UK Suddi
The news is by your side.

ಸುಸಂಸ್ಕೃತ ಸಮಾಜಕ್ಕೆ ಸಾಹಿತ್ಯಬೇಕು:ಡಾ.ಬಸವರಾಜ ಖೋತ.

14 ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕೃತಿಗಳ ಬಿಡುಗಡೆ

ಬಾಗಲಕೋಟೆ:ಮಕ್ಕಳ ಸಾಹಿತ್ಯ ಸಮಾಗಮವು ಶಿರೂರ ಗ್ರಾಮದಲ್ಲಿ ಹಮ್ಮಿಕೊಂಡ 14 ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ನಾಲ್ಕು ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಎಸ್ ಎಸ್ ಹಳ್ಳೂರ ಅವರ ಮೌನ ಮಿಡಿತದ ಗಾನ, ಗುರುಸ್ವಾಮಿ ಗಣಚಾರಿಯವರ ಗುರುಸ್ವಾಮಿಯವರ ಅರವತ್ತೆರಡು ಕತೆಗಳು, ಸೋಮಲಿಂಗ ಬೇಡರ ಅವರ ಬಂಗಾರ ಬಣ್ಣದ ಹಕ್ಕಿ, ಹಾಗೂ ಶ್ರೀ ಶಂಕರ ಲಮಾಣಿಯವರ ಚಿನ್ನರ ಮೂರು ನಾಟಕಗಳು ಬಿಡುಗಡೆಯಾದವು.

ಕೃತಿ ಬಿಡುಗಡೆ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಡಾ.ಬಸವರಾಜ ಖೋತ ಅವರು ಮಾತನಾಡಿ ಸಂಸ್ಕøತ ಸಮಾಜಕ್ಕೆ ಸಾಹಿತ್ಯಬೇಕು ಇಲ್ಲಿ ಬಿಡುಗಡೆಯಾದ ಎಲ್ಲ ನಾಲ್ಕು ಕೃತಿಗಳು ಸತ್ವಪೂರ್ಣ ಸಾಹಿತ್ಯ ಹೊಂದಿದ ಕೃತಿಗಳಾಗಿದ್ದು ಸಮಾಜ ಮುಖಿಯಾಗಿವೆ ಎಂದು ವಿವರಿಸಿದರು.
ಆಕಾಶವಾಣಿ ಧಾರವಾಡ ಕೇಂದ್ರದ ಕಾರ್ಯಕ್ರಮ ಅಧಿಕಾರಿಗಳಾದ ಬಸು ಬೇವಿನಗಿಡದ ಆಶಯ ನುಡಿ ಹೇಳುತ್ತ ಅಖಂಡ ವಿಜಯಪುರ ಜಿಲ್ಲೆಗೆ ಮಕ್ಕಳ ಸಾಹಿತಿಗಳ ಖಣಜ ಎಂದು ಹೇಳುತ್ತಾರೆ. ಈ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯದ ಹೊಸ ಹೊಸ ಕೃತಿಗಳು ಹೊರಬರುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

“ಮೌನ ಮಿಡಿತದ ಗಾನ” ಹಾಗೂ “ಗುರುಸ್ವಾಮಿಯವರ ಅರವತ್ತೆರಡು ಕತೆಗಳು” ಈ ಎರಡು ಕೃತಿಗಳನ್ನು ಸಾಹಿತಿ ಜಿಲ್ಲಾ ಕ.ಸಾ.ಪ ದ ಗೌರವ ಕಾರ್ಯದರ್ಶಿಗಳಾದ ಜಿ.ಕೆ. ತಳವಾರ ಪರಿಚಯಿಸಿ. ಹಳ್ಳೂರ ಅವರ “ಮೌನ ಮಿಡಿತದ ಗಾನ” ದ ಕವಿತೆಗಳನ್ನು ಓದಿದಾಗ ಅವರಿಗೆ ಕವನ ಕಟ್ಟುವ ಕಲೆ ಸಿದ್ಧಿಸಿದೆ ಎಂದು ತಿಳಿದು ಬರುತ್ತದೆ. ಹೀಗಾಗಿ ಈ ಕೃತಿಯಲ್ಲಿ ಹೃದಯ ಅರಳಿಸುವ ಕವಿತೆಗಳು ಮೂಡಿ ಬಂದಿವೆ ಎಂದು ಹೇಳಬಹುದು.

ಗುರುಸ್ವಾಮಿ ಗಣಚಾರಿಯವರು ಸಮಾಜದಲ್ಲಿರುವ ಘಟನೆಗಳನ್ನು ಕತೆಯಾಗಿಸಿದ ರೀತಿ ಮೆಚ್ಚುವಂತಹದು, ಗುರುಸ್ವಾಮಿಯವರ ಅರವತ್ತೆರಡು ಕತೆಗಳು ಜನಸಾಮಾನ್ಯರಿಗೆ ಅರ್ಥವಾಗುವಂತೆ ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ ಇದೊಂದು ಉತ್ತಮ ಕೃತಿ ಎಂದು ಹೇಳಬಹುದು.

ಬಂಗಾರ ಬಣ್ಣದ ಹಕ್ಕಿ ಹಾಗೂ ಚಿಣ್ಣರ ಮೂರು ನಾಟಕಗಳು ಕೃತಿಯನ್ನು ಪರಿಚಯಿಸಿದ ಸಾಹಿತಿ ಜಯಶ್ರೀ ಭಂಡಾರಿ ಇವರು ಮಾತನಾಡಿ ಬಂಗಾರ ಬಣ್ಣದ ಹಕ್ಕಿ ಕೃತಿಯು ಕಥಾ ಕವನಗಳಾಗಿದ್ದು ಕತೆಗಳನ್ನು ಕವನವಾಗಿ ಕಟ್ಟುವ ಕಲೆಯನ್ನು ಸೋಮಲಿಂಗ ಬೇಡರ ಅವರು ಕರಗತ ಮಾಡಿಕೊಂಡಿದ್ದಾರೆ. ಸಾಹಿತಿ ಶಂಕರ ಲಮಾಣಿಯವರು ನಾಟಕ ರಚನೆಯಲ್ಲಿ ಸಿದ್ಧಹಸ್ತರಾಗಿದ್ದಾರೆ. ಭಾಷೆಯಲ್ಲಿಯ ಹಿಡಿತ ಪಾತ್ರಗಳ ಹೊಂದಾಣಿಕೆಯಿಂದ ನಾಟಕಗಳು ಅತ್ಯತ್ತಮವಾಗಿ ಮೂಡಿ ಬಂದಿವೆ. ಅದನ್ನು ಚಿನ್ನರ ಮೂರು ನಾಟಕಗಳ ಕೃತಿಯಲ್ಲಿ ತೊರಿಸಿಕೊಟ್ಟಿದ್ದಾರೆಂದು ವಿವರಿಸಿದರು.

ಆರ್.ಎಂ ಕಟ್ಟಿಮನಿ, ಆರ್.ಸಿ. ಚಿತ್ತವಾಡಗಿ, ಎಸ್.ಬಿ.ಸಜ್ಜನ ಮಹಾಂತೇಶ ಕರಬಾಶೆಟ್ಟರ ಅತಿಥಿ ಸ್ಥಾನವನ್ನು ಅಲಂಕರಿಸಿದ್ದರು.
ಎಸ್.ಎಸ್.ಕೊಣ್ಣೂರ ಸ್ವಾಗತಿಸಿದರು, ಸಂಜಯತ ನಡುವಿನಮನಿ ಕಾರ್ಯಕ್ರಮ ನಿರೂಪಿಸಿದರು, ಸೀಮಾ ಕೊಕಾಟಿ ವಂದನಾರ್ಪಣೆ ನೇರವೇರಿಸಿದರು, ಶ್ರೀ ಎಸ್. ಎಚ್. ಬಾರಡ್ಡಿ ಕಾರ್ಯಕ್ರಮ ನಿರ್ವವಣೆ ಮಾಡಿದರು.

Comments