UK Suddi
The news is by your side.

ಕದಿಯಲಾಗದ ಸಂಪತ್ತನ್ನು ಗಳಿಸಿ: ಲೇಖಕಿ ಜಯಶ್ರೀ ಅಬ್ಬಿಗೇರಿ.

ಬೆಳಗಾವಿ: ‘ವಿದ್ಯೆ ಎನ್ನುವುದು ಕದಿಯಲಾಗದ ಸಂಪತ್ತು.. ಅದರ ಗಳಿಕೆಗಾಗಿ ನಿರಂತರ ಪ್ರಯತ್ನದಲ್ಲಿ ತೊಡಗಿಸಿಕೊಳ್ಳಿ.’ ಎಂದು ಹಿರೇಬಾಗೇವಾಡಿಯ ಉಪನ್ಯಾಸಕಿ ಹಾಗೂ ಲೇಖಕಿ ಜಯಶ್ರೀ ಅಬ್ಬಿಗೇರಿ ಹೇಳಿದರು.

ನಗರದ ಸರಸ್ವತಿ ಪ್ರೌಢಶಾಲೆಯಲ್ಲಿ ಇತ್ತೀಚಿಗೆ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಆಸಕ್ತಿಯಿಂದ ಭಾಗವಹಿಸಿ ಸರ್ವತೋಮುಖ ಅಭಿವೃದ್ಧಿ ಸಾಧಿಸುವುದರೊಂದಿಗೆ ಬಹುಮುಖ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.ದೇಶದ ಸುಪ್ರಸಿದ್ಧ ಸಾಧಕರ ಜೀವನ ಚರಿತ್ರೆಗಳನ್ನು ಓದಿ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ತನ್ಮೂಲಕ ದೇಶದ ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಮುಂದಾಗಬೇಕಿದೆ. ಅಂಕಗಳ ಗಳಿಕೆಗಿಂತ ಕೌಶಲ್ಯಗಳನ್ನು ಕಲಿತು ಜೀವನದ ಮೌಲ್ಯಗಳನ್ನು ಗಳಿಸುವುದು ಇಂದಿನ ಅಗತ್ಯವಾಗಿದೆ.ಪ್ರತಿ ಅವಕಾಶದಲ್ಲೂ ಸಮಸ್ಯೆಗಳಿವೆ ಎಂದುಕೊಳ್ಳಬೇಡಿ. ಸಮಸ್ಯೆಗಳಲ್ಲೂ ಅವಕಾಶಗಳನ್ನು ಹುಡುಕಿ ಎಂದರು.

ನಗರ ಸಭೆಯ ಸದಸ್ಯರಾದ ಸುಧಾ ಭಾತ್ಕಂಡೆ ಹೆಣ್ಣು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಸಮಾಜದ ಪಾತ್ರ ಮಹತ್ವವಾದದ್ದು ಎಂದರು.

ಕಾರ್ಯಕ್ರಮದ ನಿಮಿತ್ತ ವಿಜ್ಞಾನ ವಸ್ತು ಪ್ರದರ್ಶನ, ಗಣಿತ ಲೋಕದ ಪರಿಚಯ, ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾದ್ಯಾಯ ಮಹ್ಮದ ಇಕ್ಬಾಲ್. ಎಚ್ ಮುಲ್ಲಾ ಅವರು ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದರು. ಶಿಕ್ಷಕಿ ವ್ಹಿ.ಬಿ. ಕುಲಕರ್ಣಿ ಸ್ವಾಗತಿಸಿದರು. ಶ್ರೀಮತಿ ಬಿ.ಜಿ.ಸವದತ್ತಿ ಅತಿಥಿಗಳನ್ನು ಪರಿಚಯಿಸಿದರು.ಶ್ರೀಮತಿ ಎಸ್ ಎಮ್ ಭದ್ರಿ ವರದಿ ವಾಚಿಸಿದರು.ಜೆ.ಕೆ. ಪತ್ತಾರ ಹಾಗೂ ಎಸ್ ಜೆ ಭಜಂತ್ರಿ ಬಹುಮಾನ ವಿತರಿಸಿದರು.ಶ್ರೀಮತಿ ಎ. ಆರ್ ಪೋತದಾರ ವಂದಿಸಿದರು ಶ್ರೀಮತಿ ಎಮ್.ಕೆ. ಜೋಶಿಯವರ ನೇತೃತ್ವದಲ್ಲಿ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಶ್ರೀಮತಿ ಎಸ್.ಎಮ್ ಗೊರಗುದ್ದಿ ಅಚ್ಚುಕಟ್ಟಾಗಿ ನಿರೂಪಿಸಿದರು.

Comments