UK Suddi
The news is by your side.

ಐತಿಹಾಸಿಕ ಪರಂಪರೆಯ ತಾಣ ಶ್ರೀ ಪಂಚಲಿಂಗೇಶ್ವರ ದೇವಾಲಯ ಜಾತ್ರಾಮಹೋತ್ಸವ.

ಬೆಳಗಾವಿ:ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ತಾಲೂಕು ಕೇಂದ್ರದಿಂದ 16 ಕಿ.ಮೀ ಅಂತರದಲ್ಲಿರುವ ಗ್ರಾಮ.ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆ,ಮಲಪ್ರಭಾ ನದಿ ದಡದಲ್ಲಿರುವ ಆಲೂರು ಮಠ,ವಿಠೋಬಾ ಮಂದಿರ, ವೆಂಕಟೇಶ್ವರ ದೇವಾಲಯ.ಗ್ರಾಮದ ಕೈವಲ್ಯಾಶ್ರಮ,ಸೋಮಶೇಖರ ಮಠ,ಇವುಗಳ ಜೊತೆಗೆ ಮುನವಳ್ಳಿ ಜನರ ಆರಾಧ್ಯ ದೈವ ಶ್ರೀ ಪಂಚಲಿಂಗೇಶ್ವರ ದೇವಾಲಯದಿಂದ ಪ್ರಸಿದ್ದಿ ಹೊಂದಿದ ಐತಿಹಾಸಿಕ ಪ್ರವಾಸೀ ತಾಣ.
ಬುಧವಾರ ದಿನಾಂಕ 6-3-2019 ರಂದು ಮುಂಜಾನೆ 9-00 ಕ್ಕೆ ಮಹಾಪ್ರಸಾದ ಸಂಜೆ 5-30 ಕ್ಕೆ ಮುನವಳ್ಳಿಯ ಶ್ರೀ ಸೋಮಶೇಖರಮಠದ ಪೂಜ್ಯರ ನೇತೃತ್ವದಲ್ಲಿ ಮಹಾರಥೊತ್ಸವ ಜರುಗಲಿದ್ದು.

7-3-2019 ರಂದು ಮುಂಜಾನೆ 10 ಗಂಟೆಗೆ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ ಜರುಗಲಿದೆ.ಸಂಜೆ 6 ಗಂಟೆಗೆ ಸ್ಥಳೀಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಂದ ಸಮೂಹ ನೃತ್ಯ ಸ್ಪರ್ಧೆ ಜರುಗಲಿದ್ದು ಪ್ರಥಮ 3000. ದ್ವಿತೀಯ 2000 ತೃತೀಯ 1000 ಬಹುಮಾನಗಳನ್ನು ಪ್ರಾಥಮಿಕ ಮತ್ತು ಪ್ರೌಢ ವಿಭಾಗಕ್ಕೆ ಪ್ರತ್ಯೇಕವಾಗ ನೀಡಲಾಗುತ್ತಿದೆ.
8-3-2019 ರಂದು ತೆರಿಬಂಡಿ ಸ್ಪರ್ಧೆ ಮುಂಜಾನೆ 10 ಗಂಟೆಗೆ ಜರುಗುತ್ತದೆ.ಅದೇ ದಿನ ಸಂಜೆ 6 ಗಂಟೆಗೆ ನಾಡಿನ ಪ್ರತಿಭಾನ್ವಿತ ಗಾಯಕರಿಂದ ಸಂಗೀತ ಸ್ವರಾಂಜಲಿ ಕಾರ್ಯಕ್ರಮ ಜರುಗುತ್ತಿದೆ.ಈ ಕಾರ್ಯಕ್ರಮದಲ್ಲಿ ಝೀ ಟೀವ್ಹಿ ಚಾಂಪಿಯನ್ ವಿಶ್ವಪ್ರಸಾದ ಜ್ಯೂನಿಯರ್ ಚಂದನಶೆಟ್ಟಿ ಖ್ಯಾತಿಯ ರ್ಯಾಪ್ ಗಾಯಕ ಸಾಗರ.ವಾಯ್ಸ ಆಪ್ ಬೆಳಗಾವಿ ಖ್ಯಾತಿಯ ನಂದಿತಾ.ಆ್ಯಂಡ್ ಲವ್ಲಿ ಖ್ಯಾತಿಯ ಆದಿತಿ ಕನ್ನಡದ ಕೋಗಿಲೆ ಖ್ಯಾತಿಯ ದೊಡ್ಡಪ್ಪ ಮಾದರ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ.
9-3-2019 ರಂದು ಖ್ಯಾತ ಕುಸ್ತಿಪಟುಗಳಿಂದ ಕುಸ್ತಿ ಪಂದ್ಯಾಟಗಳು ನಡೆಯುತ್ತವೆ.
9-3-2019 ರಂದು ಗೃಹಿಣಿಯರಿಗಾಗಿ ಚುಕ್ಕಿ ರಂಗೋಲಿ ಸ್ಪರ್ಧೆ.ಮಹಿಳೆಯರಿಗಾಗಿ ಮ್ಯುಜಿಕಲ್ ಚೇರ್ ಸ್ಪರ್ಧೆ.ಗೃಹಿಣಿಯರಿಗಾಗಿ ಭಕ್ತಿಗೀತೆ ಗಾಯ ಸ್ಪರ್ಧೆ.ಸ್ಥಳೀಯ ಮಹಿಳೆಯರಿಗಾಗಿ ಸಾಂಪ್ರದಾಯಕ ಉಡುಗೆ ಸ್ಪರ್ಧೆಗಳನ್ನು ಆಯೋಜಿಸಿದೆ.
10-3-2019 ರಂದು ಜಾನುವಾರು ಪ್ರದರ್ಶನ ಹಾಗೂ ಸ್ಪರ್ಧೆ ಜರುಗುವುದು ರಾತ್ರಿ 10 ಗಂಟೆಗೆ ಮುನವಳ್ಳಿಯ ಶ್ರೀ ವೀರಭದ್ರೇಶ್ವರ ನಾಟ್ಯ ಸಂಘ ಮಾವಿನಕಟ್ಟಿ ಓಣಿ ಇವರಿಂದ ಕುಸ್ತಿ ಮೈದಾನದಲ್ಲಿ ಸಾಮಾಜಿಕ ನಾಟಕ ಪ್ರಾಣ ಹೋದರೂ ಮಾನ ಬೇಕು ಪ್ರದರ್ಶನಗೊಳ್ಳಲಿದೆ. ಹೀಗೆ ದಿನಾಂಕ 3 ರಿಂದ 10 ರ ವರೆಗೆ ಪಂಚಲಿಂಗೇಶ್ವರ ಜಾತ್ರ ಮಹೋತ್ಸವ ಜರುಗುತ್ತಿದೆ.
ಶ್ರೀ ಪಂಚಲಿಂಗೇಶ್ವರ ದೇಗುಲದ ಐತಿಹಾಸಿಕ ಹಿನ್ನಲೆ

ಪಂಚಲಿಂಗೇಶ್ವರ ದೇವಾಲಯವು ವಿವಿಧ 8 ದೇವಾಲಯಗಳನ್ನೊಳಗೊಂಡ ಸ್ಥಳ.ಪೌರಾಣಿಕ ಐತಿಹ್ಯದಂತೆ “ಅಗಸ್ತ್ಯ”ಮುನಿಗಳು ಮಲಪ್ರಭಾ ನದಿ ದಡದಲ್ಲಿ ತಪಗೈದು “ಅಂಧಕಾಸುರ”ನೆಂಬ ದೈತ್ಯನ ಸಂಹಾರ ಮಾಡಿ,ಪಂಚಭೂತ ತತ್ವಗಳಾದ “ಪೃಥ್ವಿ,ಅಪ್,ತೇಜ,ವಾಯು,ಅಗ್ನಿ,”ಪ್ರತಿ ತತ್ವಕ್ಕೂ ಆಧಾರವಾಗಿ ಐದು ಲಿಂಗಗಳನ್ನು ಪ್ರತಿಷ್ಠಾಪಿಸಿ “ಪಂಚಲಿಂಗೇಶ್ವರ”ನನ್ನು ಪೂಜಿಸಿದರೆಂಬ ಪುರಾಣ ಕಥೆಯನ್ನು ಹೊಂದಿದ ಈ ದೇಗುಲವು ಬನಶಂಕರಿ,ರೇಣುಕಾದೇವಿ,ತ್ರ್ಯಂಭಕೇಶ್ವರ,ಅಗ್ನಿದೇವಾಲಯ,ರುದ್ರಮುನೀಶ್ವರ,ತಾರಕೇಶ್ವರ,ಮಲ್ಲಿಕಾರ್ಜುನ ದೇವಾಲಯಗಳನ್ನು ಎರಡು ಪುಷ್ಕರಣಿಗಳನ್ನು ಹೊಂದಿದ ದೇಗುಲಗಳ ತಾಣ.
ಮುನವಳ್ಳಿಗೆ ಸಾಕಷ್ಟು ಸಾರಿಗೆ ಸೌಕರ್ಯವುಂಟು,ಬಸ್ ನಿಲ್ದಾಣದಿಂದ ಕಾಲ್ನಡಿಗೆಯಲ್ಲಿ ಬಂದರೂ ಸಾಕು ಈ ದೇವಾಲಯ ತಲುಪಬಹುದು. ದೇವಗಿರಿ ಯಾದವರ ಕಾಲದಲ್ಲಿ “ಶಿವಪುರ”ವಾಗಿ,ನಂತರ ತೊರಗಲ್ ನಾಡಿನ ಪ್ರಮುಖ ಕ್ಷೇತ್ರವಾಗಿ ಮರಾಠರ ಕಾಲಕ್ಕೆ ಶಿಂಧೆ ಮಹಾರಾಜರ ವಿಶ್ರಾಂತಿಧಾಮವಾಗಿ ಮುನವಳ್ಳಿ ಐತಿಹಾಸಿಕ ಚರಿತ್ರೆ ಹೊಂದಿದೆ.ಈ ದೇವಾಲಯದಲ್ಲಿರುವ ಶಾಸನದಲ್ಲಿ

“ಭರತಾವನಿಗೊಪ್ಪಿದುದು
ಸುರುಚಿರ ಧರ್ಮದಂತೆ ಕುಂತಳಕಲೆ ವಿ,
ಸ್ತರಮೆನೆ ತೊರಗಲೆನಾಡಿನ,
ಸಿರಿಕರುವೆನಿಸಿದುದು ಮುನಿಪುರಂ ಕಡುರಮ್ಯಂ”

ಎಂದು ಮುನವಳ್ಳಿಯ ಪರಿಸರದ ವರ್ಣನೆಯಿದೆ.ಇಂಥ ಪುಣ್ಯ ಕ್ಷೇತ್ರದಲ್ಲಿ”ಶ್ರೀ ವೇದವ್ಯಾಸ ಕುತ್ಸರ್ಜಮದಗುಣಿ ವಶಿಷ್ಟ,ಭಾರದ್ವಾಜ,ಶ್ರೀ ವಿಶ್ವಾಮಿತ್ರರು ಸನಕ,ಸನಂದಾದಿ,ಜಮದಗ್ನಿ,ವಿಭಾಂಡಕ ಮುನಿಗಳು ಮಲಪ್ರಭಾ ನದಿ ತಟದಲ್ಲಿ ತಮ್ಮ ತಪೋಶಕ್ತಿಯನ್ನು ಪಸರಿಸಿಕೊಂಡಿರುವುದನ್ನು ತಿಳಿಸಲಾಗಿದೆ.
ಸದಾ ಹಸಿರಿನಿಂದ ಮೈದುಂಬಿದ ಪ್ರಕೃತಿ ಸಂಪತ್ತನ್ನೂ ಕೂಡ ಈ ತಾಣ ಹೊಂದಿತ್ತು ಎಂಬುದನ್ನು
“ತೆಂಗು ಕೊಂಗು ಜಂಬೂರಸ,
ಮಾಧುಪಲಂ ಪನಸಾಂಬ್ರ ನಿಂಬಿ ನಾ,
ರಂಗ ಸುರಹೊನ್ನೆ ಸುಪಾ ಟಳಿ ಪಾರಿಜಾತ
ಪುಂನಾಗವ ಶೋಕೆ ಕತ್ತಲಿಸುತಿಪ್ಪೆಲೆವಳ್ಳಿಗಳಿಂ ಮದಾಳಿಯಿಂ.
ಶ್ರೀಗಿದು ಜನ್ಮಭೂಮಿಯೆನಿಕುಂ ಮುನಿವಳ್ಳಿ ಸದಾವ ಕಾಲಮಂ”

ಎಂದೆಲ್ಲ ಸಂಪತ್ಸಮೃದ್ದಿ ಕೊಡುವ ಸುಂದರ ತಾಣವಾದ ಮುನವಳ್ಳಿ ಕ್ರಿ.ಶ.12ನೇ ಶತಮಾನದಲ್ಲಿ ಈ ಬಾಗವನ್ನು ಆಳಿದ ದೇವಗಿರಿ ಯಾದವ ದೊರೆಗಳು ಯಾದವ ಚಕ್ರವರ್ತಿ ಸಿಂಘಣದೇವ,ಶ್ರೀ ಪಂಚಲಿಂಗೇಶ್ವರ ದೇವಾಲಯವನ್ನು ಜೀರ್ಣೋದ್ದಾರ ಮಾಡಿದ ಬಗ್ಗೆ ಈ ಶಾಸನದಲ್ಲಿ ವಿವರಣೆಯಿದೆ.
“ಧರ್ಮ ಪ್ರಸಂಗದಿಂದ,
ಪೆಮ್ರ್ಮಗೆಮೇರು ಸಿಂಘಣೋರ್ವಿಪಂ ಶಿವಪು
ರಮಂ ನಿಮ್ರ್ಮಿಪುದೆನೆ ಪುರುಷೋ,
ತ್ತಮ ಧರ್ಮೋದ್ಯೋಗ ಮನೆ,
ಜೋಗಿದೇವಗಿತ್ತಂ,
ಪುಣ್ಯದ ತಾಣವಾಗಿದ್ದ ಮುನವಳ್ಳಿಯನ್ನು “ಶಿವಪುರ”ವಾಗಿ ಮಾರ್ಪಡಿಸಬೇಕೆಂದು ಇಚ್ಚಿಸಿ ತನ್ನ ಸರ್ವಾಧಿಕಾರಿ ಪುರುóಷೋತ್ತಮನಿಗೆ ಅಣತಿಯನ್ನಿತ್ತಾಗ ಅದಕ್ಕೆ ತಲೆಬಾಗಿದ ಆತ ತನ್ನ ಸಹೋದರ “ಜೋಗದೇವ”ನಿಗೆ ಈ ಧರ್ಮ ಕಾರ್ಯ ಕೈಗೊಳ್ಳಲು ತಿಳಿಸಿದ.
ಆ ಜೋಗದೇವ ಸಿಂಘರೂಪಿ ಅಧಿಕಾರಿ,ಹಲವು ದೇಶಾಧಿಕಾರ ಕೈಗೊಂಡ ವ್ಯಕ್ತಿ ಪುರುಷೋತ್ತಮ,ಶಕವರ್ಷ 1145 ನೆಯ ಚಿತ್ರಭಾನು ಸಂವತ್ಸರದ ಕಾರ್ತಿಕ ಶುದ್ದ ಪುಣ್ಯಮಿ ಸೋಮವಾರ ಸೋಮಗ್ರಹಣ ವ್ಯತಿಪಾತದಲ್ಲಿ ಸ್ವಯಂಭೂ ಪಂಚಲಿಂಗೇಶ್ವರನಿಗೆ ಮಾಟಕೂಟ ಪ್ರಸಾದ ಖಂಡಸ್ಪುಟಿತ ಜೀರ್ಣೊದ್ದಾರ,ನೈವೇದ್ಯ ಅಂಗಾಂಗ ಭೋಗ ಛತ್ರಕ್ಕೆ ಪುರುಷೋತ್ತಮ ದಣ್ಣಾಯಕರ ನಿಯಮದಂತೆ ನೆರವೇರಿಸುವದರ ಮೂಲಕ ವಿವಿಧ ವೃತ್ತಿಯವರಿಗೆ ದತ್ತಿ ಬಿಟ್ಟು ಕೊಟ್ಟನು,ಪುರುಷೋತ್ತಮನ ಅನುಜ ಜೋಗದೇವ ಅತ್ಯಂತ ಭಕ್ತಿಯಿಂದ ಪಂಚಲಿಂಗೇಶ್ವರ ನೆಲೆನಿಂತ ಪುಣ್ಯದ ತಾಣ ಮುನವಳ್ಳಿಯನ್ನು ಶಿವಪುರವಾಗಿಸಲು 16 ಶಿವಪುರ ವಿಪ್ರರಿಗೆ ದತ್ತಿ ಕೊಟ್ಟಿರುವನು.ಪ್ರತಿ ವಿಪ್ರರಿಗೆ ಪ್ರತ್ಯೇಕ ತಮ್ಮ 200 ರಂತೆ ಹಳೆಯ ಊರಿನ ಹದ್ದಿನಿಂದ ಸಿಂದವಿಗೆಯಲ್ಲಿ ನೂರು,ನಾಗಪುರದಲ್ಲಿ ಹದಿನಾರು,ವ್ಯಾಪ್ತಿಯನ್ನು ದ್ವಿಜರಿಗೆ ಬಿಟ್ಟುಕೊಡುವ ಮೂಲಕ ಮುನಿಪುರದ ತೋಟಿಗರು ವರ್ಷಂಪ್ರತಿ ಎಲೆಗಳು,ಗಾಣದ ಎಣ್ಣೆ,ಹೂವುಗಳು ಪ್ರತಿಯೊಂದು ದಾನ್ಯಗಳನ್ನು ಪೂಜಾ ಕಾರ್ಯ ಸಾಂಗವಾಗಿ ಸಾಗಲು ವಹಿಸಿಕೊಟ್ಟಿರುವ ಬಗ್ಗೆ ಶಾಸನದಲ್ಲಿ ವಿವರಣೆಯಿದೆ.
ಇಂಥ ದೇವಾಲಯ ವರ್ಷವರ್ಷವೂ ಭಕ್ತ ಜನರಿಂದ ಪ್ರಸಿದ್ದ ಪುಣ್ಯ ಕ್ಷೇತ್ರವಾಗಿ ನೆಲೆನಿಂತಿದ್ದು,ದೇವಾಲಯಕ್ಕೆ ಸದ್ಯ “ಶ್ರೀ ಪಂಚಲಿಂಗೇಶ್ವರ ನಿತ್ಯ ರುದ್ರಾಭಿಷೇಕ ಹಾಗೂ ಜೀರ್ಣೋದ್ದಾರ ಸಮೀತಿ ಮುನವಳ್ಳಿ”ಎಂದು ಸಮೀತಿ(ಟ್ರಸ್ಟ) ಅಸ್ತಿತ್ವದಲ್ಲಿದ್ದು ದೇವಾಲಯಕ್ಕೆ ಸಂಬಂಧಿಸಿದ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವುದು.
ದೇವಾಲಯದ ಆವರಣದಲ್ಲಿ ಕಲ್ಯಾಣ ಮಂಟಪಗಳಿದ್ದು ವಿವಾಹ,ಇತರೆ ಕಾರ್ಯಕ್ರಮಗಳಿಗಾಗಿ ನೀಡಲಾಗುತ್ತಿದ್ದು,ಕಾರ್ತಿಕ ಮಾಸದಲ್ಲಿ ಇಲ್ಲಿ ವಿಜೃಂಭಣೆಯಿಂದ ಕಾರ್ತಿಕೋತ್ಸವ ಜರುಗುತ್ತಿದ್ದು,ಪ್ರತಿ ನಿತ್ಯವೂ ಬೆಳಗಿನ ಸಮಯ ರುದ್ರಾಭಿಷೇಕ ಜರುಗಿಸುವ ಜೊತೆಗೆ ತುಪ್ಪದ ದೀವಿಗೆ ಬೆಳಗುವ ಸಂಪ್ರದಾಯವಿದ್ದು ಭಕ್ತ ಜನರ ಕೋರಿಕೆ ಮೇರೆಗೆ ಕ್ಷೀರಾಭಿಷೇಕ,ಕುಂಕುಮಾರ್ಚನೆ,ವಿವಿಧ ಪೂಜೆಗಳನ್ನು ಇಲ್ಲಿನ ಅರ್ಚಕರು ನೆರವೇರಿಸುವರು.
ಈ ದೇವಾಲಯ ಆವರಣದಲ್ಲಿರುವ ತ್ರ್ಯಂಭಕೇಶ್ವರ ದೇವಾಲಯ ಕೂಡ ಜ್ಯೋತಿರ್ಲಿಂಗ ಸ್ವರೂಪದ್ದು,ಈ ದೇವಾಲಯದಲ್ಲಿ ಮೂರು ಲಿಂಗಗಳು ಇದ್ದು ಪ್ರತಿ ಲಿಂಗ ಹೊಂದಿರುವ ಗರ್ಭಗೃಹ ವಿನ್ಯಾಸ ಕೂಡ ಮಹತ್ವದ್ದು.ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಈ ದೇಗುಲದ ಲಿಂಗಗಳ ಮೇಲೆ ಸೂರ್ಯ ಕಿರಣಗಳ ಬೆಳಕು ಕಾಣುವಂತೆ ವಿನ್ಯಾಸದೊಂದಿಗೆ ಈ ದೇವಾಲಯ ನಿರ್ಮಿಸಿದ್ದು ಅಂದಿನ ವಾಸ್ತುಶಿಲ್ಪಕಲೆಗೆ ಹಿಡಿದ ಕೈಗನ್ನಡಿ.
ಪ್ರತಿ ಸೋಮವಾರ ಪಂಚಲಿಂಗೇಶ್ವರನ ವಾರವೆಂದು ಮುನವಳ್ಳಿಯ ಜನತೆ ಆಚರಿಸುತ್ತ ಬಂದಿದ್ದು,ಆ ದಿನ ವಿಶೇಷ ಪೂಜೆ,ಸಂಜೆ ಹೊತ್ತು ಪಲ್ಲಕ್ಕಿ ಉತ್ಸವ ಜರುಗುವುದು,.ಪ್ರತಿವರ್ಷ ಯುಗಾದಿ ಪಾಡ್ಯದಂದು ಸೂರ್ಯ ಕಿರಣಗಳು ಪಂಚಲಿಂಗೇಶ್ವರನ ಪಂಚಲಿಂಗಗಳ ಮೇಲೆ ನೇರವಾಗಿ ಸ್ಪರ್ಶಿಸುವವು ಈ ದಿನ ಕೂಡ ಇಲ್ಲಿ ವಿಶೇಷ ಪೂಜಾ ಕಾರ್ಯಗಳು ಜರುಗುತ್ತವೆ.ಪ್ರತಿ ಅಮವಾಸೆಯಂದು ವಿಶೇಷ ಪೂಜೆ ಮುಗಿದ ನಂತರ ಅನ್ನಪ್ರಸಾದ ಜರುಗುತ್ತಿದ್ದು.ಶ್ರಾವಣ ಮಾಸದಲ್ಲಂತೂ ಇಲ್ಲಿನ ಸಡಗರ ಸಂಭ್ರಮ ಹೇಳತೀರದ್ದು,ನಿತ್ಯ ಪೂಜೆ,ಜೊತೆಗೆ ಮೂರನೇ ಸೋಮವಾರ,ನಾಲ್ಕನೇ ಸೋಮವಾರದವರೆಗೆ 7 ದಿನಗಳ ಸಪ್ತಾಹ ಹಾಗೂ ನಿತ್ಯವೂ ಅನ್ನದಾಸೋಹ ಕಾರ್ಯ ಜರುಗುವುದು.

-ವೈ.ಬಿ.ಕಡಕೋಳ
9449518400,

Comments