UK Suddi
The news is by your side.

SSLC:ಮೂಡಲಗಿ ಸತತವಾಗಿ 12 ಸಲ ಚಿಕ್ಕೋಡಿ ಜಿಲ್ಲೆಗೆ ಪ್ರಥಮ.

ವರದಿ: ಎಸ್ ಎಮ್ ಮೀಶಿ(ಮೂಡಲಗಿ)
ಮೂಡಲಗಿ(ಬೆಳಗಾವಿ):ಸತತವಾಗಿ 12 ಸಲ ಜಿಲ್ಲೆಗೆ ಪ್ರಥಮ, 2 ಬಾರಿ ದ್ವಿತಿಯ, 4 ಸಲ ತೃತೀಯ ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಮೂಡಲಗಿ ತಾಲೂಕು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಪ್ರಸಕ್ತ ಸಾಲಿನಲ್ಲಿ 6121 ವಿದ್ಯಾರ್ಥಿಗಳಲ್ಲಿ 5461 ವಿದ್ಯಾರ್ಥಿಗಳು ಉತ್ತೀರ್ಣವಾಗುವ ಮೂಲಕ ರಾಜ್ಯಕ್ಕೆ 9 ನೇ ಸ್ಥಾನ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಅವರು ಪಟ್ಟಣದ ಬಿ.ಇ.ಒ ಕಛೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಹಾಗೂ ವಲಯದಲ್ಲಿ ಹಾಕಿಕೊಂಡ ಯಶಸ್ವಿ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಮೂಡಲಗಿ ವಲಯದಲ್ಲಿ ಜೂನ್ ಪ್ರಾರಂಭದಿಂದ ಶೈಕ್ಷಣಿಕವಾಗಿ ಮಕ್ಕಳಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಹಾಕಿಕೊಂಡು ಬಂದಿರುತ್ತೇವೆ. ಅಕ್ಷರ ಜಾತ್ರೆ ಅಕ್ಷರ ಬಂಡಿ, ನನ್ನ ಪುಸ್ತಕ ನಿನ್ನ ಕೈಗೆ, ತರಗತಿ ಶಿಕ್ಷಕರಿಗೆ ಕಾರ್ಯಾಗಾರಗಳು, ವಿಷಯ ಶಿಕ್ಷಕರಿಗೆ ಸಂಪಧೀಕರಣ, ಗುಂಪು ಅಧ್ಯಯನ, ಪಿಕ್ ನಿಕ್ ಪಝಲ್, ರಜಾವಧಿಯಲ್ಲಿ ವಿಶೇಷ ತರಗತಿಗಳು, 8 ಸರಣಿ ಪರೀಕ್ಷೆಗಳು, ಅಣಕು ಪರೀಕ್ಷೆಗಳು, ರಾತ್ರಿ ಸಮಯದಲ್ಲಿ ವಿಶೇಷವಾಗಿ ಗಂಡು ಮಕ್ಕಳಿಗೆ ವಸತಿಯುತವಾಗಿ ಶಾಲೆಗಳಲ್ಲಿ ಅಧ್ಯಯನ ಮಾಡಿಸುವ ಮೂಲಕ ಮಕ್ಕಳಲ್ಲಿ ಪರೀಕ್ಷಾ ಭಯ ನಿವಾರಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ವಲಯ ವ್ಯಾಪ್ತಿಯಲ್ಲಿ ಚಿಕ್ಕೋಡಿ ಡಿಡಿಪಿಐ ಎಮ್ ಜಿ ದಾಸರ ಪ್ರತ್ಯಕ್ಷವಾಗಿ ಬೇಟಿ ನೀಡಿ ಮಾರ್ಗದರ್ಶನ ನೀಡಿದ್ದಾರೆ. ನಿಕಟಪೂರ್ವ ಬಿಇಒ ಅನಿಲಕುಮಾರ ಗಂಗಾಧರ ಪರೀಕ್ಷಾ ತಯಾರಿ ಹಾಗೂ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣತೆಯಲ್ಲಿ ಮಾಡಬಹುದಾದ ಶೈಕ್ಷಣಿಕ ಚಟುವಟಿಕೆಗಳು ಸಹಾಯಕವಾಗಿವೆ. ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ನಿರಂತರ ಬೇಟಿ ಕಾರ್ಯಕ್ರಮಗಳು ಸಹಾಯಕವಾಗಿವೆ. ವಲಯ ವ್ಯಾಪ್ತಿಯ 10 ನೇ ತರಗತಿಯ ವರ್ಗ ಶಿಕ್ಷಕರು, ವಿಷಯ ಶಿಕ್ಷಕರು, ಮುಖ್ಯೋಪಾಧ್ಯಾಯರು, ಸಿಆರ್.ಪಿ, ಬಿಆರ್.ಪಿ, ಬಿ.ಆರ್.ಸಿ, ಪಾಲಕರ, ವಿದ್ಯಾರ್ಥಿಗಳ ಶ್ರಮದ ಫಲವಾಗಿ ಮೂಡಲಗಿ ವಲಯ ಶೈಕ್ಷಣಿಕವಾಗಿ ತನ್ನದೆ ಛಾಪನ್ನು ಮೂಡಿಸಲು ಯಶಸ್ಸಿಯಾಗಿದೆ ಎಂದು ತಿಳಿಸಿದರು.

ಮೂಡಲಗಿ ತಾಲೂಕಿಗೆ ಮೊರಾರ್ಜಿ ವಸತಿ ಶಾಲೆ ಮಲ್ಲಾಪೂರ ಪಿ.ಜಿಯ ಪ್ರೇಮ್ ಹುಲ್ಲೋಳ್ಳಿ 618 (98.88) ಪ್ರಥಮ, ಕೆಆರ್‍ಎಚ್ ಘಟಪ್ರಭ ಶಾಲೆಯ ದೀಪಾ ಹಂಜಿ 617(98.78) ದ್ವಿತೀಯ, ಮೇಘಾ ವಸತಿ ಶಾಲೆಯ ಶಿಲ್ಪಾ ಕದಮ್ 615(98.4) ತೃತೀಯ, ಸರಕಾರಿ ಪ್ರೌಢ ಶಾಲೆ ಘಟಪ್ರಭದ ಕಾವೇರಿ ಮುಂಗರವಾಡಿ 615(98.4) ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಪತ್ರಿಕಾಗೊಷ್ಠಿಯಲ್ಲಿ ಕಛೇರಿ ವ್ಯವಸ್ಥಾಪಕ ಕಿಶೋರ ಮೋರೆ, ಇ.ಸಿ.ಒ ಟಿ ಕರಿಬಸವರಾಜ, ಮೇಘಾ ಸಂಸ್ಥೆಯ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಬಿ.ಆರ್.ಪಿ ಕೆ.ಎಲ್ ಮೀಶಿ, ಶ್ರೀಕಾಂತ ಕಮತಿ, ಸಿ.ಎಸ್ ಪೂಜೇರ, ಚೇತನ ಕುರಿಹುಲಿ, ವೆಂಕಟೇಶ ಜೋಶಿ, ಮತ್ತಿತರರು ಉಪಸ್ಥಿತರಿದ್ದರು.

Comments