UK Suddi
The news is by your side.

ಇಂದಿನಿಂದ ಧಾರವಾಡ ಮುರುಘಾಮಠ ಜಾತ್ರೆ.

ಧಾರವಾಡ : ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವವು ಇದೇ ಫೆಬ್ರುವರಿ 6ರಿಂದ 2ಫೆಬ್ರುವರಿ 10ರವರೆಗೆ ಜರುಗಲಿದೆ.

ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಗ್ರಂಥಗಳ ಲೋಕಾರ್ಪಣೆ ಹಾಗೂ ಶ್ರೀ ಮೃತ್ಯುಂಜಯ ಮಹಾಂತ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿವೆ ಎಂದು ಮುರಘಾಮಠದ ಪೀಠಾಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿಜಿ ತಿಳಿಸಿದ್ದಾರೆ.

ಫೆ.6 ರಂದು ಬೆಳಗ್ಗೆ 8.30 ಕ್ಕೆ ಶ್ರೀ ಗುರುಸಿದ್ದ ಸ್ವಾಮಿಜಿ ಸಾನಿಧ್ಯದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಲಿದ್ದು,ಶ್ರೀ ನಿಜಗುಣ ಶಿವಯೋಗಿ ಸ್ವಾಮಿಜಿ ಸಮ್ಮುಖವಹಿಸುವರು. ಸಂಜೆ 6.30ಕ್ಕೆ ಜಾತ್ರಾ ಮಹೋತ್ಸವ ಉದ್ಘಾಟನೆ ಹಾಗೂ ಪುಸ್ತಕ ಪರಿಷೆಯ ಸಾನಿಧ್ಯವನ್ನು ಶ್ರೀ ಗುರುಸಿದ್ದರಾಜಯೋಗೇಂದ್ರ ಸ್ವಾಮಿಜಿಗಳು ವಹಿಸುವರು. ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಜಾತ್ರಾ ಮಹೋತ್ಸವ ಸಮಾರಂಭ ಉದ್ಘಾಟಿಸುವರು.ಶ್ರೀ ಗುರುಮಹಾಂತ ಸ್ವಾಮಿಜಿ ಇಳಕಲ್ಲ್ ಸಮ್ಮುಖವಹಿಸುವರು. ವಿನಯ ಕುಲಕರ್ಣಿ ಅಧ್ಯಕ್ಷತೆವಹಿಸಲಿದ್ದು ಡಾ.ಮಲ್ಲಿಕಾ ಘಂಟಿ ಗ್ರಂಥ ಬಿಡುಗಡೆಗೊಳಿಸಲಿದ್ದಾರೆ.

ಫೆ. 7 ರಂದು ಸಂಜೆ 6.30ಕ್ಕೆ ಜಾತ್ರಾ ಮಹೋತ್ಸವ ವಿಶೇಷ ವಿಶೇಷ ಉಪನ್ಯಾಸ ಮಾಲೆ-೧ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಚನ್ನಬಸವ ಸ್ವಾಮಿಜಿ ವಹಿಸಲಿದ್ದು, ಶ್ರೀ ಶಿವಮೂರ್ತಿ ಸ್ವಾಮಿಜಿ ಸಮ್ಮುಖವಹಿಸಲಿದ್ದು ಶಾಸಕ ಅರವಿಂದ ಬೆಲ್ಲದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಎಂ.ಎಂ. ಶಿವಪ್ರಕಾಶ ಉಪನ್ಯಾಸ ನೀಡಲಿದ್ದಾರೆ.

ಫೆ. 8ರಂದು ಸಂಜೆ 6.30ಕ್ಕೆ ವಿಶೇಷ ಉಪನ್ಯಾಸ ಮಾಲೆ-2 ಹಾಗೂ ಅಖಿಲ ಭಾರತ ಶಿವಾನುಭವ ಸಂಸ್ಥೆಯ 74ನೆ ವಾರ್ಷಿಕ ಪರಿಕ್ಷೆಯಲ್ಲಿ ಉತೀರ್ಣರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ಪ್ರಶಸ್ತಿ ಪತ್ರ ವಿತರಣೆ ನಡೆಯಲಿದೆ.ಡಾ. ತೋಂಟದ ಸಿದ್ದರಾಮ ಸ್ವಾಮಿಜಿ ಸಾನಿಧ್ಯವಹಿಸಲಿದ್ದು ಸಮ್ಮುಖವನ್ನು ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮಿಜಿ, ಶ್ರೀ ನೀಲಕಂಠ ಸ್ವಾಮಿಜಿ, ಶ್ರೀ ಶಿವಬಸವ ಸ್ವಾಮಿಜಿ ವಹಿಸಿಕೊಳ್ಳುವರು. ಶಾಸಕರಾದ ಅಮೃತ ದೇಸಾಯಿ, ಬಸವರಾಜ ಹೊರಟ್ಟಿ, ಶಂಕರ ಪಾಟೀಲ ಮುನೇನಕೊಪ್ಪ ಉಪಸ್ಥಿತರಿರಲಿದ್ದಾರೆ.

ಫೆ. 9ರಂದು ಸಂಜೆ 5ಕ್ಕೆ ಮುರುಘಾಮಠದ ಶ್ರೀ ಮೃತ್ಯುಂಜಯ-ಮಹಾಂತ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಚಿತ್ರದುರ್ಗ ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಮುರಘಾ ಶರಣರಿಗೆ ಶ್ರೀ ಮೃತ್ಯುಂಜಯ-ಮಹಾಂತ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವ ಎಂ.ಸಿ.ಮನಗೂಳಿ ಪಾಲ್ಗೊಳ್ಳುವರು. ಶ್ರೀ ಡಾ. ಶಿವಮೂರ್ತಿ ಮುರಘಾ ಶರಣರು ಸಾನಿಧ್ಯವಹಿಸಲಿದ್ದು ಸಮ್ಮುಖವನ್ನು ಶ್ರೀ ಡಾ. ರಾಜಶೇಖರ ಶಿವಾಚಾರ್ಯ ಸ್ವಾಮಿಜಿ, ಶ್ರೀ ಬಸವಲಿಂಗ ಸ್ವಾಮಿಜಿ ವಹಿಸಲಿದ್ದಾರೆ.

ಫೆ. 10 ರಂದು ಬೆಳಿಗ್ಗೆ 4 ಗಂಟೆಗೆ ಜಂಗಮ ವಟುಗಳಿಗೆ ಹಾಗೂ ಭಕ್ತರಿಗೆ ಲಿಂಗದೀಕ್ಷೆಯನ್ನು ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನೀಡುವರು. ಚೆನ್ನವೀರ ಸ್ವಾಮಿಗಳು, ಬಸವಲಿಂಗ ಸ್ವಾಮಿಗಳು, ಅಭಿನವ ಪ್ರಭು ಸ್ವಾಮಿಗಳು, ಸಿದ್ಧಲಿಂಗ ಸ್ವಾಮಿಗಳು ಉಪಸ್ಥಿತರಿರುವರು. ಮಧ್ಯಾಹ್ನ 12 ಗಂಟೆಗೆ ಮಹಾದಾಸೋಹ ನೆರವೇರಲಿದ್ದು ಸಂಜೆ 4 ಗಂಟೆಗೆ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ ಮಹಾರಥೋತ್ಸವವು ಡಾ. ಶಿವಮೂರ್ತಿ ಮುರುಘಾಶರಣರ ನೇತೃತ್ವದಲ್ಲಿ ನಡೆಯಲಿದೆ.

Comments