UK Suddi
The news is by your side.

ಆಪರೇಷನ್ ಆಡಿಯೋ: ತನಿಖಾ ತಂಡ ರಚನೆಗೆ ರಮೇಶಕುಮಾರ್ ಸಲಹೆ

ಬೆಂಗಳೂರು: “ಆಪರೇಷನ್ ಕಮಲ ” ಕುರಿತಾಗಿ ಸಿಎಂ ಕುಮಾರಸ್ವಾಮಿ ಹೊರಹಾಕಿರುವ ಆಡಿಯೋ ಪ್ರಕರಣದ ಕುರಿತು ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕು ಎಂದು ಸ್ಪೀಕರ್ ರಮೇಶಕುಮಾರ್ ಸರಕಾರಕ್ಕೆ ಸಲಹೆ ಮಾಡಿದ್ದಾರೆ.

ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಸದನದಲ್ಲಿ ಮೂರು ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆಯಲ್ಲಿ ಪಕ್ಷಭೇದ ಮರೆತು ಪಾಲ್ಗೊಂಡು ಗಂಭೀರವಾಗಿ ಮಾತನಾಡಿದ ಸದಸ್ಯರು, ಪ್ರಕರಣದ ಬಗ್ಗೆ ತನಿಖೆ ನಡೆಸಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ಆಡಿಯೋದಲ್ಲಿ ಸ್ಪೀಕರ್ ಸಭಾಪತಿಯವರ ಹೆಸರು ಉಲ್ಲೇಖವಾಗಿರುವುದಕ್ಕೆ ಬಹುತೇಕ ಸದಸ್ಯರು ಬೇಸರ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.

ಕಲಾಪ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪ ಮಾಡಿದ ಸ್ಪೀಕರ್ ರಮೇಶಕುಮಾರ್ ತಮ್ಮ ಮೇಲೆ ಆರೋಪ ಬಂದಿರುವುದು ವಿಷಾದಕರ. ತಾವು ಅತ್ಯಂತ ಪ್ರಾಮಾಣಿಕ ಜೀವನ ನಡೆಸುತ್ತಿದ್ದರೂ ಶಾಸಕರೊಬ್ಬರು ಆಡಿಯೋದಲ್ಲಿ ಲಂಚದ ವಿಚಾರ ಪ್ರಸ್ತಾಪ ಮಾಡಿರುವುದು ನೋವುಂಟು ಮಾಡಿದೆ ಎಂದು ಭಾವುಕರಾಗಿ ಮಾತನಾಡಿದರು.

ಚರ್ಚೆಯಲ್ಲಿ ಪಾಲ್ಗೊಂಡ ಬಹುತೇಕ ಸದಸ್ಯರು ತನಿಖೆ ನೇತೃತ್ವವನ್ನು ರಮೇಶಕುಮಾರ್ ಅವರೇ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ರಮೇಶ ಕುಮಾರ್ ಮೇಲೆ ಎಲ್ಲರಿಗೂ ಸಂಪೂರ್ಣ ವಿಶ್ವಾಸವಿದೆ ಎಂದು ಪಕ್ಷಭೇದ ಮರೆತು ಸದಸ್ಯರು ಹೇಳಿದ್ದು ಗಮನ ಸೆಳೆಯಿತು.

ಆದರೆ, ಈ ಪ್ರಕರಣ ಸದನ ಸಮಿತಿ ತನಿಖೆ ವ್ಯಾಪ್ತಿಗೆ ಬರುವುದಿಲ್ಲ. ವಿಶೇಷ ತನಿಖಾ ತಂಡದಿಂದ ಈ ಪ್ರಕರಣವನ್ನು ಹದಿನೈದು ದಿನಗಳೊಳಗೆ ತನಿಖೆ ನಡೆಸಬೇಕು ಎಂದು ಸ್ಪೀಕರ್ ರಮೇಶಕುಮಾರ್ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಲಹೆ ಮಾಡಿದರು.

ಆದರೆ, ಸರಕಾರ ತನಿಖೆ ನಡೆಸುವುದರಿಂದ ದಾರಿ ತಪ್ಪುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ ಬಿಜೆಪಿಯ ಜಗದೀಶ ಶೆಟ್ಟರ್ ಮತ್ತು ಗೋವಿಂದ ಕಾರಜೋಳ, ಸರಕಾರದ ಮೇಲೆ ತಮಗೆ ನಂಬಿಕೆ ಇಲ್ಲ ಎಂದು ಹೇಳಿದರು.

ಆದರೆ, ಇದಕ್ಕೆ ಅವಕಾಶ ಇಲ್ಲ ಎಂದು ಹೇಳಿದ ರಮೇಶಕುಮಾರ್ , ವಿಶೇಷ ತನಿಖಾ ತಂಡದಿಂದ ತನಿಖೆಯಾಗಬೇಕು ಎಂದು ತಾವು ಏಕೆ ಹೇಳಿದೆ ಎಂಬುದನ್ನು ವಿವರಿಸಿದರಲ್ಲದೇ , ತನಿಖೆಯಲ್ಲಿ ಯಾವುದೇ ಲೋಪವಾಗುವುದಿಲ್ಲ. ಪ್ರಾಮಾಣಿಕ ಮತ್ತು ಪಾರದರ್ಶಕ ತನಿಖೆ ನಡೆಯಲಿದೆ ಎಂದು ತಿಳಿಸಿ, ಸಭೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.