UK Suddi
The news is by your side.

ನಾಳೆಯಿಂದ ಏಳು ದಿನಗಳ ಕಾಲ ಏಳುಕೋಟಿ ಮೈಲಾರಲಿಂಗನ ಜಾತ್ರೆ

ಸುಕ್ಷೇತ್ರ ದೊಡವಾಡದಲ್ಲಿ ನೆಲೆಸಿದ ಏಳು ಕೋಟಿ ಮೈಲಾರಲಿಂಗ.
ಆನಂದಗಿರಿ ಶ್ರೀ ಮೈಲಾರಲಿಂಗೇಶ್ವರ ಜಾತ್ರಾಮಹೋತ್ಸವದ ನಿಮಿತ್ತ ವಿಶೇಷ ಲೇಖನ.
ಬೆಳಗಾವಿ;ಕರುನಾಡು ಹಲವಾರು ಕ್ಷೇತ್ರಗಳ ನೆಲೆಬೀಡು. ಪ್ರತಿಯೊಂದು ಕ್ಷೇತ್ರವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಇದರಲ್ಲಿ ನಮ್ಮ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನಲ್ಲಿ ಬರುವ ಸಾವಿರ ಮೇಟಿ ಒಕ್ಕಲು ಗ್ರಾಮ ದೊಡವಾಡ ಹಾಗೂ ನನಗುಂಡಿಕೊಪ್ಪ ಗ್ರಾಮಗಳ ಮದ್ಯ ನೆಲೆಸಿರುವ ಸುಕ್ಷೇತ್ರ ಆನಂದಗಿರಿ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಪವಾಡಗಳ ಕ್ಷೇತ್ರ ಎಂದೇ ಹೆಸರವಾಸಿ. ಗ್ರಾಮದ ಆನಂದಗಿರಿ ಕ್ಷೇತ್ರ ಅಂದಾಕ್ಷಣ ಪುರಾಣ ಪುಣ್ಯ ಕಥೆಗಳಲ್ಲಿ ಬರುವ ಶಿವನ ಒಡ್ಡೋಲಗ ಅಥವಾ ನಾಟಕ ಸಿನೆಮಾಗಳಲ್ಲಿ ನೋಡುವಂತೆ ಕೈಲಾಸದ ಅನುಭವ ಆಗುತ್ತದೆ. ಅನೇಕ ದೇವನುದೇವತೆಗಳ ಸಂಗಮ ಸ್ಥಾನವಾದ ಆನಂದಗಿರಿ ಕಣ್ಣಿಗೆ ಶಿವನ ಕೈಲಾಸವನ್ನೇ ನಾಚಿಸುವಂತೆ ಮೈದೆಳೆದು ನಿಂತಿದೆ.

ಕ್ಷೇತ್ರದ ಇತಿಹಾಸ: ಗ್ರಾಮದ ಶ್ರೀ ಆರಾಧ್ಯ ದೇವರು ಏಳುಕೋಟಿ ಮಲ್ಲಯ್ಯಾ ಅಂತ ಕರೆಸಿಕೊಳ್ಳುವ ನಾಗಮ್ಮನವರು ಮೂಲತಃ ದೊಡವಾಡ ಗ್ರಾಮದ ನೀಲಪ್ಪ ಬಡಿಗೇರ ಹಾಗೂ ಶ್ರೀಮತಿ ದ್ಯಾಮವ್ವನವರ ದೈವೀ ಪ್ರತಿಭೆಯಾಗಿ ಜನ್ಮ ತಾಳಿದರು. ಮುಂದೆ ಊರಿನ ಧರ್ಮನಿಷ್ಠ ಬಡಿಗೇರ ರಾಚಪ್ಪನವರನ್ನು ವಿವಾಹವಾಗಿ ಎರಡು ಮಕ್ಕಳ ತಾಯಿಯಾಗಿ ಜೀವನ ಸಾಗಿಸಿದರು. ನಂತರ ಸಂಸಾರ ಬಂಧನದಿಂದ ದೂರ ಸರಿದು ಮಲ್ಲಯ್ಯ ಅಜ್ಜನ ಶಿಷ್ಯಳಾಗಿ ಅಲೌಕಿಕ ವಿಚಾರದತ್ತ ಸಾಗಿದರು.

ಮುಂದೆ ಮನುಕುಲಕ್ಕೆ ಆನಂದಮಾರ್ಗ ತೋರುವ ಬೆಳಕಿನಲ್ಲಿ ಮಲ್ಲಯ್ಯಜ್ಜ ದೇವರ ದೈವೀ ಹೇಳಿಕೆಗಳನ್ನು ಪ್ರಾರಂಬಿಸಿದರು. ಹೀಗೆ ಹೃದಯದಿಂದ ಬಂದ ನುಡಿಗಳು ಭಕ್ತರ ಮನಕ್ಕೆ ತಾಗುತ್ತಿದ್ದಂತೆ ಆತ್ಮಶಾಂತಿಯ ಅನುಭವ ಆಗುತ್ತಿತ್ತು. ಬದುಕಿನ ಸತ್ಯತೆಯನ್ನು ಕಂಡು ಅನುಬೋಗಿಸುವಂತೆ ಬೋದಿಸದರು. ಮಲ್ಲಯ್ಯಜ್ಜನವರ ಆತ್ಮನುಸಂಧಾನದ ಪ್ರಭಾವ ಗ್ರಾಮದ ಹೆಸರನ್ನು ಪ್ರಸರಿಸಿತು. ಮೊಗ್ಗು ಅರಳಿ ಸುಗಂಧ ಬೀರುವಂತೆ ಇವರ ಕೀರ್ತಿ ಸುತ್ತೆಲ್ಲ ಹರಡಿತು. ತಂಡೋಪ ತಂಡವಾಗಿ ಭಕ್ತರು ಬರುತ್ತಿದ್ದ ಭಕ್ತರ ಅನಾನುಕೂಲತೆಗಳನ್ನು ಅರಿತು ದೊಡ್ಡವಾಡ ಬಿಟ್ಟು ಮಲಪ್ರಭೆ ನದಿ ತೀರದಲ್ಲಿ ವಾಸಿಸುವ ತಮ್ಮ ಇಂಗಿತವನ್ನು ಭಕ್ತರಿಗೆ ತಿಳಿಸಿದರು. ಇದನ್ನರಿತ ಗ್ರಾಮದ ಪ್ರಮುಖರು ತಾವು ನಮ್ಮೂರ ಬಿಟ್ಟು ಹೋಗಬಾರದು, ನಿಮಗೆ ಪ್ರಶಸ್ತವಾದ ಸ್ಥಳವನ್ನು ಇಲ್ಲಿಯೇ ನೀಡುವುದಾಗಿ ಕೇಳಿಕೊಳ್ಳುತ್ತಾರೆ. ಹೀಗಿರುವಾಗ ಒಂದು ಹುಣ್ಣಿಮೆಯ ದಿನ ಅಜ್ಜನವರು ಪೂಜೆಗೆ ಕುಳಿತಾಗ ಗ್ರಾಮದ ಆರಾಧ್ಯ ದೇವರು ಸಂಗಮನಾಥ ನಾಗಮ್ಮನವರ ಮೈಯಲ್ಲಿ ಬಂದು ಮಲ್ಲಯ್ಯ ಸ್ವಾಮಿ ನೀನು ಈ ಊರಿಗೆ ಬಂದದ್ದು ಸಂತೋಷವಾಗಿದೆ. ಗ್ರಾಮದ ಸ್ವಲ್ಪ ದೂರದಲ್ಲಿರುವ ಗದ್ದಿ ಮಡ್ಡಿ ನಿನ್ನ ವಾಸಕ್ಕೆ ಪವಿತ್ರ ಸ್ಥಳವಾಗಿದೆ. ಅಲ್ಲಿ ನೆಲೆಸಿ ಭಕ್ತರಿಗೆ ಆನಂದವನ್ನು ನೀಡುವ ಆನಂದಗಿರಿ ಎಂದು ಪ್ರಖ್ಯಾತಿ ಗಳಿಸಲಿ ಎಂದು ನುಡಿಯುತ್ತಾನೆ. ಅಲ್ಲಿಂದ ಇಲ್ಲಿಯವರೆಗೆ ದೇವಸ್ಥಾನದ ಧರ್ಮಾಧಿಕಾರಿಯಾಗಿ ಶ್ರೀಮತಿ ನಾಗಮ್ಮನವರು ಲಕ್ಷಾಂತರ ಭಕ್ತರ ದುಃಖ ದುಮ್ಮಾನಗಳು, ಕಷ್ಟಗಳನ್ನು ಪರಿಹರಿಸಿ ಆನಂದಗಿರಿಯ ಕೀರ್ತಿ ರಾಜ್ಯದ ಗಡಿಯಾಚೆ ಇನ್ನಿತರ ರಾಜ್ಯಗಳಿಗೂ ಪ್ರಸರಿಸುವಂತೆ ಮಾಡಿದ್ದಾರೆ.

ಈ ಸನ್ನಿಧಿಯಲ್ಲಿ 12ತಿಂಗಳೂ ನಿತ್ಯವೂ ಭಕ್ತರ ದರ್ಶನ, ದಿನಾಲೂ ಎರಡು ಹೊತ್ತು ಪೂಜೆ, ಆರತಿ, ಅಭಿಷೇಕ ಪ್ರತಿ ಗುರುವಾರ ಮತ್ತು ರವಿವಾರ ಮಹಾಪೂಜೆ, ಮಹಾ ಅಭಿಷೇಕ ಜರಗುತ್ತದೆ. ಪೌರ್ಣಮೆ ದಿವಸ ಪಾಲಕಿ ಉತ್ಸವ ಕುದುರೆಕಾರರ ಆಟ, ಅಮವಾಸ್ಯೆ ದಿನ ಅಗ್ನಿ ಕುಂಡ ಪೂಜೆದಂಥಹ ಹಲವಾರು ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಪ್ರತಿ ವರ್ಷ ಅವರಾತ್ರಿ ಅಮವಾಸ್ಯೆ ಷಷ್ಟಿ ತಿಥಿದಿನದಂದು ಜಾತ್ರೆ ನಡೆಯುತ್ತದೆ. ಪ್ರಸಕ್ತ 38ನೇ ವರ್ಷದ ಜಾತ್ರಾಮಹೋತ್ಸವ ಇದೆ ಪೇಭ್ರುವರಿ ತಿಂಗಳಿನ ದಿನಾಂಕ 9 ರಿಂದ 15 ರಂದು ಅದ್ದೂರಿಯಾಗಿ ಜರಗುವುದು. ಜಾತ್ರೆ ಅಂಗವಾಗಿ ಏಳು ದಿನವು ಮಹಾ ಪೂಜೆ, ಮಹಾಭಿಷೇಕ, ಆರತಿ ಪ್ರತಿ ನಿತ್ಯ ಅನ್ನಪ್ರಸಾದ ನಡೆಯುತ್ತದೆ. ವಿಶೇಷವಾಗಿ ತ್ರಿಶೂಲ ಪೂಜೆ, ಬನ್ನಿ ಮಹಾಕಾಳಿ ಪೂಜೆ, ಪಲ್ಲಕ್ಕಿ ಉತ್ಸವ, ಭಂಡಾರ ಪೂಜೆ, ಹೂವಿನ ಪೂಜೆ, ಬುತ್ತಿಯ ಪೂಜೆ, ಕುಂಕುಮ ಪೂಜೆ, ಬ್ಯಾಳಿ ಪೂಜೆ, ಕುದುರೆ ಆಟ, ದೀವಟಗಿ ಬೆಳಕು, ಡೊಳ್ಳಿನ ವಾದ್ಯ ಜರಗುತ್ತವೆ. ಇನ್ನೊಂದು ಜಾತ್ರೆಯ ಆಕರ್ಷಣೆ ಅಂದರೆ ಹುಗ್ಗಿ ಪವಾಡ, ಸರಪಳಿ ಪವಾಡ, ಹಾರಿ ಪವಾಡ, ಮಿಣಿ ಪವಾಡ, ಆರತಿ ವಾಡಗಳು ನಡೆಯುತ್ತವೆ.

-,ಸಂಗಮೇಶ ಹಂಚಗಿ

Comments