ದೇವರ ಸ್ವರ್ಗಾರೋಹಣ.
ಬಿಕ್ಕಳಿಸುತ್ತಿದ್ದೇನೆ ನಾನೂ..
ಕಾಣದ ದೇವರ ನಾಡಿಗೆ
ಕಾಣುವ ದೇವರ ನಡಿಗೆ ಅನಿವಾರ್ಯವೇತಕೆ….?
ಪಾಪವಳಿವ ಲೋಕಾಧಿಪತಿಗೆ
ಮೃತ್ಯುದೇವಿಯ ನಿಷ್ಕರುಣ ಪ್ರಸಾದವೇಕೆ?
ಬಿಕ್ಕಳಿಸುತ್ತಿದ್ದೇನೆ ನಾನೂ..
ವರ್ಷಾರಂಭದ ಹುಣ್ಣಿಮೆಗೆ
ಪೂರ್ಣಚಂದ್ರನವಸಾನ.
ನಡೆದಾಡುವ ನಿತ್ಯಸೂರ್ಯನ ಪೂರ್ಣಗ್ರಹಣದ ಮನಕಂಪನ
ಅನಾಥತೆಯ ಮೂಕರೋಧನ.
ಬಿಕ್ಕಳಿಸುತ್ತಿದ್ದೇನೆ ನಾನೂ..
ಕೆಂಪಾಗಿವೆ ಶಿಷ್ಯಕೋಟಿಯ ಕಣ್ಣಾಲಿಗಳು…
ಕಣ್ಣೊರೆಸುವ ಕೈಗಳಿಲ್ಲದೇ ಮೂಕವಾಗಿವೆ ದೇವರಮಕ್ಕಳು
ಕಡಲಾಗಿ ಹರಿಯುತಿದೆ ಒಡಲಬೆಂಕಿ…..
ಧ್ಯಾನಸ್ಥ ಮಹಾಮೌನಿಯ ಮುಂದೆ.
ಬಿಕ್ಕಳಿಸುತ್ತಿದ್ದೇನೆ ನಾನೂ…
ಗೋಶಾಲೆಯ ದೇವಮಕ್ಕಳೆಲ್ಲ ಹಸಿವ ಕೊಂದು ನಿಂತಿವೆ ಜವರಾಯನ ಪ್ರತಿಭಟನೆಗಾಗಿ..
ಕರುಳಕುಡಿಗಳೆಲ್ಲ ಬಾಯಾರಿ
ಬೆಂದು, ಗೋಗರೆಯುತ
ರೆಪ್ಪೆಯಲುಗಿಸದೇ ನಿಂದಿವೆ
ಕರುಣಾಳುವಿನ ಕರುಣೆಯ ಕಿರುನೋಟಕ್ಕಾಗಿ…
ಬಿಕ್ಕಳಿಸುತ್ತಿದ್ದೇನೆ ನಾನೂ..
ಭರತಖಂಡದ ಮಹಾಬೆಳಕು
ಪ್ರಜ್ವಲಿಸಿ ಶಾಂತವಾಗಿದೆ ಇಂದು ಲೋಕಜಂಗಮ ಜೋಳಿಗೆಯು
ಸದ್ದಿಲ್ಲದೇ ಬರಿದಾಗುತಿದೆ
ಸಾವಿರದ ಸಾಧನೆಯ ಸೂರ್ಯ
ಮೋಡದ ಮರೆಗೆ ಸರಿಯುತಿದೆ
ಮಮತೆಯ ಗಣಿಯ ಕೆನೆಯು
ನೆನೆನೆನೆದು ಹೋಗುತಿದೆ ಬಿಸಿಯುಸಿರ ಕಣ್ಣೀರಿನಲಿ….
ಬಿಕ್ಕಳಿಸುತ್ತಿದ್ದೇನೆ ನಾನೂ…
ದೀನದಲಿತರ ದಾರಿದೀಪವು ಧೂಪವಾಗುತಿದೆ… ಇಂದು,
ಕಾಲನ ಕಠೋರ ಕರೆಗೆ
ಶರಣಸಂಸ್ಕೃತಿಯ ಬ್ರಹ್ಮಕಮಲ ಕಂಪಿಸಿ
ಜಗವು ಜಡವಾಗಿ ಬಡವಾಗುತಿದೆ…
ಬಿಕ್ಕಳಿಸುತ್ತಿದ್ದೇನೆ ನಾನೂ…
ಸುಖದ ಗರ್ಭದೊಳು ದುಃಖದ ಬೀಜ….
ದುಃಖದ ಗರ್ಭದೊಳು ಸಹಸ್ರದುಃಖಿಗಳ ಜೀವ…..
ಮೂಕವಾಗಿದೆ ವಿದ್ಯಾಕಾಶಿ
ಮಹಾಸೂತಕದ ಛಾಯೆಯಲಿ..
ಅನಾಥವಾಗುತಿದೆ ಗಂಗೆ
ಮೌನಧ್ಯಾನದ ಕತ್ತಲಲಿ…
ಬಿಕ್ಕಳಿಸುತ್ತಿದ್ದೇನೆ ನಾನೂ…
ಬಿಕ್ಕಳಿಸುತ್ತಿದೆ ಜಗವು….
ಅಕ್ಷರಯಜ್ಞನ ಅಗಲಿಕೆಯಲಿ
ಕನ್ನಡ ಬುದ್ಧನ ಮಂದಸ್ಮಿತದಲಿ.
ಬಿಕ್ಕಳಿಸುತ್ತಿದೆ ಭಾರತವು…
ಪ್ರಸಾದಸಂತನ ಗೈರಿನಲಿ
ದೇವರಿಲ್ಲದ
ಗುಡಿಗುಂಡಾರದಲಿ.
ಬಿಕ್ಕಳಿಸುತ್ತಿದೆ ಕರುನಾಡು…
ಆಧ್ಯಾತ್ಮಿಕ ಶಿಖರದವಸಾನಕೆ
ಚೈತನ್ಯದ ಮಂಗಳ ಮೂರುತಿಯ ಚಿರನಿದ್ರೆಗೆ
ಬಿಕ್ಕಳಿಸುತ್ತಿದೆ ಸಿದ್ದಗಂಗೆ….
ತಾಯಿಲ್ಲದ ಎಳೆಗರುವಂತೆ…
ದಿಕ್ಕಿಲ್ಲದ ಅನಾಥನಂತೆ…
ಮತ್ತೆ ಬಿಕ್ಕಳಿಸುತಿರುವೆ…
ಮತ್ತೆ ಅವತರಿಸಿ ಬಾಯೆಂದು
ಈ ಮಣ್ಣಿನ ಮಗನಾಗೆಂದು
ಅನಾಥಜೀವ ಬಂಧುವಾಗೆಂದು
ಅಸಹಾಯಕರ ಸಿಂಧುವಾಗೆಂದು
ಶತಮಾನದ ಸಂತನಾಗೆಂದು
ಮತ್ತೆ ಮತ್ತೆ ಬಿಕ್ಕುವೆ….
ಮತ್ತೊಮ್ಮೆ ಹುಟ್ಟಿ ಬಾ…..
-ಎಂ. ಡಿ. ಚಿತ್ತರಗಿ
ಕನ್ನಡ ಪ್ರಾಧ್ಯಾಪಕರು
ಹುನಗುಂದ.
9686019177