UK Suddi
The news is by your side.

ಬುದ್ಧ ಬಸವ ಅಂಬೇಡ್ಕರ್ ಹೆಸರಿನಲ್ಲಿ ಹೊಸ ವಿಶ್ವವಿದ್ಯಾಲಯ: ಸಚಿವ ಸತೀಶ ಜಾರಕಿಹೊಳಿ.

ಕಿತ್ತೂರು: ಬುದ್ಧ-ಬಸವ -ಅಂಬೇಡ್ಕರ್ ಹೆಸರಿನಲ್ಲಿ ಖಾನಾಪುರ ಬಳಿ 100 ಎಕರೆ ಜಾಗೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ತಾವು ಸಿದ್ಧ. ಇದಕ್ಕೆ ಬೇಕಾದ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಬೇಕಿದೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ನಲ್ಲಿ ಸತೀಶಣ್ಣಾ ಗ್ರೂಪ್ಸ್ ನ ಸಂಸ್ಥಾಪಕ ಅಧ್ಯಕ್ಷ ಹಬೀಬ ಶಿಲ್ಲೇದಾರ ಅವರು ನಿರ್ಮಾಣ ಮಾಡಿರುವ ಸತೀಶಣ್ಣಾ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭದಲ್ಲಿ ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಅವರು ವಿಶ್ವವಿದ್ಯಾಲಯ ಸ್ಥಾಪನೆ ಕುರಿತಂತೆ ಮಾಡಿದ ಮನವಿಗೆ ಸ್ಪಂದಿಸಿ ಮಾತನಾಡಿದ ಸಚಿವರು, ಇಂತಹ ವಿಶ್ವವಿದ್ಯಾಲಯ ಕಟ್ಟುವುದು ತಮ್ಮ ಬಹುದಿನಗಳ ಕನಸು. ಅದನ್ನು ಸಾಕಾರಗೊಳಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಈ ಉದ್ದೇಶಿತ ಹೊಸ ವಿಶ್ವವಿದ್ಯಾಲಯ ನಿರ್ವಹಣೆಗೆ ಅಗತ್ಯವಿರುವ ಸಂಪನ್ಮೂಲ ವ್ಯಕ್ತಿಗಳ ಶೋಧ ಕಾರ್ಯ ನಡೆಸಲಾಗುವುದು. ಅದಕ್ಕೆ ಬೇಕಾದ ಇತರೆ ಸಂಪನ್ಮೂಲ ಕ್ರೋಢೀಕರಣಕ್ಕೂ ಗಮನ ಹರಿಸಲಾಗುವುದು ಎಂದೂ ಸಚಿವರು ತಿಳಿಸಿದರು.

ಹಬೀಬ ಶಿಲ್ಲೇದಾರ ಅವರು ಗ್ರಾಮೀಣ ಭಾಗದಲ್ಲಿ ಇಂತಹ ಒಂದು ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡುವ ಮೂಲಕ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರಗಳ ಜತೆಗೆ ಪತ್ರಕರ್ತರಾಗಿಯೂ ಅವರು ಮಾಡಿರುವ ಸೇವೆ ಶ್ಲಾಘನೀಯ. ಕಲ್ಯಾಣ ಮಂಟಪದ ಮೂಲಕ ಈ ಭಾಗದಲ್ಲಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ಅವರು ಇಂದಿನ ಯುವಪೀಳಿಗೆಗೆ ಒಬ್ಬ ಮಾದರಿ ವ್ಯಕ್ತಿ ಎಂದು ಸಚಿವರು ಬಣ್ಣಿಸಿದರು.

ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್, ವೀರಕುಮಾರ್ ಪಾಟೀಲ, ಲಕ್ಷ್ಮಣರಾವ್ ಚಿಂಗಳೆ, ಸುನೀಲ ಹನುಮಣ್ಣವರ, ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ, ಚೆನ್ನಬಸವ ಸ್ವಾಮೀಜಿ, ಶರಣಬಸವ ಸ್ವಾಮೀಜಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Comments