UK Suddi
The news is by your side.

ಸುಕ್ಷೇತ್ರ ಕಿರಸೂರ ಗ್ರಾಮದ ಗೌರಿಶಂಕರ ಮಠದ ಜಾತ್ರಾ ಮಹೋತ್ಸವ.

ಬಾಗಲಕೋಟ:ಜಿಲ್ಲೆಯ ಕಿರಸೂರ ಗ್ರಾಮವು ಶ್ರೀ ಗೌರಿಶಂಕರ ಮಠದಿಂದ ಪ್ರಸಿದ್ಧವಾದ ಸ್ಥಳ. ಲಿಂ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯ ಸ್ಮರಣೆ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ಯ ಬರುವ ದಿನಾಂಕ ಮೇ 4 ಹಾಗೂ 5 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಜಾತ್ರೆಯ ನಿಮಿತ್ಯ ಕಳೆದ ದಿ 19/04/2019 ಶುಕ್ರವಾರ ದಿಂದ ದವನದ ಹುಣ್ಣಿಮೆ ದಿವಸ ಪ್ರಾರಂಭಗೊಡಿರುವ ಕಲಬುರ್ಗಿ ಶರಣಬಸವೇಶ್ವರ ಪುರಾಣ ಹಾಗೂ ಶ್ರೀ ಷ ಬ್ರ ಗೌರಿಶಂಕರ ಶ್ರೀ ಮಠದ ಜೀವನ ದರ್ಶನ ಪ್ರವಚನವು 05-05-2019 ರಂದು ರವಿವಾರ ಪುರಾಣ ಮಂಗಲಗೊಳ್ಳಲಿದೆ. ಈ ಜಾತ್ರೆ ನಿಮಿತ್ತ ಹಲವು ಸಾಂಸ್ಕøತಿಕ ಧಾರ್ಮಿಕ ಕಾರ್ಯಕ್ರಮಗಳು ಪ್ರತಿನಿತ್ಯ ಆಯೋಜನೆಗೊಂಡಿವೆ.

ಬಾಗಲಕೋಟೆ ತಾಲೂಕು ಕೇಂದ್ರದಿಂದ ಉತ್ತರಕ್ಕೆ 19ಕಿ.ಮೀ ದೂರದಲ್ಲಿದೆ ಕಿರಿ+ಸೂರು=ಕಿರಸೂರ. ಸಣ್ಣ ಸಣ್ಣ ಮನೆಗಳಿಂದ ಕೂಡಿದ ಊರು ಪ್ರಮಾಣವಾಚಕವಾಗಿದೆ “ಕಿರ” ಎನ್ನುವ ಅಸುರನನ್ನು ಈ ಊರಿನ ಗ್ರಾಮದೇವತೆ ಕೊಂದದ್ದರಿಂದ ಕಿರಸೂರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.

ಕಿರಸೂರ ಗ್ರಾಮವು ಬಾಗಲಕೋಟೆಯಿಂದ 19 ಕಿ.ಮೀ ಅಂತರದಲ್ಲಿದ್ದರೂ ಹೆಚ್ಚಿನ ಬಸ್ ಸೌಕರ್ಯ ಹೊಂದಿರದ ಸ್ಥಳ. ಆದರೆ ಖಾಸಗಿ ವಾಹನಗಳಿಗೆ ಕೊರತೆಯಿಲ್ಲ. ಇಲ್ಲಿಗೆ ಬರುವವರಿಗೆ ಬಾಗಲಕೋಟದಿಂದ ಮುಗಳೊಳ್ಳಿಯ ಬಸ್ ಹತ್ತಿದರೆ ಸಾಕು ಅದು ಕಿರಸೂರ ಗ್ರಾಮದ ಮೂಲಕ ತೆರಳುವುದು. ಇಲ್ಲವಾದಲ್ಲಿ ಬಾಗಲಕೋಟ ನವನಗರ ಮೂಲಕ ರಾಯಚೂರ ಕಡೆಗೆ ಸಂಚರಿಸುವ ಬಸ್‍ದಲ್ಲಿ ಸಂಗಮ ಕ್ರಾಸ್ (ಕೂಡಲ ಸಂಗಮ ಅಲ್ಲ) ವರೆಗೆ ಬಂದು ಅಲ್ಲಿಂದ ಮುಂದೆ ಹೊನ್ನಕಟ್ಟಿ ಕ್ರಾಸ್ ವರೆಗೂ ಬಂದರೆ ಸಾಕು ಅಲ್ಲಿ ಅಟೋ ಸಂಚರಿಸುತ್ತವೆ. ಕಿರಸೂರ ತಲುಪುವ ಸುಲಭ ಮಾರ್ಗವಿದು. ಅಷ್ಟೇ ಅಲ್ಲ ವಿಜಯಪುರ.ಗದಗ ಮೂಲಕ ಬರುವವರು ಮುಗಳಳ್ಳಿ ರೈಲ್ವೆ ನಿಲುಗಡೆಗೆ ಬಂದರೂ ಸಾಕು ಅಲ್ಲಿಂದ ಕಿರಸೂರ ಸುಲಭವಾಗಿ ತಲುಪಬಹುದು.ಜಾತ್ರಾ ಸಂದರ್ಭವಂತೂ ಇಲ್ಲಿ ಹೆಚ್ಚಿನ ವಾಹನಗಳ ಸಂಚಾರದ ದಟ್ಟಣೆ ಕಂಡು ಬರುತ್ತದೆ.
ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ!
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಾಂ ಸೃಜಾಮ್ಯಹಮ್!
ಎನ್ನುವ ಗೀತೋಕ್ತಿಯಂತೆ ಆಗಾಗ ಸಾಧು ಸತ್ಪುರುಷರು ಅವತರಿಸಿ ಈ ಧರ್ಮಗಳಲ್ಲಿ ಅಡಗಿದ ನಿತ್ಯ ತತ್ತ್ವಗಳನ್ನು ಭಕ್ತ ಸಮೂಹಕ್ಕೆ ಕ್ರಿಯಾ ಜ್ಞಾನಗಳ ಮುಖಾಂತರ ಬೋಧಿಸಿ ಜಗತ್ಕಲ್ಯಾಣವನ್ನು ಸಾಧಿಸಿದ್ದಾರೆ. ಅಂತಹ ಮಹಾನ್ ವಿಭೂತಿ ಪುರುಷ ರಲ್ಲಿ ಕಿರಸೂರ ಮಠದ ಪರಮ ಪೂಜ್ಯ ಶ್ರೀ ಷ. ಬ್ರ. ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಒಬ್ಬರಾಗಿದ್ದಾರೆ.

ಇಲ್ಲಿರುವ ಗೌರಿಶಂಕರ ಗದ್ದುಗೆಗೆ ಇಂದಿಗೂ ಭಕ್ತ ಜನ ತಮ್ಮ ಭಕ್ತಿಯ ನಡೆನುಡಿ ಸಮರ್ಪಿಸುವುದನ್ನು ಕಂಡರೆ ಅವರ ಬದುಕು ಎಷ್ಟೊಂದು ಆದರ್ಶಪ್ರಾಯವಾಗಿತ್ತು ಎಂಬುದನ್ನು ಅವರ ಕುರಿತ “ಶ್ರೀ ಗೌರಿಶಂಕರ ಚರಿತ್ರಾಮೃತ”ಗ್ರಂಥದಲ್ಲಿನ ಅವರ ಬದುಕಿನ ಆದರ್ಶಗಳನ್ನು ನೋಡಿದರೆ ಇಂದಿಗೂ ತಲತಲಾಂತರದಿಂದ ಕಿರಸೂರ ಗ್ರಾಮ ಅಷ್ಟೇ ಅಲ್ಲದೇ ನಾಡಿನ ಎಲ್ಲೆಡೆಯಿಂದ ಭಕ್ತರು ಕಿರಸೂರ gಕ್ಕೆ ಬಂದು ಗೌರಿಶಂಕರ ಗದ್ದುಗೆಗೆ ನಡೆದುಕೊಳ್ಳುವ ರೀತಿ ಭಕ್ತಿಭಾವಕ್ಕೆ ಒಂದು ನಿದರ್ಶನ.
ಶ್ರೀಶೈಲ ಕ್ಷೇತ್ರದಲ್ಲಿ ಅವತರಿಸಿದ ಶ್ರೀ ಜಗದ್ಗುರು ಪಂಡಿತಾರಾಧ್ಯರು ಶ್ರೀಶೈಲದಲ್ಲಿ ತಮ್ಮ ಮೂಲ ಪೀಠವನ್ನು ಸ್ಥಾಪಿಸಿ ಲೋಕಸಂಚಾರಗೈದರು. ಅವರ ಅನುಗ್ರಹದಿಂದ ಆ ಪೀಠದ ಶಾಖಾ ಮಠಗಳು ನಮ್ಮ ನಾಡಿನ ಉದ್ದಗಲಕ್ಕೂ ಸ್ಥಾಪಿತಗೊಂಡು ಧರ್ಮೊನ್ನತಿಯ ಕಾರ್ಯವನ್ನು ಅಂದಿನಿಂದ ಇಂದಿನವರೆಗೂ ಗೈಯುತ್ತಲೇ ಬಂದಿವೆ. ಅಂತಹ ಮಠಗಳಲ್ಲಿ ಬಾಗಲಕೋಟೆಯ ಬಳಿ ಇರುವ ಶ್ರೀ ಕಿರಸೂರ ಮಠವೂ ಒಂದು. ಈ ಕಿರಸೂರ ಮಠಕ್ಕೆ ಸಂಬಂಧಪಟ್ಟ ಮಠಗಳು ಮುದೆನೂರು, ಗುಳೇದಗುಡ್ಡ ಹಾಗೂ ವಡವಡಗಿಯಲ್ಲಿವೆ.
ಗೌರಿಶಂಕರ ಪೂಜ್ಯರ ಪರಿಚಯ

ಪರಮಪೂಜ್ಯ ಗೌರಿ ಶಂಕರರ ಮೂಲ ನೆಲೆ ಬೆಳಗಾವಿ ಜಿಲ್ಲೆಯ ರಾಮದುರ್ಗ. ಇಲ್ಲಿನ ಶ್ರೀ ರೇವಣಸಿದ್ದ ಸ್ವಾಮಿಗಳು, ಇವರ ಧರ್ಮ ಪತ್ನಿ ಗದಿಗೆಮ್ಮ ಪುಣ್ಯ ದಂಪತಿಗಳ ಉದರದಿಂದ ಕ್ರಿ.ಶ. 1896 ರಲ್ಲಿ ಪೂಜ್ಯರು ಜನ್ಮ ತಳೆದರು.
ಇವರ ಅಂಕಿತ ನಾಮ ಅಯ್ಯಪ್ಪಸ್ವಾಮಿ. ಕಿರಸೂರ ಪೀಠದ ಪೂಜ್ಯ ಶ್ರೀ ಮಹಾದೇವಯ್ಯ ಗುರುಗಳ ಇಚ್ಛೆಯಂತೆ ಇವರ ಮಾತಾ ಪಿತರು ಇವರನ್ನು ಆ ಪೀಠಕ್ಕೆ ಕೊಡ ಮಾಡಿದರು. ನಂತರ ಶ್ರೀ ಅಯ್ಯಪ್ಪಸ್ವಾಮಿಗಳು ಸೊಲ್ಲಾಪೂರದ ಶ್ರೀಮಂತ ವಾರದ ಮಲ್ಲಪ್ಪನವರ ಪಾಠ ಶಾಲೆಯಲ್ಲಿ ಶ್ರೀ ಜಗದೀಪ ಶಾಸ್ತ್ರಿಗಳ ಶಿಷ್ಯರಾಗಿ ಸಂಸ್ಕøತವನ್ನು ಅಭ್ಯಾಸ ಮಾಡಿದರು,
ಮಹಾರಾಷ್ಟ್ರ ರಾಜ್ಯದ ನಾಂದೇಡ ಜಿಲ್ಲೆ ಗೋದಾವರಿ ತೀರದಲ್ಲಿರುವ ಸುಂದರ ಚಲುವಿನ ಪರಮ “ ನಫೀನ ಘಾಟ” ದಲ್ಲಿ ಶ್ರೀಗಳವರು ಉಗ್ರ ತಪಸ್ಸನ್ನಾಚರಿಸಿ “ಕರ್ತವ್ಯ ಉಳಿದರೆ ಮತ್ತೆ ಬರಬೇಕು” ಎಂದು ಮರಳಿ ಊರಿಗೆ ಬಂದಿರಲು ಪೂಜ್ಯರ ತಪಃಶಕ್ತಿಯ ಪ್ರಭಾವ ಕಂಡು ಅನೇಕ ಪೀಠಗಳು ಕೈ ಮಾಡಿ ಕರೆದರೂ ಅವೆಲ್ಲವುಗಳನ್ನು ಹಿಂದಿಟ್ಟು ತಮ್ಮ ಪೀಠದ ಕಡೆಗೆ ಗಮನವನ್ನಿತ್ತರು. ನಂತರ ಕಿರಸೂರ ಪೀಠಕ್ಕ ಪೂಜ್ಯರ ಪಟ್ಟಾಭಿಷೇಕವಾಯಿತು. ಶ್ರೀ ಶಿವಸಿದ್ಧ ಮಲ್ಲಿಕಾರ್ಜುನ, ಶ್ರೀ ಗೌರಿಶಂಕರ ಎಂಬ ಅನ್ವರ್ಥಕ ನಾಮಗಳನ್ನು ಹೊಂದಿದಾಗ್ಯೂ “ಶ್ರೀ ಗೌರಿಶಂಕರ” ಎಂಬ ನಾಮದಿಂದಲೇ ಬೆಳಗಿದರು. ಅಲ್ಲಿಂದ ತಮ್ಮ ಜೀವನದುದ್ದಕ್ಕೂ ಭಕ್ತ ಜನ ಕೋಟಿಯ ದುಗುಡದುಮ್ಮಾನಗಳನ್ನು ಪರಿಹರಿಸುತ್ತ ಗೌರಿಶಂಕರ ಶಿಖರೋಪಾದಿಯಲ್ಲಿ ಸಮಾಜವನ್ನು ಬೆಳಗಿದರು.
ಪೂಜ್ಯರ ಜೀವನ ಕ್ರಮವನ್ನು ಕಂಡಾಗ, ಮೂಕವಿಸ್ಮಿತರಾಗಬೇಕಾಗುತ್ತದೆ. ಇವರು ಲೌಕಿಕ ಸಂಪತ್ತಿನ ಮೇಲೆ ಎಳ್ಳಷ್ಟೂ ಆಶೆ ಇಟ್ಟವರಲ್ಲ ತಮ್ಮ ಮಠವನ್ನು ತೊರೆದು ಊರ ಹೊರಗೆ ಒಂದು ಗುಡಿಸಿಲಿನಲ್ಲಿ ವಾಸಿಸಿದ ಮಹಾತ್ಮರಿವರು.. ಇವರ ನಿತ್ಯದ ಆಚರಣೆಗಳು ಬಲು ಕಠಿಣ, “ ಯಾವ ಲೌಕಿಕ ವಸ್ತುಗಳನ್ನೂ ಸಂಗ್ರಹಿಸಬಾರದು. ಸಂಗ್ರಹ ಮಾಡಲು ಮನಸ್ಸು ಮಾಡಿದರೆ ಇನ್ನೂ ಸಂಗ್ರಹ ಮಾಡಬೇಕೆಂಬ ಬುದ್ದಿ ಹೆಚ್ಚುತ್ತಲೇ ಹೋಗುತ್ತದೆ” ಎಂದು ಪುನಃ ಪುನಃ ಹೇಳುತ್ತಿದ್ದ ಪೂಜ್ಯರ ಆಸ್ತಿ ಎಂದರೆ “ಮಣ್ಣಿನ ಕೊಡ ಮಣ್ಣಿನ ತಂಬಿಗೆ”. ಭಕ್ತರು ಬಂದು ಶ್ರೀ ಮಠಕ್ಕಾಗಿ ಏನನ್ನಾದರೂ ಕೊಡಬಂದರೆ “ ನಮ್ಮ ಜಪ-ತಪ ಬಿಟ್ಟು ಅವುಗಳನ್ನು ಕಾಯುತ್ತ ಕೂಡಲೆ?” ಎಂದು ಅವುಗಳನ್ನು ನಿರ್ದಾಕ್ಷಿಣ್ಯವಾಗಿ ಮರಳಿಸುತ್ತಿದ್ದರಂತೆ.
ಇವರು ಸಭೆ ಸಮಾರಂಭಗಳಿಂದ ಬಲು ದೂರ, ಈ ಪೂಜ್ಯರು ವೇಷ ಭೂಷಣರಲ್ಲ, ಜಪ ತಪ ಭೂಷಣರು. ಹರಿದ ಅರಿವೆಗಳನ್ನು ಕೈಯಿಂದ ಹೊಲಿಸಿ ಧರಿಸುವರು. ಪೂಜ್ಯರ ಆರ್ಥಿಕ ನೀತಿ ಅನುಕರಣೀಯ, ಬಿಡಿಗಾಸು ಹಾಗೂ ಯಾವುದೇ ವಸ್ತುಗಳ ಅಪವ್ಯಯವನ್ನು ಮಾಡಗೊಡುತ್ತಿರಲಿಲ್ಲ.

ತಮ್ಮ ಬಳಿ ಯಾವದೇ ಶ್ರ್ರಮ ಜೀವಿಗಳು ಬಂದರೆ ಸಾಕು ಅವರನ್ನು ಕಂಡು ಸಂತಸಪಡುತಿದ್ದರು. ಸೋಮಾರಿಗಳು ಇವರ ಸನಿಹ ಸುಳಿಯುತ್ತಿರಲಿಲ್ಲ. ಇವರ ವೈದ್ಯಕೀಯ ಪ್ರಾವಿಣ್ಯವನ್ನುಂತೂ ಹೊಗಳಲಸದಳ, ದುರ್ವಾರ ರೋಗಗಳಿಂದ ಪೀಡಿತರಾಗಿ ತಮ್ಮಲ್ಲಿಗೆ ಬಂದ ರೋಗಿಗಳಿಗೆ ಔಡಲ ಎಣ್ಣೆ, ಬೇವಿನ ಎಲೆ, ತುಳಸಿ ಪತ್ರಿ, ಬಿಲ್ವದಳ ಮುಂತಾದ ನೈಸರ್ಗಿಕ ಚಿಕಿತ್ಸೆ ಹೇಳಿ ಗುಣಪಡಿಸುತ್ತಿದ್ದರು.

ಪೂಜ್ಯರು ತಮ್ಮ ಜೀವನದಲ್ಲಿ ಪ್ರಾಮುಖ್ಯತೆಕೊಟ್ಟ ವಿಷಯವೆಂದರೆ ಜಪ, ಬಾಹ್ಯಾಂಧಕಾರದಲ್ಲಿ ಅಂತರ್‍ಜ್ಯೋತಿಯನ್ನು ಬೆಳಗಿಸಿದರು. “ತಮಸೋಮಾ ಜ್ಯೋತಿರ್ಗಮಯ” ಎಂಬ ಉಪನಿಷತ್ತಿನ ಮಹಾ ವಾಕ್ಯವನ್ನು ಆಚರಣೆಯಲ್ಲಿ ತಂದವರು. ಪೂರ್ವಾಶ್ರಯ ನಿರಸನ ಸ್ಥಲದಂತೆ ಸದ್ಭಕ್ತರಿಗೆ ಜಪದೀಕ್ಷೆಯನ್ನಿತ್ತು. ಸಾಮೂಹಿಕ ಜಪಯಜ್ಞವನ್ನು ಗೈದು, ಆ ಯಜ್ಞದ ಫಲವನ್ನು ಲೋಕಕಲ್ಯಾಣ ಧಾರೆಯೆರೆದರು. ಆಗಾಗ ಅನುಷ್ಮಾನಗೈಯುತ್ತಿದ್ದರು.

ಕೋಟಿ ಕೋಟಿ ಜಪಯಜ್ಞ ಮಾಡಿ ಲೋಕಕಲ್ಯಾಣಕ್ಕಾಗಿ ಜೀವನವನ್ನೇ ಧಾರೆ ಎರೆದ ಮಹಾಪುರುಷರಲ್ಲಿ ಇವರೂ ಒಬ್ಬರು. ಸಿದ್ಧಾಂತ ಸಿಖಾಮಣಿಯ ಹರಿಕಾರರಾದ ಶಿವಯೋಗಿ ಶಿವಾಚಾರ್ಯರ ಉಕ್ತಿಯಂತೆ ನಡೆದುಕೊಂಡು ಬಂದವರು. ಬಿಲ್ವಾಶ್ರಮದಲ್ಲಿ ಜಪಯಜ್ಞ ಗೈದ ಹೆಗ್ಗಳಿಕೆ ಇವರದಾಗಿದ್ದರೂ ಪರಂಪರೆ ಇಂದಿಗೂ ಭಕ್ತ ಜನರು ಮುಂದುವರಿಸಿಕೊಂಡು ಬರುತ್ತಿರುವರು.

ಇವರು ಪ್ರತಿನಿತ್ಯ ಸ್ನಾನ ಮಾಡಿ ಶಿವಪೂಜೆಯ ನಂತರ ತಮ್ಮ ಇಷ್ಟಲಿಂಗದ ಪತ್ರಿ ಪುಷ್ಪಗಳನ್ನು ತಮ್ಮ ತೆಗೆದುಕೊಂಡು ಹೋಗಿ ಆಶ್ರಮದ ಹಿಂದೆ ಬಾವಿ ಕಟ್ಟೆಯ ಈಶ್ವರ ಅರ್ಪಿಸುತ್ತಿದ್ದರಂತೆ. ಅಪರ ವಯಸ್ಸಿನ ನಡುಗುವ ಕೈಯಿಂದ ಆ ಮೂರ್ತಿಗೆ ಪತ್ರಿ ಪುಪ್ಪಗಳನ್ನು ಅರ್ಪಿಸುವಾಗ ಏರಿಸಿದ ಪತ್ರಿ ಪುಪ್ಪಗಳು ಬೀಳುತ್ತಿದ್ದವು. ಆಗ ತಪೋಧನರು ಮಾತು ಹೀಗಿದೆ.
“ ಪುಣ್ಯ ಮೂರುತಿ ನುಡಿವ ಲಿಂಗಗೆ
ಇನ್ನು ದೃಷ್ಟಿಸಿ ಯಾಕೆ ಎನ್ನಯಚನ್ನು ಹೂ- ಪತ್ರಿಗಳನೊಲ್ಲೆ ಎನ್ನುತಿಹೆ ನೀನು
ಮುನ್ನ ನುಡಿವನು ಮತ್ತೆ ಯೋಗಿಯು
ನನ್ನ ಹೂ ಪತ್ರಿಗಳು ಎಲ್ಲಿವೆ
ನಿನ್ನ ಪತ್ರಿ ನಿನ್ನ ಹೂಗಳ ನಿನಗೆ ತಂದಿರುವೆ” ಎನ್ನುತ್ತಿದ್ದರಂತೆ
ಇಂಥ ಪರಮಪೂಜ್ಯರು ಮಾನವತಾ ಧರ್ಮ ಪ್ರಚಾರಕರಾಗಿದ್ದು ತಪೋನುಷ್ಠಾನದಿಂದ ಬದುಕಿ ಜನಮಾನಸದಲ್ಲಿ ಚಿರಸ್ಥಾಯಿಯಾಗುಳಿದ ಪುಣ್ಯಾತ್ಮರಾದ ಕಾರಣ ಈ ಭಾಗ ಪಾವನವಾಗಿದೆ. ಅರಸಿ ಬಂದ ಭಕ್ತರ ಭವರೋಗಗಳನ್ನು ಕಳೆದ ಭಕ್ತರ ಮನೋಬಯಕೆ ಈಡೇರಿಸುವ ಕಾಮಧೇನು ಕಲ್ಪವೃಕ್ಷ ಇವರಾಗಿದ್ದರು.

ಇವರು 20-4-1985 ರಂದು ಲಿಂಗೈಕ್ಯರಾಗಿದ್ದು.ಶ್ರೀಗಳು ಜಗತ್ತಿನಿಂದ ಮರೆಯಾದರೂ ಸರ್ವರ ಹೃದಯ ಮಂದಿರದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂಬುದಕ್ಕೆ ಇಂದಿಗೂ ಪೂಜ್ಯರ ಜಾತ್ರಾ ಮಹೋತ್ಸವವನ್ನು ಭಕ್ತ ಜನತೆ ನಡೆಸಿಕೊಂಡು ಬರುತ್ತಿರುವುದಕ್ಕೆ ಶ್ಲಾಘನೆ.ಇಂದಿಗೂ ಭಕ್ತ ಜನರು ಇವರ ಆಯುರ್ವೇದ ಪದ್ಧತಿಯ ಔಷಧ ಕುರಿತು ಅಭಿಮಾನದಿಂದ ಮಾತನಾಡುತ್ತಾರಲ್ಲದೇ ತಮ್ಮ ಮನೆತನದ ಹಿರಿಯರು ಹೇಳುವ ಈ ಪದ್ಧತಿಗಳನ್ನು ಗೌರಿಶಂಕರ ಮಹಾತ್ಮರ ನೆನೆಯುತ್ತ ಚಾಚೂ ತಪ್ಪದೇ ಪಾಲಿಸುತ್ತ ಬಂದಿರುವುದು.
ಈ ಮಠಕ್ಕೆ ಬಂದ ತಕ್ಷಣ ಎಡ ದಿಕ್ಕಿಗೆ ಕಾರ್ಯಾಲಯವುಂಟು.ಮುಂದೆ ಇಲ್ಲಿ ಪತ್ರಿವನವುಂಟು.ದಕ್ಷಿಣಾಭಿಮುಖವಾಗಿ ಬಸವಣ್ಣನ ಮೂರ್ತಿ ಅಲ್ಲಿಂದ ಮುಂದೆ ಬಂದರೆ ಉತ್ತರಾಭಿಮುಖವಾಗಿ ಗೌರಿಶಂಕರ ಶಿವಾಚಾರ್ಯರ ಕತೃ ಗದ್ದುಗೆ ಗದ್ದುಗೆಯ ಮೇಲೆ ರೇಣುಕಾಚಾರ್ಯರ ಮೂರ್ತಿ ಹೊಂದಿದ ದೇಗುಲವುಂಟು.
ಅಲ್ಲಿಯೇ ಹತ್ತಿರದಲ್ಲಿ ಮೊದಲು ಗುಡಿಸಲು ಇದ್ದ ಜಾಗದಲ್ಲಿ ನೆಲೆನಿಂತ ಕಟ್ಟಡ.ಕಟ್ಟಡದ ಹಿಂದೆಯೇ ಭಾವಿ ಇದ್ದು ತಮ್ಮ ಪೂಜೆಯ ಕಾರ್ಯಕ್ಕೆ ಬಳಸುತ್ತಿದ್ದ ಬಾವಿಯನ್ನು ಹೊಂದಿದ ಈಶ್ವರ ಲಿಂಗದ ಕಟ್ಟೆ ಇದೆ.ಕಟ್ಟಡದ ಎಡಭಾಗದಲ್ಲಿ ಮಂಗಲಮಂಟಪ(ಕಲ್ಯಾಣ ಮಂಟಪ) ಇದೆ. ಬಲಭಾಗದಲ್ಲಿ ಶ್ರೀಗಳು ತಪಸ್ಸುಗೈದ ಬಿಲ್ವಪತ್ರಿ ಮರಗಳಿವೆ. ಈಗಲೂ ಪ್ರದಕ್ಷಿಣೆ ಹಾಕಿದರೆ ಎಲ್ಲ ರೋಗರುಜಿನಗಳು ಮಾಯವಾಗುತ್ತವೆ ಎಂಬ ನಂಬಿಕೆ ಭಕ್ತ ಜನರಲ್ಲುಂಟು.ಇಂದಿಗೂ ಗೌರಿಶಂಕರರ ಸ್ಮರಣೆಯಲ್ಲಿ ಇಲ್ಲಿ ಜಾತ್ರಾ ಮಹೋತ್ಸವ ನಡೆದುಕೊಂಡು ಬಂದಿರುವದು.
ಜೋಳದ ನುಚ್ಚು ಪ್ರಸಾದ
ಬಡವರ ಬದಾಮಿ ಎಂದೇ ಈ ಭಾಗದಲ್ಲಿ ಪ್ರಸಿದ್ಧಿ ಹೊಂದಿರುವ ಬಿಳಿ ಜೋಳದ ನುಚ್ಚು ಶ್ರೀಮಠದ ವಿಶೇಷ ಪ್ರಸಾದ.ಜಾತ್ರೆಗೆ ಬಂದವರು ಜೋಳದ ನುಚ್ಚಿನ ಪ್ರಸಾದ ಸವಿದೇ ಹೋಗುವುದು ವಾಡಿಕೆ.ಭಕ್ತ ಜನತೆ ನೀಡುವ ದೇಣಿಗೆ ಹಾಗೂ ಸೇವೆ ಹಣದಿಂದ ಜಾತ್ರಾ ಮಹೋತ್ಸವ ನಾನಾ ಧಾರ್ಮಿಕ ಪೂಜೆ ಕಾರ್ಯಕ್ರಮಗಳು ಶೃದ್ಧಾ ಭಕ್ತಿಯಿಂದ ನಡದುಕೊಂಡು ಬರುತ್ತಿವೆ.

ಈ ವರ್ಷದ ಜಾತ್ರಾ ಕಾರ್ಯಕ್ರಮಗಳ ವಿವರ
ಲಿಂ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಪುಣ್ಯ ಸ್ಮರಣೆ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ಯ ಬರುವ ದಿನಾಂಕ ಮೇ 4 ಹಾಗೂ 5 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಜಾತ್ರೆಯ ನಿಮಿತ್ಯ ಕಳೆದ ದಿ 19/04/2019 ಶುಕ್ರವಾರ ದಿಂದ ದವನದ ಹುಣ್ಣಿಮೆ ದಿವಸ ಪ್ರಾರಂಭಗೊಡಿರುವ ಕಲಬುರ್ಗಿ ಶರಣಬಸವೇಶ್ವರ ಪುರಾಣ ಹಾಗೂ ಶ್ರೀ ಷ ಬ್ರ ಗೌರಿಶಂಕರ ಶ್ರೀ ಮಠದ ಜೀವನ ದರ್ಶನ ಪ್ರವಚನವು sss 05-05-2019 ರಂದು ರವಿವಾರ ಪುರಾಣ ಮಂಗಲಗೊಳ್ಳಲಿದೆ.
ಕಲಬುರ್ಗಿ ಶರಣಬಸವೇಶ್ವರ ಪುರಾಣವನ್ನು ವಿಜಯಪುರ ಜಿಲ್ಲೆಯ ಬ.ಬಾಗೇವಾಡಿ ತಾಲುಕಿನ ಮಸೂತಿ ಗ್ರಾಮದ ಪ್ರವಚನಕಾರರಾದ ಶಿವಲಿಂಗಯ್ಯ ಶಾಸ್ತ್ರೀಗಳು ಪುರಾಣಿಕಮಠ ಪ್ರವಚನ ಸೇವೆಗೈಯುತ್ತಿದ್ದು. ಪ್ರತಿದಿನ ಸಂಜೆ ನಡೆಯುತ್ತಿದೆ. ಸಂಗೀತ (ಹಾರ್ಮೋನಿಯಂ)ವನ್ನು ಸುರಪುರದ ವಿರೇಶ ಕೆಂಬಾವಿ ಸೇವೆಗೈಯುತ್ತಿದ್ದಾರೆ. ಇವರಿಗೆ ಬ.ಬಾಗೇವಾಡಿ ತಾಲುಕಿನ ನರಸಲಗಿ ಗ್ರಾಮದ ಬಸವರಾಜ
ಹೂಗಾರ ತಬಲಾ ಸಾಥ ನೀಡುತ್ತಿದ್ದಾರೆ.
ದಿನಾಂಕ 01-05-2019 ರಿಂದ 05-05-2019 ರವರೆಗೆ ಪ್ರತಿದಿನ ಸಣ್ಣ ರಥೋತ್ಸವ ಜರುಗಲಿದೆ. ಹಾಗೂ ಪುಣ್ಯ ಸ್ಮರಣೆಯ ನಿಮಿತ್ಯ ಶ್ರೀ ಮಠದ ಲಿಂ ಗೌರಿಶಂಕರ ಮಹಾಸ್ವಾಮಿಗಳು ತಮ್ಮ ಜೀವಂತ ಅವಧಿಯಲ್ಲಿ ಪ್ರಾರಂಭವಾಗಿರುವಂತ ಜಪಯಜ್ಞ ಕಾರ್ಯಕ್ರಮವನ್ನು ಅವರ ಶಿಷ್ಯರುಗಳಿಂದ ಕಳೆದ ದಿನಾಂಕ ಎಪ್ರಿಲ್ 30 ರಿಂದ ಪ್ರಾರಂಭಗೊಳ್ಳಲಿದ್ದು. ಬರುವ ದಿನಾಂಕ 05-05-2019 ರಂದು ಮುಕ್ತಾಯಗೊಳ್ಳಲಿದೆ.
ಜಾತ್ರಾ ನಿಮಿತ್ಯ ದಿನಾಂಕ 4 ರಂದು ಬುಧವಾರ ರಾತ್ರಿ ಕಿರಸೂರ ಶ್ರೀ ಗೌರಿಶಂಕರ ಭಜನಾ ಮಂಡಳಿ ಹಾಗೂ ಮೂದೇನೂರ ಭಜನಾ ಮಂಡಳಿ,ಮುಗಳ್ಳೊಳಿ ಭಜನಾ ಮಂಡಳಿ ಇವರಿಂದ ಶಿವ ಭಜನೆ ನೆರವೆರುವದು.
ದಿ 05-05-2019 ರಂದು ಮುಂಜಾನೆ 6 ಗಂಟೆಗೆ ಗೌರಿಶಂಕರ ಕರ್ತೃ ಗದ್ದಿಗೆ ಮಹಾರುದ್ರಾಭಿಷೇಕ, ನೂತನ ದೇವಸ್ಥಾನದಲ್ಲಿ ಶ್ರೀ ಗೌರಿಶಂಕರ ಮೂರ್ತಿ ಪ್ರತಿಷ್ಟಾಪನೆ ಕಾರ್ಯಕ್ರಮ, 8 ಗಂಟೆಗೆ ಸಕಲವಾದ್ಯ ಮೇಳಗಳೊಂದಿಗೆ ಉತ್ಸವ ಮೂರ್ತಿ ಪಾಲಿಕೆ ಕಳಸದ ಮೆರವಣಿಗೆಯು ಸುಮಂಗಲೆಯರಿಂದ ಕುಂಭಮೇಳ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರಗಲಿದ್ದು ನಂತರ ಅಂದೇ ಪ್ರವಚನ ಮಹಾಮಂಗಲಗೊಳ್ಳುವದು. ನಂತರ ಮದ್ಯಾಹ್ನ 12 ಗಂಟೆಗೆ ಧರ್ಮಸಭೆ ಜರುಗಲಿದ್ದು ಕಾರ್ಯಕ್ರಮದ ಸಾನಿಧ್ಯವನ್ನು ಗುಳ್ಳೇದಗುಡ್ಡದ ಮರಡಿ ಮಠದ ಕಾಡಸಿದ್ದೇಶ್ವರ ಮಠದ ಹಿರಿಯ ಶ್ರೀಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಮುತ್ತತ್ತಿಯ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಬಿಲೇಕೆರೂರ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನಿಡಗುಂದಿ ತಾಲುಕಿನ ಇಟಗಿಯ ಗುರುಶಾಂತವೀರ ಶಿವಾಚಾರ್ಯರು ಧರ್ಮೂಪದೇಶ ನೀಡಲಿದ್ದಾರೆ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಸಾಯಂಕಾಲ ಜರುಗುವ ಮಹಾರಥೋತ್ಸವಕ್ಕೆ ಮನ್ನಿಕಟ್ಟಿ ಗ್ರಾಮದ ಸದ್ಬಕ್ತರಿಂದ ತೇರಿನ ಕಳಸ, ಮುಗಳೂಳ್ಳಿ ಗ್ರಾಮದ ಸದ್ಬಕ್ತರಿಂದ ತೇರಿನ ಹಗ್ಗ, ಬದಾಮಿ ತಾಲುಕಿನ ಸುಳ್ಳ ಮತ್ತು ಮೂದೇನೂರು ಗ್ರಾಮದ ಸದ್ಬಕ್ತರಿಂದ ನಂದಿಕೋಲು ಹಾಗೂ ತೇರಿನ ರುದ್ರಾಕ್ಷಿಮಾಲೆ ಭಗವತಿ ಗ್ರಾಮದ ಸದ್ಬಕ್ತರಿಂದ ಬಾಳೆಕಂಬಗಳು ಮೆರವಣಿಗೆ ಮೂಲಕ ತಲುಪಿದ ನಂತರ ಗುಳೇದಗುಡ್ಡ ಗ್ರಾಮದ ಸದಾಶಿವಯ್ಯಾ ಎಸ್ ವಸ್ತ್ರದ ಅವರು ಮಾಡಿಸಿಕೊಟ್ಟ ಭವ್ಯವಾದ ರಥವನ್ನು ಪ್ರತಿ ವರ್ಷದಂತೆ ಈ ವರ್ಷವು ಅಂದು ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವವು ಜರುಗಲಿದೆ. ಹಾಗೂ ರಾತ್ರಿ 10.30 ಕ್ಕೆ ಧಾರವಾಡ ಜಿಲ್ಲೆಯ ಕಲಘಟಗಿ ಎಮ್.ಅರ್.ತೋಟಫಂಟಿ, ಎಚ್.ಎನ್ ಸುನಗದಿಂದ ಜಾನಪದ ಕಾರ್ಯಕ್ರಮ ಮತ್ತು ಕಿರಸೂರ ಗ್ರಾಮದ ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರುಗಲಿದೆ.
ದಿನಾಂಕ 09-05-2019 ರಂದು ಗುರುವಾರ ಕಳಸ ಇಳಿಸುವುದು ದಿನಾಂಕ 14-05-2019 ರಿಂದ 15-05-2019ರ ವರೆಗೆ ಕಿರಸೂರ ಗ್ರಾಮದ ಅಧಿದೇವತೆಯಾದ ಶ್ರೀ ಕೋಣಮ್ಮ ದೇವಿಯ ಊಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು ಈ ಎಲ್ಲಾ ಧಾರ್ಮಿಕ ಹಾಗೂ ಮನರಂಜನೆ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಸದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಲಿಂ ಶ್ರೀ ಷ ಬ್ರ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳ ಹಾಗೂ ಅಧಿದೇವತೆ ಕೊಣಮ್ಮ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಜಾತ್ರಾ ಮಹೋತ್ಸವದ ಸಮಿತಿಯವರು ಪ್ರಕಟನೆಯಲ್ಲಿ ಕೊರಿದ್ದಾರೆ.

-ವೈ.ಬಿ.ಕಡಕೋಳ (ಶಿಕ್ಷಕರು)
9449518400

Comments