UK Suddi
The news is by your side.

ಕೇಂದ್ರ ಸಚಿವ ಹೆಗ್ಡೆ ವಿರುದ್ಧ ಮಹಿಳಾ ಆಯೋಗಕ್ಕೆ ದೂರು.

ಬೆಂಗಳೂರು:ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.ಹೆಗಡೆ ವಿರುದ್ಧ ಮಾನಸಿಕ ಕಿರುಕುಳ ಹಾಗೂ ಮಾನಹಾನಿ ಮಾಡಿದ್ದಾರೆಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತೆ ಎಚ್. ಭವ್ಯ ಎಂಬುವವರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ರಾಜಕೀಯವಾಗಿ ಟೀಕಿಸುವ ಭರದಲ್ಲಿ ಅವರ ಪತ್ನಿ ಟಬೂ ರಾವ್ ಅವರ ವಿಚಾರವನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದ ಕಾರಣಕ್ಕೆ ಅನಂತಕುಮಾರ್ ಹೆಗಡೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

“ಹಿಂದು ಹುಡುಗಿ ಮೈ ಮುಟ್ಟಿದ ಕೈ ಇರಬಾರದು” “ಹಿಂದು ಹೆಣ್ಣುಮಕ್ಕಳನ್ನು ಮುಟ್ಟುವ ಕೈಗಳನ್ನು ಕಡಿಯಬೇಕು,” ಎಂಬ ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿ ಖಂಡಿಸಿದ್ದರು.

ಮಂತ್ರಿಯಾದ ಮೇಲೆ ನಿಮ್ಮ ಸಾಧನೆ ಏನು? ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು? ಎಂದು ದಿನೇಶ್ ಗುಂಡೂರಾವ್ ಅನಂತಕುಮಾರ್ ಹೆಗಡೆ ಅವರಿಗೆ ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಹೆಗಡೆ, ಮುಸ್ಲಿಂ ಮಹಿಳೆಯ ಹಿಂದೆ ಓಡಿದವ” ಎಂದು ದಿನೇಶ್ ಗುಂಡೂರಾವ್ ಅವರಿಗೆ ಟ್ವಿಟ್ಟರ್ ಮೂಲಕ ಟಾಂಗ್ ಕೊಟ್ಟಿದ್ದರು.

ಈ ರಾಜಕೀಯ ಕೆಸರೆರಚಾಟದಲ್ಲಿ ವಿನಾಕಾರಣ ಟಬು ರಾವ್ ಅವರ ಧಾರ್ಮಿಕ ಹಿನ್ನೆಲೆ ಮತ್ತು ವೈಯಕ್ತಿಕ ಬದುಕಿನ ಕುರಿತು ಸಮಾಜಿಕ ಜಾಲತಾಣಗಳಲ್ಲಿ ಕೀಳುಮಟ್ಟದ ಬರಹ ಬರೆಯುವ ಮೂಲಕ ಸಾರ್ವಜನಿಕವಾಗಿ ಹೆಗಡೆ ಮಹಿಳೆಯ ತೇಜುವಧೆ ಮಾಡಿ, ಕೋಮು ಭಾವನೆ ಪ್ರಚೋದಿಸಿ ಜನರನ್ನು ಕೆರಳಿಸಿ ಸಾಮರಸ್ಯ ಕದಡುವ ದುರುದ್ದೇಶದಿಂದ ಈ ರೀತಿ ಅಸಭ್ಯ ಟ್ವಿಟ್ ಮಾಡಿದ್ದಾರೆಂದು ಆರೋಪಿಸಿ ಹೆಗಡೆ ವಿರುದ್ಧ ದೂರು ದಾಖಲಿಸಿದ್ದಾರೆ.

Comments