UK Suddi
The news is by your side.

ಹೆಣ್ಣು..

ಹೆಣ್ಣುಮಗು ಬೇಡೆನ್ನುವವರೆ
ನಿಮ್ಮ ತಾಯಿ ಮರೆತಿರಾ?|
ಅಕ್ಕರೆಯ ಪ್ರೀತಿ ತೋರೋ
ಅಕ್ಕ ತಂಗಿಯರ ತೊರೆದಿರಾ?||1||

ಹೆಣ್ಣು ಹುಣ್ಣು ಎನ್ನೋ ಭಾವ
ಮನದಲ್ಲೇಕೆ ಮೂಡಿ ಬಂತು|
ಗಂಡು ಹೆಣ್ಣು ಎರಡು ಕಣ್ಣು
ಮಕ್ಕಳೆನ್ನೋ ಮಮತೆ ತಂತು ||2||

ಪತ್ನಿ ಮಗಳು ತಾಯಿ ಅತ್ತೆ
ಅಜ್ಜಿ ಅಕ್ಕ ತಂಗಿ ಹೆಣ್ಣು|
ನಿನ್ನ ಕಣ್ಣು ತೆರೆದು ನೋಡು
ಕಾಣುತಿಹುದು ಅಲ್ಲಿ ಹೊನ್ನು ||3|

ಭೂಮಿಯಿರಲಿ ಗಗನವಿರಲಿ
ಸಾಧನೆಯ ತೋರಿದವಳು|
ಅಬಲೆಯಲ್ಲ ಸಬಲೆಯೆಂದು
ಸಾರಿ ಸಾರಿ ಹೇಳುತಿಹಳು ||4||

ಹಗಲು ಇರುಳು ವೇಳೆ ಇರದೆ
ದುಡಿವ ಗಾಣದೆತ್ತು ಅವಳು|
ಆಸರಿಕೆ ಬೇಸರಿಕೆ ಇರದೆ
ತನ್ನ ಮನೆಯ ಬೆಳಗುವವಳು ||5||

ಮೇಣದಂತೆ ಕರಗಿ ಹೋಗೋ
ಅವಳ ಬದುಕು ಕಾಣದು|
ಬೆಳಕಿನಲ್ಲೇ ಬೆಳಗೋ ನಿಮಗೆ
ಕತ್ತಲೆಯ ಅರಿವಾಗದು ||6||

ಹೆಣ್ಣಾಗಲಿ ಗಂಡಾಗಲಿ
ಮನೆಯ ದೀಪ ಅವರು|
ತಾರತಮ್ಯ ತೋರಬೇಡಿ
ಅವರೆ ನಮ್ಮ ರಕ್ಷಕರು ||7||

-ರಚನೆ:ಡಾ.ಪ್ರಭು ಗಂಜಿಹಾಳ
ಮೊ:9448775346

Comments