UK Suddi
The news is by your side.

ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಯಶಸ್ವಿ.

ತುಮಕೂರು: ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಲಲಿತಾ ರವೀಶ್ ಮೇಯರ್ ಆಗಿ ಮತ್ತು ಕಾಂಗ್ರೆಸ್‌ನ ರೂಪಶ್ರೀ ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪಾಲಿಕೆ ಆಡಳಿತ ದೋಸ್ತಿ ಪಕ್ಷಗಳ ವಶವಾಗಿದೆ.

ಕಳೆದ 5 ತಿಂಗಳಿಂದ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಸ್ಥಾನ ಖಾಲಿ ಇತ್ತು. ಮಹಾನಗರ ಪಾಲಿಕೆಗೆ ಚುನಾವಣೆ ನಡೆದು 5 ತಿಂಗಳು ಕಳೆದಿದ್ದರೂ ಸಹ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿರಲಿಲ್ಲ. ಅಂದಿನಿಂದ ಅನಿವಾರ್ಯ ಕಾರಣಗಳಿಂದ ಈ ಎರಡು ಸ್ಥಾನಗಳಿಗೆ ಚುನಾವಣೆ ನಡೆಸದೆ ಮುಂದೂಡಲಾಗಿತ್ತು.

ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಸೂಚನೆ ಮೇರೆಗೆ ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ, ಉಪಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡಲಾಯಿತು.

ತುಮಕೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು ಹೆಚ್ಚು ಸಂಖ್ಯೆಯಲ್ಲಿದ್ದರೂ ಸಹ ಬಹುಮತದ ಕೊರತೆಯಿಂದಾಗಿ ಮೇಯರ್ ಮತ್ತು ಉಪಮೇಯರ್ ಚುನಾವಣಾ ಪ್ರಕ್ರಿಯೆಯಿಂದ ಹಿಂದೆ ಸರಿಯಿತು.

ಹೀಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಸದಸ್ಯರು ವರಿಷ್ಠರ ಸೂಚನೆ ಮೇರೆಗೆ ಅಧಿಕಾರದ ಗದ್ದುಗೆ ಹಿಡಿದರು. ಮೇಯರ್ ಸ್ಥಾನ ಜೆಡಿಎಸ್‌ಗೆ ಹಾಗೂ ಕಾಂಗ್ರೆಸ್‌ಗೆ ಉಪಮೇಯರ್ ಸ್ಥಾನವನ್ನು ನೀಡಲು ಪಕ್ಷದ ಮುಖಂಡರು, ಸಚಿವರು ಮಾತುಕತೆ ನಡೆಸಿ, ಜೆಡಿಎಸ್‌ನ ಲಲಿತಾರವೀಶ್, ಕಾಂಗ್ರೆಸ್‌ನ ರೂಪಶ್ರೀ ಶೆಟ್ಟಾಳಯ್ಯ ಹೆಸರು ಉಪಮೇಯರ್ ಪಟ್ಟಕ್ಕೆ ಆಯ್ಕೆ ಮಾಡಲಾಯಿತು.

ಬೆಳಗ್ಗೆ 11.3೦ ಗಂಟೆಗೆ ಆರಂಭವಾದ ಚುನಾವಣಾ ಪ್ರಕ್ರಿಯೆಯೂ ಮಧ್ಯಾಹ್ನ 1.3೦ರ ವರೆಗೂ ನಡೆದು ಬಿಜೆಪಿ ಸದಸ್ಯರ್‍ಯಾರು ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಕಾರಣ ಮೇಯರ್ ಮತ್ತು ಉಪಮೇಯರ್ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಗಳಾದ ಶಿವಯೋಗಿ ಚ.ಕಳಸದ್ ಘೋಷಿಸಿದರು.

ಸ್ಥಾಯಿ ಸಮಿತಿಗಳ ಆಯ್ಕೆಯೂ ಈ ವೇಳೆ ನಡೆದಿದ್ದು, ಎರಡು ಕಾಂಗ್ರೆಸ್, ಉಳಿದೆರಡರಲ್ಲಿ ಒಂದು ಜೆಡಿಎಸ್ ಮತ್ತೊಂದು ಬಿಜೆಪಿಗೆ ಒಲಿದಿವೆ. ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು.

Comments