UK Suddi
The news is by your side.

ಮಹಾಶಿವರಾತ್ರಿ ವ್ರತ ಏಕೆ ಮಾಡಬೇಕು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶಿವತತ್ತ್ವದ ಲಾಭವು ಹೆಚ್ಚು ಪ್ರಮಾಣದಲ್ಲಿ ಸಿಗಲು ಮಹಾಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ-ಅರ್ಚನೆಯನ್ನು ಮಾಡಬೇಕು; ಅದರೊಂದಿಗೆ ‘ಓಂ ನಮಃ ಶಿವಾಯ|’ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು. ಈ ದಿನದಂದು ‘ಓಂ ನಮಃ ಶಿವಾಯ|’ ಈ ನಾಮಜಪವನ್ನು ಮಾಡುವ ಜೀವಕ್ಕೆ ಶಿವನ ಸೂಕ್ಷ್ಮ-ಶಕ್ತಿ ಸಿಗುತ್ತದೆ. ಶಿವನ ಜನ್ಮವು ಸ್ಥೂಲ ಮತ್ತು ಸೂಕ್ಷ್ಮ ರೂಪದ ಕೆಟ್ಟ ಶಕ್ತಿಗಳನ್ನು ನಾಶ ಮಾಡಲು ಮತ್ತು ಮಾನವನ ಕಲ್ಯಾಣಕ್ಕಾಗಿ ಆಗಿದೆ.
ಮಹಾಶಿವರಾತ್ರಿ ವ್ರತ ಏಕೆ ಮಾಡಬೇಕು?
ಶಿವನ ವಿಶ್ರಾಂತಿಯ ಕಾಲವೆಂದರೆ ಮಹಾಶಿವರಾತ್ರಿ. ಆ ಕಾಲದಲ್ಲಿ ಶಿವತತ್ತ್ವದ ಕಾರ್ಯ ನಿಂತುಹೋಗುತ್ತದೆ ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಆದುದರಿಂದ ಆ ಕಾಲದಲ್ಲಿ ವಿಶ್ವದಲ್ಲಿನ ತಮೋಗುಣ ಶಿವತತ್ತ್ವ ಸ್ವೀಕರಿಸುವುದಿಲ್ಲ. ಆದುದರಿಂದ ವಿಶ್ವದಲ್ಲಿ ತಮೋಗುಣ ಬಹಳ ಹೆಚ್ಚಾಗುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಮಹಾಶಿವರಾತ್ರಿಯ ವ್ರತವನ್ನು ಕೈಗೊಂಡು ಶಿವತತ್ತ್ವವನ್ನು ಆಕರ್ಷಿಸಬೇಕು.
ವ್ರತವನ್ನಾಚರಿಸುವ ಪದ್ಧತಿ
ಉಪವಾಸ, ಪೂಜೆ ಮತ್ತು ಜಾಗರಣೆ ಇವು ಈ ವ್ರತದ ಮೂರು ಅಂಗಗಳಾಗಿವೆ.
ವ್ರತದ ವಿಧಿ
ಮಾಘ ಕೃಷ್ಣ ಚತುರ್ದಶಿಯಂದು ಏಕಭುಕ್ತರಾಗಿರಬೇಕು (ಒಂದು ಹೊತ್ತು ಊಟ ಮಾಡುವುದು). ಚತುರ್ದಶಿಯಂದು ಬೆಳಗ್ಗೆ ವ್ರತದ ಸಂಕಲ್ಪವನ್ನು ಮಾಡಿ ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ಸ್ನಾನ ಮಾಡಬೇಕು. ಭಸ್ಮ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು. ಪ್ರದೋಷಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಬೇಕು. ಶಿವನ ಧ್ಯಾನವನ್ನು ಮಾಡಬೇಕು, ಆಮೇಲೆ ಶೋಡಷೋಪಚಾರ ಪೂಜೆಯನ್ನು ಮಾಡಿ ಭವ ಭಾವಿನಿ ಪ್ರೀತ್ಯರ್ಥ ತರ್ಪಣವನ್ನು ನೀಡಬೇಕು. ಶಿವನಿಗೆ ೧೦೮ ಕಮಲಗಳನ್ನು ಅಥವಾ ಬಿಲ್ವಪತ್ರೆಗಳನ್ನು ನಾಮಮಂತ್ರ ಸಹಿತ ಅರ್ಪಿಸಬೇಕು. ಆಮೇಲೆ ಪುಷ್ಪಾಂಜಲಿಯನ್ನು ಅರ್ಪಿಸಿ ಅರ್ಘ್ಯ ನೀಡಬೇಕು. ಪೂಜೆ, ಸ್ತೋತ್ರಪಠಣ ಮತ್ತು ಮೂಲಮಂತ್ರ ಜಪದ ನಂತರ ಶಿವನ ಮಸ್ತಕದ ಮೇಲಿನ ಒಂದು ಹೂವನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳಬೇಕು ಮತ್ತು ಕ್ಷಮಾಯಾಚನೆ ಮಾಡಬೇಕು.
ಯಾಮಪೂಜೆ
ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ‘ಯಾಮಪೂಜೆ’ ಎನ್ನುತ್ತಾರೆ. ಪ್ರತಿಯೊಂದು ಯಾಮಪೂಜೆಯಲ್ಲಿ ದೇವರಿಗೆ ಅಭ್ಯಂಗಸ್ನಾನ ಮಾಡಿಸಬೇಕು, ಅನುಲೇಪನ ಮಾಡಿ ಧೋತ್ರಾ, ಮಾವಿನ ಹಾಗೂ ಬಿಲ್ವದ ಎಲೆಗಳನ್ನು ಅರ್ಪಿಸಬೇಕು. ಅಕ್ಕಿಯ ಹಿಟ್ಟಿನ ೨೬ ದೀಪಗಳನ್ನು ಮಾಡಿ ಅವುಗಳನ್ನು ದೇವರಿಗೆ ಬೆಳಗಬೇಕು. ಪೂಜೆಯ ನಂತರ ೧೦೮ ದೀಪಗಳನ್ನು ದಾನ ಮಾಡಬೇಕು. ಪ್ರತಿಯೊಂದು ಪೂಜೆಯ ಮಂತ್ರಗಳು ಬೇರೆಬೇರೆಯಾಗಿರುತ್ತವೆ, ಅವುಗಳಿಂದ ಅರ್ಘ್ಯವನ್ನು ನೀಡಬೇಕು. ನೃತ್ಯ, ಗೀತೆ, ಕಥಾಶ್ರವಣ ಮುಂತಾದ ವಿಷಯಗಳಿಂದ ಜಾಗರಣೆಯನ್ನು ಮಾಡಬೇಕು. ಬೆಳಗ್ಗೆ ಸ್ನಾನ ಮಾಡಿ ಮತ್ತೊಮ್ಮೆ ಶಿವ ಪೂಜೆ ಮಾಡಬೇಕು. ಉಪವಾಸವನ್ನು ಬಿಡುವಾಗ ಬ್ರಾಹ್ಮಣಭೋಜನ ನೀಡಬೇಕು. ಆಶೀರ್ವಾದ ಪಡೆದುಕೊಂಡು ವ್ರತದ ಸಮಾಪ್ತಿ ಮಾಡಬೇಕು.
೧೨, ೧೪ ಅಥವಾ ೨೪ ವರ್ಷ ಈ ವ್ರತವನ್ನು ಆಚರಿಸಿದ ನಂತರ ಅದರ ಉದ್ಯಾಪನೆ (ವ್ರತದ ಪರಿಹಾರ) ಯನ್ನು ಮಾಡಬೇಕು.

ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?

ಶಿವನಿಗೆ ಹಾಕುವ ಪ್ರದಕ್ಷಿಣೆಯು ಅರ್ಧಚಂದ್ರನಂತೆ, ಅಂದರೆ ಸೋಮಸೂತ್ರಿಯಾಗಿರುತ್ತದೆ.
ಪಾಣಿಪೀಠದಿಂದ ಉತ್ತರ ದಿಕ್ಕಿನ ಕಡೆಗೆ ಮಂದಿರದ ವಿಸ್ತಾರದ ಕೊನೆಯವರೆಗೆ (ಪ್ರಾಂಗಣದವರೆಗೆ) ಹೋಗುವ ಹರಿನಾಳಕ್ಕೆ ಸೋಮಸೂತ್ರವೆನ್ನುತ್ತಾರೆ. ಶಿವಲಿಂಗದ ಎದುರು ನಿಂತಾಗ ಬಲಬದಿಗೆ ಅಭಿಷೇಕದ ನೀರು ಹೋಗುವ ಹರಿನಾಳವಿರುತ್ತದೆ. ಪ್ರದಕ್ಷಿಣೆಯ ಮಾರ್ಗವು ಅಲ್ಲಿಂದ ಆರಂಭವಾಗುತ್ತದೆ. ಪ್ರದಕ್ಷಿಣೆ ಹಾಕುವಾಗ ಹರಿನಾಳದಿಂದ ಆರಂಭಿಸಿ ತಮ್ಮ ಎಡಬದಿಯಿಂದ ಹರಿನಾಳದ ಇನ್ನೊಂದು ಬದಿಯವರೆಗೆ ಹೋಗಬೇಕು. ನಂತರ ಹರಿನಾಳವನ್ನು ದಾಟದೇ ಹಿಂತಿರುಗಿ ಪುನಃ ಹರಿನಾಳದ ಮೊದಲ ಬದಿಯವರೆಗೆ ಬಂದು ಪ್ರದಕ್ಷಿಣೆ ಪೂರ್ಣಗೊಳಿಸಬೇಕು.
ಈ ನಿಯಮವು ಶಿವಲಿಂಗವು ಮಾನವಸ್ಥಾಪಿತ ಅಥವಾ ಮಾನವನಿರ್ಮಿತವಾಗಿದ್ದರೆ ಮಾತ್ರ ಅನ್ವಯಿಸುತ್ತದೆ. ಈ ನಿಯಮವು ಸ್ವಯಂಭೂ ಲಿಂಗಕ್ಕೆ ಮತ್ತು ಚಲಲಿಂಗಕ್ಕೆ (ಮನೆಯಲ್ಲಿರುವ ಲಿಂಗಕ್ಕೆ) ಅನ್ವಯಿಸುವುದಿಲ್ಲ.
ಪಾಣಿಪೀಠದಿಂದ ಹರಿದು ಹೋಗುವ (ಹರಿನಾಳದ) ನೀರಿನಲ್ಲಿ ಶಕ್ತಿಯ ಪ್ರವಾಹವಿರುವುದರಿಂದ ಅದನ್ನು ದಾಟಬಾರದು. ಅದನ್ನು ದಾಟುವಾಗ ಕಾಲುಗಳು ಅಗಲವಾಗುವುದರಿಂದ ವೀರ್ಯನಿರ್ಮಿತಿಯ ಮೇಲೆ ಹಾಗೂ ೫ ವಾಯುಗಳ ಮೇಲೆ ವಿಪರೀತ ಪರಿಣಾಮವಾಗುತ್ತದೆ. ದೇವದತ್ತ ಮತ್ತು ಧನಂಜಯ ವಾಯುಗಳು ಕುಗ್ಗುತ್ತವೆ. ಆದರೆ ಅದನ್ನು ದಾಟುವಾಗ ವ್ಯಕ್ತಿಯು ತನ್ನನ್ನು ತಾನು ಬಿಗಿಹಿಡಿದುಕೊಂಡರೆ ನರಗಳು ಬಿಗಿಯಾಗಿ ಅದರ ಪರಿಣಾಮವಾಗುವುದಿಲ್ಲ.
(ಬುದ್ಧಿಪ್ರಾಮಾಣ್ಯವಾದಿಗಳಿಗೆ, ಹರಿನಾಳವನ್ನು ದಾಟುವಾಗ ನಮ್ಮ ಕಾಲುಗಳಲ್ಲಿನ ಕೊಳೆಯು ಅದರಲ್ಲಿ ಬಿದ್ದರೆ, ಆ ನೀರನ್ನು ತೀರ್ಥವೆಂದು ಸೇವಿಸುವ ಭಕ್ತರಿಗೆ ರೋಗಗಳು ಬರುತ್ತವೆ, ಆದುದರಿಂದ ಅದನ್ನು ದಾಟುವುದಿಲ್ಲವೆಂದು ಅನಿಸುತ್ತದೆ !)

ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ

ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಯಾಯುಧಮ್|
ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್|| – ಬಿಲ್ವಾಷ್ಟಕ, ಶ್ಲೋಕ ೧
ಅರ್ಥ: ಮೂರು ಎಲೆಗಳಿರುವ, ತ್ರಿಗುಣಗಳಂತಿರುವ, ಮೂರು ಕಣ್ಣುಗಳಂತಿರುವ, ಮೂರು ಆಯುಧಗಳಂತಿರುವ ಮತ್ತು ಮೂರು ಜನ್ಮಗಳ ಪಾಪಗಳನ್ನು ನಾಶ ಮಾಡುವ ಈ ಬಿಲ್ವಪತ್ರೆ ಯನ್ನು ನಾನು ಶಿವನಿಗೆ ಅರ್ಪಿಸುತ್ತೇನೆ.
ಶಿವನಿಗೆ ತ್ರಿದಳ ಬಿಲ್ವವನ್ನು ಅರ್ಪಿಸುವುದರ ಹಿಂದಿನ ಮನಃಶಾಸ್ತ್ರದ ಕಾರಣಗಳು
೧. ಸತ್ತ್ವ, ರಜ ಮತ್ತು ತಮಗಳಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯಗಳು ಉತ್ಪನ್ನವಾಗುತ್ತವೆ. ಕುಮಾರಾವಸ್ಥೆ, ಯೌವನಾವಸ್ಥೆ ಮತ್ತು ವೃದ್ಧಾಪ್ಯ ಅವಸ್ಥೆ ಇವುಗಳ ಪ್ರತೀಕವೆಂದು ಶಂಕರನಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕು, ಅಂದರೆ ಶಂಕರನಿಗೆ ಈ ಮೂರೂ ಅವಸ್ಥೆಗಳ ಆಚೆಗೆ ಹೋಗುವ ಇಚ್ಛೆಯನ್ನು ಪ್ರಕಟಿಸಬೇಕು; ಏಕೆಂದರೆ ತ್ರಿಗುಣಾತೀತವಾಗುವುದರಿಂದ ಈಶ್ವರನ ಭೇಟಿಯಾಗುತ್ತದೆ.
ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವ ಪದ್ಧತಿಯ ಹಿಂದಿನ ಅಧ್ಯಾತ್ಮಶಾಸ್ತ್ರ
೧. ತಾರಕ ಅಥವಾ ಮಾರಕ ಉಪಾಸನೆಯ ಪದ್ಧತಿಗನುಸಾರ ಬಿಲ್ವವನ್ನು ಹೇಗೆ ಅರ್ಪಿಸಬೇಕು?
ಬಿಲ್ವದ ಎಲೆಗಳು ಶಿವತತ್ತ್ವದಲ್ಲಿನ ತಾರಕಶಕ್ತಿಯ ವಾಹಕ ಮತ್ತು ಬಿಲ್ವದ ಎಲೆಗಳ ತೊಟ್ಟು ಶಿವತತ್ತ್ವದಲ್ಲಿನ ಮಾರಕ ಶಕ್ತಿಯ ವಾಹಕವಾಗಿದೆ.
ಅ೧. ಶಿವನ ತಾರಕ ರೂಪದ ಉಪಾಸನೆಯನ್ನು ಮಾಡುವವರು
ಸಾಮಾನ್ಯ ಉಪಾಸಕರ ಪ್ರಕೃತಿಯು ತಾರಕವಾಗಿರುವುದರಿಂದ ಶಿವನ ತಾರಕ ಉಪಾಸನೆಯು ಅವರ ಪ್ರಕೃತಿಗೆ ಹೊಂದು ವಂತಹ ಮತ್ತು ಅವರ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರುತ್ತದೆ. ಇಂತಹವರು ಶಿವನ ತಾರಕ ತತ್ತ್ವದ ಲಾಭವನ್ನು ಪಡೆದುಕೊಳ್ಳಲು ತೊಟ್ಟನ್ನು ಲಿಂಗದ ಕಡೆಗೆ ಮತ್ತು ಎಲೆಗಳ ತುದಿಗಳನ್ನು ನಮ್ಮೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು. (ಬಿಲ್ವಂ ತು ನ್ಯುಬ್ಜಂ ಸ್ವಾಭಿಮುಖಾಗ್ರಂ ಚ|)
ಅ೨. ಶಿವನ ಮಾರಕ ರೂಪದ ಉಪಾಸನೆಯನ್ನು ಮಾಡುವವರು
ಶಾಕ್ತಪಂಥೀಯರು ಶಿವನ ಮಾರಕ ರೂಪದ ಉಪಾಸನೆಯನ್ನು ಮಾಡುತ್ತಾರೆ.
ಅ. ಇಂತಹವರು ಶಿವನ ಮಾರಕ ತತ್ತ್ವದ ಲಾಭವನ್ನು ಪಡೆದುಕೊಳ್ಳಲು ತೊಟ್ಟನ್ನು ನಮ್ಮ ಕಡೆಗೆ ಮತ್ತು ಎಲೆಗಳ ತುದಿಗಳನ್ನು ಶಿವನೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು.
ಆ. ಲಿಂಗದಲ್ಲಿ ಆಹತ (ಲಿಂಗದ ಮೇಲೆ ಬೀಳುವ ನೀರಿನ ಆಘಾತದಿಂದ ನಿರ್ಮಾಣವಾಗುವ) ನಾದದಲ್ಲಿನ ಪವಿತ್ರಕಗಳು ಮತ್ತು ಅನಾಹತ (ಸೂಕ್ಷ್ಮ) ನಾದದಲ್ಲಿನ ಪವಿತ್ರಕಗಳು ಹೀಗೆ ಎರಡು ವಿಧದ ಪವಿತ್ರಕಗಳಿರುತ್ತವೆ. ಈ ಎರಡು ರೀತಿಯ ಪವಿತ್ರಕಗಳನ್ನು ಮತ್ತು ಲಿಂಗದ ಮೇಲೆ ಅರ್ಪಿಸಿರುವ ಬಿಲ್ವಪತ್ರೆಯಲ್ಲಿನ ಪವಿತ್ರಕಗಳನ್ನು, ಹೀಗೆ ಮೂರು ರೀತಿಯ ಪವಿತ್ರಕಗಳನ್ನು ಸೆಳೆದುಕೊಳ್ಳಲು ಮೂರು ಎಲೆಗಳಿರುವ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುತ್ತಾರೆ. ಎಳೆ ಬಿಲ್ವಪತ್ರೆಯು ಆಹತ (ನಾದ ಭಾಷೆ) ಮತ್ತು ಅನಾಹತ (ಪ್ರಕಾಶಭಾಷೆ) ಧ್ವನಿಗಳನ್ನು ಒಟ್ಟುಗೂಡಿಸಬಲ್ಲದು. ಬಿಲ್ವಪತ್ರೆಯನ್ನು ಲಿಂಗದ ಮೇಲೆ ಅರ್ಪಿಸುವಾಗ ಅದನ್ನು ಕೆಳಮುಖ ವಾಗಿ, ತೊಟ್ಟು ನಮ್ಮ ಕಡೆಗೆ ಬರುವಂತೆ ಇಡುತ್ತಾರೆ. ಹೀಗೆ ಮಾಡುವುದರಿಂದ ಮೂರೂ ಎಲೆಗಳಿಂದ ಒಟ್ಟಿಗೆ ಬರುವ ಶಕ್ತಿಯು ನಮ್ಮ ಕಡೆಗೆ ಬರುತ್ತದೆ. ಈ ಮೂರು ಪವಿತ್ರಕಗಳ ಶಕ್ತಿಯಿಂದ ತ್ರಿಗುಣಗಳು ಕಡಿಮೆಯಾಗಲು ಸಹಾಯವಾಗುತ್ತದೆ.
೨. ಬಿಲ್ವವನ್ನು ಅರ್ಪಿಸುವ ಪದ್ಧತಿಗನುಸಾರ ವ್ಯಷ್ಟಿ ಮತ್ತು ಸಮಷ್ಟಿ ಸ್ತರದಲ್ಲಿ ಶಿವತತ್ತ್ವದಿಂದಾಗುವ ಲಾಭ
ಯಾವಾಗ ನಾವು ಬಿಲ್ವದ ಎಲೆಗಳ ತೊಟ್ಟನ್ನು ಶಿವಲಿಂಗದ ಕಡೆಗೆ ಮತ್ತು ಎಲೆಗಳ ತುದಿಗಳನ್ನು ನಮ್ಮ ಕಡೆಗೆ ಮಾಡಿ ಬಿಲ್ವವನ್ನು ಅರ್ಪಿಸುತ್ತೇವೆಯೋ, ಆಗ ಎಲೆಗಳ ತುದಿಗಳಿಂದ ಶಿವತತ್ತ್ವವು ವಾತಾವರಣದಲ್ಲಿ ಹರಡುವ ಪ್ರಮಾಣವು ಹೆಚ್ಚಿಗೆ ಇರುತ್ತದೆ. ಈ ಪದ್ಧತಿಯಿಂದ ಸಮಷ್ಟಿಗೆ ಹೆಚ್ಚು ಲಾಭವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಯಾವಾಗ ನಾವು ಬಿಲ್ವದ ಎಲೆಗಳ ತೊಟ್ಟನ್ನು ನಮ್ಮ ಕಡೆಗೆ ಮತ್ತು ಎಲೆಗಳ ತುದಿಗಳನ್ನು ಲಿಂಗದ ಕಡೆಗೆ ಮಾಡಿ ಬಿಲ್ವವನ್ನು ಅರ್ಪಿಸುತ್ತೇವೆಯೋ, ಆಗ ತೊಟ್ಟಿನಿಂದ ಕೇವಲ ಬಿಲ್ವವನ್ನು ಅರ್ಪಿಸುವವನಿಗೆ ಮಾತ್ರ ಶಿವತತ್ತ್ವವು ಸಿಗುತ್ತದೆ. ಈ ಪದ್ಧತಿಯಿಂದ ವ್ಯಷ್ಟಿ ಸ್ತರದಲ್ಲಿ ಹೆಚ್ಚಿಗೆ ಲಾಭವಾಗುತ್ತದೆ.
ಬಿಲ್ವಪತ್ರೆಯನ್ನು ಕೆಳಮುಖವಾಗಿ ಏಕೆ ಅರ್ಪಿಸಬೇಕು?
ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಕೆಳಮುಖವಾಗಿ ಅರ್ಪಿಸಿದರೆ ಅದರಿಂದ ನಿರ್ಗುಣ ಸ್ತರದಲ್ಲಿನ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿತವಾಗಿ ಭಕ್ತರಿಗೆ ಹೆಚ್ಚು ಲಾಭವಾಗುತ್ತದೆ.
ಶಿವನಿಗೆ ತಾಜಾ ಬಿಲ್ವಪತ್ರೆ ಸಿಗದಿದ್ದರೆ ಹಿಂದಿನ ದಿನ ತೆಗೆದಿಟ್ಟ ಬಿಲ್ವಪತ್ರೆಯು ನಡೆಯುತ್ತದೆ, ಆದರೆ ಸೋಮವಾರದ ಬಿಲ್ವಪತ್ರೆ ಮರುದಿನ ನಡೆಯುವುದಿಲ್ಲ.
ಬಿಲ್ವಾರ್ಚನೆ
‘ಓಂ ನಮಃ ಶಿವಾಯ’ ಈ ಮಂತ್ರವನ್ನು ಜಪಿಸುತ್ತಾ ಅಥವಾ ಭಗವಾನ್ ಶಂಕರನ ಒಂದು ಹೆಸರನ್ನು ಉಚ್ಚರಿಸುತ್ತಾ ಒಂದೊಂದೆ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸುವುದನ್ನು ಬಿಲ್ವಾರ್ಚನೆ ಎನ್ನುತ್ತಾರೆ. ಬಿಲ್ವಪತ್ರೆಗಳನ್ನು ಇಡೀ ಶಿವಲಿಂಗವು ಪೂರ್ತಿಯಾಗಿ ಮುಚ್ಚುವಂತೆ ಅರ್ಪಿಸಬೇಕು. ಬಿಲ್ವಪತ್ರೆಗಳನ್ನು ಮೂರ್ತಿಯ ಚರಣಗಳಿಂದ (ಲಿಂಗದ ಕೆಳಭಾಗದಿಂದ) ಅರ್ಪಿಸಲು ಪ್ರಾರಂಭಿಸಿ ಮೇಲ್ಬದಿಗೆ ಹೋಗಬೇಕು. ಇದರಿಂದ ಬಿಲ್ವಾರ್ಚನೆಯನ್ನು ಚರಣಗಳಿಂದ ಪ್ರಾರಂಭಿಸಿದ ಲಾಭವಾಗುತ್ತದೆ. ಅಲ್ಲದೇ ಬಿಲ್ವಪತ್ರೆಗಳನ್ನು ಸರಿಯಾಗಿ ಅರ್ಪಿಸಿ ಇಡೀ ಮೂರ್ತಿಯನ್ನು ಮುಚ್ಚಲು ಸಾಧ್ಯವಾಗುತ್ತದೆ.
ಆರೋಗ್ಯದ ದೃಷ್ಟಿಯಿಂದ ಬಿಲ್ವಪತ್ರೆಯ ಲಾಭಗಳು
೧. ಆಯುರ್ವೇದದಲ್ಲಿನ ಕಾಯಾಕಲ್ಪದಲ್ಲಿ ತ್ರಿದಲರಸಸೇವನೆಗೆ ಬಹಳ ಮಹತ್ವವನ್ನು ಕೊಡಲಾಗಿದೆ.
೨. ಬಿಲ್ವದ ಫಲಕ್ಕೆ ಆಯುರ್ವೇದದಲ್ಲಿ ಅಮೃತಫಲ ಎನ್ನುತ್ತಾರೆ. ಬಿಲ್ವದಿಂದ ವಾಸಿಯಾಗದ ಯಾವ ರೋಗವೂ ಇಲ್ಲ. ಯಾವುದಾದರೊಂದು ರೋಗಕ್ಕೆ ಯಾವ ಔಷಧಿಯೂ ಸಿಗದಿದ್ದರೆ ಬಿಲ್ವವನ್ನು ಉಪಯೋಗಿಸಬೇಕು. ಗರ್ಭವತಿ ಸ್ತ್ರೀಯರಿಗೆ ಮಾತ್ರ ಬಿಲ್ವವನ್ನು ಕೊಡಬಾರದು, ಏಕೆಂದರೆ ಅದನ್ನು ಸೇವಿಸಿದರೆ ಭ್ರೂಣವು ಮರಣ ಹೊಂದುವ ಸಾಧ್ಯತೆಯಿರುತ್ತದೆ.

ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ

ಶಿವನ ದರ್ಶನ ಪಡೆಯುವ ಮುನ್ನ ನಂದಿಯ ದರ್ಶನ ಪಡೆಯುವುದು
ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಮುನ್ನ ನಂದಿಯ ಎರಡೂ ಕೊಂಬುಗಳಿಗೆ ಕೈಮುಟ್ಟಿಸಿ ಅದರ ದರ್ಶನ ಪಡೆಯಬೇಕು ನಂದಿಯ ಕೊಂಬುಗಳಿಂದ ಪ್ರಕ್ಷೇಪಿತವಾಗುವ ಶಿವತತ್ತ್ವದ ಸಗುಣ ಮಾರಕ ಲಹರಿಗಳಿಂದ ವ್ಯಕ್ತಿಯ ಶರೀರದಲ್ಲಿನ ರಜ-ತಮ ಕಣಗಳ ವಿಘಟನೆಯಾಗಿ ವ್ಯಕ್ತಿಯ ಸಾತ್ತ್ವಿಕತೆಯು ಹೆಚ್ಚಾಗುತ್ತದೆ. ಇದರಿಂದ ವ್ಯಕ್ತಿಗೆ ಶಿವಲಿಂಗದಿಂದ ಹೊರ ಬೀಳುವ ಶಕ್ತಿಶಾಲಿ ಲಹರಿಗಳನ್ನು ಸಹಿಸಲು ಸಾಧ್ಯವಾಗುತ್ತದೆ. ನಂದಿಯ ಕೊಂಬುಗಳಿಂದ ದರ್ಶನವನ್ನು ಪಡೆದುಕೊಳ್ಳದೇ ನೇರವಾಗಿ ಶಿವನ ದರ್ಶನವನ್ನು ಪಡೆದು ಕೊಂಡರೆ ತೇಜಲಹರಿಗಳ ಆಘಾತದಿಂದ ಶರೀರದಲ್ಲಿ ಉಷ್ಣತೆ ನಿರ್ಮಾಣವಾಗುವುದು, ತಲೆ ಭಾರವಾಗುವುದು, ಶರೀರ ಅಕಸ್ಮಾತ್ತಾಗಿ ಕಂಪಿಸುವುದು ಮುಂತಾದ ತೊಂದರೆಗಳಾಗಬಹುದು.
ಶೃಂಗದರ್ಶನದ ಮಹತ್ವವೇನು?
‘ಶೃಂಗದರ್ಶನ’ ಎಂದರೆ ನಂದಿಯ ಕೊಂಬುಗಳ ಮೂಲಕ ಶಿವಲಿಂಗವನ್ನು ನೋಡುವುದು.
ಶೃಂಗದರ್ಶನದ ಯೋಗ್ಯ ಪದ್ಧತಿ
ವಾಮಹಸ್ತಿ ವೃಷಣ ಧರೋನಿ|
ತರ್ಜನಿ ಅಂಗುಷ್ಠ ಶೃಂಗೀ ಠೆವೋನಿ|| – ಶ್ರೀಗುರುಚರಿತ್ರೆ
ಅರ್ಥ: ೧. ನಂದಿಯ ಬಲಬದಿಗೆ ಕುಳಿತುಕೊಂಡು ಅಥವಾ ನಿಂತುಕೊಂಡು ಎಡಗೈಯನ್ನು ನಂದಿಯ ವೃಷಣದ ಮೇಲಿಡಬೇಕು.
೨. ಬಲಗೈಯ ತರ್ಜನಿ (ಹೆಬ್ಬೆರಳಿನ ಸಮೀಪದ ಬೆರಳು) ಮತ್ತು ಹೆಬ್ಬೆರಳನ್ನು ನಂದಿಯ ಎರಡು ಕೊಂಬುಗಳ ಮೇಲಿಡಬೇಕು.
ಎರಡು ಕೊಂಬುಗಳು ಮತ್ತು ಅದರ ಮೇಲಿರಿಸಿದ ಎರಡು ಬೆರಳುಗಳ ನಡುವಿನ ಖಾಲಿ ಜಾಗದಿಂದ ಶಿವಲಿಂಗದ ದರ್ಶನವನ್ನು ಪಡೆದುಕೊಳ್ಳಬೇಕು.

ಲಿಂಗದ ದರ್ಶನವನ್ನು ಪಡೆದುಕೊಳ್ಳುವಾಗ ಶಿವಲಿಂಗ ಮತ್ತು ನಂದಿಯ ನಡುವೆ ನಿಂತುಕೊಳ್ಳದೇ ಅಥವಾ ಕುಳಿತುಕೊಳ್ಳದೇ ಲಿಂಗ ಮತ್ತು ನಂದಿಯನ್ನು ಜೋಡಿಸುವ ರೇಖೆಯ ಬದಿಯಲ್ಲಿ ನಿಂತುಕೊಳ್ಳಬೇಕು.
ಶಿವಲಿಂಗದಿಂದ ಬರುವ ಶಕ್ತಿಶಾಲಿ ಸಾತ್ತ್ವಿಕ ಲಹರಿಗಳು ಮೊದಲು ನಂದಿಯ ಕಡೆಗೆ ಆಕರ್ಷಿತವಾಗಿ ನಂತರ ನಂದಿಯಿಂದ ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತಿರುತ್ತವೆ. ನಂದಿಯ ವೈಶಿಷ್ಟ್ಯವೇನೆಂದರೆ ನಂದಿಯಿಂದ ಈ ಲಹರಿಗಳು ಆವಶ್ಯಕತೆಗನುಸಾರವಾಗಿಯೇ ಪ್ರಕ್ಷೇಪಿತವಾಗುತ್ತಿರುತ್ತವೆ. ಇದರಿಂದ ಶಿವಲಿಂಗದ ದರ್ಶನವನ್ನು ಪಡೆಯುವವರಿಗೆ ಲಹರಿಗಳು ಶಿವನಿಂದ ನೇರವಾಗಿ ಸಿಗುವುದಿಲ್ಲ; ಇದರಿಂದ ಅವರಿಗೆ ಶಿವನಿಂದ ಬರುವ ಶಕ್ತಿ ಶಾಲಿ ಲಹರಿಗಳಿಂದ ತೊಂದರೆಯಾಗುವುದಿಲ್ಲ. ಇಲ್ಲಿ ಗಮನದಲ್ಲಿಡಬೇಕಾದ ಮಹತ್ವದ ಸಂಗತಿಯೇನೆಂದರೆ ಶಿವನಿಂದ ಬರುವ ಲಹರಿಗಳು ಸಾತ್ತ್ವಿಕವೇ ಆಗಿದ್ದರೂ ಸಾಮಾನ್ಯ ವ್ಯಕ್ತಿಗಳ ಆಧ್ಯಾತ್ಮಿಕ ಮಟ್ಟವು ಹೆಚ್ಚಿಗೆ ಇಲ್ಲದ ಕಾರಣ ಆ ಸಾತ್ತ್ವಿಕ ಲಹರಿಗಳನ್ನು ಸಹಿಸಿಕೊಳ್ಳುವ ಕ್ಷಮತೆಯು ಅವರಲ್ಲಿರುವುದಿಲ್ಲ. ಆದುದರಿಂದ ಈ ಲಹರಿಗಳಿಂದ ಅವರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಆದುದರಿಂದ ಸಾಮಾನ್ಯ ವ್ಯಕ್ತಿಗಳು ಲಿಂಗದ ದರ್ಶನವನ್ನು ಪಡೆದುಕೊಳ್ಳುವಾಗ ಲಿಂಗ ಮತ್ತು ನಂದಿಯ ನಡುವೆ ನಿಂತುಕೊಳ್ಳದೇ ಅಥವಾ ಕುಳಿತು ಕೊಳ್ಳದೇ ಲಿಂಗ ಮತ್ತು ನಂದಿಯನ್ನು ಜೋಡಿಸುವ ರೇಖೆಯ ಬದಿಗೆ ನಿಂತು ಕೊಳ್ಳಬೇಕು.
(ಈ ತತ್ತ್ವಕ್ಕನುಸಾರ ಶ್ರೀವಿಷ್ಣು ಇತ್ಯಾದಿ ದೇವತೆಗಳ ದೇವಸ್ಥಾನಗಳಲ್ಲಿ ದೇವತೆಯ ಮೂರ್ತಿ ಮತ್ತು ಅದರ ಎದುರಿನಲ್ಲಿರುವ ಆಮೆಯ ಪ್ರತಿಮೆಯ ನಡುವೆ ನಿಂತು ಕೊಂಡು/ಕುಳಿತುಕೊಂಡು ದರ್ಶನ ಪಡೆಯಬಾರದು. ದರ್ಶನ ಪಡೆಯಲು ಬಯಸುವವರು ಆಮೆಯ ಪ್ರತಿಮೆಯ ಬದಿಯಲ್ಲಿ ನಿಂತುಕೊಂಡು ದರ್ಶನ ಪಡೆಯಬೇಕು.)
ಶೇ. ೫೦ ಕ್ಕಿಂತಲೂ ಹೆಚ್ಚಿನ ಆಧ್ಯಾತ್ಮಿಕ ಮಟ್ಟವಿರುವ ಭಕ್ತರಲ್ಲಿ ದೇವತೆಗಳಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಸಹಿಸುವ ಕ್ಷಮತೆಯಿರುತ್ತದೆ, ಆದುದರಿಂದ ಅವರಿಗೆ ಆ ಲಹರಿಗಳಿಂದ ತೊಂದರೆಯಾಗುವುದಿಲ್ಲ. ಇಂತಹ ಭಕ್ತರು ದೇವತೆಯ ದರ್ಶನವನ್ನು ಎದುರಿನಿಂದಲೇ ಪಡೆದುಕೊಳ್ಳಬೇಕು. ಅವರಿಗೆ ದೇವತೆಗಳಿಂದ ಪ್ರಕ್ಷೇಪಿತವಾಗುವ ಲಹರಿಗಳನ್ನು ಸಹಜವಾಗಿ ಗ್ರಹಿಸಲು ಸಾಧ್ಯವಾಗುತ್ತದೆ.

ಶಿವನ ಮೂರ್ತಿವಿಜ್ಞಾನ, ಶಿವಲಿಂಗದ ಆಕಾರದ ಅರ್ಥ

ಮೂರ್ತಿವಿಜ್ಞಾನ
ಪ್ರತಿಯೊಂದು ದೇವತೆ ಎಂದರೆ ಒಂದು ತತ್ತ್ವವಾಗಿದೆ. ಈ ತತ್ತ್ವವು ಎಲ್ಲ ಯುಗಗಳಲ್ಲಿ ಇದ್ದೇ ಇರುತ್ತದೆ. ದೇವತೆಯ ತತ್ತ್ವವು ಆಯಾ ಕಾಲಕ್ಕೆ ಆವಶ್ಯಕವಿರುವ ಸಗುಣರೂಪದಲ್ಲಿ ಪ್ರಕಟವಾಗುತ್ತದೆ. ಉದಾ. ಭಗವಾನ ಶ್ರೀವಿಷ್ಣುವು ಕಾರ್ಯಕ್ಕನುಸಾರ ಧರಿಸಿದ ಒಂಬತ್ತು ಅವತಾರಗಳು. ಮಾನವನು ಕಾಲಕ್ಕನುಸಾರ ದೇವತೆಗಳನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾನೆ.
ಶಿವನ ಮೂರ್ತಿಯಲ್ಲಿ ಕಾಲಕ್ಕನುಸಾರ ಮುಂದೆ ಕೊಟ್ಟಿರುವಂತೆ ಬದಲಾವಣೆಯಾಗುತ್ತಾ ಹೋಯಿತು. ಈ ವಿಷಯವನ್ನು ಓದುವಾಗ ‘ಶಿವನು ಲಯದ ದೇವತೆಯಾಗಿರುವಾಗ ಶಿವನ ಶಿಶ್ನ, ನಂದಿ, ಲಿಂಗ-ಭಗ ರೂಪದಲ್ಲಿನ ಶಿವಲಿಂಗ ಮುಂತಾದ ಉತ್ಪತ್ತಿಯ ಸಂದರ್ಭದಲ್ಲಿನ ಮೂರ್ತಿಗಳನ್ನು ಏಕೆ ತಯಾರಿಸಲಾಯಿತು’ ಎಂಬ ಪ್ರಶ್ನೆಯು ಯಾರಿಗಾದರೂ ಬರುವ ಸಾಧ್ಯತೆಯಿದೆ. ಅದರ ಉತ್ತರವು ಹೀಗಿದೆ – ಶೈವ ಸಂಪ್ರದಾಯಕ್ಕನುಸಾರ ಉತ್ಪತ್ತಿ, ಸ್ಥಿತಿ ಮತ್ತು ಲಯ ಈ ಮೂರೂ ಸ್ಥಿತಿಗಳ ದೇವರು ಶಿವನೇ ಆಗಿದ್ದಾನೆ. ತ್ರಿಮೂರ್ತಿ ಸಂಕಲ್ಪನೆಯಲ್ಲಿ (ದತ್ತ ಸಂಪ್ರದಾಯದಲ್ಲಿ) ಶಿವನು ಕೇವಲ ಲಯದ ದೇವತೆಯಾಗಿದ್ದಾನೆ. ಮನಃಶಾಸ್ತ್ರದ ದೃಷ್ಟಿಯಿಂದಲೂ ಉತ್ಪತ್ತಿ ಮತ್ತು ಸ್ಥಿತಿಗೆ ಸಂಬಂಧಿಸಿದ ಉಪಾಸನೆಯನ್ನು ಮಾಡುವುದು ಹೆಚ್ಚಿನ ಜನರಿಗೆ ಸುಲಭವಾಗುತ್ತದೆ ಮತ್ತು ಲಯಕ್ಕೆ ಸಂಬಂಧಿಸಿದ ಉಪಾಸನೆಯನ್ನು ಮಾಡುವುದು ಕಠಿಣವಾಗುತ್ತದೆ. ಆದುದರಿಂದ ಶೈವ ಸಂಪ್ರದಾಯದಲ್ಲಿ ಶಿವನು ಉತ್ಪತ್ತಿಗೂ ಸಂಬಂಧಿಸಿದ್ದಾನೆ.’
ಪಿಂಡರೂಪ (ಲಿಂಗರೂಪ)
‘ಭಗ’ದ ಪ್ರತೀಕವಾಗಿರುವ ‘ಪಾಣಿಪೀಠ’ ಮತ್ತು ಲಿಂಗದ ಪ್ರತೀಕವಾಗಿರುವ ‘ಲಿಂಗ’ ಇವೆರಡೂ ಸೇರಿ ಶಿವಲಿಂಗವು ತಯಾರಾಯಿತು. ಭೂಮಿ ಎಂದರೆ ಸೃಜನ ಮತ್ತು ಶಿವ ಎಂದರೆ ಪಾವಿತ್ರ್ಯ, ಹೀಗೆ ಪಾಣಿಪೀಠದಲ್ಲಿ ಸೃಜನ ಮತ್ತು ಪಾವಿತ್ರ್ಯವು ಒಟ್ಟಿಗಿದ್ದರೂ ವಿಶ್ವದ ಉತ್ಪತ್ತಿಯು ರೇತಸ್ಸಿನಿಂದ (ವೀರ್ಯದಿಂದ) ಆಗದೇ ಶಿವನ ಸಂಕಲ್ಪದಿಂದಾಯಿತು. ಈ ರೀತಿ ಶಿವ-ಪಾರ್ವತಿಯರು ಜಗತ್ತಿನ ತಂದೆ-ತಾಯಿಯಾಗಿದ್ದಾರೆ. ಕನಿಷ್ಕನ ಮಗನಾದ ಹುಇಷ್ಕನು ಎರಡನೆಯ ಶತಮಾನದಿಂದ ಶಿವಲಿಂಗ ಪೂಜೆಯನ್ನು ಪ್ರಾರಂಭಿ ಸಿದನು. ಶಕ್ತಿ ಇಲ್ಲದೇ ಶಿವನು ಏನೂ ಮಾಡಲಾರನು; ಆದುದರಿಂದ ಶಿವನ ಜೊತೆಯಲ್ಲಿ ಶಕ್ತಿಯ ಪೂಜೆಯು ಪ್ರಾರಂಭವಾಯಿತು. ಪಿಂಡರೂಪದಲ್ಲಿರುವ ಶಿವಲಿಂಗವು ಇಂಧನಶಕ್ತಿಯ ಪ್ರತೀಕವಾಗಿದೆ. ಇತ್ತೀಚಿನ ಅಣುಸ್ಥಾವರಗಳ ಆಕಾರವೂ ಶಿವಲಿಂಗದಂತೆಯೇ ಇರುತ್ತದೆ.
ಲಿಂಗ
ಅ. ಲಿಂಗವೆಂದರೆ ಯಾವುದಾದರೊಂದು ವಸ್ತುವಿನ ಅಥವಾ ಭಾವನೆಯ ಚಿಹ್ನೆ ಅಥವಾ ಪ್ರತೀಕ. ಮೇದಿನಿಕೋಶದಲ್ಲಿ ಲಿಂಗ ಶಬ್ದದ ಅರ್ಥವನ್ನು ಮುಂದಿನಂತೆ ಹೇಳಲಾಗಿದೆ.
ಲಿಂಗಂ ಚಿಹ್ನೇನುಮಾನೆ ಚ ಸಾಂಖ್ಯೋಕ್ತಪ್ರಕೃತಾವಪಿ |
ಶಿವಮೂರ್ತಿವಿಶೇಷೇ ಚ ಮೆಹನೇಪಿ ನಪುಂಸಕಮ್ ||
ಅರ್ಥ: ಲಿಂಗ ಶಬ್ದವು ಚಿಹ್ನೆ, ಅನುಮಾನ, ಸಾಂಖ್ಯಶಾಸ್ತ್ರದಲ್ಲಿನ ಪ್ರಕೃತಿ, ಶಿವಮೂರ್ತಿ ವಿಶೇಷ ಮತ್ತು ಶಿಶ್ನ ಎಂಬ ಅರ್ಥಗಳಲ್ಲಿದ್ದು ಅದು ನಪುಂಸಕವಾಗಿದೆ; ಆದರೆ ಸಾಮಾನ್ಯವಾಗಿ ಲಿಂಗ ಎಂಬ ಶಬ್ದವನ್ನು ‘ಶಿವನ ಪ್ರತೀಕ’ವೆಂದೇ ಅರ್ಥೈಸಲಾಗುತ್ತದೆ.
ಆ. ಪ್ರಳಯಕಾಲದಲ್ಲಿ ಪಂಚಮಹಾಭೂತಗಳ ಸಮೇತ ಇಡೀ ಜಗತ್ತು ಲಿಂಗದಲ್ಲಿ ಲಯವಾಗುತ್ತದೆ ಮತ್ತು ಸೃಷ್ಟಿಕಾಲದಲ್ಲಿ ಮತ್ತೆ ಅದರಿಂದಲೇ ಸಾಕಾರವಾಗುತ್ತದೆ; ಆದುದರಿಂದ ಅದನ್ನು ಲಿಂಗ ಎನ್ನಲಾಗಿದೆ.
ಇ. ಮಹಾಲಿಂಗಕ್ಕೆ ಮೂರು ಕಣ್ಣುಗಳಿರುತ್ತವೆ. ಅವು ಉತ್ಪತ್ತಿ, ಸ್ಥಿತಿ ಮತ್ತು ಲಯ, ಹಾಗೆಯೇ ತಮ (ವಿಸ್ಫುಟಿತ), ರಜ (ತಿರ್ಯಕ್), ಸತ್ತ್ವ (ಸಮ್ಯಕ್) ಲಹರಿಗಳ ಸಂಕೇತವಾಗಿವೆ.
ಪಾಣಿಪೀಠ (ಲಿಂಗವೇದಿಕೆ)
ಭೂಮಿಯು ದಕ್ಷಪ್ರಜಾಪತಿಯ ಮೊದಲನೆಯ ಕನ್ಯೆಯಾಗಿದ್ದಾಳೆ. ಅದಿತಿ, ಉತ್ತಾನಪಾದಾ, ಮಹೀ ಮತ್ತು ಪಾಣಿಪೀಠವು ಅವಳ ರೂಪ ಗಳಾಗಿವೆ. ಪಾಣೀಪೀಠದ ಮೂಲ ಹೆಸರು ಸುವರ್ಣಶಂಖಿನಿಯಾಗಿದೆ. ಏಕೆಂದರೆ ಶಂಖದ (ಮತ್ತು ಕವಡೆಯ) ಆಕಾರವು ಸ್ತ್ರೀಯ ಸೃಜನೇಂದ್ರಿಯದಂತಿರುತ್ತದೆ. ಪಾಣಿಪೀಠದ ಪೂಜೆಯು ಮಾತೃದೇವತೆಯ ಪೂಜೆಯೇ ಆಗಿದೆ. ಪಾಣಿಪೀಠದ ಒಳಭಾಗದಲ್ಲಿ ಕೆತ್ತಿರುವ ರೇಖೆಗಳು ಮಹತ್ವದ್ದಾಗಿರುತ್ತವೆ. ಅವುಗಳಿಂದ ಲಿಂಗದಲ್ಲಿ ನಿರ್ಮಾಣವಾಗುವ ಸಾತ್ತ್ವಿಕ ಶಕ್ತಿಯು ಲಿಂಗದಲ್ಲಿ ಮತ್ತು ಗರ್ಭಗುಡಿಯಲ್ಲಿಯೇ ಸುತ್ತುತ್ತಲಿರುತ್ತದೆ ಮತ್ತು ವಿನಾಶಕರ ತಮಪ್ರಧಾನ ಶಕ್ತಿಯು ಪಾಣಿಪೀಠದ ಹರಿನಾಳದಿಂದ (ಅಭಿಷೇಕದ ನೀರು ಹೋಗುವ ದಾರಿ) ಹೊರಗೆ ಹೋಗುತ್ತದೆ.

ಅ.ಸುತ್ತಳತೆಗನುಸಾರ ಪಾಣಿಪೀಠದ ವಿಧಗಳು
೧. ಲಿಂಗದ ಸುತ್ತಳತೆಯ ಮೂರು ಪಟ್ಟು ಸುತ್ತಳತೆ ಇರುವ ಪಾಣಿಪೀಠವು ಅಧಮ.
೨. ಲಿಂಗದ ಸುತ್ತಳತೆಯ ಒಂದೂವರೆ ಪಟ್ಟು ಸುತ್ತಳತೆ ಇರುವ ಪಾಣಿಪೀಠವು ಮಧ್ಯಮ.
೩. ಲಿಂಗದ ಸುತ್ತಳತೆಯ ನಾಲ್ಕು ಪಟ್ಟು ಸುತ್ತಳತೆ ಇರುವ ಪಾಣಿಪೀಠವು ಉತ್ತಮ.
ಆ. ಎತ್ತರ : ಪಾಣಿಪೀಠದ ಎತ್ತರವು ಲಿಂಗದ ವಿಷ್ಣುಭಾಗದಷ್ಟಿರಬೇಕು.
ಇ. ಆಕಾರ : ಪಾಣಿಪೀಠಕ್ಕೆ ೪, ೬, ೮, ೧೨ ಅಥವಾ ೧೬ ಕೋನಗಳನ್ನು ಮಾಡಬಹುದು. ಆದರೆ ಪಾಣಿಪೀಠವು ಹೆಚ್ಚಾಗಿ ವೃತ್ತಾ ಕಾರವೇ ಆಗಿರುತ್ತದೆ.
ಪಾಣಿಪೀಠವು ಉತ್ತರಮುಖಿಯಾಗಿದ್ದರೆ, ಅದರ ಆಕಾರವು ಕೆಳಗಿನ ಆಕೃತಿಯಲ್ಲಿ ತೋರಿಸಿದಂತಾಗುತ್ತದೆ.
ಈ. ವೀರ್ಯಾಣು ಮತ್ತು ಸುವರ್ಣಕಾಂತಿಮಯ ಅಧಃಶಾಯಿ (ಗರ್ಭದಲ್ಲಿ ಪ್ರವೇಶಿಸುವ ಜೀವ) ಹಾಗೂ ಜನ್ಮಕ್ಕೆ ಬರುವ ನವಜಾತ ಶಿಶುಗಳು ಹೀಗೆಯೇ ಕಾಣಿಸುತ್ತವೆ.

ಶಿವಲಿಂಗದ ವಿಧಗಳು

ಚಲ ಮತ್ತು ಅಚಲ
೧. ಚಲ ಲಿಂಗವನ್ನು ಯಾವುದಾದರೊಂದು ವಿಶಿಷ್ಟ ಪೂಜೆಯನ್ನು ಮಾಡಲು ತಯಾರಿಸುತ್ತಾರೆ. ಶ್ರೀಗಣೇಶ ಚತುರ್ಥಿಗೆ ಯಾವ ರೀತಿ ಶ್ರೀಗಣೇಶನ ನೂತನ ಮೂರ್ತಿಯನ್ನು ತಯಾರಿಸಿ ನಂತರ ಅದನ್ನು ವಿಸರ್ಜನೆ ಮಾಡುತ್ತಾರೆಯೋ ಅದೇ ರೀತಿ ಇದನ್ನು ಮಾಡುತ್ತಾರೆ. ಅಚಲ ಲಿಂಗವನ್ನು ಒಂದು ಸ್ಥಳದಲ್ಲಿ ಸ್ಥಾಪಿಸಲಾಗಿರುತ್ತದೆ.
೨. ಲಿಂಗಾಯತರು ಕುತ್ತಿಗೆಯಲ್ಲಿ ಧರಿಸುವ ಲಿಂಗಕ್ಕೆ ‘ಚಲ ಲಿಂಗ’ ಎಂದು ಹೇಳುತ್ತಾರೆ.
ಭೂಮಿಯ ಸಂದರ್ಭದಲ್ಲಿ
೧. ಭೂಮಿಯ ಒಳಗಿರುವ ಲಿಂಗಗಳು (ಸ್ವಯಂಭೂ)
ಅ. ಇವುಗಳಲ್ಲಿ ಬಹಳ ಶಕ್ತಿಯಿರುತ್ತದೆ; ಆದುದರಿಂದಲೇ ಇವು ಭೂಮಿಯ ಒಳಗಿರುತ್ತವೆ. ಅವು ಭೂಮಿಯ ಮೇಲಿದ್ದರೆ ಅವುಗಳಿಂದ ಹೊರಬೀಳುವ ಶಕ್ತಿಯನ್ನು ಭಕ್ತರು ಸಹಿಸಲಾರರು. (ಕಣ್ಣುಗಳಿಂದ ಹೊರಬೀಳುವ ತೇಜದಿಂದ ದರ್ಶನಕ್ಕೆ ಬರುವ ಜನರಿಗೆ ತೊಂದರೆಯಾಗ ಬಾರದೆಂದು ತಿರುಪತಿ ಬಾಲಾಜಿಯ ಕಣ್ಣುಗಳು ಅರ್ಧಮುಚ್ಚಿರುತ್ತವೆ.) ಪೂಜೆಯನ್ನು ಮಾಡುವವರು ನೆಲದ ಮೇಲೆ ಮಲಗಿಕೊಂಡು ಕೆಳಗೆ ಕೈ ಹಾಕಿ ಲಿಂಗದ ಪೂಜೆಯನ್ನು ಮಾಡುತ್ತಾರೆ. ಜ್ಯೋತಿರ್ಲಿಂಗಗಳ ನಂತರ ಇವುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಶಿವತತ್ತ್ವವಿರುತ್ತದೆ. ಇವು ಶಿವೇಚ್ಛೆಯಿಂದ ತಯಾರಾಗುತ್ತವೆ. ಮುಂದೆ ಯಾವುದಾದರೊಬ್ಬ ಭಕ್ತನಿಗೆ ಸಾಕ್ಷಾತ್ಕಾರವಾಗಿ ಇವುಗಳ ಅಸ್ತಿತ್ವದ ಅರಿವಾಗುತ್ತದೆ ಮತ್ತು ಅವುಗಳ ಪೂಜೆಯು ಪ್ರಾರಂಭವಾಗುತ್ತದೆ.
೨. ಭೂಮಿಗೆ ಸಮಾನವಾಗಿರುವ ಲಿಂಗಗಳು : ಇವುಗಳನ್ನು ಋಷಿ ಅಥವಾ ರಾಜರು ಸ್ಥಾಪಿಸಿರುತ್ತಾರೆ. ಇವುಗಳಲ್ಲಿ ಶಕ್ತಿಯು ಕಡಿಮೆಯಿರುತ್ತದೆ. ಭಕ್ತರಿಗೆ ಈ ಶಕ್ತಿಯನ್ನು ಸಹಿಸಲು ಸಾಧ್ಯವಾಗುತ್ತದೆ. ಪೂಜೆ ಮಾಡುವವನು ಲಿಂಗದ ಪಕ್ಕದಲ್ಲಿರುವ ತಗ್ಗಿನಲ್ಲಿ ಕುಳಿತುಕೊಂಡು ಪೂಜೆಯನ್ನು ಮಾಡುತ್ತಾನೆ.
೩. ಭೂಮಿಯ ಮೇಲಿರುವ ಲಿಂಗಗಳು : ಇವುಗಳನ್ನು ಭಕ್ತರು ಸ್ಥಾಪಿಸಿರುತ್ತಾರೆ. ಇವುಗಳಲ್ಲಿ ಎಲ್ಲಕ್ಕಿಂತ ಕಡಿಮೆ ಮತ್ತು ಎಲ್ಲರಿಗೂ ಸಹನವಾಗುವಷ್ಟೇ ಶಕ್ತಿಯಿರುತ್ತದೆ. ಪೂಜೆ ಮಾಡುವವರು ಲಿಂಗದ ಪಕ್ಕದಲ್ಲಿ ಕಟ್ಟಿರುವ ಕಟ್ಟೆಯ ಮೇಲೆ ಕುಳಿತುಕೊಂಡು ಪೂಜೆಯನ್ನು ಮಾಡುತ್ತಾರೆ.
ಎರಡನೆಯ ಮತ್ತು ಮೂರನೆಯ ವಿಧದ ಲಿಂಗಗಳಿಗೆ ‘ಮಾನುಷ ಲಿಂಗ’ ಎನ್ನುತ್ತಾರೆ. ‘ಇವುಗಳನ್ನು ಮನುಷ್ಯರು ತಯಾರಿಸುವುದರಿಂದ ಇವುಗಳಿಗೆ ಮಾನುಷಲಿಂಗ ಎಂಬ ಹೆಸರು ಬಂದಿರಬಹುದು. ಈ ಲಿಂಗಗಳನ್ನು ಸ್ಥಿರಲಿಂಗಗಳೆಂದು ಪರಿಗಣಿಸಲಾಗುತ್ತದೆ. ಇವುಗಳಿಗೆ ಬ್ರಹ್ಮಭಾಗ, ವಿಷ್ಣುಭಾಗ ಮತ್ತು ರುದ್ರಭಾಗ ಎಂದು ಮೂರು ಭಾಗಗಳಿರುತ್ತವೆ. ಎಲ್ಲಕ್ಕಿಂತಲೂ ಕೆಳಗಿನ ಭಾಗಕ್ಕೆ ‘ಬ್ರಹ್ಮಭಾಗ’ ಎನ್ನುತ್ತಾರೆ. ಅದು ಚತುಷ್ಕೋನಾಕಾರದ್ದಾಗಿರುತ್ತದೆ. ಮಧ್ಯದ ಅಷ್ಟಕೋನಾಕಾರದ ಭಾಗವನ್ನು ‘ವಿಷ್ಣುಭಾಗ’ ಎನ್ನುತ್ತಾರೆ. ಈ ಎರಡೂ ಭಾಗಗಳು ಭೂಮಿಯ ಒಳಗೆ ಇರುತ್ತವೆ. ಎಲ್ಲಕ್ಕಿಂತಲೂ ಮೇಲಿನ ಉದ್ದನೆಯ ದುಂಡಾದ ಭಾಗಕ್ಕೆ ರುದ್ರಭಾಗ ಎಂಬ ಹೆಸರಿದೆ. ಇದಕ್ಕೆ ಪೂಜೆಯ ಭಾಗವೆಂದೂ ಕರೆಯುತ್ತಾರೆ. ಏಕೆಂದರೆ ಪೂಜೆಯ ಸಾಮಗ್ರಿಗಳನ್ನು ಇದರ ಮೇಲೆಯೇ ಅರ್ಪಿಸುತ್ತಾರೆ. ಮೂರ್ತಿಶಾಸ್ತ್ರದ ಗ್ರಂಥಗಳಲ್ಲಿ ರುದ್ರಭಾಗದ ಮೇಲೆ ಕೆಲವು ರೇಖೆಗಳಿರಬೇಕು ಎಂದು ಹೇಳಲಾಗಿದೆ. ಈ ರೇಖೆಗಳಿಗೆ ‘ಬ್ರಹ್ಮಸೂತ್ರಗಳು’ ಎನ್ನುತ್ತಾರೆ. ದೈವಿಕ ಮತ್ತು ಆರ್ಷಕ ಲಿಂಗಗಳ ಮೇಲೆ ಇಂತಹ ರೇಖೆಗಳು ಇರುವುದಿಲ್ಲ.’
೪. ಗಾಳಿಯಲ್ಲಿ ತೇಲಾಡುವ ಲಿಂಗಗಳು : ಪಾದರಸದಿಂದ ತಯಾರಿಸಿದ ಸೋಮನಾಥನ ಲಿಂಗವು ನೆಲದಿಂದ ಐದು ಮೀ.ಎತ್ತರದಲ್ಲಿ ಯಾವುದೇ ಆಧಾರವಿಲ್ಲದೆ ತೇಲಾಡುತ್ತಿತ್ತು. ದರ್ಶನಾರ್ಥಿಗಳು ಅದರ ಕೆಳಗಿನಿಂದ ಹೋಗುತ್ತಿದ್ದರು. ಅದೇ ಲಿಂಗದ ಪ್ರದಕ್ಷಿಣೆಯಾಗುತ್ತಿತ್ತು.

ಭಸ್ಮವನ್ನು ಎಲ್ಲಿ ಹಚ್ಚಿಕೊಳ್ಳಬೇಕು? ಹೇಗೆ ಹಚ್ಚಿಕೊಳ್ಳಬೇಕು?

ಮಂತ್ರಸಹಿತ

‘ಸದ್ಯೋಜಾತಾ’ದಿ ಮಂತ್ರೇಸೀ| ಘ್ಯಾವೆ ಭಸ್ಮ ತಳಹಸ್ತಾಸೀ|
ಅಭಿಮಂತ್ರಾವೇ ಭಸ್ಮಾಸೀ| ‘ಅಗ್ನಿರಿತ್ಯಾ’ದಿ ಮಂತ್ರೇ ಕರೋನಿ|| ೨೦೦ ||
‘ಮಾನಸ್ತೋಕೆ’ತಿ ಮಂತ್ರೇಸೀ| ಸಂಮರ್ದಾವೇ ಅಂಗುಷ್ಠೇಸೀ|
‘ತ್ರ್ಯಂಬಕಾ’ದಿ ಮಂತ್ರೇಸೀ| ಶಿರಸಿ ಲಾವಿಜೆ ಪರಿಯೇಸಾ|| ೨೦೧ ||
‘ತ್ರಾಯುಷೇ’ತಿ ಮಂತ್ರೇಸೀ| ಲಾವಿಜೆ ಲಲಾಟಭುಜಾಂಸೀ|
ತ್ಯಾಣೋಂಚಿ ಮಂತ್ರೇ ಪರಿಯೆಸೀ| ಸ್ಥಾನಿ ಸ್ಥಾನಿ ಲಾವಿಜೆ|| ೨೦೨ ||
– ಶ್ರೀಗುರುಚರಿತ್ರೆ, ಅಧ್ಯಾಯ ೨೯
ಅರ್ಥ: ‘ಸದ್ಯೋಜಾತ’ ಇತ್ಯಾದಿ ಮಂತ್ರಗಳನ್ನು ಹೇಳಿ ಭಸ್ಮವನ್ನು ಅಂಗೈಯಲ್ಲಿ ತೆಗೆದುಕೊಳ್ಳಬೇಕು. ‘ಅಗ್ನಿರಿತಿ’ ಇತ್ಯಾದಿ ಮಂತ್ರಗಳನ್ನು ಹೇಳಿ ಅದನ್ನು ಅಭಿಮಂತ್ರಿಸಬೇಕು. || ೨೦೦||
‘ಮಾನಸ್ತೋಕ’ ಇತ್ಯಾದಿ ಮಂತ್ರಗಳನ್ನು ಹೇಳಿ ಅದನ್ನು ಹೆಬ್ಬೆರಳಿನಿಂದ ತಿಕ್ಕಬೇಕು. ‘ತ್ರ್ಯಂಬಕಾ’ ಇತ್ಯಾದಿ ಮಂತ್ರಗಳನ್ನು ಹೇಳಿ ಅದನ್ನು ತಲೆಗೆ ಹಚ್ಚಿಕೊಳ್ಳಬೇಕು. ||೨೦೧||
‘ತ್ರ್ಯಾಯುಷ’ ಮಂತ್ರವನ್ನು ಪಠಿಸುತ್ತಾ ಅದನ್ನು ಹಣೆಗೂ ರಟ್ಟೆಗಳಿಗೂ ಹಚ್ಚಿಕೊಳ್ಳಬೇಕು. ಅದೇ ಮಂತ್ರದಿಂದ ಭಸ್ಮವನ್ನು ಶರೀರದ ಬೇರೆ-ಬೇರೆ ಸ್ಥಳಗಳಿಗೆ ಹಚ್ಚಿಕೊಳ್ಳಬೇಕು. ||೨೦೨||

ಭಾವಸಹಿತ

ಜರೀ ನೇಣೆ ಮಂತ್ರಾಸಿ| ತ್ಯಾಣೆ ಲಾವಿಜೆ ಭಾವಶುದ್ಧೀಸೀ|
ತ್ಯಾಚಿ ಮಹಿಮಾ ಅಪಾರೇಸೀ| ಏಕಚಿತ್ತೇ ಪರಿಯೆಸಾ||
– ಶ್ರೀಗುರುಚರಿತ್ರೆ ೨೯, ದ್ವಿಪದಿ ೨೦೪
ಅರ್ಥ: ಒಂದು ವೇಳೆ ಮಂತ್ರವು ಬರದೇ ಇದ್ದರೆ, ಭಸ್ಮವನ್ನು ಭಕ್ತಿ-ಭಾವದಿಂದ ಹಚ್ಚಿಕೊಳ್ಳಬೇಕು. ಅದರ ಮಹಿಮೆ ಅಪಾರವಾಗಿದೆ.
ಋಗ್ವೇದೀಯ ಬ್ರಹ್ಮಕರ್ಮಕ್ಕನುಸಾರ: ಭಸ್ಮಧಾರಣೆಯ ವಿಧಿಯನ್ನು ಋಗ್ವೇದೀಯ ಬ್ರಹ್ಮಕರ್ಮದಲ್ಲಿ ಕೊಡಲಾಗಿದೆ. ಅದರ ಸಾರಾಂಶವು ಹೀಗಿದೆ :
ಆಚಮನ ಮತ್ತು ಪ್ರಾಣಾಯಾಮ ಮಾಡಿ ಎಡ ಅಂಗೈ ಮೇಲೆ ಸ್ವಲ್ಪ ಭಸ್ಮವನ್ನು ತೆಗೆದುಕೊಂಡು ಅದನ್ನು ‘ಓಂ ಮಾನಸ್ತೋಕೇ೦’ ಎಂಬ ಮಂತ್ರದಿಂದ ನೀರಿನಲ್ಲಿ ನೆನೆಸಬೇಕು. ಆ ಭಸ್ಮವನ್ನು ‘ಓಂ ಈಶಾನಃ೦’ ಈ ಮಂತ್ರದಿಂದ ತಲೆ, ‘ಓಂ ತತ್ಪುರುಷಾಯ೦’ ಈ ಮಂತ್ರದಿಂದ ಮುಖ, ‘ಓಂ ಅಘೋರೇಭ್ಯೋ೦’ ಈ ಮಂತ್ರದಿಂದ ಹೃದಯ, ‘ಓಂ ವಾಮದೇವಾಯ೦’ ಮಂತ್ರದಿಂದ ಗುಪ್ತಭಾಗ ಮತ್ತು ‘ಓಂ ಸದ್ಯೋಜಾತ೦’ ಮಂತ್ರದಿಂದ ಎರಡೂ ಕಾಲುಗಳಿಗೆ ಹಚ್ಚಿಕೊಳ್ಳಬೇಕು.

ತ್ರಿಪುಂಡ್ರ (ಭಸ್ಮದ ಮೂರು ಅಡ್ಡ ಪಟ್ಟೆಗಳು)
ಋಗ್ವೇದೀಯ ಬ್ರಹ್ಮಕರ್ಮಕ್ಕನುಸಾರ ತ್ರಿಪುಂಡ್ರವನ್ನು ಹಚ್ಚುವ ಪದ್ಧತಿ: ಎಡಗೈಯಲ್ಲಿನ ಭಸ್ಮವನ್ನು ಬಲಗೈಯಿಂದ ಸ್ಪರ್ಶಿಸಿ ‘ಓಂ ಅಗ್ನಿರಿತಿ ಭಸ್ಮ, ವಾಯುರಿತಿ ಭಸ್ಮ’ ಇತ್ಯಾದಿ ೭ ಮಂತ್ರಗಳಿಂದ ಅಭಿಮಂತ್ರಿಸಬೇಕು. ಬಲಗೈಯ ಮಧ್ಯದ ಮೂರು ಬೆರಳುಗಳಿಂದ ಮತ್ತು ಎಡಗೈಯ ಮಧ್ಯದ ಮೂರು ಬೆರಳುಗಳಿಂದ ಆ ಭಸ್ಮವನ್ನು ಎರಡೂ ಕೈಗಳಿಂದ ತಿಕ್ಕಬೇಕು. ‘ಓಂ ನಮಃ ಶಿವಾಯ|’ ಎಂಬ ಮಂತ್ರವನ್ನು ಹೇಳುತ್ತಾ ಆ ಭಸ್ಮವನ್ನು ಬಲಗೈಯ ಮಧ್ಯದ ಮೂರು ಬೆರಳುಗಳಿಂದ ಹಣೆ, ಹೃದಯ (ಎದೆ), ನಾಭಿ ಮತ್ತು ಕಂಠದ ಮೇಲೆ ಅಡ್ಡವಾಗಿ ಹಚ್ಚಬೇಕು. ನಂತರ ಬಲಗೈಯಿಂದ ಎಡಭಾಗದ ಮತ್ತು ಎಡಗೈಯಿಂದ ಬಲಭಾಗದ – ಭುಜ, ರಟ್ಟೆಗಳ ಮಧ್ಯದಲ್ಲಿ, ಮಣಿಗಂಟುಗಳಿಗೆ, ಮಗ್ಗಲುಗಳಿಗೆ ಮತ್ತು ಕಾಲುಗಳಿಗೆ ಅಡ್ಡವಾಗಿ ಭಸ್ಮವನ್ನು ಹಚ್ಚಬೇಕು. ನಂತರ ಸರ್ವಾಂಗಕ್ಕೆ (ಸಂಪೂರ್ಣ ಶರೀರಕ್ಕೆ) ಹಚ್ಚಿಕೊಳ್ಳಬೇಕು.
ಮಧ್ಯಮಾನಾಮಿಕಾಂಗುಳೆಸೀ| ಲಾವಿಜೆ ಪಹಿಲೆ ಲಲಾಟೇಸೀ|
ಪ್ರತಿಲೋಮ ಅಂಗುಷ್ಠೆಸೀ| ಮಧ್ಯರೇಷಾ ಕಾಢಿಜೆ||
– ಶ್ರೀಗುರುಚರಿತ್ರೆ, ಅಧ್ಯಾಯ ೨೯, ದ್ವಿಪದಿ ೨೦೪
ಅರ್ಥ: ಮೊದಲು, ಮಧ್ಯದ ಮತ್ತು ಅನಾಮಿಕಾ ಬೆರಳುಗಳಿಂದ ಮೇಲಿನ ಮತ್ತು ಕೆಳಗಿನ ಪಟ್ಟೆಗಳನ್ನು ಎಡಗಡೆಯಿಂದ ಬಲಗಡೆಗೆ ಎಳೆಯಬೇಕು. ನಂತರ ವಿರುದ್ಧ ದಿಕ್ಕಿನಲ್ಲಿ ತಿರುಗಿಸಿದ ಹೆಬ್ಬೆರಳಿನಿಂದ ಮಧ್ಯದ ಪಟ್ಟೆಯನ್ನು ಬಲಗಡೆಯಿಂದ ಎಡಗಡೆಗೆ ಎಳೆಯಬೇಕು. (ಪಟ್ಟೆಗಳನ್ನು ಎರಡೂ ದಿಕ್ಕುಗಳಲ್ಲಿ ಎಳೆಯುವುದರಿಂದ ಬಲಗಡೆಯ ನಾಡಿ ಅಥವಾ ಎಡಗಡೆಯ ನಾಡಿಯು ಪ್ರಾರಂಭವಾಗದೆ ಸುಷುಮ್ನಾನಾಡಿಯು ಪ್ರಾರಂಭವಾಗಲು ಸಹಾಯವಾಗುತ್ತದೆ.)
ತ್ರಿಪುಂಡ್ರವು ಹುಬ್ಬಿನ ಆಕಾರದ್ದಾಗಿರಬೇಕು. ಸಾಮಾನ್ಯವಾಗಿ ತ್ರಿಪುಂಡ್ರದ ಮಧ್ಯದಲ್ಲಿ ಭಸ್ಮದ ಒಂದು ಬಿಂದುವನ್ನೂ ಹಚ್ಚುತ್ತಾರೆ.

ರುದ್ರಾಕ್ಷಿಧಾರಣೆ

ಶಿವನ ಪೂಜೆಯನ್ನು ಮಾಡುವಾಗ ಕೊರಳಿನಲ್ಲಿ ರುದ್ರಾಕ್ಷಿಮಾಲೆಯನ್ನು ಅವಶ್ಯವಾಗಿ ಹಾಕಿಕೊಳ್ಳಬೇಕು. ನಾಥ ಸಂಪ್ರದಾಯ ಹಾಗೂ ವಾಮ ಸಂಪ್ರದಾಯದವರು ಮತ್ತು ಕಾಪಾಲಿಕರು ರುದ್ರಾಕ್ಷಿಯ ಮಾಲೆಯನ್ನು ವಿಶೇಷವಾಗಿ ಉಪಯೋಗಿಸುತ್ತಾರೆ. ಯೋಗಿಗಳೂ ರುದ್ರಾಕ್ಷಿಯ ಮಾಲೆಯನ್ನು ಧರಿಸುತ್ತಾರೆ.
‘ರುದ್ರಾಕ್ಷ’ ಶಬ್ದದ ವ್ಯುತ್ಪತ್ತಿ ಮತ್ತು ಅರ್ಥ
‘ರುದ್ರಾಕ್ಷ’ ಎಂಬ ಶಬ್ದವು ‘ರುದ್ರ + ಅಕ್ಷ’ ಎಂಬ ಎರಡು ಶಬ್ದಗಳಿಂದ ರೂಪುಗೊಂಡಿದೆ. ‘ರುದ್ರ’ ಶಬ್ದದ ವಿವಿಧ ಅರ್ಥಗಳನ್ನು ವಿಷಯ ‘೫ಅ.ರುದ್ರ’ ಇದರಲ್ಲಿ ಕೊಡಲಾಗಿದೆ. ‘ಅಕ್ಷ’ ಶಬ್ದದ ಕೆಲವು ಅರ್ಥಗಳ ಆಧಾರದ ಮೇಲೆ ‘ರುದ್ರಾಕ್ಷ’ ಶಬ್ದಕ್ಕೆ ಮುಂದಿನ ಅರ್ಥಗಳಿವೆ –
೧. ಅಕ್ಷ ಎಂದರೆ ಕಣ್ಣು. ‘ರುದ್ರ + ಅಕ್ಷ’ ಎಂದರೆ ಯಾವುದು ಎಲ್ಲವನ್ನೂ ನೋಡಬಲ್ಲದೋ ಮತ್ತು ಮಾಡಬಲ್ಲದೋ ಅದು ರುದ್ರಾಕ್ಷ (ಉದಾ.ಮೂರನೆಯ ಕಣ್ಣು). ಅಕ್ಷ ಎಂದರೆ ಅಕ್ಷ ರೇಖೆ. ಕಣ್ಣು ಒಂದೇ ಅಕ್ಷರೇಖೆಯ ಸುತ್ತಲೂ ತಿರುಗುತ್ತದೆ; ಆದುದರಿಂದ ಅದಕ್ಕೆ ಅಕ್ಷ ಎನ್ನುತ್ತಾರೆ.
೨. ರುದ್ರ ಎಂದರೆ ಅಳುಮುಖದವನು. ‘ಅ’ ಎಂದರೆ ತೆಗೆದುಕೊಳ್ಳುವುದು ಮತ್ತು ‘ಕ್ಷ’ ಎಂದರೆ ಕೊಡುವುದು; ಅಕ್ಷವೆಂದರೆ ತೆಗೆದುಕೊಳ್ಳುವ ಅಥವಾ ಕೊಡುವ ಕ್ಷಮತೆ. ರುದ್ರಾಕ್ಷವೆಂದರೆ ಅಳುವವನಿಂದ ಅವನ ದುಃಖವನ್ನು ತೆಗೆದುಕೊಳ್ಳುವ ಹಾಗೂ ಅವನಿಗೆ ಸುಖವನ್ನು ಕೊಡುವ ಕ್ಷಮತೆಯಿರುವವನು.

ರುದ್ರವೃಕ್ಷ (ರುಧಿರವೃಕ್ಷ, ರುದ್ರಾಕ್ಷವೃಕ್ಷ)
ತಾರಕಪುತ್ರರು ಅಧರ್ಮಾಚರಣೆಯಲ್ಲಿ ತೊಡಗಿದರೆಂಬ ವಿಷಾದದಿಂದ ಶಂಕರನ ಕಣ್ಣುಗಳಿಂದ ಕೆಳಗೆ ಬಿದ್ದ ಅಶ್ರುಗಳಿಂದ ‘ರುದ್ರಾಕ್ಷವೃಕ್ಷ’ವು ತಯಾರಾಗುವುದು ಮತ್ತು ಶಿವನು ತಾರಕ ಪುತ್ರರನ್ನು ನಾಶಗೊಳಿಸುವುದು: ತಾಡಿನ್‌ಮಾಲಿ, ತಾರಕಾಕ್ಷ ಮತ್ತು ಕಮಲಾಕ್ಷ ಎಂಬ ತಾರಕ ಪುತ್ರರು ಧರ್ಮಾಚರಣೆ ಮತ್ತು ಶಿವಭಕ್ತಿಯನ್ನು ಮಾಡಿ ದೇವತ್ವವನ್ನು ಪ್ರಾಪ್ತಿ ಮಾಡಿಕೊಂಡರು. ಕೆಲವು ಸಮಯದ ನಂತರ ಮತ್ತೆ ಅವರು ಅಧರ್ಮಾಚರಣೆಯನ್ನು ಮಾಡಲು ಪ್ರಾರಂಭಿಸಿದುದನ್ನು ನೋಡಿ ಶಂಕರನು ವಿಷಾದಗ್ರಸ್ತನಾದನು. ಅವನ ನೇತ್ರಗಳು ಅಶ್ರುಗಳಿಂದ ತುಂಬಿದವು. ಅವನ ನೇತ್ರದಿಂದ ನಾಲ್ಕು ಹನಿಗಳು ಪೃಥ್ವಿಯ ಮೇಲೆ ಬಿದ್ದವು. ಆ ಅಶ್ರುಗಳಿಂದ ಹುಟ್ಟಿದ ವೃಕ್ಷಗಳಿಗೆ ‘ರುದ್ರಾಕ್ಷವೃಕ್ಷ’ ಎನ್ನುತ್ತಾರೆ. ಆ ನಾಲ್ಕು ವೃಕ್ಷಗಳಿಂದ ಕೆಂಪು, ಕಪ್ಪು, ಹಳದಿ ಮತ್ತು ಬಿಳಿ ರುದ್ರಾಕ್ಷಗಳು ನಿರ್ಮಾಣವಾದವು. ಅನಂತರ ಶಿವನು ತಾರಕಪುತ್ರರನ್ನು ನಾಶ ಗೊಳಿಸಿದನು.

ಇದು ಸಮುದ್ರದ ಮಟ್ಟದಿಂದ ಮೂರು ಸಾವಿರ ಮೀ. ಎತ್ತರದಲ್ಲಿ ಅಥವಾ ಮೂರು ಸಾವಿರ ಮೀ.ಸಮುದ್ರದಾಳದಲ್ಲಿ ದೊರಕುತ್ತದೆ. ರುದ್ರಾಕ್ಷಿಯ ಗಿಡಗಳು ತಗ್ಗುಪ್ರದೇಶದಲ್ಲಿ ಬೆಳೆಯುತ್ತವೆ, ಸಮತಟ್ಟು ಪ್ರದೇಶದಲ್ಲಿ ಬೆಳೆಯುವುದಿಲ್ಲ. ಈ ಗಿಡದ ಎಲೆಗಳು ಹುಣಸೆ ಮರದ ಅಥವಾ ಗುಲಗಂಜಿಯ ಎಲೆಯಂತೆ, ಆದರೆ ಸ್ವಲ್ಪ ಉದ್ದವಾಗಿರುತ್ತವೆ. ಈ ಗಿಡಗಳಿಗೆ ಒಂದು ವರ್ಷದಲ್ಲಿ ಒಂದರಿಂದ ಎರಡು ಸಾವಿರ ಹಣ್ಣುಗಳು ಬಿಡುತ್ತವೆ. ಹಿಮಾಲಯದಲ್ಲಿರುವ ಯತಿಗಳು ಕೇವಲ ರುದ್ರಾಕ್ಷಿಫಲಗಳನ್ನೇ ತಿನ್ನುತ್ತಾರೆ. ಈ ಫಲಕ್ಕೆ ಅಮೃತಫಲ ಎಂದೂ ಕರೆಯುತ್ತಾರೆ. ಇವುಗಳನ್ನು ತಿಂದರೆ ಬಾಯಾರಿಕೆಯಾಗುವುದಿಲ್ಲ.
ರುದ್ರಾಕ್ಷಿ (ರುದ್ರಾಕ್ಷಿ ಹಣ್ಣುಗಳು)

ರುದ್ರಾಕ್ಷದ ಹಣ್ಣುಗಳು ಗಿಡದ ಮೇಲೆ ಹಣ್ಣಾಗಿ ಚಳಿಗಾಲದಲ್ಲಿ ಕೆಳಗೆ ಬೀಳುತ್ತವೆ. ಅನಂತರ ಒಳಗಿನ ಬೀಜಗಳು ಒಣಗುತ್ತವೆ. ಒಂದು ಹಣ್ಣಿನಲ್ಲಿ ೧೫-೧೬ ಬೀಜಗಳು (ರುದ್ರಾಕ್ಷಿಗಳು) ಇರುತ್ತವೆ. ಹಣ್ಣಿನಲ್ಲಿ ಬೀಜಗಳು ಹೆಚ್ಚಿಗೆ ಇದ್ದರೆ, ಬೀಜಗಳ ಆಕಾರವು ಕಡಿಮೆಯಿರುತ್ತದೆ ಮತ್ತು ಅವುಗಳ ಬೆಲೆಯೂ ಕಡಿಮೆಯಿರುತ್ತದೆ. ಚಿಕ್ಕ ರುದ್ರಾಕ್ಷಿಗಳನ್ನು ಬಿಡಿಬಿಡಿಯಾಗಿ ಬಳಸದೆ ಒಂದು ಮಾಲೆಯಲ್ಲಿ ಪೋಣಿಸುತ್ತಾರೆ ಮತ್ತು ಅವುಗಳೊಂದಿಗೆ ಒಂದು ದೊಡ್ಡ ರುದ್ರಾಕ್ಷಿಯನ್ನೂ ಪೋಣಿಸುತ್ತಾರೆ. ರುದ್ರಾಕ್ಷಿಗೆ ಮೊದಲಿನಿಂದಲೇ ಒಂದು ರಂಧ್ರವಿರುತ್ತದೆ, ಅದನ್ನು ಮಾಡಬೇಕಾಗುವುದಿಲ್ಲ. ಆ ರಂಧ್ರಕ್ಕೆ ವಾಹಿನಿ ಎನ್ನುತ್ತಾರೆ. ರುದ್ರಾಕ್ಷಿಯ ಬಣ್ಣವು ನಸುಗೆಂಪಾಗಿರುತ್ತದೆ. ಅದರ ಆಕಾರವು ಮೀನಿನಂತೆ ಚಪ್ಪಟೆಯಾಗಿರುತ್ತದೆ. ಅದರ ಮೇಲೆ ಹಳದಿ ಬಣ್ಣದ ಪಟ್ಟೆಗಳಿರುತ್ತವೆ. ಅದರ ಒಂದು ಬದಿಯಲ್ಲಿ ತೆರೆದಿರುವಂತೆ ಬಾಯಿ ಇರುತ್ತದೆ.
೧೦ ಮುಖಕ್ಕಿಂತ ಹೆಚ್ಚು ಮುಖಗಳಿರುವ ರುದ್ರಾಕ್ಷಿಗಳಿಗೆ ‘ಮಹಾರುದ್ರ’ ಎಂದು ಹೇಳುತ್ತಾರೆ.
– ಯೋಗತಜ್ಞ ಪ.ಪೂ.ದಾದಾಜಿ ವೈಶಂಪಾಯನ (ಜೇಷ್ಠ ಶು.೫, ಕಲಿಯುಗ ವರ್ಷ ೫೧೧೧ ೨೯.೫.೨೦೦೯)
(ರುದ್ರಾಕ್ಷಿಯ ವೈಶಿಷ್ಟ್ಯಗಳು, ರುದ್ರಾಕ್ಷಿಯ ಕಾರ್ಯ, ರುದ್ರಾಕ್ಷಿಯ ಲಾಭಗಳು, ನಿಜವಾದ ರುದ್ರಾಕ್ಷಿ ಮತ್ತು ನಕಲಿ ರುದ್ರಾಕ್ಷಿಯ ವ್ಯತ್ಯಾಸ, ಎಷ್ಟು ರುದ್ರಾಕ್ಷಿಗಳನ್ನು ಧರಿಸಬೇಕು? ಎಷ್ಟು ಮುಖಗಳಿರುವ ರುದ್ರಾಕ್ಷಿ ಧರಿಸಬೇಕು ಮತ್ತು ಅದರ ಫಲವೇನು? ಮುಂತಾದ ಅನೇಕ ಮಾಹಿತಿಗಾಗಿ ಸನಾತನ ಸಂಸ್ಥೆ ನಿರ್ಮಿಸಿದ “ಶಿವ” ಗ್ರಂಥವನ್ನು ಓದಿರಿ.)

ಶಿವಾಷ್ಟಕಮ್

ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ ಜಗನ್ನಾಥ ನಾಥಂ ಸದಾನಂದ ಭಾಜಾಮ್ |
ಭವದ್ಭವ್ಯ ಭೂತೇಶ್ವರಂ ಭೂತನಾಥಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೧ ||
ಗಲೇ ರುಂಡಮಾಲಂ ತನೌ ಸರ್ಪಜಾಲಂ ಮಹಾಕಾಲ ಕಾಲಂ ಗಣೇಶಾದಿ ಪಾಲಮ್ |
ಜಟಾಜೂಟ ಗಂಗೋತ್ತರಂಗೈ ರ್ವಿಶಾಲಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೨||
ಮುದಾಮಾಕರಂ ಮಂಡನಂ ಮಂಡಯಂತಂ ಮಹಾ ಮಂಡಲಂ ಭಸ್ಮ ಭೂಷಾಧರಂ ತಮ್ |
ಅನಾದಿಂ ಹ್ಯಪಾರಂ ಮಹಾ ಮೋಹಮಾರಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೩ ||
ವಟಾಧೋ ನಿವಾಸಂ ಮಹಾಟ್ಟಾಟ್ಟಹಾಸಂ ಮಹಾಪಾಪ ನಾಶಂ ಸದಾ ಸುಪ್ರಕಾಶಮ್ |
ಗಿರೀಶಂ ಗಣೇಶಂ ಸುರೇಶಂ ಮಹೇಶಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೪ ||
ಗಿರೀಂದ್ರಾತ್ಮಜಾ ಸಂಗೃಹೀತಾರ್ಧದೇಹಂ ಗಿರೌ ಸಂಸ್ಥಿತಂ ಸರ್ವದಾಪನ್ನ ಗೇಹಮ್ |
ಪರಬ್ರಹ್ಮ ಬ್ರಹ್ಮಾದಿಭಿರ್-ವಂದ್ಯಮಾನಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೫ ||
ಕಪಾಲಂ ತ್ರಿಶೂಲಂ ಕರಾಭ್ಯಾಂ ದಧಾನಂ ಪದಾಮ್ಭೋಜ ನಮ್ರಾಯ ಕಾಮಂ ದದಾನಮ್ |
ಬಲೀವರ್ಧಮಾನಂ ಸುರಾಣಾಂ ಪ್ರಧಾನಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೬ ||
ಶರಚ್ಚಂದ್ರ ಗಾತ್ರಂ ಗಣಾನಂದಪಾತ್ರಂ ತ್ರಿನೇತ್ರಂ ಪವಿತ್ರಂ ಧನೇಶಸ್ಯ ಮಿತ್ರಮ್ |
ಅಪರ್ಣಾ ಕಲತ್ರಂ ಸದಾ ಸಚ್ಚರಿತ್ರಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೭ ||
ಹರಂ ಸರ್ಪಹಾರಂ ಚಿತಾ ಭೂವಿಹಾರಂ ಭವಂ ವೇದಸಾರಂ ಸದಾ ನಿರ್ವಿಕಾರಂ|
ಶ್ಮಶಾನೇ ವಸಂತಂ ಮನೋಜಂ ದಹಂತಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || ೮ ||
ಸ್ವಯಂ ಯಃ ಪ್ರಭಾತೇ ನರಶ್ಶೂಲ ಪಾಣೇ ಪಠೇತ್ ಸ್ತೋತ್ರರತ್ನಂ ತ್ವಿಹಪ್ರಾಪ್ಯರತ್ನಮ್ |
ಸುಪುತ್ರಂ ಸುಧಾನ್ಯಂ ಸುಮಿತ್ರಂ ಕಲತ್ರಂ ವಿಚಿತ್ರೈಸ್ಸಮಾರಾಧ್ಯ ಮೋಕ್ಷಂ ಪ್ರಯಾತಿ ||

ಜ್ಯೋತಿರ್ಲಿಂಗಗಳು

ಭಾರತದಲ್ಲಿನ ಪ್ರಮುಖ ಶಿವಸ್ಥಾನ ಗಳೆಂದರೆ ಹನ್ನೆರಡು ಜ್ಯೋತಿರ್ಲಿಂಗಗಳು. ಅವು ತೇಜಸ್ವಿ ರೂಪದಲ್ಲಿ ಉತ್ಪನ್ನವಾದವು. ಹದಿಮೂರನೆಯ ಪಿಂಡಕ್ಕೆ ಕಾಲಪಿಂಡವೆನ್ನುತ್ತಾರೆ. ಕಾಲದ ಆಚೆಗೆ ಹೋಗಿರುವ ಪಿಂಡವೆಂದರೆ (ದೇಹವೆಂದರೆ) ಕಾಲಪಿಂಡ. ಹನ್ನೆರಡು ಜ್ಯೋತಿರ್ಲಿಂಗಗಳು ಮುಂದಿನಂತಿವೆ.

ಹನ್ನೆರಡು ಜ್ಯೋತಿರ್ಲಿಂಗಗಳು ಶರೀರವಾಗಿದ್ದು ಕಾಠಮಾಂಡು (ನೇಪಾಳ) ದಲ್ಲಿರುವ ಪಶುಪತಿನಾಥ ಜ್ಯೋತಿರ್ಲಿಂಗವು ತಲೆಯಾಗಿದೆ.
ಜ್ಯೋತಿರ್ಲಿಂಗ ಮತ್ತು ಸಂತರ ಸಮಾಧಿಸ್ಥಳಗಳ ಮಹತ್ವ
ಸಂತರು ಸಮಾಧಿಯನ್ನು ಸ್ವೀಕರಿಸಿದ ನಂತರ ಅವರ ಕಾರ್ಯವು ಹೆಚ್ಚು ಪ್ರಮಾಣದಲ್ಲಿ ಸೂಕ್ಷ್ಮದಲ್ಲಿ ನಡೆಯುತ್ತದೆ. ಸಂತರು ದೇಹತ್ಯಾಗ ಮಾಡಿದ ನಂತರ ಅವರ ದೇಹದಿಂದ ಪ್ರಕ್ಷೇಪಿತವಾಗುವ ಚೈತನ್ಯಲಹರಿ ಮತ್ತು ಸಾತ್ತ್ವಿಕ ಲಹರಿಗಳ ಪ್ರಮಾಣವು ಹೆಚ್ಚಿರುತ್ತದೆ. ಹೇಗೆ ಸಂತರ ಸಮಾಧಿಯು ಭೂಮಿಯ ಕೆಳಗಿರುತ್ತದೆಯೋ, ಹಾಗೆಯೇ ಜ್ಯೋತಿರ್ಲಿಂಗಗಳು ಮತ್ತು ಸ್ವಯಂಭೂ ಶಿವಲಿಂಗಗಳು ಭೂಮಿಯ ಕೆಳಗಿರುತ್ತವೆ. ಈ ಶಿವಲಿಂಗಗಳಲ್ಲಿ ಇತರ ಶಿವಲಿಂಗಗಳ ತುಲನೆಯಲ್ಲಿ ನಿರ್ಗುಣ ತತ್ತ್ವದ ಪ್ರಮಾಣವು ಹೆಚ್ಚಿರುವುದರಿಂದ ಅವುಗಳಿಂದ ಚೈತನ್ಯ ಮತ್ತು ಸಾತ್ತ್ವಿಕತೆಯು ಹೆಚ್ಚು ಪ್ರಮಾಣದಲ್ಲಿ ಮತ್ತು ಸತತವಾಗಿ ಪ್ರಕ್ಷೇಪಿಸುತ್ತಿರುತ್ತದೆ. ಇದರಿಂದ ಪೃಥ್ವಿಯ ಮೇಲಿನ ವಾತಾವರಣವು ಸತತವಾಗಿ ಶುದ್ಧವಾಗುತ್ತಿರುತ್ತದೆ, ಅದರೊಂದಿಗೆ ಜ್ಯೋತಿರ್ಲಿಂಗ ಮತ್ತು ಸಂತರ ಸಮಾಧಿಸ್ಥಳಗಳಿಂದ ಪಾತಾಳದ ದಿಕ್ಕಿನಲ್ಲಿಯೂ ಸತತವಾಗಿ ಚೈತನ್ಯ ಮತ್ತು ಸಾತ್ತ್ವಿಕತೆಯ ಪ್ರಕ್ಷೇಪಣೆಯಾಗಿ ಪಾತಾಳ ದಲ್ಲಿರುವ ಕೆಟ್ಟ ಶಕ್ತಿಗಳೊಂದಿಗೆ ಅವರ ಯುದ್ಧವು ಸತತವಾಗಿ ನಡೆಯುತ್ತಿರುತ್ತದೆ. ಇದರಿಂದ ಪಾತಾಳದಲ್ಲಿನ ಶಕ್ತಿಶಾಲಿ ಕೆಟ್ಟ ಶಕ್ತಿಗಳ ಹಲ್ಲೆಯಿಂದ ಭೂಲೋಕದ ರಕ್ಷಣೆಯಾಗುತ್ತದೆ.
ವೈಶಿಷ್ಟ್ಯಗಳು
ರುದ್ರಾಕ್ಷದ ಮಂತ್ರಸಿದ್ಧಿಗಾಗಿ ಗುಣ ಹಾಗೂ ಶಕ್ತಿಗೆ ತಕ್ಕಂತೆ ಯೋಗ್ಯ ಗುಣಗಳುಳ್ಳ ಜ್ಯೋತಿರ್ಲಿಂಗವನ್ನು ಆರಿಸಿಕೊಂಡು ಆ ಜ್ಯೋತಿರ್ಲಿಂಗಕ್ಕೆ ಅಭಿಷೇಕ ಮಾಡಬೇಕು. ಉದಾಹರಣೆಗೆ ಮಹಾಕಾಳನು ತಾಮಸಶಕ್ತಿಯಿಂದ ಯುಕ್ತನಾಗಿದ್ದಾನೆ, ನಾಗನಾಥನು ಹರಿಹರ ಸ್ವರೂಪನಾಗಿದ್ದು ಸತ್ತ್ವ ಹಾಗೂ ತಮೋಗುಣ ಪ್ರಧಾನನಾಗಿದ್ದಾನೆ, ತ್ರ್ಯಂಬಕೇಶ್ವರನು ತ್ರಿಗುಣಾತ್ಮಕ (ಅವಧೂತ) ನಾಗಿದ್ದಾನೆ ಮತ್ತು ಸೋಮನಾಥನು ರೋಗಮುಕ್ತಿಗಾಗಿ ಯೋಗ್ಯನಾಗಿದ್ದಾನೆ.
ಜ್ಯೋತಿರ್ಲಿಂಗದ ಅರ್ಥ
೧. ವ್ಯಾಪಕ ಬ್ರಹ್ಮಾತ್ಮಲಿಂಗ ಅಥವಾ ವ್ಯಾಪಕ ಪ್ರಕಾಶ
೨. ತೈತ್ತಿರೀಯ ಉಪನಿಷತ್ತಿನಲ್ಲಿ ಬ್ರಹ್ಮ, ಮಾಯೆ, ಜೀವ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಮತ್ತು ಪಂಚಮಹಾಭೂತಗಳು ಎಂಬ ಹನ್ನೆರಡು ತತ್ತ್ವಗಳನ್ನು ಹನ್ನೆರಡು ಜ್ಯೋತಿರ್ಲಿಂಗಗಳೆಂದು ಕರೆಯಲಾಗಿದೆ.
೩. ಶಿವಲಿಂಗದ ಹನ್ನೆರಡು ಖಂಡಗಳು
೪. ಪಾಣಿಪೀಠವು ಯಜ್ಞವೇದಿಕೆಯ ಮತ್ತು ಲಿಂಗವು ಯಜ್ಞದ ಪ್ರತೀಕವಾಗಿರುವ ಜ್ಯೋತಿಯ, ಅಂದರೆ ಯಜ್ಞಶಿಖೆಯ ಪ್ರತೀಕವಾಗಿದೆ.
೫. ದ್ವಾದಶ ಆದಿತ್ಯರ ಪ್ರತೀಕಗಳು
೬. ಸುಪ್ತಾವಸ್ಥೆಯಲ್ಲಿರುವ ಜ್ವಾಲಾಮುಖಿಯ ಉದ್ರೇಕ ಸ್ಥಾನಗಳು
ದಕ್ಷಿಣ ದಿಕ್ಕಿನ ಸ್ವಾಮಿಯಾದ ಯಮನು ಶಂಕರನ ಅಧಿಪತ್ಯದಲ್ಲಿರುವುದರಿಂದ ದಕ್ಷಿಣ ದಿಕ್ಕು ಶಂಕರನ ದಿಕ್ಕಾಗುತ್ತದೆ. ಜ್ಯೋತಿರ್ಲಿಂಗಗಳು ದಕ್ಷಿಣಾಭಿಮುಖಿಯಾಗಿರುತ್ತವೆ, ಅಂದರೆ ಜ್ಯೋತಿರ್ಲಿಂಗಗಳ ಪಾಣಿಪೀಠದ ಹರಿನಾಳವು ದಕ್ಷಿಣ ದಿಕ್ಕಿಗಿರುತ್ತದೆ. ಬಹುತೇಕ ಮಂದಿರಗಳು ದಕ್ಷಿಣಾಭಿಮುಖವಾಗಿರುವುದಿಲ್ಲ. ಪಾಣಿಪೀಠವು ದಕ್ಷಿಣಾಭಿಮುಖವಾಗಿದ್ದರೆ ಆ ಲಿಂಗವು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಹರಿನಾಳವು ಉತ್ತರ ದಿಕ್ಕಿಗಿದ್ದರೆ ಆ ಲಿಂಗವು ಕಡಿಮೆ ಶಕ್ತಿಶಾಲಿಯಾಗಿರುತ್ತದೆ.

-ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.

Comments