್ತು ಪೀಡೆನಾಶಕ] ಗಳನ್ನು ನಮ್ಮಲ್ಲಿಯೇ ಉತ್ಪಾದಿಸಿ ಬಳಸುವತ್ತ ಚಿತ್ತ ಹರಿಸಬೇಕಿದೆ. ಜೊತೆಗೆ ಬೆಳೆ ವೈವಿಧ್ಯತೆ ಕಾಪಾಡಿಕೊಳ್ಳುವುದು ಕೃಷಿಯ ಪ್ರಮುಖ ಅಂಗವಾಗಬೇಕಿದೆ. ಮಳೆ ನೀರನ್ನು ಹಿಡಿದಿಟ್ಟು ಸಂಧಿಗ್ದ ಹಂತಗಳಲ್ಲಿ ಯಶಸ್ವಿಯಾಗಿ ಬಳಸಿಕೊಳ್ಳುವ ಪದ್ಧತಿಗಳನ್ನು ಅನುಸರಿಸಬೇಕಿದೆ. ರೈತನ ಮಾಲುಗಳಿಗೆ ಮುಂಚಿತವಾಗಿಯೇ ಬೆಲೆ ಘೋಷಣೆ ಮಾಡಬೇಕಿದೆ. ಸ್ವತಃ ರೈತರೇ ಮಾರುಕಟ್ಟೆಯ ಮಾಲೀಕರಾಗುವುದರ ಕಡೆಗೆ ಹೆಚ್ಚು ಗಮನ ಕೊಡಬೇಕಾಗಿದೆ. ಒಟ್ಟಾರೆಯಾಗಿ ಶೂನ್ಯ ಬಂಡವಾಳ ಮತ್ತು ಸಾವಯವ ಕೃಷಿ ಸಧ್ಯದ ಅವಶ್ಯಕತೆಯಾದಾಗ ಮಾತ್ರ ಸುಸ್ಥಿರ ಅಭಿವೃದ್ಧಿಯನ್ನು ಕಾಣಲು ಸಾಧ್ಯ.
ಇನ್ನೊಂದು ಕಡೆ ವಿಶ್ವ ವ್ಯಾಪಾರ ಸಂಸ್ಥೆಯ ಒಪ್ಪಂದಗಳ ಪ್ರಕಾರ ಮುಕ್ತ ವ್ಯಾಪಾರದ ದೃಷ್ಠಿಯಿಂದ ಆಮದು ಮತ್ತು ರಪ್ತುಗಳಿಗೆ ಅನುಕೂಲವಾದರೂ ಕೆಲವೊಮ್ಮೆ ಒತ್ತಾಯವಾಗಿ ಆಮದು ಮಾಡಿಕೊಳ್ಳುವಂತಹ ಪರಿಸ್ಥಿತಿಗಳಿಂದಾಗಿ ಕೃಷಿ ಉತ್ಪನ್ನಗಳ ಬೆಲೆಗಳು ಹಿಡಿತಕ್ಕೆ ಸಿಗದೆ ವಿಪರಿತ ಏರಿಳಿತಗಳಿಂದಾಗಿ ರೈತರಿಗೆ ಸರಿಯಾದ ಬೆಲೆ ಸಿಗದೇ ನಷ್ಟಗಳನ್ನು ಅನುಭವಿಸುತ್ತಿದ್ದಾರೆ.

Comments