UK Suddi
The news is by your side.

ಬಡರೋಗಿಗಳ ಪಾಲಿನ ಆಶಾಕಿರಣ ಡಾ.ಪಟವರ್ಧನ ಇನ್ನಿಲ್ಲ.

ರಾಮದುರ್ಗ(ಬೆಳಗಾವಿ):ರಾಮದುರ್ಗ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂನ ಸಂಸ್ಥಾಪಕರು ಬಡ ರೋಗಿಗಳ ಪಾಲಿನ ದೇವರು ಎಂದು ಕರೆಯಿಸಿಕೊಂಡಿದ್ದ ಡಾ. ಹೇರಂಬ ಎಂ. ಪಟವರ್ಧನ (89) ಅವರು ಇನ್ನು ನೆನಪು ಮಾತ್ರ.

“ವೈದ್ಯೋ ನಾರಾಯಣೋ ಹರಿ” ಸುಮಾರು 6 ದಶಕಗಳ ಕಾಲ ತಮ್ಮ ವೈದ್ಯೆ ವೃತ್ತಿಯನ್ನು ಬಡರೋಗಿಗಳಿಗೆ ಮೀಸಲಿಟ್ಟಿದ್ದ ಡಾ. ಪಟವರ್ಧನ ಅವರು ಕಳೆದ 4 ವರ್ಷಗಳ ಹಿಂದೆಯಷ್ಟೇ ವೃತ್ತಿಯಿಂದ ನಿವೃತ್ತಿ ತೆಗೆದುಕೊಂಡಿದ್ದರು.

ಇವರು ವೃತ್ತಿ ಆರಂಭಿಸಿದ ದಿನಗಳಲ್ಲಿ ಯಾವುದೇ ಸಹಾಯಕರನ್ನು ಕೂಡ ನೇಮಿಸಿಕೊಳ್ಳದ ಸಮಯದಲ್ಲಿ ಬಡ ರೋಗಿಗಳ ಮನೆಗೆ ತೆರಳಿ ಉಪಚಾರ ಮಾಡಿ ಬರುತ್ತಿದ್ದರು. ಬಡವರಿಗೆ ಹಣವಿಲ್ಲದ ಸಮಯದಲ್ಲಿ ಉಚಿತ ಚಿಕಿತ್ಸೆ ನೀಡಿ ಅವರ ಪಾಲಿಗೆ ಆಶಾಕಿರಣವಾಗಿದ್ದರು ಎಂದು ಹೇಳಿದರೆ ತಪ್ಪಾಗಲಾರದು.

ಪ್ರಪ್ರಥಮವಾಗಿ ಖರೀದಿಸಿದ ಅಂಬಾಸಿಡರ್ ಕಾರು ಇವರ ಬಳಿ ಇಂದಿಗೂ ಇದೆ. ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಆಪ್ಟೆ ಸೋಷಿಯಲ್ ಕ್ಲಬ್ ಗೆ ನಿತ್ಯ ಬರುತ್ತಿದ್ದರು.

ಮೂಲತಃ ಮಹಾರಾಷ್ಟ್ರ ರಾಜ್ಯದವರಾದ ಡಾ. ಪಟವರ್ಧನ ಅವರು ನವೆಂಬರ್ 30 1930 ರಂದು ಜನಿಸಿದ್ದರು. ಅವರ ಧರ್ಮಪತ್ನಿ ಡಾ. ವೃಂದಾ ಪಟವರ್ಧನ, ಪುತ್ರ ಡಾ. ರಾಜೇಂದ್ರ ಪಟವರ್ಧನ, ಸೊಸೆ ಡಾ. ಸಂಪದಾ ಪಟವರ್ಧನ ಮತ್ತು ಮೃತರ ಇಬ್ಬರು ಪುತ್ರಿಯರು ಹಾಗೂ ಅಳಿಯಂದಿರು ವೃತ್ತಿಯಲ್ಲಿ ವೈದ್ಯರಾಗಿ ಸದ್ಯ ಸೇವೆ ಸಲ್ಲಿಸುತ್ತಿದ್ದಾರೆ.

ಸದ್ಯ ಚಿಕ್ಕ ಮಕ್ಕಳ ತಜ್ಞ ಡಾ. ರಾಜೇಂದ್ರ ಪಟವರ್ಧನ ಅವರ ಸೇವೆ ಕೊನೆಗೊಳ್ಳುತ್ತಿದ್ದಂತೆ ರಾಮದುರ್ಗದಲ್ಲಿ ಪಟವರ್ಧನ ಆಸ್ಪತ್ರೆ ಮುಚ್ಚಿಕೊಳ್ಳುತ್ತದೆ. ಕಾರಣ ಇವರ ಚಿರಂಜೀವಿ ಅಪೂರ್ವ ಇಂಜಿನೀಯರಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಪಟವರ್ಧನ ಅವರ ಮನೆತನಕ್ಕೆ ವೈದ್ಯಕೀಯ ಸೇವೆ ನಿಂತುಕೊಂಡಂತೆ.

ಏನೇ ಆಗಲಿ ರಾಮದುರ್ಗ ತಾಲೂಕಿನ ಪ್ರತಿ ಮನೆ ಮನೆಗೂ ಚಿರಪರಿಚಿತ ಹೆಸರು ಇನ್ನೂ ನೆನಪು ಮಾತ್ರ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
-ಪ್ರಸ್ತುತಿ ಟೀಂ ನಮ್ಮ ರಾಮದುರ್ಗ ಸೋಷಿಯಲ್ ನೆಟ್ವರ್ಕ.

Comments