UK Suddi
The news is by your side.

ಇವರೇ ನೋಡಿ ನಮ್ಮ ತ್ಯಾಗ ಜೀವಿಗಳು, ಸಮಾಜ ಸೇವಕರು, ನಮ್ಮ ಆದರ್ಶ ನಾಯಕರು…

ಲೇಖಕರು: ವಿವೇಕಾನಂದ. ಹೆಚ್.ಕೆ.

ಇವರೇ ನೋಡಿ ನಮ್ಮ ತ್ಯಾಗ ಜೀವಿಗಳು – ಸಮಾಜ ಸೇವಕರು – ನಮ್ಮ ಆದರ್ಶ ನಾಯಕರು……

ಮಣ್ಣಿನ ಮಗ ದೇವೇಗೌಡರು ರಾಮನಗರ ಹಾಸನ ಮಂಡ್ಯ ಜಿಲ್ಲೆಗಳನ್ನು ತಮ್ಮ ಮಕ್ಕಳು ಸೊಸೆಯಂದಿರು ಮೊಮ್ಮಕ್ಕಳಿಗೆ ತ್ಯಾಗ ಮಾಡಿದ್ದಾರೆ.

ರೈತ ನಾಯಕ ಯಡಿಯೂರಪ್ಪನವರು ಶಿವಮೊಗ್ಗ ಜಿಲ್ಲೆಯನ್ನು ಒಬ್ಬ ಮಗನಿಗೆ ತ್ಯಾಗ ಮಾಡಿ ಇನ್ನೊಬ್ಬ ಮಗನಿಗೆ ತ್ಯಾಗ ಮಾಡಲು ಇನ್ನೊಂದು ಜಿಲ್ಲೆಯನ್ನು ಹುಡುಕುತ್ತಿದ್ದಾರೆ.

ಸಮಾಜವಾದಿ ಸಿದ್ದರಾಮಯ್ಯನವರು ಮೈಸೂರು ಜಿಲ್ಲೆಯನ್ನು ತಮ್ಮ ಮಗನಿಗೆ ತ್ಯಾಗ ಮಾಡಿದ್ದಾರೆ.

ಹೀಗೆ ಹೇಳುತ್ತಾ ಹೋದರೆ ತ್ಯಾಗ ಜೀವಿಗಳ ಪಟ್ಟಿ ದೊಡ್ಡದಾಗುತ್ತಾ ಇಡೀ ದೇಶವನ್ನೇ ಆಕ್ರಮಿಸಿಕೊಳ್ಳುತ್ತದೆ ಮತ್ತು ಕೊನೆಗೆ ನಮ್ಮ ಬುಡಕ್ಕೇ ಬರುತ್ತದೆ.

ಕಾರಣ ಇದರ ಇನ್ನೊಂದು ಮುಖವೂ ಇದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ಯಾರ ಮಕ್ಕಳು, ಯಾರ ಹೆಂಡತಿ ಸೊಸೆಯಂದಿರಿಗೂ ಯಾವುದೇ ನಿರ್ಬಂಧ ಇಲ್ಲ. ಹಾಗೆಯೇ ಮತದಾನದ ಹಕ್ಕು ನಮ್ಮ ಕೈಯಲ್ಲೇ ಇದೆ. ಯಾರನ್ನು ಬೇಕಾದರೂ ಆಯ್ಕೆ ಮಾಡಬಹುದು ಅಥವಾ ತಿರಸ್ಕರಿಸಬಹುದು.

ಆದರೆ ನಾವೆಷ್ಟು ಮೂರ್ಖರೆಂದರೆ ಅಧಿಕಾರಸ್ತರ ಸಂಬಂಧಿಗಳನ್ನು ಅವರು ಎಷ್ಟೇ ಅನರ್ಹರಾದರೂ ನಮ್ಮ ಅಮೂಲ್ಯ ಮತ ನೀಡಿ ಚುನಾಯಿಸುತ್ತೇವೆ.

ಜೊತೆಗೆ ಈ ಸ್ವಜನ ಪಕ್ಷಪಾತ ಕೇವಲ ಈ ರಾಜಕೀಯ ನಾಯಕರಿಗೆ ಮಾತ್ರ ಸೀಮಿತವಲ್ಲ. ನಮ್ಮ ಸಮಾಜದ ಎಲ್ಲಾ ಕ್ಷೇತ್ರಗಳ ಬಹುತೇಕ ಎಲ್ಲಾ ಜನರ ಆಂತರಿಕ ಸ್ವಭಾವವೇ ಆಗಿದೆ.

ಬೇರೆಯವರನ್ನು ಟೀಕಿಸುವ ಮೊದಲು ನಮ್ಮ ಆತ್ಮವಿಮರ್ಶೆ ಮಾಡಿಕೊಂಡರೆ……………

ಲಂಚ ಪಡೆಯುವವರು ನಾವು, ವರದಕ್ಷಿಣೆ ಪಡೆಯುವವರು ನಾವು, ಹಣ ಹೆಂಡ ಸೀರೆ ಪಂಚೆ ಜಾತಿ ಭಾಷೆ ಧರ್ಮಗಳ ಆಧಾರದ ಮೇಲೆ ಮತ ಚಲಾಯಿಸುವವರು ನಾವು, ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವವರು ನಾವು, ನನ್ನ ಗಂಡ ನನ್ನ ಹೆಂಡತಿ ನನ್ನ ಮಕ್ಕಳು ಎಂದು ಅವರ ಪರವಾಗಿ ಲಾಭಿ ಮಾಡುವವರು ನಾವು, ಆಹಾರ ಕಲಬೆರಕೆ ಮಾಡುವವರು ನಾವು ಹೀಗೆ ನಮ್ಮ ದೇಹ ಮನಸ್ಸುಗಳನ್ನು ಭ್ರಷ್ಟ ಮಾಡಿಕೊಂಡಿದ್ದೇವೆ.

ಈ ಭ್ರಷ್ಟ ಮನಸ್ಸುಗಳನ್ನು ಆ ದುಷ್ಟ ನಾಯಕರು ತಮಗೆ ಇಷ್ಟ ಬಂದಂತೆ ಉಪಯೋಗಿಸಿಕೊಳ್ಳುತ್ತಾರೆ. ತುಂಬಾ ಸುಲಭವಾಗಿ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಾರೆ. ಮೂಲಭೂತ ಸಮಸ್ಯೆ ಇರುವುದು ಇಲ್ಲಿಯೇ.

ಒಂದು ವೇಳೆ ಸ್ವಾಭಿಮಾನದ, ಸ್ವತಂತ್ರ ಚಿಂತನೆಯ, ವಿಶಾಲ ಮನೋಭಾವದ, ದೇಶ ಪ್ರೇಮದ, ಮಾನವೀಯ ಮನಸ್ಸು ನಮ್ಮದಾಗಿದ್ದಿದ್ದರೆ ಯಾವ ನಾಯಕರು ನಮ್ಮನ್ನು ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿರಲಿಲ್ಲ.

ಅದಕ್ಕಾಗಿಯೇ ಈ ಮನಸ್ಸುಗಳ ಅಂತರಂಗದ ಚಳವಳಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.

Comments