UK Suddi
The news is by your side.

ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಚಾಂಪಿಯನ್ ಶಿಪ್ ಗೆ ಕರ್ನಾಟಕ ತಂಡ ಆಯ್ಕೆ.

ಕಲಬುರಗಿ: ಫೆ.20 ರಿಂದ 25 ರವರೆಗೆ ಮಣಿಪೂರದಲ್ಲಿ ನಡೆಯುವ 41 ನೇಯ ರಾಷ್ಟ್ರ ಮಟ್ಟದ ಹ್ಯಾಂಡ್‍ಬಾಲ್ ಚಾಂಪಿಯನ್ ಶಿಫ್ ಗೆ ಕ ರ್ನಾಟಕ ತಂಡ ಆಯ್ಕೆಯಾಗಿದೆ ಎಂದು ಗುಲಬರ್ಗಾ ಹ್ಯಾಂಡ್‍ಬಾಲ್ ಅಸೋಸಿಯೆಷನ್ ಮೇಲುಸ್ತುವಾರಿ ಡಾ.ಎಮ್.ಎಸ್.ಪಾಸೋಡಿ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯನ್ನದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಹ್ಯಾಂಡ್‍ಬಾಲ್ ಅಸೋಶಿಯೇಶನ್ ಬೆಂಗಳೂರು ಮತ್ತು ಗುಲ್ಬರ್ಗ ಹ್ಯಾಂಡ್‍ಬಾಲ್ ಅಸೋಶಿಯೇಶನ್ ಹಾಗೂ ದೈಹಿಕ ಶಿಕ್ಷಣ ವಿಭಾಗ ಗುಲ್ಬರ್ಗ ವಿಶ್ವವಿದ್ಯಾಲಯ ಗುಲ್ಬರ್ಗ ಇವರ ಆಶ್ರಯದಲ್ಲಿ 19 ವರ್ಷದೊಳಗಿನ ಬಾಲಕರ ತಂಡದ ಹ್ಯಾಂಡ್‍ಬಾಲ್ ಕ್ರೀಡಾ ತರಬೇತಿ ಶಿಬಿರವು ಯಶಸ್ವಿಯಾಗಿ ನಡೆದಿದ್ದು, ಈ ತಂಡದಲ್ಲಿ ಹೈದ್ರಾಬಾದ ಕರ್ನಾಟಕ ಭಾಗದ ಕ್ರೀಡಾಪಟುಗಳು ಭಾಗಿಯಾಗಿರುವುದು ಅತಿ ಸಂತಸ ತಂದಿದೆ ಎಂದು ಹೇಳಿದರು.

ಸುಮಾರು 15 ದಿವಸಗಳ ತರಬೇತಿ ಶಿಬಿರ ಆರಂಭಗೊಂಡಿದ್ದು, ರಾಜ್ಯದ 13 ಜಿಲ್ಲೆಗಳಿಂದ ಕ್ರೀಡಾ ಸ್ಪರ್ಧಿಗಳು ಹಾಸನ-2, ಮಂಡ್ಯಾ-3, ಚಿಕ್ಕಬಳ್ಳಾಪುರ-2, ಧಾರವಾಡ-1, ಬೆಳಗಾಂವ-2, ಮೈಸೂರು-4, ಬಾಗಲಕೋಟ-2, ಚಿಕ್ಕಮಂಗಳೂರ-2, ಉಡಪಿ-6, ದಾವಣಗೇರೆ-2 ಹಾಗೂ ಕಲಬುರಗಿ-3 ಹೀಗೆ ಒಟ್ಟು 23 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ ಎಂದು ವಿವರಿಸಿದರು.

ನಮ್ಮಲ್ಲಿ ಕ್ರೀಡಾ ಪಟುಗಳ ಕೊರತೆಯಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಕ್ರೀಡಾ ಪಟುಗಳ ಕೊರತೆ ಇಲ್ಲ. ಕ್ರೀಡೆಗಳನ್ನು ಉಳಿಸಿ ಬೆಳಸಬೇಕಾದರೆ ಈ ಭಾಗದ ರಾಜಕೀಯ ಧುರೀಣರು ಹಾಗೂ ಸರ್ಕಾರ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರಲ್ಲದೇ, ಪ್ರತಿ ಜಿಲ್ಲೆಗೆ ಒಂದರಂತೆ ಕ್ರೀಡಾ ಕೋಚ್‍ಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದರು.

ಮೊಬೈಲ್ ಕ್ರೀಡೆ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳಸಬೇಕು. ಸರ್ಕಾರ ಶಾಲೆಗಳಲ್ಲಿ ದೈಹಿಕ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸುವ ಮೂಲಕ ಕ್ರೀಡಾ ಪಟುಗಳನ್ನು ಹುಟ್ಟುಹಾಕಬೇಕೆಂದು ತಿಳಿಸಿದರು. ದತ್ತಾತ್ರೇಯ ಕೆ. ಜೇವರ್ಗಿ, ಈರಣ್ಣಾ ಝಳಕಿ ಇದ್ದರು.

Comments