UK Suddi
The news is by your side.

ಕಟ್ಟಡ ಕುಸಿತ ಪ್ರಕರಣ:ಮೇ.10 ರಂದು ವಿಚಾರಣೆ

ಧಾರವಾಡ: ಇಲ್ಲಿನ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡವು ಕಳೆದ ಮಾರ್ಚ್ 19 ರಂದು ಕುಸಿತಗೊಂಡಿತ್ತು. ಈ ಪ್ರಕರಣದ ಕುರಿತು ದಂಡಾಧಿಕಾರಿ ವಿಚಾರಣೆ ನಡೆಸಲು ಧಾರವಾಡ ಜಿಲ್ಲಾಧಿಕಾರಿಗಳನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ಬರುವ ಮೇ.10 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಚಾರಣೆ ಹಮ್ಮಿಕೊಳ್ಳಲಾಗಿದೆ.

ಈ ಘಟನೆಯಲ್ಲಿ ಮೃತಪಟ್ಟವರ ವಾರಸುದಾರರು,ಗಾಯಾಳುಗಳು ಹಾಗೂ ಇತರರು ಯಾರಾದರೂ ಕೂಡ ದಂಡಾಧಿಕಾರಿ ವಿಚಾರಣಾಧಿಕಾರಿಗಳ ಮುಂದೆ ತಮ್ಮ ಹೇಳಿಕೆ,ಮಾಹಿತಿ ಅಥವಾ ಯಾವುದಾದರೂ ದಾಖಲೆಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಖುದ್ದು ಹಾಜರಾಗಿ ಸಲ್ಲಿಸಬಹುದಾಗಿದೆ.

ಮಾರ್ಚ 19 ರ ಮಧ್ಯಾಹ್ನ 3.40 ಕ್ಕೆ ಸಂಭವಿಸಿದ ಈ ಘಟನೆಯಲ್ಲಿ 70 ರಿಂದ 80 ಜನ ಕಟ್ಟಡದ ಅವಶೇಷಗಳಡಿ ಸಿಲುಕಿದ್ದರು.19 ಜನ ಮೃತಪಟ್ಟಿದ್ದರು.15 ಜನ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 57 ಜನರನ್ನು ಸುರಕ್ಷಿತವಾಗಿ ಕಟ್ಟಡದಿಂದ ಹೊರತರಲಾಗಿತ್ತು. ಈ ನಿರ್ಮಾಣ ಹಂತದ ಕಟ್ಟಡವು ಬೀಳಲು ಕಾರಣವಾದ ಸಂದರ್ಭಗಳು, ಅದಕ್ಕೆ ಕಾರಣವಾದ ಅಂಶಗಳು ಮತ್ತಿತರ ವಿಷಯಗಳ ಸಂಪೂರ್ಣ ಸತ್ಯಾಂಶ ಕಂಡುಹಿಡಿಯಲು, ತನಿಖೆ ನಡೆಸಲು ಸೂಚಿಸಿ ಸರ್ಕಾರವು ಮಾರ್ಚ್ 26 ರಂದು ಆದೇಶ ಹೊರಡಿಸಿ, ಧಾರವಾಡದ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಅವರನ್ನು ದಂಡಾಧಿಕಾರಿ ವಿಚಾರಣಾಧಿಕಾರಿಗಳನ್ನಾಗಿ ನೇಮಿಸಿದೆ.

-Dharawad VB

Comments