UK Suddi
The news is by your side.

H1N1 ಬಗ್ಗೆ ಭಯ ಬೇಡ,ಎಚ್ಚರವಿರಲಿ.

ಧಾರವಾಡ: ಹೆಚ್೧ಎನ್೧ ಖಾಯಿಲೆಯು ಹೆಚ್೧ಎನ್೧ ವೈರಾಣುವಿನಿಂದ ಬರುತ್ತದೆ. ಶೀತ, ತಲೆನೋವು, ಗಂಟಲುನೋವು, ಕೆಮ್ಮು ಮತ್ತು ಜ್ವರ ಕಾಣಿಸಿಕೊಳ್ಳುತ್ತದೆ. ಚಳಿಯೂ ಇದ್ದು, ದೇಹ ಬಳಲುತ್ತದೆ. ಕೆಲವೊಮ್ಮೆ ವಾಂತಿ ಮತ್ತು ಭೇದಿಯೂ ಆಗಬಹುದು. ಉಸಿರಾಟದಲ್ಲಿ ತೊಂದರೆ ಕಾಣಿಸಬಹುದು. ಈ ಲಕ್ಷಣಗಳಿರುವ ವ್ಯಕ್ತಿಗಳು ಕೆಮ್ಮಿದಾಗ, ಸೀನಿದಾಗ, ಇತರರಿಗೆ ಈ ವೈರಸ್ ಹರಡುತ್ತದೆ.

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪರಿಣಾಮಕಾರಿಯಾದ ಔಷಧಿ (Oseltamiver (Tamiflu ®) ಲಭ್ಯವಿದೆ. ರೋಗ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆಯನ್ನು ಪಡೆಯಬಹುದು.

ಕೆಮ್ಮುವಾಗ, ಸೀನುವಾಗ ಕರವಸ್ತ್ರ,ಅಥವಾ ಟಿಶ್ಯೂ ಪೇಪರಿನಿಂದ ಮೂಗನ್ನು ಮುಚ್ಚಿಕೊಳ್ಳಿ. ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆಯಿರಿ. ವೈಯಕ್ತಿಕ ಸ್ವಚ್ಛತೆ ಪಾಲಿಸಿ, ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ. ಸೋಂಕು ಇದ್ದಲ್ಲಿ ಮಾಸ್ಕ ಧರಿಸಿ ಮನೆಯಲ್ಲಿಯೇ ಇರುವುದು ಸೂಕ್ತ ಹಾಗೂ ಚಿಕ್ಕ ಮಕ್ಕಳಿದ್ದರೆ ಅವರನ್ನು ದೂರವಿಡಿ. ಸೋಂಕು ಇದ್ದಲ್ಲಿ ವಿಶ್ರಾಂತಿ ಪಡೆಯಿರಿ, ಒತ್ತಡವನ್ನು ನಿಭಾಯಿಸಿ, ಪೌಷ್ಠಿಕ ಆಹಾರ ಸೇವಿಸಿ. ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ವ್ಶೆದ್ಯರ ಸಲಹೆ ಪಡೆಯಿರಿ. ಜನನಿಬಿಡ ಪ್ರದೇಶದಿಂದ ದೂರವಿರಿ.
ಸೋಂಕಿತರ ಅತೀ ಸಮೀಪ ಹೋಗಬಾರದು. ಹಸ್ತಲಾಘವ, ತಬ್ಬಿಕೊಳ್ಳುವುದು ಅಥವಾ ಚುಂಬನ ಬೇಡ. ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಸೇವಿಸಬೇಡಿ. ಜನನಿಬಿಡ ಪ್ರದೇಶದಲ್ಲಿ ಕರವಸ್ತ್ರದಿಂದ ಮುಚ್ಚಿಕೊಳ್ಳದೇ ಕೆಮ್ಮಬೇಡಿ, ಸೀನಬೇಡಿ. ಕಣ್ಣು, ಮೂಗು, ಬಾಯಿಯನ್ನು ಆಗಾಗ ಕೈಯಿಂದ ಮುಟ್ಟಬೇಡಿ. ಎಲ್ಲೆಂದರಲ್ಲಿ ಉಗುಳಬೇಡಿ. ಎಲ್ಲ ಮುಂಜಾಗೃತೆಗಳನ್ನು ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ.ಆರ್.ಎಂ. ದೊಡ್ಡಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-Dharawad VB

Comments